ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ

Last Updated 1 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್):   ‘ನನ್ನನ್ನು ‘ಕಳಂಕಿತ’ ಎಂದು ಬಣ್ಣಿಸಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಧ್ಯಮಗಳು ಮಾಡುತ್ತಿವೆ’ ಎಂದು ವಿವಾದಿತ ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

‘ವಿವಾದ ಕುರಿತು ನಾನು ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದರಿಂದಾಗಿ ನನ್ನನ್ನು ತಪ್ಪಿತಸ್ಥ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
‘ನೇಮಕಾತಿ ವಿವಾದದ ಕಾನೂನು ವಿಶ್ಲೇಷಣೆ ಪ್ರಗತಿಯಲ್ಲಿರುವಾಗ ಮೌನಪಾಲಿಸುವ ಅನಿವಾರ್ಯತೆ ಇದೆ. ಅಲ್ಲದೇ, ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಕಟ್ಟುಪಾಡು ನನಗಿಲ್ಲ’ ಎಂದು ಅವರು ಹೇಳಿದ್ದಾರೆ. ಕೇರಳದ ಪಾಮೋಲಿನ್ ತೈಲ ಹಗರಣಕ್ಕೆ ಸಂಬಂಧಿಸಿದಂತೆ, 2008ರಲ್ಲಿ ಕೇಂದ್ರ ಜಾಗೃತ ಆಯೋಗ ‘ನಿರ್ದೋಷಿ’ ಎಂದು ನನಗಷ್ಟೇ ಪ್ರಮಾಣಪತ್ರ ನೀಡಿದ್ದಲ್ಲ. ಇತರ ಕೆಲವು ಅಧಿಕಾರಿಗಳೂ ಆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದರು’ ಎಂದು ಥಾಮಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ನನ್ನ 27 ವರ್ಷಗಳ ಅವಧಿಯ ಸರ್ಕಾರಿ ಸೇವೆಯಲ್ಲಿ ಯಾವುದೇ ತಪ್ಪು ಕಾರ್ಯ ಮಾಡಿಲ್ಲ. ಇಷ್ಟೆಲ್ಲ ಉತ್ತಮ ದಾಖಲೆಗಳಿದ್ದರೂ ನನ್ನನ್ನು ಕಳಂಕಿತ ಎಂದು ಪ್ರಚಾರ ಮಾಡಲಾಗುತ್ತಿದೆ’ ಎಂದು ಥಾಮಸ್ ದೂರಿದ್ದಾರೆ.

ಎಲ್ಲ ಅರ್ಹತೆಯೂ ಇದೆ:  ‘ಕೇಂದ್ರ ಜಾಗೃತ ಆಯೋಗದ ನೇಮಕಾತಿ ಕಾಯ್ದೆಯ 3ನೇ ಪರಿಚ್ಛೇದದಲ್ಲಿ ಹೇಳಲಾಗಿರುವ ಎಲ್ಲಾ ಅರ್ಹತೆಗಳನ್ನೂ ನಾನು ಹೊಂದಿದ್ದೇನೆ’ ಎಂದು ಥಾಮಸ್ ಪ್ರಮಾಣ ಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ.
‘ನನ್ನ ಅರ್ಹತೆ ಸಮರ್ಥನೆಗಾಗಿ ಪ್ರಧಾನಿ ನೇತೃತ್ವದ ತ್ರಿಸದಸ್ಯ ಸಮಿತಿಯ  ತನಿಖಾ ವರದಿ ಪರಿಶೀಲನೆಯ ಅಗತ್ಯವೇ ಇಲ್ಲ. ಕೇಂದ್ರದ ಕಾರ್ಯದರ್ಶಿ ಹಂತದ ಹುದ್ದೆಗಳಲ್ಲಿನ ಅನುಭವ ಇತ್ಯಾದಿಗಳ ಸಾಕ್ಷ್ಯಾಧಾರ ಇದೆ’ ಎಂದಿದ್ದಾರೆ.

2ಜಿ ಹಗರಣಕ್ಕೂ ನನಗೂ ಸಂಬಂಧ ಇಲ್ಲ: 2ಜಿ ಹಗರಣದಲ್ಲೂ ನನ್ನ ಹೆಸರನ್ನು ವಿನಾಕಾರಣ ಎಳೆದು ತರಲಾಗಿದೆ ಎಂದು ಅವರು ಹೇಳಿದ್ದಾರೆ.

‘ನಾನು ದೂರಸಂಪರ್ಕ ಇಲಾಖೆ  ಕಾರ್ಯದರ್ಶಿಯಾಗಿ ಅಧಿಕಾರ ವಹಿಸುವುದಕ್ಕೆ 20 ತಿಂಗಳು ಮೊದಲೇ ತರಂಗಾಂತರ ಹಂಚಿಕೆ ನಡೆದಿತ್ತು. ಹಗರಣಕ್ಕೆ ಕಾರಣವಾದ ಹಂಚಿಕೆ 2008ರಲ್ಲಿ ನಡೆದಿದ್ದರೆ, ನೇಮಕಾತಿ 2009ರಲ್ಲಿ ಆಗಿತ್ತು’ ಎಂದು ಅವರು ವಿವರಣೆ ನೀಡಿದ್ದಾರೆ.

ಸುಷ್ಮಾ ಪ್ರಮಾಣ ಪತ್ರ ಇಲ್ಲ: ಥಾಮಸ್ ನೇಮಕಾತಿಯ ತ್ರಿಸದಸ್ಯ ಆಯ್ಕೆ ಸಮಿತಿಯಲ್ಲಿ ‘ಪಾಮೋಲಿನ್ ಹಗರಣ ಪ್ರಸ್ತಾಪಿಸಿದ್ದೆ’ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವುದಿಲ್ಲ ಎಂದು ಸಮಿತಿ ಸದಸ್ಯರಲ್ಲೊಬ್ಬರಾಗಿದ್ದ  ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮಂಗಳವಾರ ತಿಳಿಸಿದರು.  ಈ ವಿಚಾರವನ್ನು ಆಯ್ಕೆ ಸಮಿತಿ ಚರ್ಚಿಸಿತ್ತು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಒಪ್ಪಿಕೊಂಡಿರುವುದರಿಂದ  ಪ್ರಮಾಣ ಪತ್ರ ಸಲ್ಲಿಸುವುದನ್ನು ಕೈಬಿಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT