ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಮಾತಿನಲ್ಲಿ ಪ್ರಾಸವಿರಲಿ!

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸ್ಪಷ್ಟವಿರುತಿರೆ ನಿನ್ನ ಒಳಮನದ ಚಿಂತನೆಯು /
ಶಿಷ್ಟದೊಳಗಿರುತಿರಲು ನಿನ್ನ ಋಜುತನವು //
ಕಷ್ಟವಿರದೆಯೆ ನಿನಗೆ ಸಹಜತನ ಒದಗಿರಲು /
ಇಷ್ಟದಂತೆಯೆ ಮಾತು 
 - ನವ್ಯಜೀವಿ //

ಈ ಲೇಖನ ಬರೆಯುವಾಗ ಎಂದೋ ಓದಿದ ಎರಡು ವಿಷಯಗಳು ನೆನಪಿಗೆ ಬರುತ್ತಿವೆ. ಅವೆರಡನ್ನೂ ಸೂಕ್ತವಾಗಿ ಸ್ವಲ್ಪ ಬದಲಾಯಿಸಿ ನಿಮ್ಮ ಓದಿಗಾಗಿ ತಂದಿದ್ದೇನೆ.
ಮೊದಲನೆಯದು ಒಂದು ಹಾಸ್ಯ ವಿಡಂಬನೆ. ಸುಮ್ಮನೆ ಹಾಗೆಯೇ ಕಲ್ಪಿಸಿಕೊಳ್ಳಿ. ಎರಡು ಕೋಳಿಗಳು ಒಂದು ರಸ್ತೆಯನ್ನು ದಾಟುತ್ತಿವೆ. ಇದನ್ನೇ ಪ್ರಶ್ನೆಯಾಗಿಸಿ - `ಕೋಳಿಗಳು ರಸ್ತೆಯನ್ನು ದಾಟಿದ್ದೇಕೆ?~ ಎಂದು ಸಮಾಜದ ಗಣ್ಯರನೇಕರನ್ನು ಕೇಳಲಾಯಿತು. ಅವರೆಲ್ಲರ ಉತ್ತರಗಳು ವಿಭಿನ್ನವಾದವು. ಒಂದು ರೀತಿಯಲ್ಲಿ ಅದ್ಭುತವಾದವು ಕೂಡ.

ಈ ಸಾಧಾರಣ ಪ್ರಶ್ನೆಗೆ ನಮ್ಮ ಸ್ವಾಮೀಜಿಯವರು - `ಕೋಳಿಗಳು ಕೇವಲ ಮೋಕ್ಷ ಸಾಧನೆಗಷ್ಟೇ ಆ ರಸ್ತೆಯನ್ನು ದಾಟಿರಬೇಕು. ಎಲ್ಲ ಆ ಶಿವನ ಲೀಲೆ~ ಎಂದು ಮೌನಿಯಾದರೆ, ಪ್ರಾಣಿ ಸಂರಕ್ಷಣಾ ಸಂಘದ ಅಧ್ಯಕ್ಷರು - `ಏನು? ಕೋಳಿಗಳು ರಸ್ತೆಯನ್ನು ದಾಟಿದವೆ? ಯಾವುದಾದರೂ ವಾಹನ ಅವುಗಳ ಮೇಲೆ ಹರಿದಿದ್ದರೆ ಆ ಕೋಳಿಗಳ ಗತಿ ಏನಾಗುತ್ತಿತ್ತು? ಛೆ, ನಮ್ಮ ದೇಶದಲ್ಲಿ ಕೋಳಿಗಳಿಗೆ ಯಾವುದೇ ಆತಂಕವಿಲ್ಲದೆ ರಸ್ತೆ ದಾಟುವ ಹಾಗೂ ಇಲ್ಲವಲ್ಲ. ಇನ್ನು ಮುಂದೆ ಆ ರಸ್ತೆಯಲ್ಲಿ ವಾಹನಗಳ ಸಂಚಾರ  ರದ್ದುಗೊಳಿಸುವಂತೆ ಕಾನೂನಾಗಲಿ~ ಎನ್ನುತ್ತ ಬೀದಿಗಿಳಿದಿರುತ್ತಾರೆ.

ಆಡಳಿತದಲ್ಲಿರುವ ಸರ್ಕಾರದ ಮಂತ್ರಿ `ನನಗೆ ಬಂದಿರುವ ವರದಿಯ ಪ್ರಕಾರ, ಇದು ಖಂಡಿತವಾಗಿಯೂ ನಮ್ಮ ವಿರೋಧ ಪಕ್ಷದವರದೇ ಕುಮ್ಮಕ್ಕು. ಕೋಳಿಗಳನ್ನು ರಸ್ತೆಯಲ್ಲಿ ಬಿಟ್ಟು ಸಂಚಾರ ವ್ಯವಸ್ಥೆ ಹಾಳು ಮಾಡುವುದೇ ಅವರ ಧ್ಯೇಯವಾಗಿದೆ. ಇದಕ್ಕೆ ನಮ್ಮ ಸರ್ಕಾರ ಬಗ್ಗುವುದಿಲ್ಲ. ರಸ್ತೆಗೆ ಕೋಳಿಗಳನ್ನು ಬಿಟ್ಟವರು ಯಾರೇ ಆಗಲಿ, ಅವರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ~ ಎನ್ನುತ್ತ ಮೂಗು ಮುರಿದರೆ, ವಿರೋಧ ಪಕ್ಷದ ಮುಖಂಡ - `ನೋಡಿ, ಈ ಸರ್ಕಾರದ ಕಾರ್ಯವೈಖರಿ ಎಷ್ಟು ಹದಗೆಟ್ಟಿದೆ ಅಂತ. ಎಲ್ಲೋ ಇರಬೇಕಾದ ಪಾಪದ ಕೋಳಿಗಳು ಇವರ ಆಡಳಿತದಲ್ಲಿ ಬೀದಿಗೆ ಬರೋ ಹಾಗಾಯ್ತು. ಅಲ್ಲೂ ಅವುಗಳಿಗೆ ಸಂರಕ್ಷಣೆ ಇಲ್ಲ. ಈ ಕೋಳಿಗಳಿಗಾಗಿಯೇ ಸರ್ಕಾರ ತನ್ನ ಮೀಸಲಾತಿ ಕಾರ್ಯಕ್ರಮದ ಅಡಿಯಲ್ಲಿ ಕೆಲವು ರಸ್ತೆಗಳನ್ನು ಮುಡುಪಾಗಿಡಬೇಕು. ನಾವು ಇಂದಿನಿಂದಲೇ ಇದರ ಅನುಷ್ಠಾನಕ್ಕಾಗಿ ದುಡಿಯುತ್ತೇವೆ. ದಿನಕ್ಕೊಂದು ಗಂಟೆ ಉಪವಾಸ ಸತ್ಯಾಗ್ರಹದ ಆಂದೋಲನವನ್ನು ಆರಂಭ ಮಾಡುತ್ತೇವೆ!~ ಎನ್ನುತ್ತ ಮುಂಬರುವ ಚುನಾವಣೆಗಳಿಗಾಗಿ ಆಹಾರ ಒದಗಿಸಿದ ಎರಡೂ ಕೋಳಿಗಳಿಗೆ ಮನಸ್ಸಿನಲ್ಲಿಯೇ ಮಸಾಲೆ ಹುರಿದಿರುತ್ತಾರೆ!

ಎಲ್ಲದರಲ್ಲೂ ಸಾಮಾನ್ಯನೊಬ್ಬನಿಗೆ ಥಟ್ ಎಂದು ಗೋಚರಿಸದ ಅಸಂಬದ್ಧವಾದ ಸೂಕ್ಷ್ಮತೆಯೊಂದನ್ನು ಹೆಕ್ಕಿ ಅದನ್ನೇ ಸಿದ್ಧಾಂತವಾಗಿಸಿ ಬಿಡುವ ಬುದ್ಧಿಜೀವಿ - `ಕೋಳಿಗಳು ರಸ್ತೆ ದಾಟಿದವು ಎಂದರೆ ತಪ್ಪಾಗುತ್ತೆ. ಕೋಳಿಗಳು ನಿಂತಲ್ಲೇ ನಿಂತಿದ್ದವು. ಅದು ನಿಸರ್ಗ. ಆದರೆ, ರಸ್ತೆಯೇ ಅವರ ಕಾಲಡಿಯಲ್ಲಿ ಜಾರುತ್ತಿತ್ತು. ಏಕೆಂದರೆ ರಸ್ತೆಗಳು ಮಾನವ ನಿರ್ಮಿತವಾದ ವಿಗತಿಯ ಸಂಕೇತ!~ ಎಂದು ಯಾರಿಗೂ ಅರ್ಥವಾಗದ ಮಾತುಗಳನ್ನಾಡುತ್ತಾನೆ; ಎಲ್ಲದರಲ್ಲೂ ಲಾಭವೊಂದನ್ನು ಎಣಿಸುವ ಹೋಟೆಲ್ ಮಾಲೀಕ - `ಛೇ ರಸ್ತೆ ದಾಟಿದ ಕೋಳಿಗಳು ಹೋದದ್ದೆಲ್ಲಿ? ಸೀದ ನಮ್ಮ ಕಿಚನ್ ಕಡೆಗೆ ಬಂದಿದ್ದರೆ ದುಡ್ಡು ಕೊಡದೆ ದುಡ್ಡು ಮಾಡಬಹುದಿತ್ತಲ್ಲ!~ ಎನ್ನುತ್ತ ಹಲುಬುತ್ತಾನೆ.

ಕಡೆಯದಾಗಿ ಇದೇ ಪ್ರಶ್ನೆಯನ್ನು ಒಂದನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಹುಡುಗಿಯನ್ನು ಕೇಳಲಾಯಿತು. ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ತನಗೆ ಗೊತ್ತಿರುವ ಸಹಜ ಶೈಲಿಯಲ್ಲಿ ಆ ಮುದ್ದುಕಂದ ಉತ್ತರಿಸಿದ್ದು ಹೀಗೆ - `ಕೋಳಿಗಳು ರಸ್ತೆಯನ್ನು ದಾಟಿದ್ದು ಏಕೆಂದರೆ, ಆ ಕೋಳಿಗಳಿಗೆ ರಸ್ತೆಯ ಆ ಬದಿ ಸೇರಬೇಕಿತ್ತು~.
ಮೇಲಿನ ಎಲ್ಲ ಉತ್ತರಗಳನ್ನೂ ಸಾಧಾರಣವಾದ ಪ್ರಶ್ನೆಯೊಂದರ ಹಿನ್ನೆಲೆಯಲ್ಲಿ ಮತ್ತೊಮ್ಮೆ ಒರೆ ಹಚ್ಚಿ ನೋಡಿ. ನಾನು ಹೇಳಹೊರಟಿರುವ ವಿಚಾರ ನಿಮಗೇ ತಿಳಿದೀತು. ಇದರ ಜೊತೆಗೇ ಈಗ ನಾನು ಹೇಳಬೇಕೆಂದಿರುವ ಎರಡನೆಯ ವಿಷಯಕ್ಕೆ ಬರುತ್ತೇನೆ. ಇದು ಒಂದು ನೈಜ ಘಟನೆ.

ಆರ್ಥರ್ ಆ್ಯಶ್ ಅಮೆರಿಕ ಕಂಡ ಒಬ್ಬ ಪ್ರತಿಭಾವಂತ ಟೆನ್ನಿಸ್ ಪಟು. ವಿಂಬಲ್ಡ್‌ನ್ ಕಪ್ಪನ್ನು ಆತ ಎರಡು ಬಾರಿ ಗೆದ್ದಿದ್ದ. ಅತ್ಯಂತ ಸಾಧಾರಣವಾದ ಪರಿಸರದಲ್ಲೇ ಬೆಳೆದು, ಅಲ್ಲಿಯವರೆಗೂ ಬಿಳಿಯರ ಹಾಗೂ ಶ್ರೀಮಂತರ ಒಡೆತನದಲ್ಲಿ ಮಾತ್ರ ಬೀಗುತ್ತಿದ್ದ ಟೆನ್ನಿಸ್ ಆಟದಲ್ಲಿ ಆಫ್ರಿಕಾ ಮೂಲದ ಅಮೆರಿಕದ ಕರಿಯರಿಗೂ ಹಾಗೂ ಬಡವರಿಗೂ ಪಾಲುಂಟು ಎಂಬುದನ್ನು ಸಾಬೀತು ಪಡಿಸಿದ ಸರದಾರ. ಶಸ್ತ್ರಚಿಕಿತ್ಸೆಗೊಳಗಾದ ಸಮಯದಲ್ಲಿ ವಿಧಿವಶಾತ್ ಕಲುಷಿತ ರಕ್ತವನ್ನು ಪಡೆದ ಆತ ಕೊನೆಯ ದಿನಗಳಲ್ಲಿ ಮಾರಕವಾದ ಏಡ್ಸ್ ರೋಗಕ್ಕೆ ಬಲಿಯಾಗುತ್ತಾನೆ. ಆ ದಿನಗಳಲ್ಲಿ ಅವನ ಒಬ್ಬ ಅಭಿಮಾನಿ ಅವನನ್ನು ಕೇಳುತ್ತಾನೆ - `ದೇವರು ನಿನ್ನನ್ನೇ ಏಕೆ ಈ ಭೀಕರ ರೋಗಕ್ಕೆ ಆಯ್ಕೆ ಮಾಡಿದ?~ ಅಭಿಮಾನಿಯೊಬ್ಬನ ಆತಂಕದ ಪ್ರಶ್ನೆ ಇದು. ಈ ಪ್ರಶ್ನೆಗೆ ಆರ್ಥರ್ ಹೇಗೂ ಉತ್ತರಿಸಬಹುದಿತ್ತು.

ಆದರೆ, ಆರ್ಥರ್ ಹೇಳುತ್ತಾನೆ - `ನೋಡು, ವಿಶ್ವದಲ್ಲಿ ಸುಮಾರು ಐವತ್ತು ಲಕ್ಷ ಜನ ಟೆನ್ನಿಸ್ ಆಡಬಹುದು. ಅದರಲ್ಲಿ ಐದು ಲಕ್ಷ ಮಂದಿ ಟೆನ್ನಿಸ್ ಸರಿಯಾಗಿ ಆಡಬಹುದೇನೊ. ಅದರಲ್ಲಿ ಐವತ್ತು ಸಾವಿರ ಜನ ತಮ್ಮ ಕಾಲೇಜಿಗೋ ಅಥವಾ ರಾಜ್ಯಕ್ಕೋ ಪ್ರತಿನಿಧಿಸಿರಬಹುದು. ಅವರಲ್ಲಿ ಐದು ಸಾವಿರ ಮಂದಿ ಪ್ರಾಯಶಃ ಅಂತರರಾಷ್ಟ್ರೀಯ ಮಟ್ಟದಲ್ಲಿ ವೃತ್ತಿಪರ ಟೆನ್ನಿಸ್ ರಂಗವನ್ನು ಪ್ರವೇಶಿಸುತ್ತಾರಷ್ಟೆ. ಅವರಲ್ಲಿ ಐನೂರು ಮಂದಿ ವಿಂಬಲ್ಡನ್ ಆಡಿದರೆ, ಅವರಲ್ಲಿ ಸೆಮಿಫೈನಲ್ ಆಡುವುದು ಕೇವಲ ನಾಲ್ಕು ಜನ. ಫೈನಲ್‌ಗೆ ಬರುವ ಇಬ್ಬರಲ್ಲಿ ಕಪ್ಪನ್ನು ಗೆದ್ದು ವಿಜೃಂಭಿಸುವುದು ಒಬ್ಬನೇ ಒಬ್ಬ. ಆ ಒಬ್ಬನೇ ಒಬ್ಬ ನಾನಾದಾಗಲೂ ದೇವರನ್ನು ನೀನೇಕೆ ನನ್ನನ್ನು ಆಯ್ಕೆ ಮಾಡಿದೆ ಎಂದು ಕೇಳಲಿಲ್ಲ. ಈಗಲೂ ಅಷ್ಟೆ, ಕೇಳುವುದಿಲ್ಲ. ಕೇಳಲೂ ಬಾರದು!~

ಮೇಲಿನ ಎರಡೂ ಸನ್ನಿವೇಶಗಳನ್ನು ಈಗ ಮತ್ತೊಮ್ಮೆ ಅವಲೋಕಿಸೋಣ. ಹಾಸ್ಯ ವಿಡಂಬನೆಯಲ್ಲಿನ ಹಾಸ್ಯವನ್ನು ಬದಿಗಿಟ್ಟು ಆ ಎಲ್ಲ ಉತ್ತರಗಳನ್ನೂ ಗಹನವಾಗಿ  ವಿಮರ್ಶಿಸಿದರೆ ನಮಗಿಲ್ಲಿ ಸ್ಪಷ್ಟವಾಗುವ ವಿಷಯವೊಂದಿದೆ. ಹೇಗೆ ಜನ ಒಂದು ಪುಟ್ಟ ಪ್ರಶ್ನೆಗೆ ಉತ್ತರವಾಗಿ ತಮ್ಮೆಲ್ಲ ಅನಿಸಿಕೆಗಳನ್ನೂ, ಅಪೇಕ್ಷೆಗಳನ್ನು ಹಾಗೂ ಅನಿವಾರ್ಯತೆಗಳನ್ನು ಕೇಳುಗರ ಮೇಲೆ ಹೇರಿ ಬಿಡುತ್ತಾರೆ ಎಂಬುದು ಅರಿವಿಗೆ ಬರುತ್ತದೆ. ಬಹುತೇಕ ಸಮಯಗಳಲ್ಲಿ ನಮ್ಮ ಮಾತು ಪ್ರಶ್ನೆಯೊಂದಕ್ಕೆ ಉತ್ತರವಾಗಿರದೆ ಪ್ರಶ್ನೆಯ ಮುಂದೆ ಮತ್ತೊಂದು ಅಸಂಬದ್ಧವಾದ ಪ್ರಶ್ನೆಯನ್ನೋ ಅಥವಾ ಪರಿಹರಿಸಲಾಗದ ತೊಂದರೆಯನ್ನೋ ನಿಲ್ಲಿಸಿ ಬಿಡುತ್ತದೆ.

ಆದರೆ, ಒಂದನೆಯ ತರಗತಿಯ ಪುಟ್ಟ ಮಗುವಿನ ಮಾತು ನೋಡಿ. ಸರಳವಾದ ಪ್ರಶ್ನೆಗೆ ಅಷ್ಟೇ ಸರಳವಾದ ಸಹಜ ಉತ್ತರ. ಈ ಉತ್ತರದಲ್ಲಿ ಭಾಷಾ ಪ್ರೌಢಿಮೆ ಇಲ್ಲ. ಪದಗಳ ದುಂದುಗಾರಿಕೆ ಇಲ್ಲ. ಒಳ ಮನಸ್ಸಿನ ಯಾವುದೇ ಪೂರ್ವ ಸಂಕಲ್ಪಗಳ ವಾಸನೆ ಇಲ್ಲ. ಏನೊಂದೂ ಕಷ್ಟವಿಲ್ಲದ ಮುಜುಗರರಹಿತವಾದ ಸಲೀಸಾದ ಮಾತಿದು.
ನಮ್ಮ ಮಾತುಗಳು ಕೂಡ ಇದೇ ರೀತಿ ಸರಳವಾಗಿ, ಸ್ಪಷ್ಟವಾಗಿ ಹಾಗೂ ಸಲೀಸಾಗಿ ಇದ್ದುಬಿಟ್ಟರೆ, ಬೋರ್ಡ್‌ರೂಮಿನ ಸುತ್ತಮುತ್ತ ಏಳುವ ಪ್ರಶ್ನೆಗಳಿಗೆಲ್ಲ ನಮ್ಮಿಂದಲೂ ಸರ್ವದಾ ಎಲ್ಲರಿಗೂ ಪ್ರಿಯವೆನಿಸುವ ಶಿಷ್ಟಾಚಾರದ ಉತ್ತರಗಳೇ ಹೊರಬಿದ್ದು ವಿನಾಕಾರಣ ಗೊಂದಲಗಳನ್ನು ಸೃಷ್ಟಿ ಮಾಡುವುದೇ ಇಲ್ಲ.

ಇನ್ನು ಅರ್ಥರ್‌ನ ಉತ್ತರ. ಅವನ ಮಾತುಗಳಲ್ಲಿ ಅಸಂಬದ್ಧತೆ ಇಲ್ಲ. ಹತಾಶ ಭಾವವಂತೂ ಇಲ್ಲವೇ ಇಲ್ಲ. ದೇವರನ್ನು ಹೀಯಾಳಿಸುವ ಮಾತಾಗಲೀ ಅಥವಾ ಜಗವನ್ನು ನಿಂದಿಸುವ ಮಾತಾಗಲೀ ಅದಲ್ಲ. ಈ ರೀತಿಯಾದಂತಹ ಉತ್ತರವನ್ನು ಕೊಡಬೇಕಾದಾಗ ಮಾತನಾಡುವವನಿಗೆ ಏನೇನಿಲ್ಲವಾದರೂ ಪ್ರಾಮಾಣಿಕತೆಯಾದರೂ ಇರಲೇಬೇಕು. ಸನ್ನಿವೇಶವೇನೇ ಇರಲಿ ಪ್ರಸ್ತುತತೆಗೆ ಭಿನ್ನವಾಗದಂತೆ, ಸತ್ಯಕ್ಕೆ ದೂರವಾಗದಂತೆ ಹಾಗೂ ಪರಿಹಾರ ಮಾರ್ಗಕ್ಕೆ ನೆರವಾಗುವಂತೆ ಮಾತುಗಳು ಹರಿದು ಬರಬೇಕು. ಆಗಲೇ ಅದಕ್ಕೊಂದು ಮನ್ನಣೆ. ಮಾತುಗಾರನಿಗೊಂದು ಬೆಲೆ.

ಈ ಪರಿಯ ಮಾತನ್ನು ನಿಮ್ಮದಾಗಿಸಿ ಕೊಳ್ಳಬೇಕಾದರೆ, `ನಿಮ್ಮ ಮಾತಿನಲ್ಲಿ ಪ್ರಾಸವಿರಲಿ~ ಎಂಬ ನನ್ನ ಒಂದು ಸೂತ್ರವನ್ನು ನೀವು ಮೊದಲು ನಿಮ್ಮದಾಗಿಸಿ ಕೊಳ್ಳಬೇಕಷ್ಟೆ. ಈ ಸೂತ್ರಗಳು ದಪ್ಪ ಅಕ್ಷರಗಳಲ್ಲಿ ಬರೆದು ನಿಮ್ಮ ಟೇಬಲ್ಲಿನ ಮೇಲಿಟ್ಟುಕೊಂಡು, ಅದರಂತೆ ನಿಮ್ಮ ಮಾತುಗಳಲ್ಲಿ `ಪ್ರಾಸ~ ತಂದುಕೊಂಡುಬಿಟ್ಟರೆ ಸಾಕು, ಮಾತು ಮುತ್ತಾದೀತು!

ಪ್ರಾಸ ಅಂದರೆ ಕವಿತೆಗಳಲ್ಲಿ ಆದಿಯಲ್ಲೋ ಅಥವಾ ಅಂತ್ಯದಲ್ಲೋ ಬರುವ ಪದಗಳಾಟವಲ್ಲ. ಮಾತಿನಲ್ಲಿ ಪ್ರಾಸ ತರುವುದಕ್ಕೆ ನಾವೇನೂ ನಿಘಂಟುವನ್ನು ಬಾಯಿಪಾಠ ಮಾಡುವ ಅವಶ್ಯಕತೆಯೂ ಇಲ್ಲ. ನಮಗೆ ಕರಗತವಾಗಿರುವ ಭಾಷಾ ಜ್ಞಾನ ಹಾಗೂ ಪದಸಂಪತ್ತು ಅಷ್ಟೇ ಸಾಕು. ವ್ಯಾಕರಣ ಶುದ್ಧವಿಲ್ಲವೆಂದು ಹಿಂಜರಿಯುವುದೂ ಬೇಡ. ಏಕೆಂದರೆ, ನಾನಿಲ್ಲಿ ಹೇಳುತ್ತಿರುವ ಪ್ರಾಸ ಎಂಬುವುದು ಎಲ್ಲರಲ್ಲೂ ಸಹಜವಾಗಿ ಇದ್ದೇ ಇರುತ್ತದೆ. ಅದೊಂದು ಸರ್ವರಿಗೂ ದೈವದತ್ತ ವರ.

ಆದರೆ, ನಾವು ಬೆಳೆದಂತೆಲ್ಲ ವಿನಾಕಾರಣ ನಾವದನ್ನು ಮರೆಯುತ್ತಾ, ನಿರ್ಲಕ್ಷಿಸುತ್ತ ಬೇಡದ ಆಚರಣೆಗಳನ್ನು ಮಾತಾಗಿಸಿಕೊಂಡು ಕಲುಷಿತಗೊಳಿಸಿ ಕೊಂಡಿರುತ್ತೇವೆ. ನಾ ಹೇಳುವ ಪ್ರಾಸಕ್ಕೆ ಬೇಕಾಗಿರುವುದು ಒಂದನೆಯ ತರಗತಿಯ ಮಗುವಿನ ಮುಗ್ಧತೆ ಹಾಗೂ ಆರ್ಥರ್ ಆ್ಯಶ್‌ನ ಪಕ್ವತೆ. ಅಷ್ಟು ಸಕು!

ಈಗಾಗಲೇ ನೀವು ಸರಿಯಾಗಿಯೇ ಊಹಿಸುತ್ತೀರಿ. `ಪ್ರಾಸ~ ಅಂದರೆ, `ಪ್ರಾಮಾಣಿಕತೆ~ ಹಾಗೂ `ಸರಳತೆ~ ಇವೆರಡೂ ನಮ್ಮಲ್ಲಿ ಅಡಿಪಾಯವಾಗಿ ರೂಪುಗೊಂಡಾಗ ನಮ್ಮೆಲ್ಲ ಮಾತುಗಳೂ ಗೀತೆಯ ಸಾಲುಗಳಾಗಿ ಹೊರಹೊಮ್ಮುತ್ತವೆ. ಕೇಳುಗನಿಗೆ ಖುಷಿ ಕೊಡುವುದರ ಜೊತೆಯಲ್ಲೇ ಬೋರ್ಡ್‌ರೂಮಿನ ಸುತ್ತಮುತ್ತಲಿನ ಸಮಸ್ಯೆಗಳಿಗೆಲ್ಲ ಅತ್ಯಂತ ಕಾರ್ಯೋಪಯೋಗಿಯಾದ `ಮೋಸ್ಟ್ ಪ್ರಾಕ್ಟಿಕಲ್~ ಪರಿಹಾರಗಳೆಡೆ ಕೊಂಡೊಯ್ಯುತ್ತವೆ. ಇನ್ನು ಮುಂದಾದರೂ ಛಂದಸ್ಸುಗಳ ಹಿಂದೆ ಬೀಳದೆ, ನಾ ಹೇಳಿರುವ ಪ್ರಾಸವನ್ನು ನಮ್ಮ ಮಾತಾಗಿಸೋಣ. ಆಗ ಯಾವ ಒಂದು ಪ್ರಯತ್ನವೂ ಇಲ್ಲದೆ ನಮ್ಮ ಮಾತೇ ಕವನವೂ ಆದೀತು...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT