ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸರಪಳಿ ನಿರ್ಮಿಸಿ ಎಸ್‌ಎಫ್‌ಐ ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಕೃತ್ಯಕ್ಕೆ ಖಂಡನೆ
Last Updated 3 ಜನವರಿ 2014, 8:24 IST
ಅಕ್ಷರ ಗಾತ್ರ

ಹಾವೇರಿ: ನಗರ ಸಮೀಪದ ನೆಲೋಗಲ್ ಬಳಿ ಮೂವರು ವ್ಯಕ್ತಿಗಳು ಸೇರಿ ವಿದ್ಯಾರ್ಥನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಕೃತ್ಯ ಹಾಗೂ ಇತ್ತೀಚಿಗೆ ಗಣಜೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಇಲ್ಲಿನ ಇಜಾರಿಲಕ್ಮಾಪುರ ದುಂಡಿಬಸವೇಶ್ವರ ವೃತ್ತದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಅತ್ಯಾಚಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ ಮಾತನಾಡಿ, ತಮ್ಮ ಮಗಳ ವಯಸ್ಸಿನ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಾಮುಕರು ಸಾಮುಹಿಕ ಅತ್ಯಾಚಾರ ನಡೆಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಹೇಳಿದರು.

ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ತಂದೆ ದೂರು ನೀಡಲು ಠಾಣೆಗೆ ಹೋದರೆ, ಪೊಲೀಸ್‌ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳದೇ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಈ ರೀತಿಯ ಬೇಜವಬ್ದಾರಿಯಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ಅಲ್ಲದೇ ಆರೋಪಿಗಳು ತಪ್ಪಿಸಿಕೊಳ್ಳಲು ಪೊಲೀಸರೇ ಅವಕಾಶ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಗೆ ಸೂಕ್ತ ಚಿಕತ್ಸೆಯನ್ನು ಒದಗಿಸ­ಬೇಕು. ಜೊತೆಗೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿದ್ದು, ವಿದ್ಯಾರ್ಥಿನಿ­ಯರಿಗೆ ಮತ್ತು ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆಯನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಘಟನೆಗಳು ವಿದ್ಯಾರ್ಥಿನಿಯರಲ್ಲಿ ಮತ್ತು ಪಾಲಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿವೆ. ಅತ್ಯಾಚಾರಿಗಳಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ ಹಿರೇಮಠ, ಪ್ರಸನ್ನ ಹಿರೇಮಠ, ಮಹ್ಮದ್‌ರಫಿಕ್ ನದಾಫ್‌, ಪ್ರತೀಕ ಗುತ್ತಲ, ಇಮಾಮ್‌ ನದಾಫ್‌, ಶೀತಲಕುಮಾರ, ವಾಣಿ, ಸುಮಾ, ಸರಸ್ವತಿ ಮಲ್ಲಾಡದ, ಪವಿತ್ರಾ ಮತ್ತಿಹಳ್ಳಿ, ಭಾಗ್ಯ ಹಾವೇರಿ, ಅನಿತಾ ದೈವಜ್ಞ, ಪೂಜಾ ಅಗಸಿಬಾನಿ, ಪೂಜಾ ಕಮತರ, ರೋಶನಿ ಅಣ್ಣಿಗೇರಿ, ಚಂದ್ರು ಶಂಕ್ರಪ್ಪನವರ, ನವೀನ ಸಾಸನೂರ, ಸುರೇಶ ಗಾಣಿಗೇರ, ಮಂಜುನಾಥ ಬಾಳಕ್ಕನವರ, ವಿನಾಯಕ ಆಲೂರ, ದರ್ಶನ ಉಪಾಸಿ, ಅನವೀನ ದೊಡ್ಡಣ್ಣವರ, ರಾಜು ಚನ್ನೂರ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT