ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಗೂ ಮೊದಲು ಆಲೋಚಿಸಬೇಕು...

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

“ಪತ್ನಿಯಂತೆ ಗೆಲುವು ಕೂಡ ದಿನಗಳು ಉರುಳಿದಂತೆ ತನ್ನ ಆಕರ್ಷಣೆ ಕಳೆದುಕೊಳ್ಳುತ್ತದೆ” ಎನ್ನುವಂತಹ ಹೇಳಿಕೆ ನೀಡುವ ಮೊದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರು ಒಂದೇ ಒಂದು ಕ್ಷಣ ಆಲೋಚಿಸಬೇಕಿತ್ತು.

ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿ ಯಾವುದೇ ಹೇಳಿಕೆಯನ್ನು ನೀಡಬೇಕಾದರೂ ಅದರ ಪೂರ್ವಾಪರ ತಿಳಿದುಕೊಳ್ಳಬೇಕು. ಮೊದಲು ಮಾತನಾಡಿ ನಂತರ ಕ್ಷಮೆ ಯಾಚಿಸಿದರೆ ಅದು ಬಾಲಿಶ ವರ್ತನೆಯಾಗುತ್ತದೆ.

ಆ ಕ್ಷಣಕ್ಕೆ ಮಾತ್ರ ಅದಮ್ಯ ಖುಷಿ ನೀಡುವ ಮತ್ತು ನಂತರ ತನ್ನ ಆಕರ್ಷಣೆ ಕಳೆದುಕೊಳ್ಳುವ ಗೆಲುವಿಗೆ ಜೀವನದ ಅವಿಭಾಜ್ಯ ಅಂಗವಾಗಿರುವ ಪತ್ನಿಯನ್ನು ಹೋಲಿಸಿರುವ ಜೈಸ್ವಾಲ್ ಹೇಳಿಕೆ ಅವರ ಕೀಳುಮಟ್ಟದ ಆಲೋಚನಾ ಕ್ರಮವನ್ನು ತಿಳಿಸುತ್ತದೆ.

ಹೆಣ್ಣು ಎಂದರೆ ತಾನು ಅಂದಿದ್ದನ್ನೆಲ್ಲ ಅನ್ನಿಸಿಕೊಂಡು ತನ್ನ ಅಡಿಯಾಳಾಗಿರುವವಳು ಎನ್ನುವ ಭಾವನೆ ಇನ್ನೂ ಅವರನ್ನು ಬಿಟ್ಟು ಹೋದಂತಿಲ್ಲ. ಅವರು ತೆರೆದ ಕಣ್ಣುಗಳಿಂದ ಸಮಾಜವನ್ನು ನೋಡಲಿ. ಇಂದು ಹೆಣ್ಣು ಅಡಿಯಿಡದ ಕ್ಷೇತ್ರ ಯಾವುದೂ ಉಳಿದಿಲ್ಲ.

ಕೇವಲ ಸೌಂದರ್ಯದಿಂದ ಮಾತ್ರ ಗುರುತಿಸಿಕೊಳ್ಳುವ ಅಗತ್ಯವಿಲ್ಲ. ತನ್ನ ಪ್ರತಿಭೆ, ಗುಣ, ನಡವಳಿಕೆ, ಸಾಮರ್ಥ್ಯದಿಂದ ಮಿಂಚುತ್ತಿದ್ದಾಳೆ ಎನ್ನುವುದು ಅವರಿಗೆ ಕಾಣುತ್ತದೆ. ಜೈಸ್ವಾಲ್ ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಲಿ. ನಂತರ ರಾಜಕೀಯ ಜೀವನದ ಬಗ್ಗೆ ಅರಿಯಬಲ್ಲರು.

ಈ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರು ಕ್ಷಮೆ ಕೇಳಿದ್ದಾರೆಂದು ಸುಮ್ಮನೇ ಬಿಟ್ಟರೆ ನಾಳೆ ಇನ್ನೊಬ್ಬರು ಹೆಣ್ಣುಮಕ್ಕಳಿಗೆ ಅವಮಾನವಾಗುವಂತಹ ಮತ್ತೊಂದು ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.
- ಶೋಭಾ ಕರಂದ್ಲಾಜೆ, ಇಂಧನ ಸಚಿವೆ

ಇಂತಹ ಮಾತನಾಡಿ ಸಣ್ಣವರಾಗಬಾರದು
 ನಮ್ಮ ಸಮಾಜದಲ್ಲಿ ಇವತ್ತಿಗೂ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇದೆ. ಪತಿ-ಪತ್ನಿ-ಮಕ್ಕಳು ಎನ್ನುವ ಬಾಂಧವ್ಯ-ಬೆಸುಗೆಗೆ ವಿಶೇಷ ಅರ್ಥವಿದೆ. ಬಹುಶಃ ಜೈಸ್ವಾಲ್‌ಗೆ ಇದು ತಿಳಿದಂತಿಲ್ಲ.

ಒಂದು ಕಡೆ ಹೆಣ್ಣನ್ನು ವಂಶೋದ್ಧಾರಕಿ, ಮನೆಯ ಬೆಳಕು, ಮಹಾಲಕ್ಷ್ಮಿ ಎಂದೆಲ್ಲ ಉನ್ನತೀಕರಿಸಿ ಮತ್ತೊಂದೆಡೆ ಅವಳನ್ನು ದಿನಗಳೆದಂತೆ ಆಕರ್ಷಣೆ ಕಳೆದುಕೊಳ್ಳುವ ಭೋಗದ ವಸ್ತುವಂತೆ ಕಾಣುವುದು ವಿಷಾದನೀಯ.

ಉನ್ನತ ಸ್ಥಾನದಲ್ಲಿರುವವರು, ಅದರಲ್ಲೂ ಜೈಸ್ವಾಲ್ ಅವರಂತಹ ಹಿರಿಯ ವ್ಯಕ್ತಿ ಇನ್ನೊಬ್ಬರಿಗೆ ಮಾದರಿಯಾಗುವಂತಹ ಮಾತನಾಡಬೇಕು. ತೂಕದ ಮಾತನಾಡುವುದು ಗೊತ್ತಿಲ್ಲ ಎಂದಾದರೆ ಮೌನವಾಗಿರಬೇಕು. ಇಂತಹ ಹೇಳಿಕೆ ನೀಡಿ ಸಣ್ಣವರಾಗಬಾರದು.

ಮಹಿಳೆ ಕ್ಷಮಯಾಧರಿತ್ರಿ. ಜೈಸ್ವಾಲ್ ಕ್ಷಮೆ ಕೇಳಿದ ತಕ್ಷಣ ಅವಳು ಅವರನ್ನು ಕ್ಷಮಿಸಬಹುದು. ಆದರೆ ಮಹಿಳೆಯರ ಮನಸ್ಸಿನಲ್ಲಿ ಜೈಸ್ವಾಲ್ ಬಗ್ಗೆ ಮೂಡಿದ ಭಾವನೆಯನ್ನು ಬದಲಿಸಲು ಬಹಳ ಸಮಯ ಬೇಕಾಗಬಹುದು.
 - ಬಿ. ಜಯಶ್ರೀ, ರಾಜ್ಯಸಭಾ ಸದಸ್ಯೆ
 

ಸೌಂದರ್ಯ ಬಾಹ್ಯ ಆಕರ್ಷಣೆಯಲ್ಲ
ಹೆಣ್ಣಿನ ಹುಟ್ಟೇ ಒಂದು ಪವಾಡ. ಅವಳ ಜೀವನದ ಪ್ರತಿಯೊಂದು ಹಂತದಲ್ಲೂ ಅವಳು ಪವಾಡಗಳನ್ನು ಸೃಷ್ಟಿಸುತ್ತಲೇ ಹೋಗುತ್ತಾಳೆ. ಅಂತಹ ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಜೈಸ್ವಾಲ್ ಅವರಂತಹ ವ್ಯಕ್ತಿಗಳಿಗೆ ಕಷ್ಟವಾಗಬಹುದು.

ಅವರು ಯಾವ ದೃಷ್ಟಿಕೋನ ಇಟ್ಟುಕೊಂಡು ಹಾಗೆ ಹೇಳಿದರೊ ಗೊತ್ತಿಲ್ಲ. ಹೆಣ್ಣಿನ ಸೌಂದರ್ಯ ಯಾವತ್ತಿಗೂ ಮಾಸುವಂಥದ್ದಲ್ಲ. ಅದನ್ನು ಬಾಹ್ಯ ಆಕರ್ಷಣೆಗೆ ಸೀಮಿತಗೊಳಿಸಬೇಕಾದ ಅಗತ್ಯವೂ ಇಲ್ಲ.

ವಯಸ್ಸು ಯಾರ ಆಕರ್ಷಣೆಯನ್ನೂ ಕಡಿಮೆ ಮಾಡುವುದಿಲ್ಲ. ಬದಲಾಗಿ ಹೆಚ್ಚಿಸುತ್ತದೆ. ಅದಕ್ಕೇ ಹಿರಿಯರಿಗೆ, ಅವರ ಅನುಭವಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ.

ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ಬಹಳ ಸೂಕ್ಷ್ಮವಾದುದು. ಪತ್ನಿ ಇಲ್ಲಿ ಎಲ್ಲಾ ಖಾತೆಗಳನ್ನೂ ಒಬ್ಬಳೇ ನಿರ್ವಹಿಸುವ ಮುಖ್ಯಮಂತ್ರಿ. ಅವಳ ಜವಾಬ್ದಾರಿಗಳನ್ನು ಅರಿತುಕೊಳ್ಳುವುದೇ ಪುರುಷರಿಗೆ ಅಸಾಧ್ಯದ ಮಾತು.

ಜೈಸ್ವಾಲ್ ಎಲ್ಲಾ ಮಹಿಳೆಯರನ್ನು ಅರ್ಥ ಮಾಡಿಕೊಳ್ಳದಿದ್ದರೂ ಸರಿ, ಕೊನೆಯ ಪಕ್ಷ ತಮ್ಮ ಪತ್ನಿಯ ಬಗೆಗಾದರೂ ಆಲೋಚಿಸಬೇಕಿತ್ತು. ಈ ಹೇಳಿಕೆ ಅವರ ಪತ್ನಿಯ ಮನಸ್ಸಿಗೆ ಎಷ್ಟು ನೋವನ್ನುಂಟು ಮಾಡಬಹುದು ಎಂಬುದರ ಅಂದಾಜು ಅವರಿಗೆ ಇರಬೇಕಿತ್ತು.
- ರಾಣಿ ಸತೀಶ್, ಮಾಜಿ ಸಚಿವೆ


ಅದು ಯಾವತ್ತೂ ಕುಂದದ ಆಕರ್ಷಣೆ
ಗಂಡ-ಹೆಂಡತಿಯ ಸಂಬಂಧಕ್ಕೆ `ಎಕ್ಸ್‌ಪೈರಿ ಡೇಟ್~ ಎನ್ನುವುದು ಇರುವುದಿಲ್ಲ. ಅದು ಕೊನೆಯತನಕ ಆಕರ್ಷಣೀಯವಾಗಿಯೇ ಇರಬೇಕು. ದಾಂಪತ್ಯದ ಅರ್ಥ ಗೊತ್ತಿದ್ದವರಿಗೆ ಅನುದಿನವೂ ಮೊದಲ ದಿನದಂತೆಯೇ ಇರುತ್ತದೆ. ಗಟ್ಟಿ ಸಂಬಂಧಕ್ಕೆ ಇಂತಹ ಭಾವನೆಯೇ ಬುನಾದಿ.

ಆದರೆ ಎಷ್ಟೊ ಜನ ಗಂಡಸರಿಗೆ ಮದುವೆಯಾಗಿ ಕೆಲ ವರ್ಷಗಳು ಕಳೆಯುತ್ತಿದ್ದಂತೆ ಹೆಂಡತಿ ಹಳೇ ವಸ್ತುವಿನಂತೆ ಕಾಣುವುದು ವಿಪರ್ಯಾಸ. ವಯಸ್ಸು ಹೆಂಡತಿಗಷ್ಟೇ ಅಲ್ಲ, ಗಂಡನಿಗೂ ಆಗುತ್ತದೆ. ಆದರೆ ಯಾವ ಹೆಂಡತಿಯೂ ತನ್ನ ಗಂಡನ ಆಕರ್ಷಣೆಯ ಬಗ್ಗೆ ಮಾತನಾಡುವುದಿಲ್ಲ. ಅಂತಹ ಪರಂಪರೆಯೂ ನಮ್ಮದಲ್ಲ.  ಆದರೆ ಆ ಗೊಣಗಾಟವನ್ನು ಹೆಚ್ಚಿನ ಗಂಡಸರಲ್ಲಿ ಕಾಣಬಹುದು.

ಮದುವೆಯಾದ ಮೊದಲ ದಿನ ಗಂಡ ಕೇಳಿದ ಕೂಡಲೇ ಪತ್ನಿ ಎಷ್ಟು ಪ್ರೀತಿಯಿಂದ ಕಾಫಿ ತಂದು ಕೊಡುತ್ತಾಳೆ. ಅವಳು ಅಜ್ಜಿಯಾದರೂ ಅಷ್ಟೇ ಪ್ರೀತಿಯಿಂದ ಅವನ ಸಮಯಕ್ಕೆ ಸರಿಯಾಗಿ ಕಾಫಿ ಮಾಡಿ ಕೊಡುತ್ತಾಳೆ. ಗಂಡನಿಗೆ ವಯಸ್ಸಾಯಿತು ಎಂದು ಅವನಿಗೆ ಊಟ-ತಿಂಡಿ ಮಾಡಿ ಹಾಕುವುದರಲ್ಲಿ ಅವಳು ವ್ಯತ್ಯಾಸ ತೋರುತ್ತಾಳೆಯೇ? ಇಂತಹ ಅವಳ ಪ್ರೀತಿಯನ್ನು ಕುಂದಿ ಹೋಗುವ ಆಕರ್ಷಣೆಯೊಂದಿಗೆ ಹೋಲಿಕೆ ಮಾಡುವುದು ಎಷ್ಟು ಸರಿ? 
 - ಮೋಟಮ್ಮ, ಕಾಂಗ್ರೆಸ್ ನಾಯಕಿ


ಪತ್ನಿ `ಹಳೆಯ ಗೆಲುವು~ ; ಆದರೆ ಪತಿ?
ಜೀವನದ ಕಷ್ಟ-ಸುಖಗಳಲ್ಲಿ ಸದಾ ಜೊತೆಗೆ ನಿಂತು ನೋವು-ನಲಿವುಗಳಲ್ಲಿ ಪಾಲು ಪಡೆಯುವ ಪತ್ನಿಯ ಬಗ್ಗೆ ಇಂತಹ ಮಾತು ಹೇಳುವುದು ಉದ್ಧಟತನದ ಪರಮಾವಧಿ. ಪತ್ನಿ ಹಳೆಯ ಗೆಲುವು ಎನ್ನುವುದಾದರೆ ಪತಿಯನ್ನು ಯಾವುದಕ್ಕೆ ಹೋಲಿಸಬೇಕು?
ಒಂದು ವ್ಯಕ್ತಿತ್ವವನ್ನು ಯಾವತ್ತೂ ಬಾಹ್ಯ ದೃಷ್ಟಿಕೋನದಿಂದ ನೋಡಬಾರದು.

ಪ್ರತಿಯೊಬ್ಬರಲ್ಲೂ ಅವರದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ವಯಸ್ಸಾದಂತೆ ಅದು ವೃದ್ಧಿಸುತ್ತ ಹೋಗುತ್ತದೆಯೇ ಹೊರತು ಅವನತಿ ಹೊಂದುವುದಿಲ್ಲ. ಅದರಲ್ಲೂ ಹೆಣ್ಣಿನ ಸೌಂದರ್ಯಕ್ಕೆ ಅಂತಹ ಸೀಮಿತ ಅರ್ಥ ಕಲ್ಪಿಸಬಾರದು.
 - ಜ್ಯೋತಿ ರೆಡ್ಡಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT