ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ಯುವ ಹೋರಾಟಗಾರರು

Last Updated 14 ಡಿಸೆಂಬರ್ 2012, 8:31 IST
ಅಕ್ಷರ ಗಾತ್ರ

ಬ್ರಾಮ್ ಹನೆಕೊಮ್
 

ಜಿಂಬಾಬ್ವೆ ಯಲ್ಲಿ ಜನಿಸಿದ ಬ್ರಾಮ್ ಹನೆಕೋಮ್ ಮಾನವ ಹಕ್ಕುಗಳ ಹೋರಾಟಗಾರನಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದು ದಕ್ಷಿಣಾ ಆಫ್ರಿಕಾದಲ್ಲಿ. ದಕ್ಷಿಣಾ ಆಫ್ರಿಕಾದ ಹಿಂದುಳಿದ ಪ್ರದೇಶಗಳಲ್ಲಿ ಈಗಲೂ ಜೀವಂತವಾಗಿರುವ ವರ್ಣಭೇದ ನೀತಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಆಫ್ರಿಕಾದ ನಿರಾಶ್ರಿತರ ಹಕ್ಕುಗಳಿಗಾಗಿಯೂ ಹೋರಾಡುತ್ತಿದ್ದಾರೆ.

ಆಫ್ರಿಕಾದ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿಯೂ ದುಡಿಯುತ್ತಿದ್ದಾರೆ. 34ರ ಹರಯದ ಯುವ ಹೋರಾಟಗಾರ ಬ್ರಾಮ್ ಅಲ್ಲಿನ ಬಿಳಿಯ ಜನರ ವಿರೋಧವನ್ನು ಲೆಕ್ಕಿಸದೇ ಕರಿಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಮಾನವಹಕ್ಕುಗಳ ಪರವಾಗಿ ಮತ್ತು ಸರ್ಕಾರದ ವಿರುದ್ಧವಾಗಿ ಆಫ್ರಿಕಾದೆಲ್ಲೆಡೆ ಯುವಕರ ಜತೆಗೂಡಿ ಪ್ರತಿಭಟನೆ ಸಂಘಟಿಸಿದ್ದಕ್ಕೆ ಮೂರು ವರ್ಷಗಳ ಕಾಲ ಬ್ರಾಮ್ ಜೈಲುವಾಸ ಅನುಭವಿಸಬೇಕಾಯಿತು. ಪ್ರಸ್ತುತ ಮಾನಹಕ್ಕುಗಳ ಹೋರಾಟಗಾರರಾಗಿ ಬ್ರಾಮ್ ಸಕ್ರಿಯರಾಗಿದ್ದಾರೆ.

ಅಶೀನ್ ಮೆಟ್ಟಾಕರಾ
 

ಮ್ಯಾನ್ಮಾರ್ ಮೂಲದ ಅಶೀನ್ ಮೆಟ್ಟಾಕರಾ ಯುವ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಬೌದ್ಧ ಸನ್ಯಾಸಿ. ಬೌದ್ಧ ಧರ್ಮದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಶೀನ್ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಮಾನವಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವುದರ ಬಗ್ಗೆ ವಿಶ್ವದ ಗಮನ ಸೆಳೆದ ಪ್ರಮುಖರಲ್ಲಿ ಅಶೀನ್ ಕೂಡಾ ಒಬ್ಬರು. 34 ಹರೆಯದ ಅಶೀನ್ ಮಿಲಿಟರಿ ಸರ್ಕಾರದ ವಿರುದ್ಧ ಆಗಾಗ ಪ್ರತಿಭಟನೆಗಳನ್ನು ನಡೆಸುತ್ತಿರುತ್ತಾರೆ. ಏಷ್ಯಾ ಮತ್ತು ಯೂರೋಪ್‌ನ ವಿವಿಧ ಸರ್ಕಾರೇತರ ಸಂಸ್ಥೆಗಳು ಅಶೀನ್ ಹೋರಾಟವನ್ನು ಗಮನಿಸಿ ವಿವಿಧ ಪ್ರಶಸ್ತಿಗಳನ್ನು ನೀಡಿ ಸನ್ಮಾಸಿವೆ.


ಫ್ರೀನ್ಸ್ ಸಿಡೆಜಾ ಡ್ಲಾಮಿನಿ
 

ಫ್ರೀನ್ಸ್ ಸಿಡೆಜಾ ಅವರು ಪ್ರಸ್ತುತ ವಿಶ್ವ ಸಂಸ್ಥೆಯಲ್ಲಿ ` ಭವಿಷ್ಯದ ಅಭಿವೃದ್ಧಿಯ ಗುರಿಗಳು' ಎಂಬ ಯೋಜನೆ ಕಾರ್ಯಕ್ರಮದಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಪಂಚದ ಯಾವ ಯಾವ ದೇಶಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಕ್ಕೆ ಯಾವ  ಕಾರಣಗಳಿರಬಹುದು ಮತ್ತು ಇದಕ್ಕೆ ಪರಿಹಾರವೇನು ಎಂಬುದರ ಬಗೆಗೂ ತಜ್ಞರ ಜೊತೆ  ಸಂಶೋಧನೆ ನಡೆಸುತ್ತಿದ್ದಾರೆ. 36 ವರ್ಷದ  ಫ್ರೀನ್ಸ್ ಸಿಡೆಜಾ ಅವರ ಉತ್ಸಾಹಭರಿತ ಮಾನವ ಹಕ್ಕುಗಳ ಹೋರಾಟಕ್ಕೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ. ಎಲ್ಲಾ ದೇಶಗಳಲ್ಲೂ ಯುವ ನಾಯಕರು ಮುಖ್ಯ ವಾಹಿನಿಗೆ ಬರಬೇಕು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವಂತಾಗಬೇಕು ಎಂಬ ಕನಸನ್ನು  ಫ್ರೀನ್ಸ್ ಸಿಡೆಜಾ ಹೊತ್ತಿದ್ದಾರೆ.

ಶಿವ ನಜರ್ ಅಹಾರಿ

ಶಿವ ನಜರ್ ಅಹಾರಿ ಇರಾನ್‌ನ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ. ಇರಾನ್‌ನಲ್ಲಿ ಕಳೆದೆರಡು ದಶಕಗಳಿಂದ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. 34ವರ್ಷದ ಅಹರಿ ವಿದ್ಯಾರ್ಥಿಯಾಗಿದ್ದಾಗಲೇ ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆ ಎಂಬ ಸಂಘಟನೆ ಸೇರಿಕೊಂಡು ಅವಿರತವಾಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಮೂಲಭೂತವಾದಿ ನಾಯಕರ ವಿರೋಧ ಕಟ್ಟಿಕೊಂಡು ಹಲವು ಬಾರಿ ಜೈಲು ವಾಸ ಅನುಭವಿಸಿದ್ದಾರೆ. `ಮಾನವ ಹಕ್ಕುಗಳ ವರದಿಗಾರರ ಸಮಿತಿ' ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆ ಘಟನೆಗಳನ್ನು ವರದಿ ಮಾಡುವ ಮೂಲಕ ವಿಶ್ವದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.


ಜಸ್ಟೀನಾ ಮುಕ್ಕೊ
 

ಜಸ್ಟೀನಾ ಮುಕ್ಕೊ ಜಿಂಬಾಬ್ವೆಯ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ. ಕಳೆದ ಎರಡು ದಶಕಗಳಿಂದಲೂ ಮುಕ್ಕೋ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

ಜಿಂಬಾಬ್ವೆಯ ಶಾಂತಿ ಪಾಲನಾ ಸಂಸ್ಥೆಯ ನಿರ್ದೇಶಕಿಯಾಗಿಯೂ ಮುಕ್ಕೋ ಕೆಲಸ ಮಾಡುತ್ತಿದ್ದಾರೆ. 90ರ ದಶಕದಲ್ಲಿ ಜಿಂಬಾಬ್ವೆ ಸರ್ಕಾರ  ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದು, ನಾಗರಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಕುಪಿತಗೊಂಡ ಸರ್ಕಾರ ಮುಕ್ಕೋ ಅವರನ್ನು ನಾಲ್ಕು ವರ್ಷಗಳ ಕಾಲ ಜೈಲಿಗೆ ಹಾಕಿತ್ತು.   

40 ಆಸುಪಾಸಿನಲ್ಲಿರುವ ಮುಕ್ಕೋ ಅವರ ನಿರ್ಭೀತ ಸೇವೆಯನ್ನು ಮನ್ನಿಸಿ ಹಲವಾರು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಗೌರವಿಸಿವೆ. ಅಮೆರಿಕ ಸರ್ಕಾರ ಮುಕ್ಕೋ ಅವರಿಗೆ 2010ನೇ ಸಾಲಿನ `ಮಹಿಳಾ ಶೌರ್ಯ' ಪ್ರಶಸ್ತಿ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT