ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ನಡವಳಿಕೆ ಅಲ್ಲ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದೇ ಅಲ್ಲದೆ ಆಯೋಗದ ಜತೆ ಸಂಘರ್ಷಕ್ಕೆ ಇಳಿಯುವ ಮೂಲಕ  ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾನೂನು ಸಚಿವರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದು ಒಳ್ಳೆಯ ನಡವಳಿಕೆ ಅಲ್ಲ.

`ಮುಸ್ಲಿಮರಲ್ಲಿಯೇ ಹೆಚ್ಚು ಹಿಂದುಳಿದಿರುವ ಉತ್ತರ ಪ್ರದೇಶದ ಪಸಮಂದ ಸಮುದಾಯದವರಿಗೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದೇನೆ. ನನ್ನ ಜೀವ ಇರುವವರೆಗೆ ಹಿಂದುಳಿದ ಮುಸ್ಲಿಂ ಸಮುದಾಯದ ಪರವಾಗಿ ಹೋರಾಡುತ್ತೇನೆ. ಚುನಾವಣಾ ಆಯೋಗ ಬೇಕಾದರೆ ನನ್ನನ್ನು ನೇಣಿಗೆ ಹಾಕಲಿ~ ಎಂದು ಸಚಿವರು ಹೇಳಲು ಏನು ಕಾರಣ ಎಂಬುದು ಗೊತ್ತಾಗಿಲ್ಲವಾದರೂ ಒಂದು ಸಮುದಾಯದ ಪಕ್ಷಪಾತಿಯಂತೆ ಮಾತನಾಡುವುದು ಸಮರ್ಥನೀಯ ಅಲ್ಲ. ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೊದಲು ಕೈಗೊಂಡ ಪ್ರಮಾಣ ವಚನವನ್ನೂ ಸಚಿವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.
 
`ಒಂದು ಸಮುದಾಯದ ಜನರ ಭವಿಷ್ಯ ರೂಪಿಸಲು ಜೀವಮಾನವಿಡೀ ಹೋರಾಡುತ್ತೇನೆ~ ಎಂದು ಅವರು ಹೇಳುವುದರ ಉದ್ದೇಶವೇನು? ದೇಶದ ಎಲ್ಲಾ ಸಮುದಾಯಗಳ ಹಿತವನ್ನೂ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ಅದನ್ನೇ ಅವರು ಮರೆತಿದ್ದಾರೆ.
 
ಸಚಿವರ ಪತ್ನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ನಡೆದ ರ‌್ಯಾಲಿಯಲ್ಲಿ ಅವರು ಹಾಗೆ ಮಾತನಾಡುವುದರ ಹಿಂದಿನ ರಾಜಕೀಯ ಉದ್ದೇಶವೇನು ಎಂಬುದಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲ. ಕೇಂದ್ರ ಸಚಿವರಾಗಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವಂತಹ ಅತಿರೇಕದ ವರ್ತನೆ ಸಮರ್ಥನೀಯ ಅಲ್ಲ.

ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಅದರ ನಿರ್ಧಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಾದ ಮಾದರಿ ನೀತಿ ಸಂಹಿತೆಯನ್ನು ಆಯೋಗ ಎಲ್ಲಾ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಿದ ನಂತರವೇ ರೂಪಿಸಿದೆ.
 
ಈ ನೀತಿ ಸಂಹಿತೆಯನ್ನು ಗೌರವಿಸುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿ. ನೀತಿ ಸಂಹಿತೆ ಮಾತ್ರವಲ್ಲ, ಎಲ್ಲ ಕಾನೂನುಗಳನ್ನು ಗೌರವಿಸುವ ವಿಷಯದಲ್ಲಿ ಕಾನೂನು ಸಚಿವರು ಇತರರಿಗೆ ಮಾದರಿಯಾಗಬೇಕು.
 
ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಕಾನೂನು ಸಚಿವರನ್ನು ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಸಂಪುಟದಲ್ಲಿ ಹೇಗೆ ಮುಂದುವರಿಸುತ್ತಾರೆ? ಇಂತಹ ಸಚಿವರನ್ನು ಇಟ್ಟುಕೊಂಡು ಅವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ? ಖುರ್ಷಿದ್ ಅವರ ನಿಲುವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿಲ್ಲ.

ಪ್ರಧಾನಿಯವರೂ ಅವರನ್ನು ಸಮರ್ಥಿಸಿಕೊಳ್ಳಬಾರದು. ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾನೂನು ಸಚಿವರನ್ನು ಸಂಪುಟದಿಂದ ಕೈಬಿಡುವುದೇ ಸರಿಯಾದ ಕ್ರಮ. ಅದು ಇತರರಿಗೂ ಎಚ್ಚರಿಕೆಯ ಪಾಠವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT