ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡುವ ಹುಲಿ

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಅಪ್ಪಾ, ಪಂಚತಂತ್ರದ ಕಥೆಗಳಲ್ಲಿ ಹಸು, ನರಿ, ಜಿಂಕೆಯಂತಹ ಪ್ರಾಣಿಗಳೆಲ್ಲಾ ಮತನಾಡುತ್ತಲ್ಲಾ, ಆದರೆ ನಮ್ಮ ಸುತ್ತಮುತ್ತ ಇರುವ ಪ್ರಾಣಿಗಳು ಯಾಕೆ ಮಾತನಾಡಲ್ಲ, ಅಂತ ನಾಲ್ಕು ವರ್ಷದ ನಾಣಿ ಕೇಳಿದಾಗ ಅವರಪ್ಪ ಶಿವಣ್ಣ ತಬ್ಬಿಬ್ಬಾದರು.

ಅರೆ ಹೌದಲ್ವಾ ನಾಣಿ, ನನಗೂ ಗೊತ್ತಿಲ್ಲ, ಮಾರಾಯ. ಪಂಚತಂತ್ರದ ಕಥೆಗಳು ನಡೆಯುವ ಕಾಲಕ್ಕೆ ಅವುಗಳು ಮಾತನಾಡುತ್ತಿದ್ದಿರಬಹುದು. ಆಮೇಲೆ ಯಾವುದೋ ಕಾರಣಕ್ಕೆ ದೇವರು ಅವುಗಳ ಮಾತನಾಡುವ ಶಕ್ತಿಯನ್ನು ಕಸಿದುಕೊಂಡಿಬಹುದು ಅನ್ನಿಸುತ್ತದೆ, ಅಂತ ಏನೋ ಸಮಜಾಯಿಷಿ ಹೇಳಿದರು.
ಅಪ್ಪಾ, ಪ್ರಾಣಿಗಳು ಯೋಚನೆ ಮಾಡದೆ ಮಾತಡಕ್ಕಾಗಲ್ಲ. ಅಂದ್ರೆ ಮೊದಲೆಲ್ಲಾ ಪ್ರಾಣಿಗಳಿಗೆ ಯೋಚನೆ ಮಾಡೋಕು ಬರ‌್ತಿತ್ತು ಅಂತಾಯ್ತು ಅಲ್ವಾ, ಎಂದು ಎಂಟು ವರ್ಷದ ಸುಜಿ ಕೇಳಿದಳು.

ಶಿವಣ್ಣನವರ ಕಷ್ಟಗಳು ಇನ್ನೂ ಹೆಚ್ಚಾದವು! ಹಾಂ ಹೌದು ಹೌದು ಹಾಗೇ ಇರಬೇಕು, ಅಂತ ಹೇಳುತ್ತಾ ನುಣುಚಿಕೊಳ್ಳಲು ನೋಡಿದರು.

ಇವರ ಸಂಭಾಷಣೆಯನ್ನು ದೂರದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೇಳಿಸಿಕೊಳ್ಳುತ್ತಿದ್ದ  ದೊಡ್ಡ ಮಗ ಹದಿಮೂರ ವರ್ಷದ ದೀಪು ಶಿವಣ್ಣನವರನ್ನು ತರಾಟೆಗೆ ತೆಗೆದುಕೊಂಡ,  ಅಪ್ಪಾ ಏನೇನೋ ಸುಳ್ಳು ಹೇಳಿ ಸಣ್ಣವರನ್ನ ನಂಬಿಸಬೇಡ. ನಾಣಿ, ಸುಜಿ ಇಲ್ಲಿ ಬನ್ನಿ ನಾನು ಹೇಳ್ತೀನಿ. ನೋಡಿ ಪ್ರಾಣಿಗಳ ಮೆದುಳು ನಮಗಿಂಗ ಹಳೆಯ ಮಾಡೆಲ್‌ನದು. ನಮ್ಮನೆ ಹಳೇ ಟೀವೀಲಿ ಕಡಿಮೆ ಚಾನಲ್ ಬರ‌್ತಿತ್ತಲ್ಲಾ ಹಾಗೆ ಈ ಪ್ರಾಣಿಗಳ ಮೆದುಳಿನಲ್ಲಿ ಯೋಚನೆ ಮಾಡೋದಕ್ಕೆ ಮಾತನಾಡೋದಕ್ಕೆ ಬೇಕಾಗಿರೋ ಚಾನಲ್ ಇಲ್ಲ. ಹಾಗಾಗಿ ಯಾವಕಾಲದಲ್ಲೂ ಪ್ರಾಣಿಗಳು ಮಾತನಾಡುತ್ತಾ ಇರಲಿಲ್ಲ. ನಮಗೆಲ್ಲಾ ಕಥೆ ಕೇಳೋದಕ್ಕೆ ಖುಯಾಗಲಿ ಅಂತ ಮತ್ತು ಪ್ರಾಣಿಗಳ ಮೂಲಕ ನಮಗೆಲ್ಲಾಒಳ್ಳೆ ಪಾಠ ಹೇಳಿಕೊಡಬೇಕೂಂತ ಪ್ರಾಣಿಗಳು ಮಾತನಾಡಿದಂತೆ ಬರೆದಿದ್ದಾರೆ ಅಷ್ಟೇ. ನಿಮಗೆ ಈ ಕಥೆಗಳನ್ನು ಕೇಳೋಕೆ ಇಷ್ಟ ಹೌದೋ ಅಲ್ಲವೋ.

ಚಿಕ್ಕವರಿಬ್ಬರೂ ಪಂಚತಂತ್ರದ ಕಥೆಗಳು ಭಾರೀ ಮಜಾ ಕೊಡುತ್ತೆ ಎನ್ನುತ್ತಿರಬೇಕಾದರೆ, ಶಿವಣ್ಣನವರು ದೀಪುವನ್ನು ಹೆಮ್ಮೆುಂದ ನೋಡಿದರು.
ನೋಡಿ ಪ್ರಾಣಿಗಳ ಬಗೆಗೆ ನಿಮಗೆ ಬಹಳ ವಿಚಾರ ಹೇಳಬೇಕು. ಮುಂದಿನ ಭಾನುವಾರ ನಾವೆಲ್ಲಾಪ್ರಾಣಿ ಸಂಗ್ರಹಾಲಯಕ್ಕೆ ಹೋಗೋಣ ಎಂದು ನಾಣಿ ಹೇಳಲು ಚಿಕ್ಕವರಿಬ್ಬರೂ ಕುಣಿಯುತ್ತಾ ಆಟವಾಡಲು ಹೊರಗೆ ಓಡಿದರು.
****

ಭಾನುವಾರ ಮನೆಯವರೆಲ್ಲಾ ಬುತ್ತಿ ಕಟ್ಟಿಕೊಂಡು ಹತ್ತಿರದ ಊರಿನಲ್ಲಿದ್ದ ಪ್ರಾಣಿಸಂಗ್ರಹಾಲಯವನ್ನು ನೋಡಲು ಎತ್ತಿನ ಗಾಡಿಯಲ್ಲಿ ಹೋದರು. ದಾರಿಯಲ್ಲಿ ಗಾಡಿಹೊಡೆಯುತ್ತಿದ್ದ ತಿಮ್ಮನನ್ನು ನಾಣಿ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ತಿಮ್ಮ ಎತ್ತಿನ ಜೊತೆ, ಏ ನಿಧಾನ, ಅದು ನೋಡು ಅದ್ಯಾಕ ಹಂಗೆ ಓಡುತ್ತೆ ಇವತ್ತು, ಎಡಕ್ಕೆ ತಿರುಗು, ಬಿಗಿತೀನಿ ನೋಡು, ಬ್ ಬ್ ಹೋ ನಿಲ್ಲು, ಬಸ್ಯಾ ಹೊಡ್ತಾ ತಿಂತೀಯಾ, ಅಂತ ಏನೇನೋ ಮಾತನಾಡುತ್ತಾ ಸೂಚನೆ ಕೊಡುತ್ತಿದ್ದ.

ಪ್ರಾಣಿಗಳಿಗೆ ಮಾತು ಬರದೇ ಹೋದರೂ ಮನುಷ್ಯರ ಮಾತುಗಳ ಅರ್ಥವಾಗಬಹುದೇ ಎಂದು ನಾಣಿ ಯೋಚಿಸಿದ. ಇದರ ಸೂಚನೆ ಹಿಡಿದ ದೀಪು ಹೇಳಿದ,  ನಾಣಿ ಪ್ರಾಣಿಗಳ ಮಿದುಳು ಧ್ವನಿ, ಮುಟ್ಟುವಿಕೆ, ವಾಸನೆ ಇವುಗಳನ್ನೆಲ್ಲಾಗುರುತು ಹಿಡಿಯುತ್ತದೆ. ಇದನ್ನೆಲ್ಲಾಉಪಯೋಗಿಸಿಕೊಂಡ ಮನುಷ್ಯ ಪ್ರಾಣಿಗಳನ್ನು ಪಳಗಿಸಿಟ್ಟುಕೊಂಡಿರುತ್ತಾನೆ. ನಮ್ಮ ತಿಮ್ಮನೂ ಹೀಗೆ ಧ್ವನಿ ಮತ್ತು ಮುಟ್ಟುವುದರ ಮುಖಾಂತರ ಎತ್ತುಗಳನ್ನು ಬೇಕಾದಂತೆ ಓಡಲು ಸೂಚನೆ ಕೊಡುತ್ತಾನೆ.

ಟಿಕೇಟ್ ಪಡೆದು ಪ್ರಾಣಿ ಸಂಗ್ರಹಾಲಯದ ಒಳಗೆ ಹೋದ ಮಕ್ಕಳು ದೊಡ್ಡವರ ಹಿಡಿತದಿಂದ ಕಳಚಿಕೊಂಡರು. ದೀಪು ಇರುವವರೆಗೆ ಏನೂ ತೊಂದರೆ ಇಲ್ಲ ಎಂದು ಶಿವಣ್ಣ ಮತ್ತು ಅವರ ಪತ್ನಿ ಉಸ್ಸಪ್ಪಾ ಎಂದು ಒಂದು ಕಲ್ಲು ಬೆಂಚನ್ನು ಹಿಡಿದು ಕುಳಿತು ತೂಕಡಿಸತೊಡಗಿದರು!

ದೀಪು ಮಕ್ಕಳಿಬ್ಬರಿಗೂ ಎಲ್ಲವನ್ನೂ ತೋರಿಸುತ್ತಾ ವಿವರಿಸುತ್ತಾ ಹೋದ. ಅವನು ಎಲ್ಲವನ್ನೂ ಕಣ್ಣಾರೆ ನೋಡಿರದಿದ್ದರೂ ಪುಸ್ತಕಗಳಲ್ಲಿ ಓದಿದ್ದ ಮತ್ತು ಅಂತರ್ಜಾಲದಲ್ಲಿ ಹುಡುಕಾಡಿ ವಿಷಯ ಸಂಗ್ರಹಣೆ ಮಾಡಿದ್ದ. ಅವನ ವಿವರಣೆಯ ಶೈಲಿ ಆಕರ್ಷಕವಾಗಿದ್ದುದರಿಂದ ಅವನ ಸುತ್ತ ಮಕ್ಕಳ ದೊಡ್ಡ ದಂಡೇ ನೆರೆದುಬಿಟ್ಟಿತು. ಯುದ್ಧಕ್ಕೆ ಹೊರಟ ಸೇನಾಪತಿಯಂತೆ ದೀಪು ಮಕ್ಕಳನ್ನು ಹಿಂದಿಟ್ಟುಕೊಂಡು ಒಂದಾದ ನಂತರ ಒಂದು ಪ್ರಾಣಿ ಪಕ್ಷಿಗಳಿದ್ದ ಕಡೆ ಕರೆದುಕೊಂಡು ಹೋಗುತ್ತಿದ್ದ.

ಕೊನೆಯಲ್ಲಿ ಆ ಸಂಗ್ರಹಾಲಯಕ್ಕೆ ಹೊಸದಾಗಿ ಪ್ರಥಮ ಬಾರಿಗೆ ಬಂದಿದ್ದ ಹುಲಿಯ ಬೋನಿನ ಎದುರು ಎಲ್ಲರೂ ಸೇರಿದರು.  ಓ ಹುಲಿ ಹುಲಿ, ಎಂದು ಮಕ್ಕಳೆಲ್ಲಾ ಕೂಗುತ್ತಾ ಒಬ್ಬರನ್ನೊಬ್ಬರು ತಳ್ಳುತ್ತಾ ಮುಂದೆ ಬರುತ್ತಿದ್ದರು.

ಹೌದು ನಾನು ಹುಲೀನೆ, ಕಾಡಿನಲ್ಲಿ ರಾಜನಂತೆ ಸ್ವತಂತ್ರವಾಗಿ ನನ್ನ ಮಕ್ಕಳ ಜೊತೆ ಇರಬೇಕಾಗಿದ್ದ ನನ್ನನ್ನು ಈ ಕೆಟ್ಟ ಮನುಷ್ಯರು ಇಲ್ಲಿ ತಂದು ಕೂಡಿ ಹಾಕಿದ್ದಾರೆ. ಅದಕ್ಕಾಗಿ ನನಗೆ ಬಹಳ ಸಿಟ್ಟು ಬಂದಿದೆ ನೀವೆಲ್ಲಾಗಲಾಟೆ ಮಾಡದೆ ನನ್ನನ್ನು ನೋಡಿಕೊಂಡು ಹೋಗಿ.

ಮೂಲೆಯಲ್ಲಿ ಎತ್ತಲೋ ನೋಡುತ್ತಾ ಡೊಗ್ಗಾಲಿನಲ್ಲಿ ಕುಳಿತಿದ್ದ ಹುಲಿ ಬಾಯಿ ಮುಚ್ಚಿಕೊಂಡೇ ಮಾತನಾಡಿದಾಗ ಮಕ್ಕಳೆಲ್ಲಾ ಒಮ್ಮೆಲೇ ಗಪ್ ಚಿಪ್! ಅದರ ಎರಡು ಮರಿಗಳು ಬೆನ್ನ ಮೇಲೆ ಕುಳಿತು ಏನೋ ಆಟವಾಡುತ್ತಿದ್ದವು.

ಅಣ್ಣಾ ಹುಲಿ ಮಾತನಾಡುತ್ತೆ ನೋಡು, ನೀವು ಮಾತಾಡಲ್ಲ ಆಂದಿದ್ಯಲ್ವಾ, ನಾಣಿ ದೀಪುವಿನ ಅಂಗಿಯನ್ನು ಜಗ್ಗುತ್ತಾ ಕೂಗಿದ.
ಹೌದು ನಾನು ಮಾತನಾಡುವ ಹುಲಿ, ನಮ್ಮ ತಾತ ಮುತ್ತಾತಂದಿರು ಪಂಚತಂತ್ರದ ಕಾಲದವರು. ಆಗಿನಿಂದಲೂ ನಾವು ಮಾತನಾಡುತ್ತ ಬಂದಿದ್ದೇವೆ. ಇತ್ತೀಚೆಗೆ ಈ ಮನುಶ್ಯರ ಕೆಟ್ಟಬುದ್ಧಿ ನೋಡಿ ಬೇಜಾರಾಗಿ ಮಾತನಾಡುವುದನ್ನು ನಿಲ್ಲಿಸಿದ್ದೇವೆ.

ನಾವೇನು ಕೆಟ್ಟದ್ದು ಮಾಡಿದ್ದೇವೆ ನಿಮಗೆ, ನೀವೇ ಕೆಟ್ಟವರು ಕಾಡಿನಲ್ಲಿ ಪಾಪದ ಜಿಂಕೆ, ಕೋಣದಂತಹ ಪ್ರಾಣಿಗಳನ್ನು ಕೊಂದು ತಿನ್ನುತ್ತೀರಾ  ಸುಜಿ ಹೇಳಿದಳು.

ನಿಜ, ಕಾಡಿನಲ್ಲಿ ನನಗಿಂತ ದುರ್ಬಲ ಪ್ರಾಣಿಗಳನ್ನು ಹಿಡಿದು ತಿನ್ನುತ್ತೇನೆ. ಅದೇ ನನ್ನ ಆಹಾರ ಆಂತ ದೇವರು ಹೇಳಿದ್ದಾನೆ. ನನಗೆ ಹಸಿವಾದಾಗ ತಕ್ಷಣಕ್ಕೆ ಎಷ್ಟೋ ಬೇಕು ಅಷ್ಟನ್ನು ಮಾತ್ರ ಬೇಟೆಯಾಡುತ್ತೇನೆ. ಮನಷ್ಯರ ಹಾಗೆ ಸುತ್ತಲೂ ಬೇರೆಯವರು ಹಸಿವಿನಿಂದ ಸಾಯುತ್ತಿದ್ದರೂ ಮುಂದಿನ ತಿಂಗಳು ಮುಂದಿನ ವರ್ಷಕ್ಕೆಲ್ಲಾ ಆಹಾರ ಸಂಗ್ರಹಿಸುವುದಿಲ್ಲ. ನೀವು ಸ್ವಾರ್ಥಿಗಳು, ದುರಾಸೆಯುಳ್ಳವರು, ಅದನ್ನು ತಿಳಿಯದೆ ನಮ್ಮನ್ನೇ ಕೆಟ್ಟವರು ಅನ್ನುತ್ತೀಯಾ ಪೋರೀ  ಹುಲಿಯ ಗದರಿಕೆಗೆ ಸುಜಿಯ ಉಸಿರು ನಿಂತು ಹೋದಂತಾಯಿತು.

ಆದರೆ ನೀವು ಮನುಷ್ಯರನ್ನೆಲ್ಲಾಕೊಲ್ಲುತ್ತೀರಲ್ಲಾ, ಮತ್ತೆ ಹೇಗೆ ಒಳ್ಳೆಯವರು  ಮತ್ತೊಂದು ಮಗು ಕೇಳಿತು.

ನಾವು ನೀವಿರುವಲ್ಲಿಗೆ ಬಂದು ನಿಮ್ಮನ್ನು ಕೊಲ್ಲುವುದಿಲ್ಲ. ಆದರೆ ನೀವು ನಮ್ಮ ಮನೆಯಾದ ಕಾಡಿಗೆ ಬಂದು ನಮ್ಮ ಮೇಲೆ ಗುಂಡು ಹಾರಿಸುತ್ತೀರಿ. ನಾವು ಕೊಲ್ಲುವುದು ಆಹಾರಕ್ಕಾಗಿ ಮಾತ್ರ, ನೀವು ಹುಲಿಗಳ ಚರ್ಮ, ಉಗುರು ಮುಂತಾದವುಗಳನ್ನು ಮಾರಿ ಹಣಮಾಡುವುಕ್ಕಾಗಿ ನಮ್ಮನ್ನು ಕೊಲ್ಲುತ್ತೀರಿ. ಆಗ ನಾವು ಉಳಿದುಕೊಳ್ಳುವುದಕ್ಕಾಗಿ ನಿಮ್ಮ ಮೇಲೆ ಆಕ್ರಮಣ ಮಾಡುತ್ತೇವೆ. ಈಗ ಹೇಳು ಯಾರು ಕೆಟ್ಟವರು?  ಹುಲಿ ಕೇಳಿತು.

ಅಂದ್ರೆ ನಮ್ಮನ್ನು ಕೊಂದು ತಿನ್ನಲ್ವಾ ನೀವು?  ಮತ್ತಾರೋ ಕೇಳಿದರು.

ಹುಲಿ ಉತ್ತರಿಸಿತು,  ನಿಮ್ಮ ಮಾಂಸ ನಮಗೆ ರುಚಿಯಾಗಿರಲ್ಲ. ಅನಿವಾರ್ಯವಾಗಿ ಕೊಂದಾಗ ಕೆಲವು ಸಾರಿ ತಿನ್ನಬಹುದು. ಇನ್ನು ಕೆಲವು ಸಾರಿ ಕೆಲವು ವಯಸ್ಸಾಗಿ ದುರ್ಬಲರಾಗಿರುವ ಅಥವಾ ಯಾವುದೋ ಸ್ವಾರ್ಥಿ ಮನುಷ್ಯನ ಗುಂಡಿನಿಂದ ಗಾಯಗೊಂಡಿರುವ ಹುಲಿಗಳು ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ನೀವು ಮನುಷ್ಯರು ನಿಮ್ಮನ್ನು ಭಾರೀ ಬುದ್ಧಿವಂತರು ಅಂದುಕೊಂಡಿದೀರಿ. ಆದರೆ ಕಾಡಿನಲ್ಲಿ ನೀವು ಪೂರ್ಣ ದಡ್ಡರು. ಹಾಗಾಗಿ ನಮ್ಮ ಮರಿಗಳಿಗೂ ಸುಲುಭವಾಗಿ ಸಿಕ್ಕಬೀಳುತ್ತೀರಿ. 

ಮತ್ತೆ ನಿಮ್ಮನ್ನು ಹಿಡಿದು ತಂದು ಹೀಗೆ ಕೂಡಿಹಾಕದೆ ಹೋದರೆ ನಾವು ನಿಮ್ಮನ್ನು ನೋಡಿ ಖುಪಡೋದು ಹೇಗೆ?  ದೀಪು ಕೇಳಿದ.
ಅರೆ ಇದೊಳ್ಳೆ ವಾದ ಮಾಡ್ತೀಯಲ್ಲ. ನೀವೇಕೆ ನಮ್ಮನ್ನು ನೋಡಬೇಕು, ನಾವೇನು ಪ್ರದರ್ಶನದ ವಸ್ತುಗಳಾ? ನಾವೇನು ನಿಮ್ಮನ್ನು ನೋಡೋಕೆ ಊರೊಳಗೆ ಬರ‌್ತೀವಾ ಆಥವಾ ನಿಮ್ಮನ್ನು ಹಿಡಿದು ಕಾಡಿನ ನಮ್ಮ ಗವಿಯೊಳಗೆ ಕೂಡಿಹಾಕ್ತೀವಾ? ನಾವೆಲ್ಲರೂ ದೇವರ ಮಕ್ಕಳು, ಇಬ್ಬರೂ ಅವರವರ ಜಾಗದಲ್ಲಿ ಬದುಕಬೇಕು. ಹಾಗೊಮ್ಮೆ ನಿಮಗೆ ನಮ್ಮನ್ನು ನೋಡಲೇಬೇಕೆಂದಿದ್ದರೆ ಹುಷಾರಿಂದ ಕಾಡೊಳಗೆ ಬಂದು ನಮಗೆ ತೊಂದರೆ ಕೊಡದೆ ನೋಡಿಕೊಂಡು ಹೋಗಿ. ಅದಕ್ಕೆ ಧೈರ್ಯ ಇಲ್ಲ ಆಂದರೆ ಆ ರೀತಿ ಕೆಲವರು ಬಂದಾಗಿ ಫೋಟೋ ತೊಂಗೊಂಡು ಹೋಗ್ತಾರಲ್ಲ ಅದನ್ನು ನೋಡಿ ಖುಪಡಿ.  ಹುಲಿ ಸಮರ್ಥಿಸಿಕೊಂಡಿತು.

ನಾವು ನಿಮಗೆಲ್ಲಾಪುಗಸಟ್ಟೆ ಊಟ ಕೊಡ್ತೀವಲ್ಲ, ತಿಂದುಕೊಂಡು ನಾವು ಹೇಳಿದಂಗೆ ಕೇಳಿಕೊಂಡು ಆರಾಮಾಗಿ ಇರಿ.  ಸುಜಿ ಉಪದೇಶಿಸಿದಳು.
ಹುಲಿ ಗದರಿಸಿತು,   ಏ ಹುಡುಗಿ, ನೀನು ಭಾರೀ ಬುದ್ಧಿವಂತೆ ಅಂದುಕೊಂಡಿದ್ದೀಯಾ. ನೀವೆಲ್ಲಿ ಪುಗಸಟ್ಟೆ ಆಹಾರ ಕೊಡ್ತೀದೀರಾ. ನನ್ನನ್ನು ತೋರಿಸಿ ಹಣ ಮಾಡ್ಕೋತಾ ಇಲ್ವಾ ನೀವು. ಹಾಗೆ ನೋಡಿದರೆ ನಾನೇ ನಿಮಗೆ ಊಟ ಮಾಡೋದಕ್ಕೆ ಹಣ ಗಳಿಸಿ ಕೊಡ್ತಾ ಇದ್ದೇನೆ. ಆಹಾರವನ್ನೆಲ್ಲಾ ದುಡ್ಡಿಗೆ ಮಾರೋದು ಮನುಷ್ಯರ ಕೆಟ್ಟ ಸ್ವಭಾವ. ಕಾಡಿನಲ್ಲಿ ಆಹಾರವನ್ನು ಯಾರೂ ಮಾರುವುದಿಲ್ಲ. ಎಲ್ಲರೂ ಅವರವರ ಅಹಾರವನ್ನು ಅವರೇ ಗಳಿಸಿ ತಿನ್ನಬೇಕು. ಈಗ ನೋಡು, ಸುಮ್ಮನೆ ಕೊಟ್ಟ ಆಹಾರ ತಿನ್ನುತ್ತಾ ಇರುವ ನನ್ನ ಕಂದಮ್ಮಗಳು ಬೇಟೆಯಾಡುವುದನ್ನು ಕಲಿಯೋದಕ್ಕೆ ಆಗೋದೇ ಇಲ್ಲ. ನೀವೆಲ್ಲಾದೊಡ್ಡೋರಾಗುವ ಹೊತ್ತಿಗೆ ಇವು ಬಣ್ಣದಲ್ಲಿ ಮಾತ್ರ ಹುಲಿಗಳಂತೆ ಇದ್ದು ಸ್ವಭಾವದಲ್ಲಿ ಹಸುಗಳಾಗಿರುತ್ತವೆ.

ಸರಿ ಸರಿ ಇವೆಲ್ಲಾಸೂಕ್ಷ್ಮಗಳು ಸ್ವಾರ್ಥಿಗಳಾದ ನಿಮಗೆಲ್ಲಿ ಅರ್ಥವಾಗುತ್ತದೆ. ನಿಮ್ಮ ದಡ್ಡತನದ ಪ್ರಶ್ನೆಗಳಿಗೆ ಉತ್ತರಿಸೋದಕ್ಕೆ ನನಗೆ ಸಮಯವಿಲ್ಲ. ನನ್ನ ಮಕ್ಕಳೊಡನೆ ಆಟ ಆಡಬೇಕು. ನೀವಿನ್ನು ಹೊರಡಿ  ಎಂದು ಹುಲಿ ಪಕ್ಕದಲ್ಲೆೀ ಆಟವಾಡುತ್ತಿದ್ದ ಎರಡು ಮರಿಗಳನ್ನೂ ನೆಕ್ಕತೊಡಗಿತು. ಮಕ್ಕಳೆಲ್ಲಾ ಮನಸ್ಸಿಲ್ಲದಿದ್ದರೂ ಅಲ್ಲಿಂದ ಹೊರಡಬೇಕಾಯಿತು.

ಅಪ್ಪಾ ಅಪ್ಪಾ, ನಾವು ಮಾತನೋಡೋ ಹುಲಿಯನ್ನು ನೋಡಿಕೊಂಡು ಬಂದೆವು, ಎಂದು ನಾಣಿ ಅಪ್ಪನಿಗೆ ಹೇಳಿದಾಗ, ಹಾಂ ಹೌದಾ, ಮತ್ತೆ ದೇವರು ಹುಲಿಗಳಿಗೆ ಮಾತಿನ ಶಕ್ತಿಯನ್ನು ವಾಪಾಸು ಕೊಟ್ಟಿದ್ದರೂ ಕೊಟ್ಟಿರಬಹುದು, ಎಂದೆನ್ನುತ್ತಾ ಶಿವಪ್ಪನವರು ಹೆಗಲ ಮೇಲಿದ್ದ ಟವೆಲ್ಲಿನಿಂದ ತಮ್ಮ ಬೋಳು ತಲೆಯನ್ನು ಒರೆಸಿಕೊಂಡರು!

ಹುಲಿಯ ಬೋನಿನ ಪಕ್ಕದಲ್ಲಿ ಇದ್ದ ಚಿಕ್ಕ ಕೋಣೆಗೆ ಜೋಡಿಸಿಟ್ಟಿದ್ದ ಮೈಕ್‌ನಿಂದ ಕೋಣೆಯಲ್ಲಿ ಕುಳಿತ ಮನುಷ್ಯನೊಬ್ಬ ಮಾತನಾಡಿ ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಿದ್ದ. ಇದನ್ನು ದೀಪು ಗಮನಿಸಿದ್ದರೂ ಮಕ್ಕಳ ಖುಷಿಯನ್ನು ಹಾಳುಮಾಡಬಾರದೆಂದು ಯಾರಿಗೂ ಹೇಳಲೇ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT