ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ಉಲ್ಲಂಘಿಸಿದ ರಾಜ್ಯ ಸರ್ಕಾರ: ಎಂ.ಲಕ್ಷ್ಮಣ್ ಆರೋಪ

Last Updated 19 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ಚಾಮರಾಜನಗರ: `ಅನುದಾನರಹಿತ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು~ ಎಂದು ಮೈಸೂರಿನ ಪ್ರಜ್ಞಾವಂತ ಮತ್ತು ಕಳಕಳಿವುಳ್ಳ ನಾಗರಿಕರ ಸಂಘದ ಸಂಚಾಲಕ ಎಂ. ಲಕ್ಷ್ಮಣ್ ಹೇಳಿದರು.

`ಧಾರವಾಡದಲ್ಲಿ ಕಳೆದ 20ದಿನಗಳಿಂದ ಅನುದಾನರಹಿತ ಶಾಲೆಗಳ ಶಿಕ್ಷಕರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 20 ಶಿಕ್ಷಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಆದರೂ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿಲ್ಲ. ಕೂಡಲೇ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆಯೋಗ ನಿರ್ದೇಶನ ನೀಡಬೇಕು~ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

2007ರಲ್ಲಿ ಸಮ್ಮಿಶ್ರ ಸರ್ಕಾರದ ವೇಳೆ 2007-08ರವರೆಗೆ ಶಾಲೆಗಳಿಗೆ ಅನುದಾನ ವಿಸ್ತರಣೆಗೆ ಬಜೆಟ್‌ನಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಅದರನ್ವಯ ಸರ್ಕಾರ ಆದೇಶ ಹೊರಡಿಸಲಾಗಿತ್ತು. ಆದರೆ, ರಾಜ್ಯಪಾಲರ ಆಡಳಿತದಲ್ಲಿ 144ನೇ ಅಂಶದ ಬಗ್ಗೆ ಮಾರ್ಗದರ್ಶಿ ಸೂತ್ರ ರಚಿಸಲಿಲ್ಲ ಎಂದು ದೂರಿ ದರು.

ಹೀಗಾಗಿ, ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಎಲ್ಲ ಅನುದಾನ ರಹಿತ ಶಾಲೆ ಗಳನ್ನು ಕಾರ್ಯಾಧಾರಿತ ಅನು ದಾನಕ್ಕೆ ಒಳಪಡಿಸಲು ಮೀಸಲಿಟ್ಟಿದ್ದ 50 ಕೋಟಿ ರೂ ಅನುದಾನ ಬಳಸಿಕೊಂಡು 1994-95ರವರೆಗೆ ಪ್ರಾರಂಭವಾದ ಶಾಲೆಗಳಿಗೆ ಅನುದಾನ ನೀಡಲು ಈಗಿನ ಸರ್ಕಾರ 2008-09ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿತು. ಆದರೆ, 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಹಾವಳಿಯಿಂದಾಗಿ ಆರ್ಥಿಕ ಮಿತವ್ಯಯ ಆದೇಶವನ್ನು ಜಾರಿಗೊಳಿಸಿತು ಎಂದು ವಿವರಿಸಿದರು.

ಕಳೆದ ವರ್ಷ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳಿಗೆ ಅನುದಾನರಹಿತ ಶಾಲೆಯ ಶಿಕ್ಷಕರು ಈ ಸಂಬಂಧ ಮನವಿ ಸಲ್ಲಿಸಿದರು. ಒಂದು ವಾರದೊಳಗೆ ಕ್ರಮಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ. ಇದರಿಂದ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಶಾಲಾ ಆಡಳಿತ ಮಂಡಳಿಗಳು ಕೂಡ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ. ಬಿಜೆಪಿ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗದಿರುವ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರೂ ವೆಚ್ಚ ಮಾಡುತ್ತಿದೆ. ಆದರೆ, ಶಿಕ್ಷಕರಿಗೆ ಸಂಬಳ ನೀಡಲು ಹಿಂದೇಟು ಹಾಕಿದೆ. ಸಚಿವ ಕಾಗೇರಿ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದ ಅವರು, ಫೆ. 22ರಂದು ಧಾರವಾಡದಿಂದ ಬೆಂಗಳೂರಿಗೆ ಶಿಕ್ಷಕರ ಸಂಘದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ಶಿಕ್ಷಕರು ಮತ್ತು ಸಂಘ-ಸಂಸ್ಥೆ ಗಳೊಟ್ಟಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರ ಹೊರಗುತ್ತಿಗೆ ಮೂಲಕ ಮೊರಾರ್ಜಿ ದೇಸಾಯಿ ವಸತಿಶಾಲೆಗಳಿಗೆ ಹೊಸ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವುದು ಸಲ್ಲದು. 10 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವವರಿಗೆ ಮೊದಲು ಆದ್ಯತೆ ನೀಡಬೇಕು ಎಂದರು.

2011ರ ಡಿ. 8ರಿಂದ 15ರವರೆಗೆ ಪಿಯು ಕಾಲೇಜಿನ ಉಪನ್ಯಾಸಕರು ಹೋರಾಟ ನಡೆಸಿದರು. ಇದರ ಪರಿಣಾಮ ಸರ್ಕಾರ 8 ದಿನದ ಸಂಬಳ ಕಡಿತಗೊಳಿಸಿತ್ತು. ಈ ಬಗ್ಗೆ ದೂರು ನೀಡಿದಾಗ ಸಂಬಳ ಬಿಡುಗಡೆಗೊಳಿಸಲು ಸರ್ಕಾರ ಸಮ್ಮತಿಸಿತು. ಆದರೆ, 8 ದಿನದ ಕೆಲಸವನ್ನು 8 ಭಾನುವಾರ ನಿರ್ವಹಿಸಬೇಕೆಂದು ನೀಡಿರುವ ಆದೇಶ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT