ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಅಭಿರುಚಿಯ ಸಂಕೇತ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡುವ ಮುನ್ನ ನಿಮ್ಮ ಮಕ್ಕಳು ಇಲ್ಲವೇ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆಂದು ಒಮ್ಮೆ ನೋಡಿ. ವೇದಿಕೆ ಹತ್ತಿ ಕಾರ್ಯದರ್ಶಿ ಬರೆದು ಕೊಟ್ಟ ಭಾಷಣವನ್ನು ದೊಡ್ಡ ದನಿಯಲ್ಲಿ ಓದಿ ಮೆರೆಯುವುದು ಶ್ರೇಷ್ಠತೆಯಲ್ಲ.

ಕನ್ನಡ ಭಾಷೆ ಬೆಳವಣಿಗೆಗೆ ಕೋಟಿಗಟ್ಟಲೆ ಹಣ ನಿಗದಿಪಡಿಸುವುದರಲ್ಲಿ ಅರ್ಥವಿಲ್ಲ. ಭಾಷೆ ಗಡಿರೇಖೆಗಳನ್ನು ಮೀರಿ ಮಾತೃಪ್ರೇಮದೊಂದಿಗೆ ತಳುಕುಹಾಕಿದಾಗ ಮಾತ್ರ ಅದರ ವ್ಯಾಪ್ತಿ ವಿಸ್ತಾರವಾಗುತ್ತದೆ.

ನಾನು ಆ್ಯಂಕರಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಆಕಸ್ಮಿಕ. ರವೀಂದ್ರ ಕಲಾಕ್ಷೇತ್ರದಲ್ಲಿ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿಕೊಂಡಿದ್ದಾಗ `ಕಚದೇವಯಾನಿ~ ನಾಟಕದಲ್ಲಿ ಒಂದು ಪಾತ್ರ ದೊರೆಯಿತು. ಆ ಅಭಿನಯಕ್ಕೆ ಪ್ರಶಸ್ತಿಯೂ ಬರುವ ಮೂಲಕ ರಂಗುರಂಗಿನ ಟೀವಿ ಮಾಧ್ಯಮಕ್ಕೆ ನನ್ನ ಪರಿಚಯವಾಯಿತು.

`ಈಟಿವಿ~ ಕನ್ನಡದ `ನಮ್ಮೂರ‌್ನಾಗೆ~ ನಾನು ನಿರೂಪಿಸಿದ ಮೊದಲ ಕಾರ್ಯಕ್ರಮ. ವಿವಿಧ ಊರುಗಳಿಗೆ ತೆರಳಿ ಅಲ್ಲಿನ ಸಂಸ್ಕೃತಿ, ದೇವಸ್ಥಾನವನ್ನು ಪರಿಚಯಿಸುವ ಅಪರೂಪದ ಅವಕಾಶ ದೊರೆಯಿತು. ಎಂದಿಗೂ ತಮ್ಮತನವನ್ನು ಬಿಟ್ಟುಕೊಡದ ಆ ಮಂದಿ ನನಗೆ ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾದರು. ಆ ಜನರೊಂದಿಗೆ ಬೆರೆಯುತ್ತಲೇ ನಾನು ಆಂಗ್ಲ ಪದ ಬಳಸದೆ ಕನ್ನಡದಲ್ಲೇ ಮಾತನಾಡಬೇಕೆಂದು ನಿರ್ಧರಿಸಿದೆ.

ನನ್ನ ಊರು ದೊಡ್ಡಬಳ್ಳಾಪುರ. ಆವರೆಗೆ ಕನ್ನಡವನ್ನು ಒಂದು ಪಠ್ಯವನ್ನಾಗಿ ಓದಿದ್ದು ಬಿಟ್ಟರೆ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವಿಲ್ಲ. ಯಾವುದೇ ಶೋಗಳಿಗಾಗಿ ಪೂರ್ವಸಿದ್ಧತೆ ನಡೆಸಿಕೊಂಡವನಲ್ಲ. `ಯು2~ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ತೆರೆಯ ಮುಂದೆ ಹಾಗೂ ಹಿಂದೆ ದುಡಿದ ಹಿರಿತಲೆಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಅವರ ಬಗ್ಗೆ ಒಂದಷ್ಟು ಮಾಹಿತಿ ಗುಡ್ಡೆ ಹಾಕುತ್ತಿದ್ದೆ.

ಎಲ್ಲರೂ ಅಚ್ಚ ಕನ್ನಡದಲ್ಲಿ ಮಾತನಾಡುವುದು ಕಷ್ಟವಲ್ಲವೇ ಎಂದು ಪ್ರಶ್ನಿಸುತ್ತಾರೆ. ಹೆತ್ತ ಅಮ್ಮನೇ ಮಗುವಿಗೆ ಭಾರವೇ ಎಂದು ನಾನು ಮರುಪ್ರಶ್ನೆ ಹಾಕುವುದುಂಟು. ದಿನದ 24 ಗಂಟೆ ಬೇಡ, ಒಂದು ಗಂಟೆಯಾದರೂ ಕನ್ನಡ ಮಾತಿಗೆ ಮೀಸಲಿಟ್ಟರೆ ಏನು ಕಷ್ಟ? ನನ್ನ ಕಾರ್ಯಕ್ರಮಕ್ಕೆ ಕರೆ ಮಾಡುವ ವೀಕ್ಷಕರನ್ನೂ ಕನ್ನಡ ಮಾತಾಡುವಂತೆ ಪ್ರೋತ್ಸಾಹಿಸುತ್ತಿದ್ದೆ.
 
ಗುಡ್ ಮಾರ‌್ನಿಂಗ್ ಬದಲಿಗೆ ಶುಭಮುಂಜಾನೆ, ಶುಭ ಸಂಜೆ ಎಂಬ ಪದ ಬಳಸುತ್ತಿದ್ದೆ. ಇದೀಗ ಕರೆ ಮಾಡುವವರೂ ಅದೇ ಪದ ಬಳಸುತ್ತಾರೆ. ನಮ್ಮ ಪ್ರಯತ್ನಕ್ಕೆ ಸಣ್ಣದೊಂದು ಪ್ರತಿಫಲ ಸಿಕ್ಕಾಗ ಸಿಗುವ ಸಂತೋಷ ದೊಡ್ಡದು ಎಂಬುದು ನನ್ನ ಭಾವನೆ.

ಇಂದು ರೇಡಿಯೊ, ಟೀವಿಯಲ್ಲಿ ಆ್ಯಂಕರ್‌ಗಳು ಬಳಸುವ ಆಂಗ್ಲಪದಗಳ ಬಗ್ಗೆ ಮನಸ್ಸಿನ ಮೂಲೆಯಲ್ಲಿ ನೋವಿದೆ. ಅದು ಅವರವರ ಅತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂಬುದೇನೋ ನಿಜ. ಆದರೆ ಪ್ರಸಿದ್ಧ ತಾರೆಯರ ವೈಯಕ್ತಿಕ ವಿಚಾರಗಳಿಗೆ ತಲೆಹಾಕಿ ಅವರನ್ನು ಕಿಚಾಯಿಸುವುದು ಎಷ್ಟು ಸರಿ? ಯಾವುದೇ ಒಂದು ಗಾಸಿಪ್ಪನ್ನೇ ಹಿಗ್ಗಿ ಜಗ್ಗಿ ಕಿತ್ತಾಡಿ, ಯಾವುದೇ ಚಿತ್ರ ಸೋತಾಗ ಚುಚ್ಚುವುದು ಎಷ್ಟು ಸರಿ.
 
ತಪ್ಪೋ ಸರಿಯೋ ಎಂಬ ಚರ್ಚೆ ನಡೆಯಬೇಕೇ ಹೊರತು ತೀರ್ಪು ನೀಡಬಾರದು. ನಮ್ಮದೇ ವಲಯದಲ್ಲಿರುವವರ ಬಗ್ಗೆ ವ್ಯಂಗ್ಯವಾಡುವುದು ನಾವೇ ಚೂರಿ ಹಾಕಿಕೊಂಡಂತೆ ಅಲ್ಲವೇ.

ಈಗ ರಾಜ್ ಮ್ಯೂಸಿಕ್‌ನಲ್ಲಿ ಪ್ರೊಡ್ಯೂಸರ್ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅವಕಾಶ ಸಿಕ್ಕಾಗ ಚಿತ್ರರಂಗದಲ್ಲೂ ನಟಿಸಿದ್ದಿದೆ. `ಪೊರ್ಕಿ~ ಚಿತ್ರದಲ್ಲಿ ದರ್ಶನ್ ಜತೆ, `ತೂಫಾನ್~ ಚಿತ್ರದ ಎರಡು ನಾಯಕರಲ್ಲಿ ಒಬ್ಬನಾಗಿ ನಟಿಸಿದ್ದೇನೆ. ನಿರೂಪಣೆ ಹಾಗೂ ಚಿತ್ರರಂಗದ ಮಧ್ಯೆ ಆಯ್ಕೆ ಇಟ್ಟರೆ ಮೊದಲನೆಯದೇ ಆಪ್ತವಾಗುತ್ತದೆ.

ಇಲ್ಲಿ ಮಾತೇ ಮಾಧ್ಯಮ. ನಮ್ಮ ಕಾರ್ಯಕ್ರಮದಲ್ಲಿ ನಮ್ಮದೇ ಮಾತು. ನಿರ್ದಿಷ್ಟ ಚೌಕಟ್ಟಿನಲ್ಲಿ ಹೇಳಬೇಕಾದ್ದನ್ನು ಮನಮುಟ್ಟುವಂತೆ ಹೇಳಬಹುದು. ಆದರೆ ನಟನೆಯಲ್ಲಿ ನಿರ್ದೇಶಕರ ಕಟ್ಟಪ್ಪಣೆಯಂತೆ ಎಲ್ಲವೂ ನಡೆಯುತ್ತದೆ. ಸ್ವಂತಿಕೆಯ ಅಭಿವ್ಯಕ್ತಿಗೆ ಅಲ್ಲಿ ಅವಕಾಶವಿಲ್ಲ.

ಎಲ್ಲೇ ಹೋದರೂ ನೀವು ಕನ್ನಡ ತುಂಬಾ ಚೆನ್ನಾಗಿ ಮಾತಾಡುತ್ತೀರಿ ಎನ್ನುತ್ತಾರೆ. ನಾನೂ ಪದ ಪದ ಜೋಡಿಸಿಯೇ ಮಾತನಾಡುವುದು, ಅದು ನಿಮ್ಮಿಂದಲೂ ಸಾಧ್ಯ ಎಂದು ನಾನು ಹುರಿದುಂಬಿಸುವುದಿದೆ.

ಅವಕಾಶವನ್ನು ನಾವು ಅರಸಿ ಹೋದರೆ ಅದು ನಮ್ಮಿಂದ ಮತ್ತಷ್ಟು ದೂರವಾಗುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸು ನಮ್ಮದಾಗುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT