ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ಆಯೋಗಕ್ಕೆ ಶೀಘ್ರ ಅಧ್ಯಕ್ಷರು

ನೇಮಕ ವಿಳಂಬ ಪ್ರತಿಭಟಿಸಿ ಸಚಿವ ಜಯಚಂದ್ರಗೆ ಘೇರಾವ್‌
Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು 15 ದಿನಗಳ ಒಳಗೆ ನೇಮಕ ಮಾಡಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ನಗರದ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ  ಭಾಷಣದ ವೇಳೆ ಅಡ್ಡಿಪಡಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ, ಉಭಯ ಸದನಗಳ ಸಭಾಧ್ಯಕ್ಷರು, ಪ್ರತಿಪಕ್ಷದ ನಾಯಕರು ಹಾಗೂ ಕಾನೂನು ಸಚಿವರನ್ನು ಒಳಗೊಂಡ ಸಮಿತಿಯು ಇದೇ 17 ರಂದು ಸಭೆ ಸೇರಲಿದ್ದು, ನೇಮಕಾತಿ ಪ್ರಕ್ರಿಯೆ  ನಡೆಯಲಿದೆ.  ನಂತರ ರಾಜ್ಯಪಾಲರ ಒಪ್ಪಿಗೆ ಪಡೆಯಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಏನೀ ಪ್ರತಿಭಟನೆ?: ಸಚಿವರು ಭಾಷಣ ಆರಂಭಿಸಲು ಅನುವಾಗುತ್ತಿದ್ದಂತೆ, ಸಭೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತರೆಲ್ಲರೂ ಒಗ್ಗೂಡಿ ‘ಆಯೋಗಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡಿ, ಸುಮಾರು 15 ಸಾವಿರ ಅರ್ಜಿಗಳು ಅಧ್ಯಕ್ಷರಿಲ್ಲದೇ ವಿಲೇವಾರಿ­ಯಾಗಿಲ್ಲ. ನೇಮಕ ಮಾಡದೇ ಇರುವುದು ಕೂಡ ಮಾನವ ಹಕ್ಕಿನ ಉಲ್ಲಂಘನೆ’ ಎಂದು ಘೋಷಣೆ ಕೂಗಿ,  ಕಪ್ಪು ಬಟ್ಟೆ ಪ್ರದರ್ಶಿಸಿ  ಪ್ರತಿಭಟನೆ ನಡೆಸಿದರು.

ಏಕಾಏಕಿ ಪ್ರತಿಭಟನೆ ನಡೆದಿದ್ದರಿಂದ ಕೆಲ ಕಾಲ ಗೊಂದಲಕ್ಕೆ ಒಳಗಾದಂತೆ ಕಂಡ ಸಚಿವರು, ನಂತರ ಮಾತನಾಡಿ, ‘ಅಧಿಕಾರ ಸ್ವೀಕರಿಸಿ ಆರು ತಿಂಗಳಾಗಿವೆ. ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಹಲವು ಪ್ರಯತ್ನ ಮಾಡಿದ್ದೇನೆ. ಕಣ್ಣುಮುಚ್ಚಿ ಕುಳಿತು­ಕೊಂಡಿಲ್ಲ’ ಎಂದು ತಿರುಗೇಟು ನೀಡಿದರು.

‘ಆಯೋಗವು ಕೇಂದ್ರ ಸರ್ಕಾರದ ಕಾನೂನಿನ  ವ್ಯಾಪ್ತಿಗೆ ಒಳಪಡುತ್ತದೆ. ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಮಾತ್ರ ನೇಮಕ ಮಾಡಲು ಕಾನೂನಿ­ನಲ್ಲಿ ಅವಕಾಶವಿದೆ. ಹೈಕೋರ್ಟ್ ಐದು ಮಂದಿಯ ಹೆಸರನ್ನು ಸೂಚಿಸಿತ್ತು. ಆದರೆ, ಅವರಾರು ಆಯೋಗದ ಅಧ್ಯಕ್ಷರಾಗಲು ಒಪ್ಪಿಕೊಳ್ಳಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಈ ಬಾರಿ ಮೂವರ ಹೆಸರು ಪ್ರಸ್ತಾಪಗೊಂಡಿದ್ದು, ಅಧ್ಯಕ್ಷರಾಗಲು ಸಮ್ಮತವಿರುವ ಬಗ್ಗೆ ಮಾಹಿತಿ ದೊರಕಿದೆ. ಇದೇ 17 ರಂದು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ  ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ’ ಎಂದು ತಿಳಿಸಿದರು.

‘ಗಮನಕ್ಕೆ ಬಾರದಂತೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಕಾನೂನಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ಕಾಯ್ದೆ ಕೈಬಿಡುವುದಿಲ್ಲ!
‘ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಯಾವುದೇ ಕಾರಣಕ್ಕೂ ಸರ್ಕಾರ ಈ ಕಾಯ್ದೆಯನ್ನು ಕೈಬಿಡುವುದಿಲ್ಲ’ ಎಂದು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಯ್ದೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಕಾನೂನು ಇಲಾಖೆ ತಲುಪಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT