ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು-ಮುತ್ತು; ಸಂಗೀತ-ಬದುಕು

Last Updated 18 ಜೂನ್ 2012, 19:30 IST
ಅಕ್ಷರ ಗಾತ್ರ

ನಂಗೆ ಮಾತು ಅಂದ್ರೆ ಮುತ್ತು. ಅದಕ್ಕಿರೋ ಶಕ್ತಿಯ ಮುಂದೆ ಎಲ್ಲವೂ ನಗಣ್ಯ. ಅದು ಕೇವಲ ಪದಪುಂಜವಲ್ಲ, ಒಂದು ಮಾತು ಸಂಸಾರ ಮಾತ್ರವಲ್ಲ, ದೇಶವನ್ನೂ ನಾಶ ಮಾಡಬಹುದು. ಇಲ್ಲವೇ ಹೊಸ ಸಂಬಂಧ ಬೆಸೆಯಬಹುದು. ಆಡುವ ಮಾತು ಇನ್ನೊಬ್ಬರ ಬದುಕು ಮುರಿಯದಿದ್ದರೆ ಸಾಕು. ಮಾತು ಬಲ್ಲವನಿಗೆ ಜಗಳವಿಲ್ಲ ಅಂತಾರೆ, ಅದೇ ನೆಪಕ್ಕೆ ಸದಾ ಮಾತನಾಡುತ್ತಿದ್ದರೆ ಇನ್ನಷ್ಟು ಅವಾಂತರಗಳು ಸೃಷ್ಟಿಯಾಗಬಹುದು.

ಇನ್ನು ಸಂಗೀತ. ಅದು ಬದುಕು, ನೆಮ್ಮದಿ. ಕೆಲವರಿಗೆ ಒಂದು ಹಾಡು ಸಮಾಧಾನ ನೀಡಿದರೆ ಮತ್ತೆ ಕೆಲವರಿಗೆ ಅದು ಉತ್ತೇಜನ ನೀಡುತ್ತದೆ. ನೊಂದ ಮನಸ್ಸಿಗೆ ಸಮಾಧಾನ ಹೇಳುವ ಹಾಡುಗಳು ಒಂದರ್ಥದಲ್ಲಿ ನೋವು ನಿವಾರಕ ಮಾತ್ರೆಗಳಂತೆ. ರಾಗ, ಲಯ, ದನಿಗಳು ಸಮ್ಮಿಲನಗೊಂಡಾಗ ಹಾಡಿಗೊಂದು ಭಾವ. ಅದಕ್ಕೊಂದು ಅರ್ಥ. ಸಾಮಾನ್ಯವಾಗಿ ಮಾತು-ಸಂಗೀತ ಎರಡೂ ಬೆರೆತಾಗ ಹೊಸ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಸಾಮಾನ್ಯವಾಗಿ ಗಾಯಕರು ಮೌನಿಗಳು. ತಮ್ಮ ಭಾವನೆಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಆದರೆ ನಾನು ಅದಕ್ಕೆ ವಿರುದ್ಧವಾಗಿ ಬೆಳೆದೆ. ಶಾಲೆ ಕಾಲೇಜುಗಳಲ್ಲಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ನನಗೆ ಸಿಟಿ ಕೇಬಲ್ ಚಾನೆಲ್‌ನಲ್ಲಿ ನಿರೂಪಕಿಯಾಗುವ ಅವಕಾಶ ಸಿಕ್ಕಿತು. ನಂತರದ ದಿನಗಳಲ್ಲಿ ಅನೇಕ ಸಭೆ ಸಮಾರಂಭಗಳಿಗೆ, ಟೀವಿ ಕಾರ್ಯಕ್ರಮಗಳಿಗೆ ನಿರೂಪಕಿಯಾದೆ. ಎಂಟು ವರ್ಷ ಉದಯ ಟಿವಿಯಲ್ಲಿ ನಡೆಸಿದ `ಅಕ್ಷರಮಾಲೆ~ ಕಾರ್ಯಕ್ರಮ ಅದ್ಭುತ ಅನುಭವ ನೀಡಿತು. ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಾಗ ಅಲ್ಲಿ ಪ್ರೋತ್ಸಾಹ ಸಿಗದೆ ಮನೆಯಲ್ಲೇ ಉಳಿದ ಪ್ರತಿಭೆಗಳನ್ನು ಕಂಡು ಅಯ್ಯೋ ಎನಿಸುತ್ತಿತ್ತು.

ಕನ್ನಡದಲ್ಲಿ ಸುಮಾರು 55 ಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೇನೆ. ಮೊದಲು ಹಾಡಿದ ಚಿತ್ರ ಎಸ್.ನಾರಾಯಣ್ ಅವರ `ನನ್ನವಳು ನನ್ನವಳು~. ರಾಜ್‌ಕುಮಾರ್ ಅವರ `ಒಂದು ಮುತ್ತಿನ ಕಥೆ~, `ಚಿನ್ನಾರಿ ಮುತ್ತ~ ಚಿತ್ರಕ್ಕೂ ಬಾಲ್ಯದಲ್ಲಿ ದನಿ ನೀಡಿದ್ದೆ. ಮಂಜುಳಾ ಗುರುರಾಜ್ ಮಗಳು ಎಂಬ ಕಾರಣಕ್ಕೋ ಏನೋ ಚಿತ್ರರಂಗದ ಪ್ರವೇಶ ನನಗೆ ಕಷ್ಟವೆನಿಸಲಿಲ್ಲ. ಇಂದು ಆಡಿಯೋ ಕಂಪೆನಿಗಳು ತಮ್ಮ ಕ್ಯಾಸೆಟ್ ಮಾರಾಟಕ್ಕಾಗಿ ಪ್ರಸಿದ್ಧ ಗಾಯಕ/ಗಾಯಕಿಯರೇ ಹಾಡಬೇಕು ಎಂದು ಹಟ ಹಿಡಿಯುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಸಿಗುವ ಅವಕಾಶಗಳೂ ವಿರಳವಾಗುತ್ತಿವೆ.

ಹಾಡು, ನಿರೂಪಣೆಯನ್ನು ಉದ್ಯೋಗವಾಗಿ ಪರಿಗಣಿಸಬಹುದೆಂದು ನನಗನಿಸಿದ್ದೇ ಇಲ್ಲ. ಕಾಲೇಜು ಮುಗಿದ ನಂತರವಷ್ಟೆ ಈ ಎಲ್ಲಾ ಚಟುವಟಿಕೆಗಳಿಗೆ ಸಮಯ ಮೀಸಲಿಟ್ಟಿದ್ದೆ. ಇದೀಗ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ (ಎಚ್‌ಆರ್) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಮೂರು ಜವಾಬ್ದಾರಿಗಳೊಂದಿಗೆ ಮಗನ ಕಾಳಜಿಯೂ ವಹಿಸಬೇಕು. ಎಲ್ಲದಕ್ಕೂ ಪತಿ ರವಿಶಂಕರ್ ಪ್ರೋತ್ಸಾಹವಿದೆ.

ನಾನು ಹುಟ್ಟಿದ್ದು ಇದೇ ಉದ್ಯಾನ ನಗರಿಯಲ್ಲಿ. ನಾಲ್ಕನೇ ವಯಸ್ಸಿನಲ್ಲೇ ವೇದಿಕೆ ಹತ್ತಿ ಹಾಡಲು ಆರಂಭಿಸಿದೆ. ಮನೆಯೇ ಮೊದಲ ಪಾಠಶಾಲೆ. ಎರಡು ವರ್ಷವಷ್ಟೇ ಶಾಸ್ತ್ರೀಯ ಪ್ರಕಾರ ಕಲಿತಿದ್ದು. ಕಾಲೇಜು ದಿನಗಳಲ್ಲೂ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.

ಶೂಟಿಂಗ್ ಇದೆ ಎಂಬ ಕಾರಣಕ್ಕೆ ಪ್ರಾಂಶುಪಾಲರ ಬಳಿ ಮಾತನಾಡಿ ಪರೀಕ್ಷೆಯನ್ನೂ ಮುಂದೂಡಿದ್ದೆ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಎಂಬಿಎ ಓದಿದ್ದ ನಾನು ವಿವಿಗೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದೆ. ಎಚ್‌ಆರ್‌ನೊಂದಿಗೆ ಎಂಬಿಎ ಪದವಿ ಓದಿದ್ದು ನನ್ನ ನಿರೂಪಣಾ ಸಾಮರ್ಥ್ಯಕ್ಕೆ ಮತ್ತಷ್ಟು ಸಾಣೆ ಹಿಡಿಯಲು ನೆರವಾಯಿತು.

ಆ್ಯಂಕರಿಂಗ್ ವಿಷಯದಲ್ಲಿ ನನಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾದರಿ ವ್ಯಕ್ತಿ. ಅವರ ಪ್ರತಿ ಮಾತೂ ತೂಕದ್ದು. ಇಡೀ ಕಾರ್ಯಕ್ರಮವನ್ನು ಅವರು ನಡೆಸಿಕೊಡುವ ರೀತಿಯೇ ವಿಸ್ಮಯ. ಈಗ ಮಗು ಚಿಕ್ಕದು ಎಂಬ ಕಾರಣಕ್ಕೆ ಟೀವಿ ಕಾರ್ಯಕ್ರಮಗಳಿಂದ ಸ್ವಲ್ಪ ದೂರ ಉಳಿದಿದ್ದೇನೆ. ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಗಾಯನದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕನಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT