ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳು ಸ್ವರ್ಣಗೌರಿ ಜಾತ್ರೆಗೆ ತೆರೆ

Last Updated 10 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಅರಸೀಕೆರೆ; ತಾಲ್ಲೂಕಿನ ಮಾಡಾಳು ಗ್ರಾಮದ ಶಕ್ತಿ ದೇವತೆ ಸ್ವರ್ಣ ಗೌರಮ್ಮ ದೇವಿ ಸದ್ಭಾವನಾ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ 5.30ಕ್ಕೆ ತೆರೆ ಬಿತ್ತು. ಸುಮಾರು ಎರಡು ಲಕ್ಷ ಭಕ್ತರ ಸಮ್ಮುಖದಲ್ಲಿ ದೇವಿಯ ಮೆರವಣಿಗೆ ನಡೆಸಿ ಊರಿನ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು.

ಗುರುವಾರ ರಾತ್ರಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಗ್ರಾಮಸ್ಥರ ದೊಡ್ಡ ಮಂಗಳಾರತಿ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.  ಇದಾದ ಬಳಿಕ ಶುಕ್ರವಾರ ನಸುಕಿನಲ್ಲಿ ಚಂದ್ರ ಮಂಡಲೋತ್ಸವ ಆರಂಭ ವಾಯಿತು. ಒಂಬತ್ತು ದಿನಗಳ ಕಾಲ ಪೂಜಿಸಿದ ಸ್ವರ್ಣಗೌರಿ ಗೌರಿದೇವಿಯ ಮೂರ್ತಿ ಯನ್ನು ನಸುಕಿನ 4.30ಕ್ಕೆ ಬಸವೇಶ್ವರ ದೇವಾಲಯದಿಂದ ಹೊರತಂದು ಚಂದ್ರ ಮಂಡಲದಲ್ಲಿ ಕೂರಿಸಲಾ ಯಿತು. ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ತಲೆಯ ಮೇಲೆ ದುಗ್ಗಳದ ಬಟ್ಟಲಿನಲ್ಲಿ ಕರ್ಪೂರದ ಆರತಿ ಹೊತ್ತು ಹರಕೆ ತೀರಿಸಿದರು.

ಸೂರ್ಯೋದಯವಾಗುತ್ತಿದ್ದಂತೆ ಪುಟ್ಟ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ನೆಲದ ಮೇಲೆ ದಿಂಡಿರುಳು ಸೇವೆ ಸಲ್ಲಿಸಿದರು. ಬಳಿಕ ಬೆಳಿಗ್ಗೆ 8.30 ಗಂಟೆಗೆ ಆರಂಭಗೊಂಡ ಗೌರಮ್ಮ ದೇವಿ ಉತ್ಸವ ಮುಸ್ಸಂಜೆ 5.30ರವರೆಗೆ ಗ್ರಾಮದ ಎಲ್ಲೆಡೆ ವೈಭವೋಪೇತವಾಗಿ ನಡೆಯಿತು.

ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಪೂಜೆ ಹಾಗೂ ಮಡಿಲಕ್ಕಿ ಸ್ವೀಕರಿಸಿದ ಬಳಿಕ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣಿಯ ಮೆಟ್ಟಿಲು ಗಳ ಮೇಲೆ ಕರ್ಪೂರದ ರಾಶಿ, ರಾಶಿ ಧೂಮದ ನಡುವೆ ಗೌರಿದೇವಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವದಲ್ಲಿ ಒಂಬತ್ತು ದಿನಗಳಲ್ಲಿ ಸುಮಾರು ಎಂಟು ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದಾರೆ ಸುಮಾರು 30 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕರ್ಪೂರವನ್ನು ದೇವಿಗೆ ಅರ್ಪಿಸಲಾಗಿದೆ ಎಂದು ದೇವಾಲಯದ ಸಮಿತಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT