ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಗೆ ಸೀಮಿತವಾದ ಸಾಂಸ್ಕೃತಿಕ ಕಾಳಜಿ

Last Updated 31 ಅಕ್ಟೋಬರ್ 2011, 6:35 IST
ಅಕ್ಷರ ಗಾತ್ರ

ಹಾಸನ:`ಬೇಲೂರು, ಹಳೇಬೀಡಿನ ಶಿಲ್ಪಕಲೆಗಳು ಕರ್ನಾಟಕ ರಾಜ್ಯಕ್ಕೆ ವಿಶ್ವ ಭೂಪಟದಲ್ಲಿ ಸ್ಥಾನ ಲಭಿಸುವಂತೆ ಮಾಡಿವೆ. ಹೊಯ್ಸಳರ ಭವ್ಯ ಪರಂಪರೆ ಹೊಂದಿರುವ ಜಿಲ್ಲೆ ನಮ್ಮದು... ಹೀಗೆಲ್ಲ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತ ಬಂದಿದ್ದೇವೆ. ಆದರೆ ಈಚಿನ ಕೆಲವು ಬೆಳವಣಿಗೆಗಳಿಂದಾಗಿ ಸಂಸ್ಕೃತಿ, ಕಲೆ ಬಗೆಗಿನ ನಮ್ಮ ಕಾಳಜಿ ಮಾತಿಗಷ್ಟೇ ಸೀಮಿತವಾಗಿದೆಯೇ ಎಂಬ ಸಂದೇಹ ಮೂಡುವಂತಾಗಿದೆ.

ಕೆಲವು ತಿಂಗಳ ಹಿಂದೆ ನಡೆದ ಹಾಸನ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಮಹಾರಾಜಾ ಪಾರ್ಕ್‌ನಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡದ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಶಾಸಕರು, ನಗರಸಭೆ ಆಯುಕ್ತರು, ನಗರಸಭೆ ಅಧ್ಯಕ್ಷ ಎಲ್ಲರೂ ಸಭೆಯಲ್ಲಿದ್ದರು. `ಮಹಾ ರಾಜಾ ಪಾರ್ಕ್‌ನಲ್ಲಿ ನಗರಸಭೆಯಿಂದ ಅನುಮತಿ ಪಡೆಯದೆಯೇ ಕಟ್ಟಡ ನಿರ್ಮಿಸಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಯಾರ ಗಮನಕ್ಕೂ ತಾರದೆ ಇದಕ್ಕೆ ಅನುಮತಿ ನೀಡಿದ್ದಾರೆ, ನಗರದ ಜನರಿಗೆ ಇರುವುದೇ ಒಂದು ಪಾರ್ಕ್ ಅದರಲ್ಲೂ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ~ ಹೀಗೆ ಆರೋಪ, ದೂರುಗಳು ಸಭೆಯಲ್ಲಿ ಕೇಳಿ ಬಂದವು. ಜತೆಗೆ ಈ ಕಟ್ಟಡವನ್ನು ಕೆಡವಿ, ಆ ಜಾಗವನ್ನು ಪಾರ್ಕ್‌ಗಾಗಿ ಉಳಿಸಿ ಕೊಳ್ಳಬೇಕು~ ಎಂಬ ತೀರ್ಮಾನವೂ ಆಯಿತು. ಸಭೆಯ ತೀರ್ಮಾನದಂತೆ ಕೆಲವೇ ದಿನಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಅಡಿಪಾಯವನ್ನೂ ನಗರಸಭೆ ಸಿಬ್ಬಂದಿ ಕಿತ್ತುಹಾಕಿದರು.

ಹಿನ್ನೆಲೆ- ಮುನ್ನೆಲೆಗಳನ್ನು ಅರಿಯದಿರುವ ಅನೇಕ ಮಂದಿ ನಗರಸಭೆಯ ತೀರ್ಮಾನವನ್ನು ಸಮರ್ಥಿಸಿಕೊಂಡರು. ಈ ಎಲ್ಲ ಬೆಳವಣಿಗೆಗಳ ನಡುವೆ ಒಂದೆರಡು ವಿಚಾರಗಳು ಚರ್ಚೆಯಾಗದೆ ಉಳಿದವು.

ನಗರದಲ್ಲಿರುವುದು ಒಂದೇ ಪಾರ್ಕ್, ಅದನ್ನು ಉಳಿಸಿಕೊಳ್ಳಬೇಕು ಎಂಬು ದರಲ್ಲಿ ಎರಡು ಮಾತೇ ಇಲ್ಲ. ಪಾರ್ಕ್ ಒಳಗೆ ಕಟ್ಟಡ ನಿರ್ಮಿಸ ಬಾರದೆಂಬ ವಾದವೂ ಸಮರ್ಥನೀಯ. ಆದರೆ ಈ ಪಾರ್ಕನ್ನು ಅಭಿವೃದ್ಧಿಪಡಿಸಿ ಮಕ್ಕಳಿಗಾಗಿ ಒಂದಿಷ್ಟು ಆಟಿಕೆಗಳನ್ನು ಹಾಕಿಸಿ, ಶುಚಿತ್ವ ಕಾಪಾಡಿ, ಒಳ್ಳೊಳ್ಳೆ ಗಿಡಗಳನ್ನು ಹಾಕಿಸಿ, ಕೆಟ್ಟಿರುವ ಕಾರಂಜಿ ಮತ್ತೆ ಚಿಮ್ಮುವಂತಾಗಲಿ... ಎಂದೆಲ್ಲ ಜನರು ವರ್ಷಗಳಿಂದ ಒತ್ತಾಯಿಸುತ್ತಿರುವುದು ಯಾರ ಕಿವಿಗೂ ಬಿದ್ದಿಲ್ಲ ಎಂಬುದು ಅರ್ಥವಾಗದ ವಿಚಾರ.

ನಗರಸಭೆ 2009ರ ಏಪ್ರಿಲ್ 2ರಂದು ಪ್ರಾಚ್ಯವಸ್ತು ಇಲಾಖೆಗೆ ಈ ಜಾಗವನ್ನು ನೀಡಿದೆ. ಅದೂ ಅಲ್ಲದೆ ಈ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬ ವಿಸ್ತೃತ ಮಾಹಿತಿಯನ್ನೂ ನಗರಸಭೆ ಪಡೆದುಕೊಂಡಿತ್ತು. ಈ ಪತ್ರಕ್ಕೆ ಅಂದಿನ ನಗರಸಭೆ ಆಯುಕ್ತರು ಸಹಿ ಮಾಡಿದ್ದರು. ಇದಾದ ಬಳಿಕ ಪ್ರಾಚ್ಯವಸ್ತು ಇಲಾಖೆಯವರು ಮೂರು ಲಕ್ಷ ರೂಪಾಯಿ ವೆಚ್ಚಮಾಡಿ ತನ್ನ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದರು. ಕೇವಲ ಎರಡೂವರೆ ವರ್ಷ ಹಿಂದೆ ಜಾಗ ನೀಡಿದ್ದ, ಬೇಲಿ ಹಾಕಿದಾಗ ಸುಮ್ಮನಿದ್ದ ನಗರಸಭೆ ಈಗ ತನಗೇನೂ ಗೊತ್ತಿಲ್ಲ ಎಂದು ಹೇಳಿ ಹಾಕಿದ್ದ ಅಡಿಪಾಯವನ್ನು ಕಿತ್ತು ಹಾಕಿರುವುದು ಅಚ್ಚರಿ ಮೂಡಿಸಿದೆ.

ಏನು ಉದ್ದೇಶ
ಪ್ರಾಚ್ಯವಸ್ತು ಇಲಾಖೆಯವರು ಇಲ್ಲಿ ಯಾವುದೋ ವ್ಯಾಪಾರ ಚಟುವಟಿಕೆ ನಡೆಸಲು ಜಾಗ ಕೇಳಿರಲಿಲ್ಲ. ಈಗಾಗಲೇ ಇರುವ ವಸ್ತು ಸಂಗ್ರಹಾಲಯದಲ್ಲಿ ಜಾಗ ಇಲ್ಲ. ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನೇಕ ಅಮೂಲ್ಯ ವಸ್ತುಗಳಿವೆ. ಅದನ್ನು ಕಾಪಾಡಲು ಸೂಕ್ತ ಜಾಗ ಬೇಕಾಗಿತ್ತು. ಅದಕ್ಕೂ ಮುಖ್ಯವಾಗಿ ಕೆಲವು ಪುರಾತನ ದೇವಸ್ಥಾನಗಳಲ್ಲಿ ಶತಮಾನಗಳಿಂದ ಬಳಸುತ್ತಿದ್ದ ರಥಗಳು ಈಗ ನಿಷ್ಪ್ರಯೋಜಕವಾಗಿದ್ದು, ಅವುಗಳನ್ನು ಇಲ್ಲಿ ತಂದಿಟ್ಟು, ಸಂಜೆ ವೇಳೆಯಲ್ಲಿ ವಿಶೇಷ ದೀಪಾಲಂಕಾರ, ಧ್ವನಿಬೆಳಕಿನ ವ್ಯವಸ್ಥೆಯೊಂದಿಗೆ ಇತಿಹಾಸವನ್ನು ಹೇಳುವಂಥ ಅಪೂರ್ವ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು.

36ಲಕ್ಷ ರೂಪಾಯಿಯ ಈ ಯೋಜನೆಗೆ ಹಣ ಬಿಡುಗಡೆ ಆಗಿದೆ. ನಿರ್ಮಿತಿ ಕೇಂದ್ರಕ್ಕೆ ಆ ಹಣವನ್ನು ನೀಡಿಯಾಗಿದೆ. ಇಲಾಖೆಯವರು ಇಲ್ಲಿ ಕಟ್ಟಡ ನಿರ್ಮಿಸಲು ಹೋಗಿಲ್ಲ. ಒಂದು ವೇದಿಕೆ, ರಥಗಳಿಗೆ ಬಿಸಿಲು-ಮಳೆ ತಾಕದಂತೆ ಒಂದು ಛಾವಣಿ. ಯೋಜನೆಯಲ್ಲಿರುವುದು ಇಷ್ಟೇ. ವಿವಿಧ ಭಾಗಗಳಿಂದ ತಂದಿರುವ ಶಿಲ್ಪಗಳನ್ನು ಅಲ್ಲಲ್ಲಿ ಪ್ರದರ್ಶನಕ್ಕಿಟ್ಟು ಸುತ್ತ ಆಯುರ್ವೇದ ಗಿಡಮೂಲಿಕೆಗಳನ್ನು, ಹೂವಿನ ಗಿಡಗಳನ್ನು ಬೆಳೆಸುವುದು. ವಸ್ತು ಸಂಗ್ರಹಾಲಯಕ್ಕೆ ಖ್ಯಾತ ಕಲಾವಿದ ಸುಮಂತ ಅರ್ಕಸಾಲಿ ಅವರು ಸುಮಾರು 72 ಕಲಾಕೃತಿಗಳನ್ನು ನೀಡಿದ್ದು ಅವುಗಳನ್ನೂ ಪ್ರದರ್ಶನಕ್ಕೆ ಇಡಲು ವ್ಯವಸ್ಥೆ ಮಾಡುವುದು ಇದು ಯೋಜನೆಯ ಸಂಕ್ಷಿಪ್ತ ವಿವರ.

ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಇಲ್ಲೇ ಜಾಗ ಕೊಡಿ ಎಂದು ಇಲಾಖೆ ಕೇಳಿಲ್ಲ. ಅಂದಿನ ಜಿಲ್ಲಾಧಿಕಾರಿಯನ್ನು ಭೇಟಿಮಾಡಿದ್ದ ಅಧಿಕಾರಿಗಳು `ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಉಳಿದುಕೊಳ್ಳಲು ಹಾಸನಕ್ಕೇ ಬರುತ್ತಾರೆ. ಆದರೆ ನಗರದಲ್ಲಿ ಪ್ರೇಕ್ಷಣೀಯವಾದ ಒಂದು ಜಾಗವೂ ಇಲ್ಲ. ನಾವು ಈ ಯೋಜನೆ ರೂಪಿಸಿದ್ದೇವೆ. ನಗರದ ವ್ಯಾಪ್ತಿಯಲ್ಲಿ ಒಂದಿಷ್ಟು ಜಾಗ ಕೊಡಿ. ಜಾಗ ಇಲ್ಲದಿದ್ದರೆ ಯಾವುದಾದರೂ ಹಳೆಯ ಕಟ್ಟಡ ಕೊಟ್ಟರೆ ಅದನ್ನು ನವೀಕರಿಸಿ ಅಲ್ಲಿಯೇ ಇಲಾಖೆಯ ಚಟುವಟಿಕೆ ನಡೆಸುತ್ತೇವೆ~ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಜಿಲ್ಲಾಧಿಕಾರಿ ಪಾರ್ಕ್ ಒಳಗಿನ ಈ ಜಾಗವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಲ್ಲದೆ ಆ ಬಗ್ಗೆ 2009ರ ಫೆಬ್ರುವರಿ 16ರಂದು ನಗರಸಭೆಗೆ ಸೂಚನೆ ನೀಡಿದ್ದರು.

ಹಾಸನದ ಪ್ರಾಚ್ಯವಸ್ತುಗಳ ಸಂಗ್ರಹಕ್ಕೆ ಈ ಜಾಗ ಸಾಲದು. ಕನಿಷ್ಠ ಎರಡು ಮೂರು ಎಕರೆ ಜಾಗವನ್ನಾದರೂ ನೀಡಬೇಕು. ಆ ಬಗ್ಗೆ ಯಾರೂ ಚಿಂತನೆ ನಡೆಸಿಲ್ಲ ಎಂಬುದು ಒಂದು ಕಡೆಯಾದರೆ, ಜಾಗವನ್ನು ನೀಡುವುದಾಗಿ ಹಿಂದೆ ಒಪ್ಪಿದ್ದ  ನಗರಸಭೆ ಈಗ ಈ ರೀತಿ ವರ್ತಿಸಿದ್ದು ಅಚ್ಚರಿ ಮೂಡಿಸುತ್ತಿದೆ.

ಬಂದಿರುವ 36ಲಕ್ಷ ರೂಪಾಯಿ ಯನ್ನು ಮುಂದಿನ ಮಾರ್ಚ್ ಒಳಗೆ ಬಳಸಿದ್ದರೆ ಸರ್ಕಾರಕ್ಕೆ ವಾಪಸಾಗುತ್ತದೆ, ಯೋಜನೆ ಹಾಗೆಯೇ ಕಡತದಲ್ಲಿ ಉಳಿಯುತ್ತದೆ. ನಷ್ಟವಾಗುವುದು ಇಲಾಖೆಗೂ ಅಲ್ಲ ನಗರಸಭೆಗೂ ಅಲ್ಲ, ಹಾಸನ ಮತ್ತು ನಾಡಿನ ಜನತೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT