ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ನಿಯಂತ್ರಣ: ಚರ್ಚೆ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ/ಐಎಎನ್‌ಎಸ್): ಮಾಧ್ಯಮವನ್ನು ಮತ್ತಷ್ಟು ಉತ್ತರದಾಯಿಯಾಗಿಸಬೇಕು ಎಂಬ ಒತ್ತಡದ ನಡುವೆ ಈ ವಿಚಾರದಲ್ಲಿ ಲೋಕಸಭೆಯ ಅಭಿಪ್ರಾಯವನ್ನು ಗೌರವಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

`ಮಾಧ್ಯಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಮಾಧ್ಯಮಗಳ ಸ್ವಯಂ ನಿಯಂತ್ರಣಕ್ಕೆ ನಾವು ಮೊದಲು ಅವಕಾಶ ಕಲ್ಪಿಸಬೇಕು. ಆದರೂ ಈ ವಿಚಾರದಲ್ಲಿ ಸರ್ಕಾರ ಲೋಕಸಭೆಯ ಭಾವನೆಯನ್ನು ಗೌರವಿಸಲಿದೆ' ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಭರವಸೆ ನೀಡಿದರು.

ಮಾಧ್ಯಮಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳದಂತೆ ನೋಡಿಕೊಳ್ಳಲು `ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ'ಕ್ಕೆ ಮತ್ತಷ್ಟು ಅಧಿಕಾರ ನೀಡಬೇಕು. ಇಲ್ಲವೇ ಸಂಸತ್ತಿಗೆ ಆ ಅಧಿಕಾರ ನೀಡಬೇಕು ಎಂದು ಜೆಡಿಯು ನಾಯಕ ಶರದ್ ಯಾದವ್ ಒತ್ತಾಯಿಸಿದರು.

ಲೋಕಸಭಾ ಸದಸ್ಯ ನವೀನ್ ಜಿಂದಾಲ್ ಅವರಿಂದ ಹಣ ಕೇಳಿದ್ದ ಝೀ ಸಮೂಹದ ಪರವಾನಗಿ ರದ್ದುಗೊಳಿಸುವಂತೆ ಕಾಂಗ್ರೆಸ್ ಸದಸ್ಯ ಲಾಲ್ ಸಿಂಗ್ ಒತ್ತಾಯಿಸಿದರು.

`ಕಾಸಿಗಾಗಿ ಸುದ್ದಿ' ಪ್ರಕರಣಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ತಿವಾರಿ, ಯಾವುದು `ಕಾಸಿಗಾಗಿ ಸುದ್ದಿ' ಎಂದು ನಿರ್ಧರಿಸುವುದೇ ಕಷ್ಟವಾಗಿದೆ ಎಂದರು.

ಭೂಸ್ವಾಧೀನ ಮಸೂದೆ: ಚರ್ಚೆ ಮುಂದಕ್ಕೆ
ಈ ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ವಿವಾದಾತ್ಮಕ ಭೂಸ್ವಾಧೀನ ಮಸೂದೆ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಸಂಸದೀಯ ವ್ಯವಹಾರ ಸಚಿವ ಕಮಲ್‌ನಾಥ್ ಮಂಗಳವಾರ ಈ ವಿಚಾರ ತಿಳಿಸಿದರು. ರೈತರು ಹಾಗೂ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿರುವ ಈ ಮಸೂದೆಯ ನಿಯಮಾವಳಿಗಳ ಕುರಿತು ಚರ್ಚೆ ನಡೆಸಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಬಿಜೆಪಿ ಸದಸ್ಯ ರಾಜನಾಥ್ ಸಿಂಗ್, ಮುಲಾಯಂ ಸಿಂಗ್ ಯಾದವ್ (ಎಸ್‌ಪಿ), ಬಸುದೇವ್ ಆಚಾರಿಯಾ (ಸಿಪಿಎಂ) ಮತ್ತು ಸುಗಾತಾ ರಾಯ್ (ಟಿಎಂಸಿ) ಮನವಿ ಮಾಡಿಕೊಂಡಿದ್ದರಿಂದ ಚರ್ಚೆಯನ್ನು ಮುಂದೂಡಲಾಯಿತು.

ಪಾಕ್ ವಶದಲ್ಲಿ ಭಾರತದ ಭೂಮಿ
ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಂಗಳವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿರುವ ಸರ್ಕಾರ, ಒಟ್ಟು 78,000 ಚದರ ಕಿಲೊ ಮೀಟರ್ ಭಾರತದ ಭೂಪ್ರದೇಶವನ್ನು ಪಾಕಿಸ್ತಾನವು ಅಕ್ರಮವಾಗಿ ಹಾಗೂ ಬಲವಂತವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ ಎಂದು ತಿಳಿಸಿದೆ.

`ಚೀನಾ- ಪಾಕಿಸ್ತಾನ ಗಡಿ ಒಪ್ಪಂದ 1963'ರ ಅನ್ವಯ ಪಾಕಿಸ್ತಾನ 5180 ಚ.ಕೀ. ಜಾಗವನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ಚೀನಾಕ್ಕೆ ಅಕ್ರಮವಾಗಿ ಬಿಟ್ಟುಕೊಟ್ಟಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಎಂ. ರಾಮಚಂದ್ರನ್ ಲೋಕಸಭೆಗೆ ತಿಳಿಸಿದರು. ಆದರೆ ಬಾಂಗ್ಲಾದೇಶ, ಚೀನಾ, ನೇಪಾಳ, ಭೂತಾನ್ ಹಾಗೂ ಮ್ಯಾನ್ಮಾರ್‌ನೊಂದಿಗಿನ ಗಡಿಭಾಗದಲ್ಲಿ ಭಾರತದ ಭೂಪ್ರದೇಶವನ್ನು ಯಾವುದೇ ದೇಶ ಅತಿಕ್ರಮಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದ ಗಡಿಗಳ ಸಂರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಸಂಬಂಧದ ಅಪಾಯಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಮಸೂದೆಗೆ ಅಸ್ತು
ಅತಿ ಮಹತ್ವದ ಬ್ಯಾಂಕಿಂಗ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿದೆ. ಭವಿಷ್ಯದಲ್ಲಿ ಬ್ಯಾಂಕ್‌ಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ವಿವಾದಾತ್ಮಕ ನಿಯಮಾವಳಿಯನ್ನು ಕೈಬಿಟ್ಟು ಹಾಗೂ ಬ್ಯಾಂಕಿಂಗ್ ಕ್ಷೇತ್ರವನ್ನು ಸ್ಪರ್ಧಾ ಆಯೋಗದ ಹೊರಗೆ ಇಟ್ಟು ಈ ತಿದ್ದುಪಡಿ ಅಂಗೀಕರಿಸಲಾಯಿತು.

ಈ ಮಸೂದೆ ಅಂಗೀಕರಿಸುವುದು ಅನಿವಾರ್ಯವಾಗಿರುವುದರಿಂದ ವಿವಾದಾತ್ಮಕ ಕಲಂಗಳನ್ನು ಕೈಬಿಡಲಾಗಿದೆ ಎಂದು ಮಸೂದೆ ಕುರಿತ ಚರ್ಚೆ ಮುಕ್ತಾಯಗೊಳಿಸಿದ ಹಣಕಾಸು ಸಚಿವ ಚಿದಂಬರಂ ಹೇಳಿದರು. ಬ್ಯಾಂಕಿಂಗ್ ಕ್ಷೇತ್ರದ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸುವ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT