ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಗೊಂದು ಲಗಾಮು!

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಳುಗರ ಮೇಲೆ ಸ್ವಲ್ಪವೂ ಕನಿಕರವಿಲ್ಲದೆ, ಸಮಯದ ಅರಿವಿಲ್ಲದೆ, ಗಂಟೆಗಟ್ಟಲೆ ಭಾಷಣ ಮಾಡುವವರನ್ನು ನಿಯಂತ್ರಿಸುವುದು ಹೇಗೆ? ಉಳಿದ ಭಾಷಣಕಾರರ ಸಮಯವನ್ನೂ ನುಂಗಿ ನೊಣೆಯುವ ಭಾಷಣ ಭೀಷಣರಿಗೆ ಕಡಿವಾಣ ಹಾಕುವುದು ಹೇಗೆ?

ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದ ಇಂಥ ಮಾತಿನ ಮಲ್ಲರಿಗೆ ಕಡಿವಾಣ ಹಾಕಲೆಂದೇ ಹೊಸ ಉಪಕರಣವೊಂದನ್ನು ಶೋಧಿಸಲಾಗಿದೆ. ಹಾಂ, ಮಾತಿನ ತಡೆಯ ಈ ಶೋಧಕ್ಕೆ 2012ರ ಸಾಲಿನ `ಇಗ್ನೊಬೆಲ್ ಪ್ರಶಸ್ತಿ~ ಕೂಡ ಒಲಿದಿದೆ.

ಇನ್ನೇನು, `ನೊಬೆಲ್ ಪ್ರಶಸ್ತಿ ಋತು~ ಕ್ಷಣಗಣನೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಇದೇನಿದು `ಇಗ್ನೊಬೆಲ್ ಮಾತು~ ಎಂದಿರಾ? ಹೌದು, ಇದೂ ಒಂದು ಪ್ರಶಸ್ತಿ. `ಆನಲ್ಸ್ ಆಫ್ ಇಂಪ್ರೋಬೇಬಲ್ ರೀಸರ್ಚ್ ನಿಯತಕಾಲಿಕೆ~ 1991ರಿಂದ ಪ್ರತಿ ವರ್ಷವೂ ಈ ಪ್ರಶಸ್ತಿಗಳನ್ನು ನೀಡುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ `ತಮಾಷೆ ಎನಿಸುವ, ಆದರೆ ಯೋಚಿಸುವಂತೆ ಮಾಡಬಲ್ಲ~ ವಿಶಿಷ್ಟ ವಿನೋದಮಯ ಸಂಶೋಧನೆಗಳನ್ನು ಮಾಡಿದವರಿಗೆ ಇಗ್ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2012ರ `ಶಬ್ದ ವಿಜ್ಞಾನ ಕ್ಷೇತ್ರ~ದ ಪ್ರಶಸ್ತಿ ಜಪಾನಿನ ಕಝತಾಕ ಕುರಿಹರ ಮತ್ತು ಕೋಜಿ ತ್ಸುಕಾಡ ಅವರು ತಯಾರಿಸಿದ `ಸ್ಪೀಚ್ ಜಾಮರ್~ ಸಂಶೋಧನೆಗೆ ಸಂದಿದೆ. 

ಕುರಿಹರ ಮತ್ತು ತ್ಸುಕಾಡರ `ಭಾಷಣ ಸಂಮರ್ದಕ~ (ಸ್ಪೀಚ್ ಜ್ಯಾಮರ್) ಉಪಕರಣದ ಕಾರ್ಯ ವಿಧಾನ ಸ್ವಾರಸ್ಯಕರವಾಗಿದೆ. ಕೇವಲ ನೂರು ಮಿಲಿ ಸೆಕೆಂಡ್‌ಗಳ ನಂತರ ವ್ಯಕ್ತಿಯ ಧ್ವನಿಯನ್ನು ಈ ಉಪಕರಣ ಪುನರಾವರ್ತಿಸುತ್ತದೆ.

ತಮ್ಮ ಮಾತು ಪ್ರತಿಧ್ವನಿಸಿದರೆ ಯಾವ ಭಾಷಣಕಾರ ತಾನೇ ಮಾತು ಮುಂದುವರಿಸುವುದು ಸಾಧ್ಯ? ಈ ಉಪಕರಣದ ಪ್ರತಿಧ್ವನಿಯ ಪರಿಣಾಮ ಎಂತಹುದು ಎಂದರೆ, ಮಾತನಾಡುವ ವ್ಯಕ್ತಿ ತನ್ನ ಕೊರೆತವನ್ನು ತಕ್ಷಣವೇ ನಿಲ್ಲಿಸಿಬಿಡುತ್ತಾನೆ.

ಭಾಷಣಕಾರರಿಗೆ ತಮ್ಮ ಮಾತುಗಳು ಅತಿ ವೇಗವಾಗಿವೆ ಅಥವಾ ನಾವು ನಿಗದಿತ ಸಮಯಕ್ಕಿಂತ ಹೆಚ್ಚಿನ ವೇಳೆ ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ತಿಳಿಸುವ ಎಚ್ಚರಿಕೆ ಗಂಟೆಯ ರೂಪದಲ್ಲಿ `ಭಾಷಣ ಸಂಮರ್ದಕ~ವನ್ನು ಗುರ್ತಿಸಬಹುದು.

`ಈ ತಂತ್ರಜ್ಞಾನವು ಭಾಷಣಕಾರರಿಗೆ ಅತ್ಯುಪಯುಕ್ತ. ನಿರ್ದಿಷ್ಟ ಭಾಷಣಕಾರ ನಿರಂತರ ಮಾತನಾಡಿ ಇತರರನ್ನು ಅವಕಾಶ ವಂಚಿತರನ್ನಾಗಿ ಮಾಡುವ ಸಂದರ್ಭ ಬಂದರೆ ಅಂತಹ ಸಂದರ್ಭದಲ್ಲಿ ಈ ಸಾಧನ ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವುದಕ್ಕೆ ಸಹಕಾರಿ~ ಎನ್ನುವುದು ಕುರಿಹರ ಅವರ ಅನಿಸಿಕೆ.

ಮಾತು ಮರ್ದನದ ಉಪಕರಣದಿಂದ ಹೊರಳಿ ನೋಡಿದರೆ, ಈ ಸಲ `ಇಗ್ನೊಬೆಲ್~ ಗಿಟ್ಟಿಸಿದ ಶೋಧಗಳೆಲ್ಲ ಸ್ವಾರಸ್ಯಕರವಾಗಿವೆ. `ಎಡಕ್ಕೆ ವಾಲಿ ನಿಂತರೆ ಐಫೆಲ್ ಗೋಪುರ ಕುಬ್ಜವಾದಂತೆ ಕಾಣುವುದೇಕೆ?~

ಎಂಬ ಬಗ್ಗೆ ಅಧ್ಯಯನ ಮಾಡಿದ್ದಕ್ಕಾಗಿ ಡಚ್ ಸಂಶೋಧಕರಾದ ಅನಿಟಾ ಐರ‌್ಲೆಂಡ್ ಹಾಗೂ ರೋಲ್ಫ್  ವಾನ್ ಅವರಿಗೆ ಮನಃಶಾಸ್ತ್ರ ವಿಭಾಗದಲ್ಲಿ ಪುರಸ್ಕಾರ ಸಂದಿದೆ. ಹಾಂ, ಪ್ರಶಸ್ತಿ ಸ್ವೀಕರಿಸಿದ ನಲವತ್ತೆಂಟು ತಾಸುಗಳಲ್ಲೇ ಇವರಿಬ್ಬರೂ ಮದುವೆಯಾದರು.

ಸತ್ತ ಮೀನಿನ ಮೆದುಳಿನ ಚಟುವಟಿಕೆಗಳನ್ನು ಪತ್ತೆ ಹಚ್ಚಬಲ್ಲ ಅತ್ಯಾಧುನಿಕ ಉಪಕರಣವನ್ನು ಪ್ರದರ್ಶಿಸಿದ್ದಕ್ಕಾಗಿ ಅಮೆರಿಕದ ನಾಲ್ವರಿಗೆ `ಇಗ್ನೊಬೆಲ್~ ಸಂದಿದೆ. ರಷ್ಯಾದ ಹಳೆಯ ಮದ್ದುಗುಂಡುಗಳನ್ನು ಹೊಸ ವಜ್ರಗಳನ್ನಾಗಿಸಬಹುದೆಂಬ ವಿನೋದಾತ್ಮಕ ಸಂಶೋಧನಾ ಪ್ರಬಂಧಕ್ಕೆ `ಇಗ್ನೊಬೆಲ್~ ಶಾಂತಿ ಪ್ರಶಸ್ತಿ ನೀಡಲಾಗಿದೆ.

ಶರೀರರಚನಾ ಶಾಸ್ತ್ರಕ್ಕೆ ನೀಡಲಾಗುವ ಪ್ರಶಸ್ತಿ ಈ ಬಾರಿ ಡಚ್ ಹಾಗೂ ಅಮೆರಿಕದ ವಿಜ್ಞಾನಿಗಳ ಪಾಲಾಗಿದೆ. ಇವರ ಬಹು ದೊಡ್ಡ ಸಂಶೋಧನೆ ಎಂದರೆ, ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಪೃಷ್ಠ ಭಾಗವನ್ನು ಚಿತ್ರದಲ್ಲಿ ನೋಡಿ ಅವುಗಳನ್ನು ಗುರುತಿಸುತ್ತವೆ. ಇದು ಮನುಷ್ಯರಿಗೆ ಸಾಧ್ಯವಿಲ್ಲ ಎನ್ನುವುದು ಶೋಧದ ತಿರುಳು!

ಓಡಾಡುತ್ತಿರುವ ಮನುಷ್ಯನ ಕೈಯಲ್ಲಿರುವ ಲೋಟದಿಂದ ಕಾಫಿ ಯಾಕೆ ಚೆಲ್ಲುವುದಿಲ್ಲ ಹಾಗೂ ಮೋಟು ಜಡೆಗಳು ನೆಗೆದಾಡುವುದೇಕೆ?- ಈ ವಿಶ್ಲೇಷಣೆಗಳು ಕೂಡ `ಇಗ್ನೊಬೆಲ್~ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT