ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿ ಭಾವ ನಿವೇದನೆ...

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹುಡುಗನೊಬ್ಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಅವನ ಜೀವನದ ಕೊನೆಯ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದವು. ಸಿ.ಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳನ್ನು ಅವನು ಇಷ್ಟಪಟ್ಟಿದ್ದ. ಆದರೆ ಎಂದೂ ತನ್ನ ಪ್ರೀತಿಯನ್ನು ಆಕೆಯ ಮುಂದೆ ವ್ಯಕ್ತಪಡಿಸಿರಲಿಲ್ಲ. ಅವಳನ್ನು ನೋಡಲು ಮತ್ತು ಕೆಲ  ಸಮಯ ಅವಳ ಜೊತೆ ಕಳೆಯಲೆಂದೇ ಪ್ರತಿ ದಿನ ಒಂದು ಹೊಸ ಸಿ.ಡಿ ಖರೀದಿ ನೆಪದಲ್ಲಿ ಅಂಗಡಿಗೆ ಬರುತ್ತಿದ್ದ. ಕೆಲ ದಿನಗಳ ನಂತರ ಅವನು ತೀರಿಕೊಂಡ.

ಯಾವಾಗ ಆ ಹುಡುಗಿ ಅವನನ್ನು ಹುಡುಕಿಕೊಂಡು ಅವನ ಮನೆಗೆ ಬಂದಳೋ ಆಗ ಅವನ ತಾಯಿ ಮಗ ತೀರಿಕೊಂಡ ವಿಷಯ ತಿಳಿಸಿ, ಹುಡುಗಿಯನ್ನು ಅವನ ಕೋಣೆಗೆ ಕರೆದೊಯ್ದಳು. ಅಲ್ಲಿ ನೋಡಿದರೆ ಹುಡುಗ ಕೊಂಡಿದ್ದ ಯಾವ ಸಿ.ಡಿ ಕವರ್‌ನ್ನೂ ತೆರೆದಿರಲೇ ಇಲ್ಲ. ಆಗ ಆ ಹುಡುಗಿ ಜೋರಾಗಿ ಅಳತೊಡಗಿದಳು. ಯಾಕೆ ಗೊತ್ತಾ? ಅವಳು ಆ ಎಲ್ಲ ಸಿ.ಡಿ ಕವರ್‌ಗಳಲ್ಲಿ ಹುಡುಗನಿಗಾಗಿ ಪ್ರೇಮ ಪತ್ರಗಳನ್ನು ಇಟ್ಟಿದ್ದಳು!

ಇಬ್ಬರೂ ಪ್ರೀತಿಸಿದರು, ಪ್ರೇಮ ಪ್ರಸ್ತಾಪವನ್ನೂ ಮಾಡಿದರು. ಆದರೆ ವ್ಯಕ್ತಪಡಿಸಿದ ರೀತಿ ಮಾತ್ರ ಸರಿಯಾಗಿರಲಿಲ್ಲ. ಹುಡುಗಿ ಪ್ರೇಮ ಪತ್ರಗಳನ್ನು ಇಟ್ಟಿದ್ದಳು. ಅವು ಸರಿಯಾಗಿ ಹುಡುಗನ ಕೈ ತಲುಪಲಿಲ್ಲ. ಹುಡುಗ ಪ್ರೇಮ ಪತ್ರ ಓದುತ್ತಿದ್ದಾನೆ, ಅದಕ್ಕಾಗೇ ಪ್ರತಿ ದಿನ ಅಂಗಡಿಗೆ ಬರುತ್ತಿದ್ದಾನೆ ಎಂದು ತಿಳಿದ ಹುಡುಗಿ ದಿನವೂ ಒಂದೊಂದು ಪತ್ರಗಳನ್ನು ಇಡುತ್ತಿದ್ದಳು. ಇತ್ತ ಹುಡುಗಿ ದಿನವೂ ನನ್ನೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದಾಳೆ ಅವಳೂ ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹುಡುಗ ಭಾವಿಸಿದ್ದ.

ಪ್ರೇಮಿಗಳ ದಿನ ಫೆಬ್ರುವರಿ-14 ಬರುತ್ತದೆ ಎಂದು ಕಾಯುತ್ತಾ ಕುಳಿತ ಹುಡುಗನ ಪಾಲಿಗೆ ಆ ದಿನ ಬರಲೇ ಇಲ್ಲ. ಆದರೆ ಅವನ ಜೀವನದ ಅಂತಿಮ ದಿನ ಬಂದೇಬಿಟ್ಟಿತು. ಇಬ್ಬರಲ್ಲಿ ಒಬ್ಬರಾದರೂ ಬಾಯಿಬಿಟ್ಟು ಸರಿಯಾಗಿ `ಪ್ರೇಮ ಪ್ರಸ್ತಾಪ' ಮಾಡಿದ್ದರೆ ಇಂದು ಆ ಹುಡುಗ ಬದುಕುಳಿದಿದ್ದರೂ ಆಶ್ಚರ್ಯ ಪಡಬೇಕಿರಲಿಲ್ಲ. ಏಕೆಂದರೆ `ಪ್ರೀತಿ' ಎಂಬ ಶಕ್ತಿಯ ಎದುರು ಬರಲು ಮರಣವೂ ಸ್ವಲ್ಪ ಹಿಂದುಮುಂದು ನೋಡುತ್ತದಂತೆ.

ಈಗ ಪ್ರೇಮ ಪ್ರಸ್ತಾಪ ಮಾಡುವುದು ಹಿಂದಿನಷ್ಟು ಕಷ್ಟವೇನಲ್ಲ. ಮೊಬೈಲ್‌ನಿಂದ ಮಾತನಾಡಬಹುದು, ಎಸ್.ಎಂ.ಎಸ್ ಕಳುಹಿಸಬಹುದು, ಇಂಟರ್‌ನೆಟ್‌ನಲ್ಲಿ ಚಾಟ್ ಮಾಡಬಹುದು, ಇ-ಮೇಲ್ ಕಳುಹಿಸಬಹುದು. ಹೀಗೆ ಬೇಕಾದವರ ಜೊತೆ, ಬೇಕೆಂದಾಗ ನಿಶ್ಚಿಂತೆಯಿಂದ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಬಹುದು. ಆದರೆ ಈ ಎಲ್ಲ ಮಾಧ್ಯಮಗಳಿಗಿಂತಲೂ ನೇರವಾಗಿ ಮಾತಿನಿಂದ `ಪ್ರೇಮ ಪ್ರಸ್ತಾಪ' ಮಾಡಿದರೆ ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಏಕೆಂದರೆ ಪ್ರೀತಿಯ ಮೊದಲ ಮಾಧ್ಯಮ `ಮಾತು'.

ಮನಸ್ಸಿನಲ್ಲಿ ಪ್ರೀತಿ ಇಟ್ಟುಕೊಂಡು ಸುಮ್ಮನೆ ಕೊರಗುವುದಕ್ಕಿಂತ ನಿಮ್ಮ ಪ್ರೇಮದ ವಿಚಾರವನ್ನು ಸರಿಯಾಗಿ ತಿಳಿಸಿಬಿಡುವುದು ಒಳ್ಳೆಯದು. ಹಾಗೆ ಮಾಡದೆ ಅವ್ಯಕ್ತ ಪ್ರೇಮಿಗಳಾದೀರಿ ಜೋಕೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಪ್ರೇಮ ಪ್ರಸ್ತಾಪ ಮಾಡುವುದು ಅತಿ ಮುಖ್ಯ. ಅದರ ಫಲಿತಾಂಶದ ಬಗ್ಗೆ ಯೋಚಿಸಬೇಡಿ. ಪ್ರೀತಿಸುವುದು, ವ್ಯಕ್ತಪಡಿಸುವುದಷ್ಟೇ ನಿಮಗೆ ಸಂಬಂಧಿಸಿದ್ದು. ಅದಕ್ಕೆ ಉತ್ತರ `ಹೌದು' ಎಂದರೆ ಸಂತೋಷ, `ಇಲ್ಲ' ಎಂದಾದರೆ ಚಿಂತೆ ಬೇಡ. ಪ್ರಪಂಚ ವಿಶಾಲವಾಗಿದೆ. ಅವರಿಗಿಂತ ಒಳ್ಳೆಯ ಸುಂದರ/ ಸುಂದರಿ ನಿಮಗಾಗಿ ಕಾಯುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT