ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಬಲ್ಲವನಿಗೆ ಕೆಲಸವಿಲ್ಲ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಬಿಡುವಿಲ್ಲದೆ ಸಿನಿಮಾಗಳಿಗೆ ಮಾತು ಹೊಸೆಯುತ್ತಿದ್ದ ಕುಣಿಗಲ್ ನಾಗಭೂಷಣ್ ಇಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. 80- 90ರ ದಶಕದಲ್ಲಿ ಅವರು ಸಂಭಾಷಣೆ ಬರೆಯದ ಸಿನಿಮಾಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾಗಭೂಷಣ್ ಹೆಸರುವಾಸಿಯಾಗಿದ್ದರು. ಇಂದು ಸಿಕ್ಕ ಅವಕಾಶಗಳಲ್ಲಿ ನಟಿಸುತ್ತಿರುವ ಅವರಿಗೆ ತಮ್ಮ ಪ್ರತಿಭೆಯನ್ನು ಚಿತ್ರರಂಗ ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂಬ ಕೊರಗು. ಸದ್ಯ ಉದಯ ಚಾನಲ್‌ನ `ಕಲ್ಯಾಣಿ~ ಮತ್ತು ಕಸ್ತೂರಿ ಚಾನಲ್‌ನ `ಪೌರ್ಣಿಮೆ~ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

1961ರಲ್ಲಿ ಸಿನಿಮಾಟೋಗ್ರಫಿ  ಅಧ್ಯಯನ ಮಾಡಿ ಮದ್ರಾಸ್‌ಗೆ  ಹೋದ ಕುಣಿಗಲ್ ಪಟ್ಟಣದ ನಾಗಭೂಷಣರು, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುವ ಕನಸು ಹೊತ್ತವರು. ಮೊದಲಿಗೆ `ನಾಂದಿ~ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅವರು `ಬಾಳುಜೇನು~ ಹೆಸರಿನ ಸಿನಿಮಾ ನಿರ್ದೇಶಿಸಿದರು. ಅದರಲ್ಲಿ ಆರತಿ, ಗಂಗಾಧರ್, ರಜನಿಕಾಂತ್ ಮುಂತಾದವರು ನಟಿಸಿದ್ದರು. `ರಜನೀಕಾಂತ್ ಅವರಿಗೆ ಮೊದಲು ಮೇಕಪ್ ಹಾಕಿಸಿದವನು ನಾನು. ಆದರೆ `ಕಥಾಸಂಗಮ~ ಮೊದಲು ಬಿಡುಗಡೆಯಾಗಿ ಅವರನ್ನು ಪರಿಚಯಿಸಿದ ಸಿನಿಮಾ ಎನಿಸಿಕೊಂಡಿತು~ ಎನ್ನುವ ನಾಗಭೂಷಣ್, ನಂತರದಲ್ಲಿ ಸಂಭಾಷಣೆ, ಕತೆ, ಚಿತ್ರಕತೆ ಕ್ಷೇತ್ರವನ್ನು ಆಯ್ದುಕೊಂಡರು.

`ಸಿಂಹ ಜೋಡಿ~, `ಸಿಂಹ ಗರ್ಜನೆ~, `ಸಾಂಗ್ಲಿಯಾನ~, `ಎಸ್ಪಿ ಸಾಂಗ್ಲಿಯಾನ~ ಮುಂತಾದ ಸಿನಿಮಾಗಳಿಗೆ ಕತೆ ಬರೆದಿರುವ ಅವರು ರಾಜ್‌ಕುಮಾರ್ ಜೊತೆ `ಸಿಪಾಯಿ ರಾಮು~, `ಕುಲಗೌರವ~, `ನಾಂದಿ~ ಚಿತ್ರಗಳಲ್ಲಿ ದುಡಿದರು. ರೀಮೇಕ್ ಚಿತ್ರಗಳನ್ನು ಕನ್ನಡಕ್ಕೆ ಹೊಸೆಯುವುದರಲ್ಲಿ ಚಾತಿ ಹೊಂದಿದ್ದ ನಾಗಭೂಷಣ್, ತೆಲುಗಿನಲ್ಲಿ ಸೋತಿದ್ದ ಒಂದು ಸಿನಿಮಾವನ್ನು `ಗೋಲ್‌ಮಾಲ್  ಭಾಗ-1 ಮತ್ತು 2~ ಹೆಸರಿನಲ್ಲಿ ಎರಡು ಸಿನಿಮಾ ಮಾಡಿ ಸೂಪರ್ ಹಿಟ್ ಮಾಡಿದ ಕೀರ್ತಿ ಹೊಂದಿದ್ದಾರೆ.

ರಾಜ್‌ಕುಮಾರ್ ಆದಿಯಾಗಿ ವಿಷ್ಣುವರ್ಧನ್, ಅನಂತನಾಗ್, ಶಂಕರ್‌ನಾಗ್, ಅಂಬರೀಷ್, ರವಿಚಂದ್ರನ್, ಶಶಿಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಜಗ್ಗೇಶ್ ಚಿತ್ರಗಳಿಗೆ ಕೆಲಸ ಮಾಡಿರುವ ನಾಗಭೂಷಣ್, ಒಟ್ಟು 250 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. `ಗೌರಿ ಗಣೇಶ~ ಮತ್ತು `ಯಾರಿಗೂ ಹೇಳ್ಬೇಡಿ~ ಚಿತ್ರದ ಮಾತುಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.

ಕನ್ನಡದೊಂದಿಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ನಾಗಭೂಷಣ್ ಬಲ್ಲರು. ಕಿರುತೆರೆಯಲ್ಲಿ ಆರಂಭದಲ್ಲಿ ಪ್ರಸಾರವಾಗುತ್ತಿದ್ದ 13 ಸಂಚಿಕೆಯ ಧಾರಾವಾಹಿಗಳಿಗೆ ಕೆಲಸ ಮಾಡಿದ್ದ ಅವರಿಗೆ ಇಂದಿನ ಮೆಗಾ ಧಾರಾವಾಹಿಗಳಿಗೆ ಕೆಲಸ ಮಾಡುವುದು ಇಷ್ಟವಾದಂತಿಲ್ಲ. `ಕಲಾವಿದರನ್ನು ನೋಡಿಕೊಂಡು ದೃಶ್ಯ ಬದಲಾವಣೆ ಮಾಡಬೇಕಿರುತ್ತದೆ. ತಿರುವುಗಳನ್ನು ತುರುಕುತ್ತಲೇ ಕತೆಯನ್ನು ಬೆಳೆಸುತ್ತಲೇ ಇರಬೇಕು. ಅದೊಂಥರಾ ಮೆಕಾನಿಕಲ್ ಕೆಲಸ. ಕ್ರಿಯಾಶೀಲತೆಗೆ ಅವಕಾಶ ಇರುವುದಿಲ್ಲ~ ಎನ್ನುತ್ತಾರೆ.
ಅಂದಹಾಗೆ, `ಗೋಕುಲ ಕೃಷ್ಣ~, `ಮಾಗಡಿ~ ಅವರು ಇತ್ತೀಚೆಗೆ ನಟಿಸಿದ ಚಿತ್ರಗಳು.
`ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಆದರೆ ನನ್ನ ಖಾಸಗಿ ಖರ್ಚುಗಳಿಗೆ ಮಕ್ಕಳಿಂದ ಹಣ ಕೇಳಿ ಪಡೆಯಲು ಮನಸ್ಸು ಒಪ್ಪುವುದಿಲ್ಲ. ಅದರಿಂದ ಧಾರಾವಾಹಿ ನಟನೆಯನ್ನು ಆರಿಸಿಕೊಂಡೆ. ಇಂದಿಗೂ ಸಿನಿಮಾಗಳಿಗೆ ಕಥೆ ಬರೆಯುವಾಸೆ ಇದೆ. ಆದರೆ ಯಾರೂ ಕರೆಯುತ್ತಿಲ್ಲ. ಸಣ್ಣ ಪುಟ್ಟ ಪಾತ್ರಕ್ಕೂ ಕರೆಯುವುದಿಲ್ಲ~ ಎಂದು ಬೇಸರ ವ್ಯಕ್ತಪಡಿಸುವ ಅವರಿಗೆ, ತಮಗೆ ಬೈಪಾಸ್ ಸರ್ಜರಿ, ಗ್ಯಾಂಗ್ರಿನ್ ಆಪರೇಷನ್ ಆದಾಗ ಕಲಾವಿದರ ಸಂಘ ಯಾವುದೇ ಸಹಾಯ ನೀಡಲಿಲ್ಲ ಎಂಬ ನೋವಿದೆ.

`ಹೇಳಿದ ಸಮಯಕ್ಕೆ ಸರಿಯಾಗಿ ಸಂಭಾಷಣೆ ಬರೆದುಕೊಡುತ್ತಿದ್ದೆ. ಅದರಿಂದ ಸುಮಾರು ಹತ್ತು ವರ್ಷ ಶಿವಾನಂದ ಸರ್ಕಲ್ ಬಳಿ ಇರುವ ಜನಾರ್ದನ ಹೋಟೆಲ್ ನನ್ನ ಮನೆಯೇ ಆಗಿ ಹೋಗಿತ್ತು. ಒಬ್ಬರಾದ ನಂತರ ಒಬ್ಬರು ಹೋಟೆಲ್ ಕೋಣೆ ಬುಕ್ ಮಾಡಿಸಿಕೊಟ್ಟು ಬರೆಯಲು ಹೇಳುತ್ತಿದ್ದರು. ಯಾರಿಗೂ ಅರ್ಧರ್ಧ ಬರೆದು ಕಾಯಿಸುತ್ತಿರಲಿಲ್ಲ. ರೀಮೇಕ್ ಸಿನಿಮಾಗೆ ಬರೆಯುವಾಗ ಕಾಪಿ ಮಾಡದೇ. ಕತೆಯ ಎಳೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ~ ಎಂದು ನೆನಪಿಗೆ ಜಾರುವ ಅವರು ಸಂಭಾಷಣೆ ಬರೆದ ಕಡೆಯ ಸಿನಿಮಾ `ಅಭಿಮಾನಿ~.

`ಎಂಟು ವರ್ಷದಿಂದ ಸಂಭಾಷಣೆ ಬರೆಯುತ್ತಿಲ್ಲ. ಅವಕಾಶಗಳಿಲ್ಲ~ ಎನ್ನುವ ನಾಗಭೂಷಣ್ ಹಾಸ್ಯ ಪಾತ್ರಗಳಲ್ಲಿಯೂ ಕಾಣಿಸಿಕೊಂಡವರು. `ನಮ್ಮೂರ ರಾಜ~ ಅವರು ನಟಿಸಿದ ಮೊದಲ ಸಿನಿಮಾ.

ನಾಗಭೂಷಣ್ ಡಬಲ್ ಮೀನಿಂಗ್ ಸಂಭಾಷಣೆ ಬರೆಯುತ್ತಾರೆ ಎಂಬ ಆರೋಪವಿದೆ. ಅದಕ್ಕೆ ಅವರು ಹೇಳುವುದು- `ಆ ಒಂದು ಸೀಸನ್ ಹಾಗಿತ್ತು. ಅಂಥ ಸಂಭಾಷಣೆಗೆ ನಿರ್ಮಾಪಕರು ಒತ್ತಾಯಿಸುತ್ತಿದ್ದರು. ಉಮಾಶ್ರೀ-ಎನ್. ಎಸ್.ರಾವ್ ಅವರಿಂದ ಪ್ರೇಕ್ಷಕರೂ ಅದನ್ನೇ ನಿರೀಕ್ಷಿಸುತ್ತಿದ್ದರು. ಅಂಥ ಸಿನಿಮಾಗಳೊಂದಿಗೆ ಶುದ್ಧ ಹಾಸ್ಯ ಇರುವ ಸಿನಿಮಾಗಳಿಗೂ ಸಂಭಾಷಣೆ ಬರೆದಿರುವೆ~.

`ಇಂದಿಗೂ ಮನಸ್ಸು ಮಾಡಿದರೆ ಅವಕಾಶಗಳು ಸಿಗುತ್ತವೆ. ಆದರೆ ಐವತ್ತು ವರ್ಷ ಅನುಭವ ಇರುವ ತಮಗೆ ಅವಕಾಶಗಳಿಗಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಗೌರವ ಬೇಕು. ಅದು ಸಿಗುತ್ತಿಲ್ಲವಾದ ಕಾರಣ ಸಿನಿಮಾದಿಂದ ದೂರ ಉಳಿದಿದ್ದೇನೆ~ ಎನ್ನುವ ನಾಗಭೂಷಣ್ ಇರುವಷ್ಟರಲ್ಲೇ ನೆಮ್ಮದಿ ಕಾಣುತ್ತಿರುವವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT