ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆಯಲ್ಲಿ ಶಿಕ್ಷಣ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಲಿಕೆಯ ಆರಂಭಿಕ ಹಂತದಲ್ಲಿ ಮಕ್ಕಳು ಸುಲಭವಾಗಿ ಗ್ರಹಿಸುವಂಥ ವಾತಾವರಣ ಇರಬೇಕು. ಮಕ್ಕಳಿಗೆ ಮನೆಯ ಪರಿಸರದಲ್ಲಿ ಪರಿಚಿತವಾದ ಭಾಷೆಯಲ್ಲಿಯೇ ಕಲಿಯುವಂಥ ವ್ಯವಸ್ಥೆ ಇದ್ದರೆ ಅವರು ಹೊಸ ವಿಷಯವನ್ನು ಸುಲಭವಾಗಿ ಗ್ರಹಿಸುತ್ತಾರೆ.
 
ಇದನ್ನೇ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅನುಸರಿಸುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ರಾಜ್ಯಗಳಿಗೆ ಸೂಚಿಸಿದೆ. ಇದು ಸ್ಪಷ್ಟವಾಗಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂಬ ಸೂಚನೆ.
 
ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮವರ್ತಿ ಪಟ್ಟಿಯ ವಿಷಯವಾಗಿರುವುದರಿಂದ ಈ ಸೂಚನೆಯಲ್ಲಿ ತಮ್ಮ ಸ್ವಾಯತ್ತತೆಗೆ ಭಂಗ ಬರುವಂಥ ಸಾಧ್ಯತೆಯನ್ನು ರಾಜ್ಯಗಳು ಗುರುತಿಸಬಾರದು.

ಮಕ್ಕಳು ಪ್ರಾಥಮಿಕ ಹಂತದಲ್ಲಿ ತಮ್ಮದೇ ಭಾಷೆಯಲ್ಲಿ ಕಲಿಯುವುದರಿಂದ ಕಲಿಕೆಯ ಪ್ರಕ್ರಿಯೆಗೆ ಭದ್ರ ಬುನಾದಿ ಒದಗುತ್ತದೆ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರ ಅಭಿಮತ.

ಪಠ್ಯದಲ್ಲಿನ ಭಾಷೆ ತಮ್ಮ ಪರಿಸರದ ಭಾಷೆಗಿಂತ ಭಿನ್ನವಾಗಿದ್ದಲ್ಲಿ ಅದು ಮಕ್ಕಳ ವಿಷಯ ಗ್ರಹಿಕೆಗೆ ಅಡ್ಡಿಯಾಗುತ್ತದೆ. ಇದಕ್ಕೆ ಪರಿಸರದ ಭಾಷೆ ಪಠ್ಯದ ಭಾಷೆಯೂ ಆಗುವುದೇ ಪರಿಹಾರ.

ಇದನ್ನೇ ಮಾನವ ಸಂಪನ್ಮೂಲ ಇಲಾಖೆ ಸೂಚಿಸಿದೆ. ಈ ಸೂಚನೆ ಇಡೀ ದೇಶಕ್ಕೆ ಅನ್ವಯವಾಗುವುದಕ್ಕೆ ಅನುಕೂಲವಾಗುವಂತೆ ಈ ಪರಿಕಲ್ಪನೆಯನ್ನು ರಾಷ್ಟ್ರೀಯ ಭಾಷಾ ನೀತಿಯಾಗಿ ಅಂಗೀಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಗತ್ಯ.

ಗಣಿತ, ವಿಜ್ಞಾನ, ಸಮಾಜಶಾಸ್ತ್ರದಂತಹ ಜ್ಞಾನ ಶಿಸ್ತುಗಳಿಗೆ ಅನ್ವಯವಾಗಿ ದೇಶದಾದ್ಯಂತ ಏಕರೂಪದ ಪಠ್ಯಕ್ರಮ ಮತ್ತು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬುದು ರಾಷ್ಟ್ರೀಯ ನೀತಿಯಾದರೆ ಮಕ್ಕಳು ಸರಿಯಾಗಿ ಕಲಿತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗುವ ಸಾಮರ್ಥ್ಯ ಪಡೆಯಬಲ್ಲರು.
 
ಇದಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ರಾಜ್ಯಗಳೊಂದಿಗೆ ಸಮಾಲೋಚನೆ ಆರಂಭಿಸಬೇಕು. 

 ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ಪರಿಕಲ್ಪನೆ ಇಂಗ್ಲಿಷ್ ಶಾಲೆಗಳಲ್ಲಿ ಕಲಿಯುವ ಗೀಳಿನಲ್ಲಿ ಮಹತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಕರ್ನಾಟಕದಲ್ಲಂತೂ ಇಂಗ್ಲಿಷ್ ಮಾಧ್ಯಮದ ಗೀಳು ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ.

ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಯುವುದಕ್ಕೂ, ಅದನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಕಲಿಯುವುದಕ್ಕೂ ಇರುವ ವ್ಯತ್ಯಾಸ ಹೆತ್ತವರಿಗೆ ಅರಿವಾಗುತ್ತಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯದೆ ಭವಿಷ್ಯವೇ ಇಲ್ಲ ಎಂಬ ಭಾವನೆ ಬಲವಾಗಿರುವ ಕಾರಣ ಗ್ರಾಮೀಣ ಭಾಗಗಳಲ್ಲಿಯೂ ಖಾಸಗಿ ಇಂಗ್ಲಿಷ್ ಶಾಲೆಗಳು ತಲೆ ಎತ್ತಿವೆ.

ಮಕ್ಕಳು ವಿಷಯ ಜ್ಞಾನ ಪಡೆಯುವುದಕ್ಕಿಂತ ಇಂಗ್ಲಿಷಿನಲ್ಲಿ ವ್ಯವಹರಿಸುವುದರಿಂದ ಉದ್ಯೋಗ ಪಡೆದುಕೊಳ್ಳಬಲ್ಲರೆಂಬ ಹುಸಿ ನಂಬಿಕೆ ಈ ಪರಿಸ್ಥಿತಿಗೆ ಕಾರಣವಾಗಿದೆ. ಇಂಗ್ಲಿಷ್ ಶಾಲೆ ಆರಂಭಿಸುವುದು ಲಾಭದಾಯಕ ಉದ್ಯಮವಾಗಿದೆ.

ಪ್ರಾಥಮಿಕ ಶಿಕ್ಷಣಕ್ಕೆ ಕೂಡ ಉದ್ಯಮದ ಸ್ವರೂಪವನ್ನು ನೀಡುವುದರಲ್ಲಿ ಜನಪ್ರತಿನಿಧಿಗಳೂ ಹಿಂದೆ ಬಿದ್ದಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇದನ್ನು ನಿವಾರಿಸಬೇಕಾದ ಸರ್ಕಾರ ಈ ಹುಸಿನಂಬಿಕೆಯನ್ನೇ ಉತ್ತೇಜಿಸುವಂತೆ ತಾನೇ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿದೆ. ಇದು ಜನತೆಯ ಹಾದಿ ತಪ್ಪಿಸುವ ಯತ್ನ. ಸರ್ಕಾರವೇ ಜನರನ್ನು ವಂಚಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT