ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಯೊಂದೇ ಮಾರ್ಗ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಿರಿಯಾದಲ್ಲಿ ನಡೆಯುತ್ತಿರುವ ಜನರ ಮಾರಣಹೋಮವನ್ನು ತಡೆಯುವ ದಿಸೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯಲ್ಲಿ ಅರಬ್ ಲೀಗ್ ಮತ್ತು ಅಮೆರಿಕ ನೇತೃತ್ವದಲ್ಲಿ ಪಾಶ್ಚಿಮಾತ್ಯ ಹಾಗೂ ಯೂರೋಪ್ ರಾಷ್ಟ್ರಗಳು ನಡೆಸಿದ ಪ್ರಯತ್ನ ವಿಫಲವಾದುದು ಅನಿರೀಕ್ಷಿತ ಬೆಳವಣಿಗೆಯೇನಲ್ಲ.

ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಪದತ್ಯಾಗಕ್ಕೆ ಒತ್ತಾಯಿಸುವ ನಿರ್ಣಯದ ವಿರುದ್ಧ ರಷ್ಯ ಮತ್ತು ಚೀನಾ ವಿಟೋ ಚಲಾಯಿಸಬಹುದಾದ ಸಾಧ್ಯತೆಗಳು ಮೊದಲೇ ಕಂಡು ಬಂದಿದ್ದವು. ಅಂಥ ಸಂದರ್ಭದಲ್ಲಿ ಸಿರಿಯಾ ವಿರುದ್ಧ ನಿರ್ಣಯ ಮಂಡಿಸುವುದಕ್ಕೆ ಬದಲಾಗಿ ಸಮಸ್ಯೆಯ ಶಾಂತಿಯುತ ಇತ್ಯರ್ಥಕ್ಕಾಗಿ ಅಸ್ಸಾದ್ ಜೊತೆ ಮಾತುಕತೆಗಳನ್ನು ನಡೆಸಲು ಮುಂದಾಗಬಹುದಿತ್ತು.
 
ಶಾಂತಿ ಸ್ಥಾಪಿಸುವ ದಿಸೆಯಲ್ಲಿ ಅರಬ್ ಲೀಗ್‌ನ ನಿಯೋಗ ನಡೆಸಿದ ಪ್ರಯತ್ನಗಳು ವಿಫಲವಾಗಿವೆ ನಿಜ. ಹಾಗೆಂದು ಅಂಥ ಪ್ರಯತ್ನಗಳನ್ನು ಮುಂದುವರಿಸದಿರುವುದು ತಪ್ಪು. ಹಿಂಸೆಗೆ ಕೊನೆ ಹಾಡುವ ದಿಸೆಯಲ್ಲಿ ಇದೀಗ ರಷ್ಯಾದ ವಿದೇಶಾಂಗ ಸಚಿವರು ಅಸ್ಸಾದ್ ಜೊತೆ ಮಾತುಕತೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಅರಬ್ ವಲಯದಲ್ಲಿ ಬೀಸಿದ ಪ್ರಜಾತಂತ್ರದ ಗಾಳಿಯಲ್ಲಿ ಟ್ಯುನೀಸಿಯಾ, ಲಿಬಿಯಾ, ಈಜಿಪ್ಟ್‌ಗಳಲ್ಲಿ ಬದಲಾವಣೆಗಳಾಗಿವೆ.
 
ಆದರೆ ಅವಾವುವೂ ಸಕಾರಾತ್ಮಕ ಬದಲಾವಣೆಗಳಲ್ಲ. ಮುಸ್ಲಿಂ ಮೂಲಭೂತವಾದಿಗಳು ಅಧಿಕಾರಕ್ಕೆ ಬಂದಿರುವುದರಿಂದ ಪ್ರಜಾತಂತ್ರ ವ್ಯವಸ್ಥೆ ಆ ದೇಶಗಳಲ್ಲಿ ಬಹಳ ಕಾಲ ಉಳಿಯುವ ಸಾಧ್ಯತೆಗಳಿಲ್ಲ. ಇಂಥ ಬೆಳವಣಿಗೆ ಸಿರಿಯಾದಲ್ಲೂ ಆಗಬಾರದು. 

 ಕಳೆದ 11 ತಿಂಗಳಿಂದ ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಸೈನಿಕ ಆಕ್ರಮಣದಲ್ಲಿ 5400ಕ್ಕೂ ಹೆಚ್ಚು ಜನ ಸತ್ತಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಗಳು ಹೇಳುತ್ತಿವೆ. ಸೈನಿಕರು ಭಯೋತ್ಪಾದಕರ ವಿರುದ್ಧ ಮಾತ್ರ ಗುಂಡು ಹಾರಿಸುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ.
 
ಸಿರಿಯಾದಲ್ಲಿ ಸುನ್ನಿಗಳೇ ಬಹುಸಂಖ್ಯಾತರು. ಆದರೆ ಷಿಯಾ ಮೂಲದ ಅಲ್ಪಸಂಖ್ಯಾತ ಅಲವಿಗಳು ಮತ್ತು ಇತರ ಜನಾಂಗಗಳ ಕೈಯ್ಯಲ್ಲಿ ಅಧಿಕಾರವಿದೆ. ಅಧಿಕಾರ ಕಬಳಿಸಲೆಂದೇ ಸುನ್ನಿ ನಾಯಕರು ಪ್ರಯತ್ನಪಡುತ್ತಿದ್ದಾರೆ. ಸುನ್ನಿ ಪ್ರಾಬಲ್ಯದ ಅರಬ್ ಲೀಗ್‌ನ ದೇಶಗಳು ಇದೇ ಕಾರಣದಿಂದ ವಿರೋಧಿ ಹೋರಾಟಗಾರರರಿಗೆ ಬೆಂಬಲ ನೀಡುತ್ತಿದ್ದಾರೆ.
 
ಸಿರಿಯಾಕ್ಕೆ ಷಿಯಾ ಪ್ರಾಬಲ್ಯದ ಇರಾನ್ ಬೆಂಬಲ ನೀಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ನೆರೆಯ ಟರ್ಕಿ ಮತ್ತು ಇರಾನ್ ಮಿತ್ರ ರಾಷ್ಟ್ರಗಳು. ಲೆಬನಾನ್‌ನ ಹಿಜಬುಲ್ಲ ಮತ್ತು ಪ್ಯಾಲೆಸ್ಟೇನ್ ಪ್ರದೇಶದ ಹಮಾಸ್ ಉಗ್ರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಅರಬ್ ಪ್ರದೇಶದಲ್ಲಿ ಬೆಳೆಯುತ್ತಿರುವ ಇರಾನ್‌ನ ಪ್ರಾಬಲ್ಯವನ್ನು ಅಡಗಿಸಲು ಸಿರಿಯಾ ವಿರುದ್ಧ ಕೆಲವು ರಾಷ್ಟ್ರಗಳು ಗುಂಪು ಮಾಡಿಕೊಂಡು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಆದರೆ ರಷ್ಯಾದ ಲೆಕ್ಕಾಚಾರವೇ ಬೇರೆ.
 
ಅರಬ್ ವಲಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅದು ಸಿರಿಯಾದ ಬೆಂಬಲಕ್ಕೆ ನಿಂತಂತಿದೆ. ಸಿರಿಯಾದಲ್ಲಿ ಜನರ ಮಾರಣ ಹೋಮ ನಿಲ್ಲಬೇಕು. ಆ ವಿಚಾರದಲ್ಲಿ ಎರಡು ಅಭಿಪ್ರಾಯವಿಲ್ಲ. ಆದರೆ ಅದು ಮಾತುಕತೆಯ ಮೂಲಕ ಪರಿಹಾರವಾಗಬೇಕಾದ ವಿಚಾರ. ಮಿಲಿಟರಿ ಕಾರ್ಯಾಚರಣೆಯಿಂದ ಆಗುವ ಕೆಲಸವಲ್ಲ. ಅಂಥ ಪ್ರಯತ್ನ ಸಿರಿಯಾದಲ್ಲಿ ಜನಾಂಗ ಕಲಹಕ್ಕೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT