ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧವ ಗುಡಿ: ಬರೀ ನೆನಪಲ್ಲ

Last Updated 23 ಏಪ್ರಿಲ್ 2011, 4:20 IST
ಅಕ್ಷರ ಗಾತ್ರ

ಧಾರವಾಡ: ‘ಧಾರವಾಡದ ನೆಲದ ಗುಣವೇನು ಋಣವೇನು ಕವಿಗಾಳಿ ಸವಿಗಾಳಿ ಸೂಸುತಿಹದು’
ಎಂದು ಸಂಗೀತ ಕ್ಷೇತ್ರಕ್ಕೆ ಧಾರವಾಡ ನೀಡಿರುವ ಕೊಡುಗೆ ಬಗ್ಗೆ ವರಕವಿ  ಡಾ. ದ.ರಾ.ಬೇಂದ್ರೆಯವರು ಹೀಗೆ ಹೇಳಿದ್ದರು.

ಸಂಗೀತ ಕ್ಷೇತ್ರದಲ್ಲಿ ಕರ್ನಾಟಕದ ಅದರಲ್ಲೂ ಧಾರವಾಡದ ಕೊಡುಗೆ ಸರಿಸಾಟಿಯಿಲ್ಲದ್ದು. ಇಡೀ ಜಗತ್ತಿನಲ್ಲಿಯೇ ಕೀರ್ತಿ ಗಳಿಸಿದ ಹೆಗ್ಗಳಿಕೆ ಧಾರವಾಡದ್ದು. ಇಂಥ ನೆಲದಲ್ಲಿ ಹುಟ್ಟಿದ ಪಂ. ಮಾಧವ ಗುಡಿ ಇಂದು ನಮ್ಮನ್ನು ಅಗಲಿದ್ದಾರೆ. ಸಂಗೀತ ಕ್ಷೇತ್ರಕ್ಕೆ ತುಂಬಿಬಾರದ ಹಾನಿಯಾಗಿದೆ. ಕಿರಾಣಾ ಘರಾಣದ ಮತ್ತೊಂದು ಕೊಂಡಿ ಕಳಚಿಕೊಂಡಿದೆ.

ಬಡತನದಲ್ಲಿಯೇ ಸಂಗೀತದ ಶಿಖರಕ್ಕೇರಿದ ಹಿರಿಯ ಗಾಯಕ ಪಂಡಿತ ಮಾಧವ ಗುಡಿ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ, ಯಕೃತ್ (ಲೀವರ್) ಸಮಸ್ಯೆಯಿಂದ ಬಳಲುತ್ತಿದ್ದರು. ಪಂ. ಭೀಮಸೇನ ಜೋಶಿಯವರ ನೆಚ್ಚಿನ ಶಿಷ್ಯ ಹಾಸಿಗೆ ಹಿಡಿದಾಗಿನಿಂದ ಸದಾಕಾಲ ತಮ್ಮ ಗುರುಗಳ ಬಗ್ಗೆಯೇ ನೆನಪಿಸಿಕೊಳ್ಳುತ್ತಿದ್ದರು.

ಪಂಡಿತ ಮಾಧವ ಗುಡಿ ಅವರದು ಅನನ್ಯ ಶೈಲಿ. ಅದಕ್ಕೆ ಕಿರಾಣಾ ಘರಾಣಾದ ಭದ್ರ ಬುನಾದಿ ಇತ್ತು. ಅವರದು ಗಾಯನದಲ್ಲಿ ಕ್ರಮಬದ್ಧ ಅಲಾಪ. ಇವರ ತಾನ್‌ಗಳಲ್ಲಿ ವೈವಿಧ್ಯ ಮತ್ತು ಅವಿಚ್ಛಿನ್ನತೆ ಇದ್ದವು.  ತುಡಿತ, ಲವಲವಿಕೆ ಇತ್ತು.

ಅವರದು ಅದ್ಭುತ ಉಸಿರು ನಿಯಂತ್ರಣ. ಮಾಧವ ಗುಡಿಯವರು ಸ್ವರಗಳನ್ನು ಯಾಂತ್ರಿಕವಾಗಿ ಹಾಡದೇ ಭಾವನೆಗಳನ್ನು ಸಂಗೀತಾತ್ಮಕವಾಗಿ ಹೆಣೆಯುತ್ತಿದ್ದರು. ಇವೆಲ್ಲವುಗಳನ್ನು ಕಂಡೇ ಪಂ. ಭೀಮಸೇನ ಜೋಶಿಯವರು ಇವರನ್ನು ತಮ್ಮ ಪುತ್ರನಂತೆ ಕಂಡಿದ್ದರು. ಆದರೆ ಇವೆಲ್ಲವುಗಳು ಈಗ ಬರೀ ನೆನಪು ಮಾತ್ರ. ಪಂ. ಜೋಶಿಯವರ ಜೀವನದ ಕೊನೆಯ ಕ್ಷಣದಲ್ಲಿಯೂ ಇವರ ಸೇವೆ ಅನನ್ಯ. ಜೋಶಿಯವರ ಪ್ರೀತಿಯ ‘ಮಾಧು’ ಇನ್ನು ನೆನಪು.

ಒಬ್ಬ ಕಲಾವಿದ ತನ್ನ ಕೇಳುಗರನ್ನು ತಾನೇ ಸೃಷ್ಟಿಸಿಕೊಳ್ಳುವುದು ಜೀವನದ ಮಹತ್ತರ ಸಾಧನೆ. ಅದನ್ನು ಮಾಧವ ಗುಡಿಯವರು ಮಾಡಿದ್ದಾರೆ. ತಮ್ಮ ಪ್ರತಿಭೆ, ಅನುಭವ ಹಾಗೂ ಸ್ನೇಹಮಯ ವ್ಯಕ್ತಿತ್ವದಿಂದ ಅಪಾರ ಜನಮನ್ನಣೆ ಪಡೆದಿದ್ದ ಅವರು, ನಾಡಿನ, ಹೊರದೇಶಗಳ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿದ್ದರು.

ಆಕಾಶವಾಣಿ ಹಾಗೂ ದೂರದರ್ಶನ ‘ಎ’ ಶ್ರೇಣಿ ಕಲಾವಿದರಾಗಿದ್ದ ಅವರಿಗೆ, ಕೊನೆಯವರೆಗೂ ಅವರ ಸಾಧನೆಗೆ ತಕ್ಕ ಉನ್ನತ ಪ್ರಶಸ್ತಿಗಳು ದೊರಕಲೇ ಇಲ್ಲ. ಅದೊಂದು ಕೊರಗು ಇಂದಿಗೂ ಅವರ ಅಭಿಮಾನಿ ಶಿಷ್ಯರಲ್ಲಿ ಇದ್ದೇ ಇದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯ ವಾರಸುದಾರರೂ, ಸಮರ್ಥ ಪ್ರತಿನಿಧಿಯೂ ಆಗಿದ್ದ ಮಾಧವ ಗುಡಿಯವರು ನಮ್ಮೊಂದಿಗಿಲ್ಲ ನಿಜ. ಆದರೆ ಅವರು ನಡೆದ ದಾರಿ, ಮಾಡಿದ ಸಾಧನೆ ನಮ್ಮ ಕಣ್ಣ ಮುಂದಿದೆ. ಹೀಗಾಗಿ ಸಂಗೀತ ಇರುವವರೆಗೂ ಮಾಧವ ಗುಡಿ ಜೀವಂತವಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT