ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಸಾಕು, ಕೃತಿ ಬೇಕು

Last Updated 16 ಫೆಬ್ರುವರಿ 2011, 15:55 IST
ಅಕ್ಷರ ಗಾತ್ರ

ಪ್ರಧಾನಿ ಮನಮೋಹನ್‌ಸಿಂಗ್ ಅವರು ಮಾಧ್ಯಮಗಳ ಜತೆಗಿನ ಸಂವಾದದಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ರಣಕಹಳೆ ಮೊಳಗಿಸಿದ್ದಾರೆ. ಭ್ರಷ್ಟರನ್ನು ಕಾನೂನಿನ ತೆಕ್ಕೆಯಡಿ ತಂದು ಶಿಕ್ಷಿಸುವ ಧೀರೋದಾತ್ತ ಹೇಳಿಕೆ ನೀಡಿದ್ದಾರೆ. ಈಗಿನ ಹಗರಣಗಳ ಅಪಖ್ಯಾತಿಗೆ ಅಂಜಿ ಪದತ್ಯಾಗ ಮಾಡಲಾರೆ ಎಂಬ ಆತ್ಮವಿಶ್ವಾಸದ ನುಡಿಗಳನ್ನೂ ಅವರು ಆಡಿದ್ದಾರೆ. ಈ ರೀತಿಯ ಹೇಳಿಕೆಗಳು ಹೊಸದಲ್ಲ. ಈ ವರೆಗಿನ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗಲೆಲ್ಲ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ.

ಆದರೆ ಮಾತಿನಲ್ಲಿ ತೋರಿದ ಉತ್ಸಾಹವನ್ನು ಅವುಗಳ ಅನುಷ್ಠಾನದಲ್ಲಿ ತೋರಿಸಿದ್ದು ಕಡಿಮೆ. ಇಂತಹ ಆತ್ಮವಂಚಕ ಪ್ರಧಾನಿಗಳ ಸಾಲಿಗೆ ಪ್ರಾಮಾಣಿಕರೆಂಬ ಹೆಗ್ಗಳಿಕೆಯ ಮನಮೋಹನ್‌ಸಿಂಗ್ ಸೇರಬಾರದು ಎಂದಾದರೆ ಭ್ರಷ್ಟರ ವಿರುದ್ದ ಅವರು ಸಾರಿರುವ ಸಮರ ಪ್ರಾಮಾಣಿಕವಾದುದೆಂಬುದನ್ನು ಜನ ನಂಬುವಂತೆ ಮಾಡಬೇಕು. ಮನಮೋಹನ್‌ಸಿಂಗ್ ಅವರು ವೈಯಕ್ತಿಕವಾಗಿ ಕಾಪಾಡಿಕೊಂಡು ಬಂದ ಪ್ರಾಮಾಣಿಕತೆಯನ್ನು ಸಂಶಯಿಸುವವರು ಕಡಿಮೆ. ಆದರೆ ಪ್ರಧಾನಿಯಾದವರು ತಮ್ಮ ಕೈ ಬಾಯಿ ಶುಚಿಯಾಗಿಟ್ಟುಕೊಂಡರಷ್ಟೇ ಸಾಲದು ,ಇಡೀ ದೇಶದ ನೈತಿಕ ನೈರ್ಮಲ್ಯವನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ತಮ್ಮ ಮೇಲಿದೆ ಎಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದ ಮನಮೋಹನ್‌ಸಿಂಗ್ ಅವರ ಏಳುವರ್ಷಗಳ ಆಡಳಿತವನ್ನು ಅವಲೋಕಿಸಿದರೆ ನಿರಾಶೆ ಆಗುತ್ತದೆ. ಸರ್ಕಾರದ ಕಪಾಟಿನಿಂದ ಒಂದರ ಮೇಲೊಂದರಂತೆ ಭ್ರಷ್ಟಾಚಾರದ ತಲೆಬುರುಡೆಗಳು ಉರುಳುತ್ತಲೇ ಇರುವಾಗ ಪ್ರಧಾನಿಯವರು ರಾಜಕೀಯ ಶುಚೀಕರಣದ ಬಗ್ಗೆ ಭಾಷಣ-ಘೋಷಣೆಗಳನ್ನು ಮಾಡುವುದು ಅಪಹಾಸ್ಯದಂತೆ ಕಾಣುತ್ತದೆ.

ಇಂದಿನ ಸಮಸ್ಯೆ ಭ್ರಷ್ಟಾಚಾರದ್ದಲ್ಲ, ಇದು ಹಿಂದೆಯೂ ಇತ್ತು. ಆದರೆ ಆ ಕಾಲದಲ್ಲಿ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಇರುವ ಸಂಸ್ಥೆಗಳಿಗೆ ಒಂದಿಷ್ಟು ಬಲ ಇತ್ತು, ದನಿ ಇತ್ತು.  ಸರ್ವಶಕ್ತೆಯಾಗಿದ್ದ ಇಂದಿರಾಗಾಂಧಿಯವರೇ ತತ್ತರಿಸುವಂತೆ ಮಾಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಉದಾಹರಣೆಯೇ ಇದಕ್ಕೆ ಸಾಕ್ಷಿ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ, ಒಂದೆಡೆ ಭ್ರಷ್ಟಾಚಾರ ಅನಿಯಂತ್ರಿತವಾಗಿ ಬೆಳೆಯುತ್ತಿದ್ದರೆ ಇನ್ನೊಂದೆಡೆ ಅದರ ನಿಯಂತ್ರಣಕ್ಕಾಗಿ ಇರುವ ಸಾಂವಿಧಾನಿಕ ಸಂಸ್ಥೆಗಳೆಲ್ಲ ದುರ್ಬಲಗೊಳ್ಳುತ್ತಾ ಬರುತ್ತಿವೆ. ಇದಕ್ಕೆ ನ್ಯಾಯಾಂಗ ಕೂಡಾ ಹೊರತಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಈ ಕೆಲಸವನ್ನು ಸರ್ಕಾರವೇ ದುರುದ್ದೇಶದಿಂದ ಮಾಡುತ್ತಿದೆ.

ಇತ್ತೀಚೆಗೆ ಕಳಂಕಿತ ನಿವೃತ್ತ ಅಧಿಕಾರಿಯೊಬ್ಬರನ್ನು ಕೇಂದ್ರ ಜಾಗೃತ ಆಯೋಗದ ಮುಖ್ಯ ಆಯುಕ್ತರನ್ನಾಗಿ ನೇಮಿಸಿರುವುದೇ ಇದಕ್ಕೆ ಉತ್ತಮ ಉದಾಹರಣೆ. ಕೇಂದ್ರ ತನಿಖಾದಳವನ್ನು ಪಕ್ಷಾತೀತವಾಗಿ ಎಲ್ಲ ಸರ್ಕಾರಗಳು ರಾಜಕೀಯ ದಾಸ್ಯದಲ್ಲಿ ಕೆಡವಿಹಾಕಿವೆ.

ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರಬೇಕೆಂಬ ಉದ್ದೇಶದಿಂದ ರಚನೆಗೊಂಡಿರುವ ಮಹಾಲೇಖಪಾಲ (ಸಿಎಜಿ) ವರದಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಪ್ರಧಾನಮಂತ್ರಿ ಹುದ್ದೆಯನ್ನೂ ಕಾರ್ಯವ್ಯಾಪ್ತಿಯಲ್ಲಿ ಸೇರಿಸಿಕೊಂಡು ಲೋಕಪಾಲರನ್ನು ನೇಮಿಸುವ ಬಗ್ಗೆ ಮಾತನಾಡುವವರೇ ಇಲ್ಲವಾಗಿದೆ. ಲಂಚಕೋರ ಸರ್ಕಾರಿ ನೌಕರರು ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯನ್ನು ತಿರುಚಲಾಗಿದೆ. ಇಂತಹ ದುರ್ಬಲ ಅಸ್ತ್ರಗಳನ್ನು ಕೈಯ್ಯಲ್ಲಿಟ್ಟುಕೊಂಡು ಪ್ರಧಾನಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಹೇಳುತ್ತಿರುವುದು ಉತ್ತರಕುಮಾರನ ಪೌರುಷದಂತೆ ಕಾಣುತ್ತಿದೆ. ಪ್ರಧಾನಿಯವರ ಉದ್ದೇಶ ನಿಜಕ್ಕೂ ಪ್ರಾಮಾಣಿಕತೆಯದಾಗಿದ್ದರೆ ಮೊದಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಇರುವ ಸಂಸ್ಥೆಗಳನ್ನು ಬಲಪಡಿಸಿ ಅವುಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಿ; ಬೇರೇನೂ ಮಾಡುವುದು ಬೇಡ. ಭ್ರಷ್ಟಾಚಾರ ಅದರಷ್ಟಕ್ಕೆ ನಿಯಂತ್ರಣಕ್ಕೆ ಬರಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT