ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳಸಾಗಣೆಯ ನೂರೆಂಟು ಅಪಾಯಗಳು

Last Updated 9 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಕೋಲಾರ: `ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆಗೆ ತಡೆ ಅಗತ್ಯ. ಈ ನಿಟ್ಟಿನಲ್ಲಿ ಸಂಬಂಧಿಕರು, ಜನಸಮುದಾಯ, ಪೊಲೀಸರು ಮತ್ತು ಸ್ವಯಂಸೇವಾ ಸಂಸ್ಥೆಗಳ ನಡುವೆ ಸಮನ್ವಯತೆ ಮೂಡಬೇಕಾಗಿದೆ ಎಂದು  ಕಾಣೆಯಾದ ಮಕ್ಕಳ ಬ್ಯೂರೋದ ರಾಜ್ಯ ಸಂಯೋಜನಾಧಿಕಾರಿ ಬಿನು ಅಭಿಪ್ರಾಯಪಟ್ಟರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನಿವಾರಣೆ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾನವ ಸಾಗಾಣಿಕೆ, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವುದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಗಂಭೀರವಾದ ಪಿಡುಗಾಗಿ ಮಾರ್ಪಟ್ಟಿದೆ. ಬಹುಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಯಾಗಿಯೂ ಈ ಸಾಗಾಣಿಕೆ ವಿಶ್ವದ ಗಮನ ಸೆಳೆಯುತ್ತಿದೆ ಎಂದರು.

ಭಾರತದಲ್ಲೂ ಕಳೆದ ಒಂದು ದಶಕದಿಂದ ಸಾಗಾಣಿಕೆ ಪ್ರಮಾಣ ಹೆಚ್ಚುತ್ತಿದೆ, ಶಾಸನಾತ್ಮಕ, ಸಾಮಾಜಿಕ, ಕಾನೂನು ನೆಲೆಯಲ್ಲಿ ಇದನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಬಹುತೇಕ ದೇಶಗಳು ಗಂಭೀರವಾಗಿ ಕೈಗೊಂಡಿವೆ ಎಂದು ತಿಳಿಸಿದರು.

ಹದಿಹರೆಯದ ಬಾಲಕರು, ಬಾಲಕಿಯರು ಮತ್ತು ಮಹಿಳೆಯರಿಗೆ ಉತ್ತಮ ಕೆಲಸ, ಸಂಬಳ, ಜೀವನದ ಭರವಸೆ ನೀಡುವ ಮೂಲಕ ದುಷ್ಕರ್ಮಿಗಳು ಅನ್ಯದೇಶಗಳಿಗೆ ಸಾಗಣೆ ಮಾಡುತ್ತಿದ್ದಾರೆ. ಒಮ್ಮೆ ಸಾಗಾಣಿಕಾ ಜಾಲಕ್ಕೆ ಸಿಕ್ಕಿಬೀಳುವ ಅಮಾಯಕರು ಮತ್ತೆ ಸಹಜ ಜೀವನ, ಸಾಮಾಜಿಕ ವಾತಾವರಣಕ್ಕೆ ಬರುವುದು ಅಪರೂಪವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಲಿ ಕೆಲಸ, ಮನೆಗೆಲಸ, ಕೃಷಿ ಕೆಲಸ, ಕಟ್ಟಡ ನಿರ್ಮಾಣ ಕೆಲಸ, ಕೈಗಾರಿಕೆಗಳಲ್ಲಿ ದುಡಿಸಿಕೊಳ್ಳುವುದಷ್ಟೇ ಅಲ್ಲದೆ ಮಕ್ಕಳನ್ನು ಭಿಕ್ಷೆ ಬೇಡಲು, ಅಂಗಾಗ ಮಾರಾಟಕ್ಕೆ ಬಳಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಮತ್ತು ಮಹಿಳೆಯರನ್ನು ಬಲವಂತದಿಂದ ವೇಶ್ಯಾವಾಟಿಕೆಗೆ ತಳ್ಳಲು, ಲೈಂಗಿಕ ಪ್ರವಾಸೋದ್ಯಮದ

ಬಲಿಪಶುವನ್ನಾಗಿಸಲು, ನೀಲಿಚಿತ್ರಗಳ ತಯಾರಿಕೆಗೆ ಬಳಸಲು ಸಾಗಾಣಿಕೆ ಮಾಡಲಾಗುತ್ತದೆ. ಸಾಗಾಣಿಕೆಗೆ ಒಳಗಾಗುವ ಯಾರಿಗೂ ತಾವು ಎಂಥ ಅಪಾಯಕಾರಿ ಜೀವನಚಕ್ರದೊಳಗೆ ಸಿಲುಕುತ್ತಿದ್ದೇವೆ ಎಂಬ ಅರಿವು ಇರುವುದೇ ಇಲ್ಲ ಎಂದರು.

ಮದುವೆಯಾಗುವುದು, ದತ್ತು ತೆಗೆದುಕೊಳ್ಳುವುದರ ಮೂಲಕವೂ ಸಾಗಾಣಿಕೆ ನಡೆಸಲಾಗುತ್ತದೆ.
ಮಕ್ಕಳ ಪೈಕಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾಗಾಣಿಕೆ ಮಿತಿ ಮೀರಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 2005ರ ವರದಿ ಪ್ರಕಾರ ದೇಶದಲ್ಲಿ 70 ಸಾವಿರದಿಂದ10 ಲಕ್ಷ ಮಹಿಳೆಯರು ಮತ್ತು ಮಕ್ಕಳು ಲೈಂಗಿಕ ವೃತ್ತಿಯಲ್ಲಿದ್ದಾರೆ.

ಅವರ ಪೈಕಿ ಶೇ 20 ಮಂದಿ 20 ವಯಸ್ಸಿನವರು, ಶೇ 15ರಷ್ಟು ಮಂದಿ ತಮ್ಮ 15ನೇ ವಯಸ್ಸಿಗಿಂತಲೂ ಮುಂಚೆಯೇ ಲೈಂಗಿಕ ವೃತ್ತಿಗೆ ಬರುತ್ತಾರೆ.  15ರಿಂದ 18ನೇ ವಯಸ್ಸಿನ ನಡುವೆ ಶೇ 25ಮಂದಿ ವೃತ್ತಿಗೆ ಸೇರುತ್ತಾರೆ ಎಂದು ವಿವರಿಸಿದರು.

ನಂತರ, ಲಿಂಗ ತಾರತಮ್ಯ ಮತ್ತು ಮಹಿಳೆಯರ ಮೇಲೆ ಅದರ ಪರಿಣಾಮಗಳು ಕುರಿತು ಜಾಲಪ್ಪ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭುದೇವ್ ಉಪನ್ಯಾಸ ನೀಡಿದರು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪಂಚಾಯತ್ ರಾಜ್ ಇಲಾಖೆಯ ಪಾತ್ರದ ಕುರಿತು ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಾಗೇಶ್ ಬಿಲ್ವ, ಸಾಗಾಣಿಕೆ ಪತ್ತೆಯಾದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಇನ್ಸ್‌ಪೆಕ್ಟರ್ ನಂದಕುಮಾರ್ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ಇಂದು
ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ, ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವಿಕೆ ತಡೆಗಟ್ಟುವಲ್ಲಿ ಮಕ್ಕಳ ಗ್ರಾಮ ಸಭೆಗಳ ಮಹತ್ವ ಮತ್ತು ಪಂಚಾಯತಿ ಅಭಿವೃದ್ಧಿಗಳ ಪಾತ್ರ ಕುರಿತು ಎಸ್.ದಿವಾಕರ್, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಲ್ಲಿ ಸ್ವಯಂ ಸೇವ ಸಂಸ್ಥೆಗಳ ಪಾತ್ರ ಕುರಿತು  ಕಾಣೆಯಾದ ಮಕ್ಕಳ ಬ್ಯೂರೋದ ಸಂಚಾಲಕ ಎಸ್.ಎಚ್.ಚೌಡಪ್ಪ, ಮಕ್ಕಳ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿ ಪಾತ್ರದ ಕುರಿತು ಅನಿತಾ ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT