ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಕೇಳಿದ್ದರೆ ಬಿಎಸ್‌ವೈ ಹಾಳಾಗ್ತಿರ್ಲಿಲ್ಲ

ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಹೇಳಿಕೆ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಬಳ್ಳಾರಿಯ ರೆಡ್ಡಿ ಸಹೋ­ದರರನ್ನು ಸಂಪುಟದಿಂದ ಕೈಬಿಡಿ ಎನ್ನುವ ನನ್ನ ರಹಸ್ಯ ಸಲಹೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್‌.­ಯಡಿ­ಯೂರಪ್ಪ ಕೇಳಲಿಲ್ಲ. ಬದಲಿಗೆ, ಅವರ ಜತೆಯೇ ಕೈಜೋಡಿಸಿದರು. ಹೀಗಾಗಿ ನನ್ನ ಮತ್ತು ಅವರ ನಡುವಿನ ಸಂಬಂಧ ಹದಗೆಟ್ಟಿತು’ ಎಂದು ರಾಜ್ಯಪಾಲ ಎಚ್‌.­ಆರ್‌.­ಭಾರದ್ವಾಜ್‌ ಮಂಗಳ­ವಾರ ಇಲ್ಲಿ ಬಹಿರಂಗಪಡಿಸಿದರು.

ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್‌ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ­ದರು.ರಾಜ್ಯಪಾಲ­ರೊಬ್ಬರು ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದು ಇದೇ ಮೊದಲು.

‘ಯಡಿಯೂರಪ್ಪ ಶ್ರಮಜೀವಿ. ಒಳ್ಳೆಯ ನಾಯಕ. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಇಲ್ಲ. ರಾಜ್ಯಪಾಲನಾಗಿ ನಾನು ರಾಜ್ಯಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿಯೇ ಪೂರ್ಣ ಸಹಕಾರದ ಭರವಸೆ ನೀಡಿದ್ದೆ. ನಾನು ಹೇಳಿದ ಹಾಗೆ ಉತ್ತಮ ಕೆಲಸ ಮಾಡಬೇಕು ಎನ್ನುವ ಸಲಹೆಯನ್ನೂ ಅವರು ಒಪ್ಪಿದ್ದರು. ಆದರೆ, ನಂತರದ ದಿನಗಳಲ್ಲಿ ಹಾದಿ ತಪ್ಪಿದರು’ ಎಂದು ಹಳೆಯ ದಿನಗಳನ್ನು ಮೆಲುಕುಹಾಕಿದರು.

‘ಒಮ್ಮೆ ಬಳ್ಳಾರಿಯ ರೆಡ್ಡಿ ಸಹೋ­ದರರು ಮತ್ತು ಯಡಿಯೂರಪ್ಪ ನಡು­ವಿನ ಕಿತ್ತಾಟ ತಾರಕಕ್ಕೇರಿತ್ತು. ರೆಡ್ಡಿಗಳ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲು ಯಡಿಯೂರಪ್ಪ ದೆಹಲಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ನಾನು ಕೂಡ ದೆಹಲಿಯಲ್ಲಿದ್ದೆ. ಕರ್ನಾಟಕ ಭವನದಲ್ಲಿ, ಗಣಿ ಧಣಿ ಸಚಿವರನ್ನು ಸಂಪುಟದಿಂದ ಕೈಬಿಡಿ ಎನ್ನುವ ಸಲಹೆ ಮಾಡಿದೆ. ಆ ಸಂದರ್ಭದಲ್ಲಿ ಒಪ್ಪಿ­ಕೊಂಡ ಅವರು ನಂತರ ಎಲ್ಲವನ್ನೂ ಮರೆತುಬಿಟ್ಟರು. ಬದಲಿಗೆ, ಅವ­ರೊಟ್ಟಿಗೇ ಕೈಜೋಡಿ­ಸಿದರು’ ಎಂದು ಅವರು ದೂರಿದರು.

ಒಳ್ಳೆಯ ಗೆಳೆಯ:  ‘ಇಷ್ಟೆಲ್ಲ ಘಟನೆಗಳ ನಂತರವೂ ನಾನು ಯಡಿಯೂರಪ್ಪ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ. ಅವರು ನನ್ನ ಒಳ್ಳೆಯ ಗೆಳೆಯ. ಅವರ ಮನೆಯ ಅನೇಕ ಕಾರ್ಯಕ್ರಮ­ಗಳಿಗೆ ನಾನು ಹೋಗಿದ್ದೇನೆ. ಹಾಗೆಯೇ ರಾಜ­ಭವನ­ದಲ್ಲಿ ನಡೆಯುವ ಹಲವು ಸಮಾ­ರಂಭಗಳಿಗೆ ಯಡಿಯೂರಪ್ಪ ಬಂದಿದ್ದಾರೆ. ಇತ್ತೀಚೆಗೆ ಅವರು ಸಿಕ್ಕಾಗ, ಮಕ್ಕಳಿಬ್ಬರಿಗೆ ರಾಜಕಾರಣ ವಹಿಸಿಬಿಡಿ ಎಂದೂ ಸಲಹೆ ಮಾಡಿದ್ದೆ’ ಎಂಬುದನ್ನು ರಾಜ್ಯಪಾಲರು ನೆನಪಿಸಿಕೊಂಡರು.

ನಿಷ್ಪ್ರಯೋಜಕ: ‘ವಿಧಾನಸಭೆ ಒಳಗೇ ಸರ್ಕಾರದ ಬಹುಮತ ಸಾಬೀತುಪಡಿ­ಸಬೇಕು ಎಂದು  ಬೊಮ್ಮಾಯಿ ಪ್ರಕರಣ­ದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಕೂಡ ರಾಜ್ಯದಲ್ಲಿ ನಿಷ್ಪ್ರ-­ಯೋಜಕ ಆಯಿತು. 17 ಶಾಸಕರು ಯಡಿ­ಯೂರಪ್ಪ ಸರ್ಕಾರದ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ನಂತರ ಬಹು­ಮತ ಸಾಬೀತುಪಡಿಸಲು ಸೂಚಿಸಿದೆ. ಆ ಸಂದರ್ಭದಲ್ಲಿ ಬಹುಮತ ಸಾಬೀತು­ಪಡಿಸಲು ವೇದಿಕೆ ಕಲ್ಪಿಸದೆ, ಆ 17 ಮಂದಿ ಶಾಸಕರ ಸದಸ್ಯತ್ವ ರದ್ದುಪಡಿಸ­ಲಾಯಿತು.

ಇದು ಸರಿಯಾದ ಕ್ರಮವಲ್ಲ ಎನ್ನುವ ಕಾರಣಕ್ಕೆ ಸರ್ಕಾರವನ್ನು ವಜಾ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾ­ರಸು ಮಾಡಿದೆ.  ಎರಡು ಬಾರಿ ಮಾಡಿದ ಈ ರೀತಿಯ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಲಿಲ್ಲ. ಈ ವಿಷಯದಲ್ಲಿ ಹೆಚ್ಚು ಹಟ ಮಾಡಿದರೆ, ನನ್ನನ್ನು ದೆಹಲಿಗೆ ವಾಪಸ್‌ ಕರೆಸುತ್ತಾರೆ­ನ್ನುವ ಭಯದಿಂದ ಸುಮ್ಮನಾದೆ’ ಎಂದು ತಮಾಷೆ ಮಾಡಿದರು.

‘ಹಿಂದಿನ ಸರ್ಕಾರದಲ್ಲಿ ಮಾತು ಕೇಳುವ ಲೋಕಾಯುಕ್ತರ ನೇಮಕಕ್ಕೆ ಪ್ರಯತ್ನ ನಡೆಯಿತು. ಅದಕ್ಕೆ ನಾನು ಅವಕಾಶ ನೀಡಲಿಲ್ಲ. ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ಅವರನ್ನು ನೇಮಿ­ಸು­ವಂತೆ ಮಾಡಿದ ಸಲಹೆಯನ್ನೂ ಸರ್ಕಾರ ಅಂಗೀಕರಿಸಲಿಲ್ಲ. ಬಳಿಕ ನೇಮಕ ವಿವಾದ ಸುಪ್ರೀಂಕೋರ್ಟ್‌ಗೆ ಹೋಯಿತು. ಕೆಲವು ತಿಂಗಳ ನಂತರ ವಿವಾದ ಇತ್ಯರ್ಥ ಆಯಿತು. ಅದರಂತೆ ಭಾಸ್ಕರ್‌ರಾವ್‌ ಅವರನ್ನು ನೇಮಿಸಿದ್ದು, ಉತ್ತಮ ಕೆಲಸದ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ರಾಜ್ಯಪಾಲರ ಹುದ್ದೆ ಇಷ್ಟ ಇರಲಿಲ್ಲ: ‘ನನಗೆ ರಾಜ್ಯಪಾಲರು ಆಗಬೇಕು ಎಂದು ದೆಹಲಿಯ ವರಿಷ್ಠರು ಹೇಳಿ­ದಾಗ, ಅದೊಂದು ರಬ್ಬರ್‌ ಸ್ಟಾಂಪ್‌ ಹುದ್ದೆ ಎನ್ನುವ ಕಾರಣಕ್ಕೆ ನಾನು ಬೇಡ ಎಂದಿದ್ದೆ. ತೀರ್ಮಾನ ತಿಳಿಸಲು ಎರಡು ದಿನ ಸಮಯ ಕೋರಿದ್ದೆ. ಕೊನೆಗೆ ನನ್ನ ಪತ್ನಿಯ ಮಾತು ಕೇಳಿ ಒಪ್ಪಿಕೊಂಡೆ.

ಕರ್ನಾಟಕ ಒಳ್ಳೆಯ ರಾಜ್ಯ. ಆರೋಗ್ಯ ಕೂಡ ಸುಧಾರಿ­ಸುತ್ತದೆ. ದೆಹಲಿಯಲ್ಲಿ ಕುಳಿತು ಏನು ಮಾಡುವುದು ಎಂದು ನನ್ನ ಪತ್ನಿ ಬುದ್ಧಿ ಹೇಳಿದ್ದಳು. ಈ ಕಾರಣ­ಕ್ಕೆ ಒಪ್ಪಿ ಕರ್ನಾಟಕಕ್ಕೆ ಬಂದಾಗ ಪರಿಸ್ಥಿತಿ ಗಂಭೀರವಾಗಿತ್ತು. ನನ್ನ ಆರೋಗ್ಯ ಕೂಡ ಹದಗೆಟ್ಟಿತು. ಈಗ ಅಕ್ರಮ ಗಣಿಗಾರಿಕೆ­ಯ ತನಿಖೆ ಒಂದು ಹಂತಕ್ಕೆ ಬಂದಿದೆ. ನೈಸರ್ಗಿಕ ಸಂಪತ್ತು ಲೂಟಿ ಆಗುವು­ದನ್ನು ತಪ್ಪಿಸಿದ ತೃಪ್ತಿ ನನಗಿದೆ’ ಎಂದು ಹೇಳಿದರು.

ನಿವೃತ್ತಿಯ ಆಸೆ: ರಾಜ್ಯಪಾಲರಾಗಿ ನಾಲ್ಕು ವರ್ಷ ಆಯಿತು. ಇನ್ನೂ ಒಂದು ವರ್ಷ ಬಾಕಿ ಇದೆ. ಅಷ್ಟರಲ್ಲಿ ನಿವೃತ್ತಿ­ಯಾಗಬೇಕು ಎನ್ನುವ ಆಸೆ. ಈಗಿನ ಒಡಕಿನ ರಾಜಕಾರಣ­ದಿಂದ ಬೇಸರ ಆಗಿದ್ದು, ನಿವೃತ್ತಿ ಬಗ್ಗೆ ಚಿಂತನೆ ನಡೆದಿದೆ ಎಂದರು.

ಕಾಂಗ್ರೆಸ್ ಬೆಂಬಲಿಗರದೇ ಹೆಚ್ಚು ಗಣಿಗಳು ಇರುವ ಕಾರಣ ‘ಸಿ’ ವರ್ಗದ ಗಣಿಗಳ ಹರಾಜಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪ­ವನ್ನು ಅವರು ಅಲ್ಲಗಳೆದರು. ಎಲ್ಲವೂ ಸುಪ್ರೀಂಕೋರ್ಟ್‌ ಸುಪರ್ದಿ­ಯಲ್ಲಿ ನಡೆಯುತ್ತಿರುವುದರಿಂದ ಯಾರಿಗೂ ಅನುಕೂಲ ಮಾಡಲು ಸಾಧ್ಯ ಇಲ್ಲ, ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವ್ಯಾಪ್ತಿ ಮೀರಿ ನೋಟಿಸ್‌...
ಯಡಿಯೂರಪ್ಪ ನನ್ನ ಮಾತು ಕೇಳದ ಕಾರಣಕ್ಕೆ ನಾನೇ ನನ್ನ ವ್ಯಾಪ್ತಿ ಮೀರಿ ರೆಡ್ಡಿ ಸಹೋದರರಿಗೆ ನೋಟಿಸ್‌ ಕೊಟ್ಟೆ. ಲಾಭದಾಯಕ ಹುದ್ದೆಯಲ್ಲಿ ಇದ್ದುಕೊಂಡು ಗಣಿಗಾರಿಕೆ ಮಾಡುತ್ತಿರು­ವುದು ಕಾನೂನು ಬಾಹಿರ. ಹೀಗಾಗಿ ಸದಸ್ಯತ್ವ ರದ್ದು ಮಾಡುವ ಎಚ್ಚರಿಕೆ ನೀಡಿದೆ. ಅದರ ನಂತರ ನನ್ನ ವಿರುದ್ಧ ಬಹಿರಂಗ ಟೀಕೆಗಳು ಕೇಳಿಬಂದವು. ರಾಜಭವನ ಬಿಟ್ಟು ಹೊರಗೆ ಬಂದು ರಾಜಕಾರಣ ಮಾಡಿ ಎಂದೆಲ್ಲ ಸಚಿವರು ಮಾತನಾಡಿದರು. ನಾನ್ಯಾವುದನ್ನೂ ಲೆಕ್ಕಿಸದೆ ರಾಜ್ಯದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಅಕ್ರಮಗಳಿಗೆ ಕಡಿವಾಣ ಹಾಕಿದೆ.
ರಾಜ್ಯಪಾಲ ಭಾರದ್ವಾಜ್

ಈ ಸರ್ಕಾರದಲ್ಲಿ ದೋಷವೇನೂ ಕಾಣುತ್ತಿಲ್ಲ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಂತ ಶಕ್ತಿ ಮೇಲೆ ಬೆಳೆದು ಬಂದ ನಾಯಕ. ಇದುವರೆಗಿನ ಅವರ ತೀರ್ಮಾನಗಳಿಂದ ನನಗೇನೂ ತಪ್ಪು ಕಾಣುತ್ತಿಲ್ಲ’ ಎಂದು ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಮುಖ್ಯಮಂತ್ರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ನನಗೆ ಸಂತಸ ತಂದಿದೆ. ಇದುವರೆಗಿನ ಅವರ ತೀರ್ಮಾನಗಳು ಜನಪರ ಆಗಿವೆ. ಸಚಿವರ ಮೇಲೆ ಹಿಡಿತ ಇಟ್ಟುಕೊಂಡು ಇನ್ನೂ ಉತ್ತಮ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT