ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಸೋನೆ ಮಳೆ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

“ಮಾತಿಗಿರುವ ಶಕ್ತಿನೇ ಅಂತದ್ದು, ನಾ ಎಲ್ಲೇ ಇದ್ದರೂ ಹೀಗೆ ಮಾತಾಡ್ತಾನೇ ಇರ‌್ತೀನಿ... ನಗ್ತಾ ನಗ್ತಾ ಮಾತಾಡೋದು ಅಂದ್ರೆ ಸೋನೆ ಮಳೆ ಸುರಿದು ಸುತ್ತಲಿನ ಪರಿಸರವನ್ನು ತಂಪಾಗಿಸುವಂತೆ. ಹಾಗಾಗಿ ಮಾತು ನನ್ನೊಳಗಿನ ಅಂತಃಸತ್ವವೂ ಹೌದು.

ಇಷ್ಟೆಲ್ಲ ಈಗ ಮಾತಾಡ್ತ ಇರುವ ನಾನು ಬಾಲ್ಯದಲ್ಲಿ ಯಾರು ಎಷ್ಟೇ ಮಾತಾಡಿಸಿದ್ರೂ ಬರೀ ನಗುವಿನಿಂದಲೇ ಉತ್ತರ ನೀಡುತ್ತಿದ್ದೆ ಅಂತ ಅಮ್ಮ ಅಪ್ಪ ಈಗಲೂ ನೆನಪು ಮಾಡಿಕೊಳ್ತಾರೆ. ಅಮ್ಮ ಹೇಳ್ತಾರೆ ಇಷ್ಟೊಂದು ಮಾತಾಡ್ತೀಯಾ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ ಅಂತ...

ಆರ್‌ಜೆ ಆಗಬೇಕು ಅಂತೇನೂ ಮಾತು ಕಲೀಲಿಲ್ಲ. ಪ್ರೌಢಶಾಲೆಯಲ್ಲಿದ್ದಾಗ ಸಹಪಾಠಿಗಳಿಂದ ಮಾತು ಕರಗತವಾಯಿತು. ಅಲ್ಲಿಂದ ಆರಂಭಗೊಂಡ ಮಾತಿನ ಜರ್ನಿ, ಆರ್‌ಜೆ ಆಗಿ, ಜನರಿಗೆ ಮನರಂಜನೆ ನೀಡುವ ಹಂತಕ್ಕೆ ಬಂದು ನಿಂತಿದೆ. ಹುಟ್ಟಿದ್ದು, ಬೆಳೆದಿದ್ದು, ಓದು ಎಲ್ಲವೂ ಇದೇ ಉದ್ಯಾನ ನಗರಿಯಲ್ಲಿ.

ಏನೇ ಹೇಳಿ, ಜನಸಾಂದ್ರತೆ, ಮಾಲಿನ್ಯ ಹೆಚ್ಚುತ್ತಾ ಹೋಗಿದ್ದರೂ, ಈ ಊರಿಗಿರುವ ಆಕರ್ಷಣೆ ಕಡಿಮೆಯಾಗಿಲ್ಲ. ಜೈನ್ ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದೆ. ಆಮೇಲೆ ರೆಡ್ ಎಫ್‌ಎಂನಲ್ಲಿ ಆರ್‌ಜೆ ಆದೆ, ಈಗ ಐದು ವರ್ಷಗಳಿಂದ ಇದೇ ವೃತ್ತಿ.

ಆರ್‌ಜೆ ವೃತ್ತಿ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ. ಪ್ರತಿದಿನ ಬೆಳಿಗ್ಗೆ 11ರಿಂದ 2ರ ವರೆಗೆ `ಸೂಪರ್ ಹಿಟ್ ಮಸಾಲಾ ಮಾಯಾ ಜತೆ...~ ಅಂತ ಹೇಳುವಾಗಲೇ ಅದೆಷ್ಟು ಕೇಳುಗರು ಕರೆ ಮಾಡ್ತಾರೆ! ಸಣ್ಣ ನೆಗಡಿಯಾದರೂ ಅವರು ನೀಡುವ ಸಲಹೆ, ತೋರುವ ಪ್ರೀತಿ ಚಕಿತಗೊಳಿಸುತ್ತದೆ. ಅಪ್ಪ ಅಮ್ಮನಿಗೆ ಒಬ್ಬಳೇ ಮಗಳಾಗಿದ್ದರಿಂದ ತುಂಬಾ ಮ್ದ್ದುದುಮಾಡಿ ಬೆಳೆಸಿದ್ದಾರೆ. ಮನೆ ತರಹದ್ದೇ ಪ್ರೀತಿ ಕೇಳುಗರಿಂದ ಸಿಗುವಾಗ ಮನ ತುಂಬಿ ಬರುತ್ತದೆ.

ನನಗೆ ಈ ಜಗತ್ತೆ ಸುಂದರ. ಎಲ್ಲರಲ್ಲೂ ಒಳ್ಳೆಯದನ್ನೇ ಹುಡುಕೋದರಿಂದ ಯಾವಾಗಲೂ ಕೂಲ್ ಆಗಿರ‌್ತೀನಿ. ನನ್ನ ಶೋ ಹೆಚ್ಚಾಗಿ ಮಹಿಳೆಯರ ಫಿಟ್‌ನೆಸ್, ಅವರಿಗಿಷ್ಟದ ಹಾಡು, ಬ್ಯೂಟಿ ಟಿಪ್ಸ್ ಹೀಗೆ ಒಟ್ಟು ಸ್ತೀ ಜಗತ್ತನ್ನು ತಟ್ಟುತ್ತದೆ. ಸಹಜವಾಗಿ ಸ್ತೀ ಜಗತ್ತಿನ ಬಗ್ಗೆ ಗಂಡಸರಿಗೆ ಕುತೂಹಲ ಇರುವುದರಿಂದ ಅವರೇ ಹೆಚ್ಚಾಗಿ ಕರೆ ಮಾಡುತ್ತಾರೆ. ಶೋ ನೀಡುವ ಹಿಂದಿನ ದಿನ ಯಾವ ವಿಚಾರದ ಕುರಿತು ಮಾತನಾಡಬೇಕು ಎಂಬುದನ್ನು ಗುರುತು ಹಾಕಿಕೊಳ್ಳುತ್ತೇನೆ ಅಷ್ಟೆ, ಉಳಿದದ್ದೆಲ್ಲ ಮೈಕ್ ಮುಂದೆ!

ಪ್ರತಿ ಶುಕ್ರವಾರ `ಕಿಟ್ಟಿ ಪಾರ್ಟಿ~ ಅಂತ ಮಾಡ್ತಾ ಇರ‌್ತೀನಿ. ಸದಾ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವ ಹೆಣ್ಣುಮಕ್ಕಳಿಗಾಗಿ ಎಂ.ಜಿ. ರಸ್ತೆಯಲ್ಲಿ ಪಾರ್ಟಿ. ಅದರಲ್ಲೂ ನನ್ನ ಶೋಗೆ ಹೆಚ್ಚಾಗಿ ಕರೆ ಮಾಡುವ ಮಹಿಳೆಯರನ್ನು ನಾನೇ ಆಯ್ಕೆ ಮಾಡಿ ಕರೆದುಕೊಂಡು ಹೋಗ್ತೀನಿ. ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಹೆಚ್ಚಾಗಿ ಗೃಹಿಣಿಯರೇ ಇರ‌್ತಾರೆ.

ಒಂದೊಳ್ಳೆ ಹೋಟೆಲ್‌ಗೆ ಅವರನ್ನು ಕರೆದುಕೊಂಡು ಹೋಗಿ ನಗು, ಮಾತು, ಊಟ, ಹರಟೆ ಹೀಗೆ ಕಳೆಯುತ್ತದೆ ಆ ದಿನ. ಜನರೊಂದಿಗೆ ಬೆರೆತಾಗೆಲ್ಲ ಬಹಳ ಖುಷಿ ಅನಿಸುತ್ತದೆ.
ಮಾತು ಜಗತನ್ನೇ ಗೆಲ್ಲಬಹುದಾಂತಹ ಸಾಧನ.

ಹೆಚ್ಚು ಕಡಿಮೆ ಎಲ್ಲ ವೃತ್ತಿಗಳು ಚೆಂದದ ಮಾತನ್ನು ಬಯಸುತ್ತವೆ. ಈ ಹಾದಿ ಹಿಡಿದವರೆಲ್ಲ ಯಶಸ್ಸು ಪಡೆದೇ ಪಡೆಯುತ್ತಾರೆ ಅನ್ನೊ ನಂಬಿಕೆ. ಆದರೆ ಆರ್‌ಜೆ ಆಗಿ ಕಾರ್ಯಕ್ರಮ ನಡೆಸಿಕೊಡುವಾಗ ಮಾತ್ರ ವೈಯಕ್ತಿಕ ನೋವು ನಲಿವನ್ನು ಮರೆತು ಜನರನ್ನು ರಂಜಿಸಬೇಕು. ಇದು ವೃತ್ತಿ ಬೇಡುವ ಸವಾಲು.

ಒಂದು ದಿನ ಹಾಗೇ ಅಮ್ಮನಿಗೆ ತುಂಬಾ ಹುಷಾರಿರಲಿಲ್ಲ. ಕೇಳುಗರೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದೆ, ಅಮ್ಮ ಕಣ್ಮುಂದೆ ಬರುತ್ತಿದ್ದರೂ, ಉಮ್ಮಳಿಸುತ್ತಿದ್ದ ದುಖವನ್ನೆಲ್ಲ ಹಾಗೇ ಒತ್ತಿಟ್ಟು, ಮಾತನಾಡಲು ಶುರು ಮಾಡಿದೆ. ಈಗಲೂ ಈ ಸನ್ನಿವೇಶ ನೆನಪಿಗೆ ಬರುತ್ತದೆ.
ಪ್ರೀತಿ ಎಂದರೆ ಒಂದು ಸುಂದರ ಅನುಭವ, ನೀವು ಅನುಭವಿಸುತ್ತಾ ಹೋದಂತೆ ಅದು ನಿಮ್ಮನ್ನು ಆವರಿಸುತ್ತದೆ ಮತ್ತು ಆನಂದವನ್ನೀಯುತ್ತದೆ.

ಸ್ನೇಹವೆಂಬುದು ನನ್ನ ಪಾಲಿಗೆ ಆಮ್ಲಜನಕ. ಊರೆಲ್ಲ ಸ್ನೇಹಿತರು ನನಗೆ. ಹೆಚ್ಚು ಕಡಿಮೆ 10 ಮಂದಿ ಉತ್ತಮ ಸ್ನೇಹಿತರಿದ್ದಾರೆ. ವಾರಾಂತ್ಯಗಳಲ್ಲಿ ಇತರೆ ಕಾರ್ಯಕ್ರಮಗಳ ನಿರೂಪಣೆ, ಶಾಲಾ ಕಾಲೇಜುಗಳ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಎಲ್ಲ ಭಾಷೆಯ ಸಿನಿಮಾ ನೋಡುತ್ತೇನೆ. ನನ್ನ ಶೋ ಹಳೆ ಚಿತ್ರಗೀತೆಗಳನ್ನೇ ಆಧರಿಸಿದೆ. ನಿಜ ಜೀವನದಲ್ಲೂ ನಾ ಹಳೆಯ ಚಲನಚಿತ್ರ ಮತ್ತು ಗೀತೆಗಳ ಮೌಲ್ಯ ಮತ್ತು ಇಂಪಿಗೆ ಮಾರುಹೋಗುತ್ತೇನೆ.

ಕತೆ ಪುಸ್ತಕ ಓದುವುದೆಂದರೆ ಅಚ್ಚುಮೆಚ್ಚು. ಅಡಿಗೆ ಮನೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತೇನೆ. ಪಲಾವ್ ಮತ್ತು ಜಾಮೂನ್ ಅಂದರೆ ಪ್ರಾಣ.    ನನ್ನ ಕನಸಿನ ಹುಡುಗ... ನನಗಿಂತ ಚೆನ್ನಾಗಿ ಮಾತನಾಡುವವನಾಗಿರಬೇಕು. ಮಾತಿನಿಂದಲೇ ಎಲ್ಲರ ಮನಸ್ಸನ್ನು   ಗೆಲ್ಲುವಂತವನು (ಮೊದಲು ನನ್ನನ್ನೇ.. ಹ್ಹಹ್ಹಹ್ಹ...). ಚೆನ್ನಾಗಿ ಅರ್ಥಮಾಡಿಕೊಳ್ಳುವ ಮತ್ತು ನೋಡಿದಾಕ್ಷಣ ಪ್ರೀತಿಸಲೇಬೇಕು ಅನಿಸುವಂತವನು.

 ಮಾತನ್ನು ಪ್ರೆಸೆಂಟ್ ಮಾಡಬೇಡಿ, ನೈಜವಾಗಿ ಮಾತನಾಡಿ ಎಂಬ ಧ್ಯೇಯಯೊಂದಿಗೆ ಒಂದು ರೇಡಿಯೊ ಸ್ಟೇಷನ್ ಆರಂಭಿಸಬೇಕು ಎಂಬ ಕನಸಿದೆ. ಕೇಳುಗರೊಬ್ಬರು `ನಿಮ್ಮ ಧ್ವನಿ ಬಂಗಾರದಂತಿದೆ.. ಅದಕ್ಕೆ ನೀವು ಬಂಗಾರದ ಹುಡುಗಿ~ ಎಂದು ಮೆಚ್ಚುಗೆಯ ಮಾತನ್ನಾಡುತ್ತಾರೆ. ವೃತ್ತಿ ಜೀವನಕ್ಕೆ ಸಾರ್ಥಕ್ಯ ನೀಡುವ ಇಂತಹ ಬಂಗಾರದ ಮಾತುಗಳನ್ನು ಹೇಗೆ ಮರೆಯಲಿ?”
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT