ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಗುಣಕ್ಕೆ ಬದ್ಧರಾಗಿ: ಜ್ಯೋತಿ ಬೆಳಗಿಸಿದ ನಟಿ ಇನೊ ಮೆನೆಗಾಕಿ ನುಡಿ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಅಥೆನ್ಸ್ (ಐಎಎನ್‌ಎಸ್): `ಮಾನವೀಯ ಗುಣಕ್ಕೆ ಬದ್ಧರಾಗಿ~ ಎಂದು ಒಲಿಂಪಿಯಾದಲ್ಲಿ ಎರಡು ತಿಂಗಳ ಹಿಂದೆ ಕ್ರೀಡಾ ಜ್ಯೊತಿ ಬೆಳಗಿಸಿದ್ದ ಗ್ರೀಕ್ ನಟಿ ಇನೊ ಮೆನೆಗಾಕಿ ಸಂದೇಶ ನೀಡಿದ್ದಾರೆ.

ಜುಲೈ 27ರಂದು ಲಂಡನ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟ ಆರಂಭವನ್ನು ಸಂಕೇತಿಸುವ ಕ್ರೀಡಾಜ್ಯೋತಿ ಮೊದಲು ಬೆಳಗಿದ್ದು ಒಲಿಂಪಿಯಾದಲ್ಲಿ. ಗ್ರೀಕ್ ನಟಿ ಇನೊ ಮೆನೆಗಾಕಿ ಅವರು ಮುಖ್ಯ ಅರ್ಚಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಕಳೆದ ಮೇ 10ರಂದು ಸೂರ್ಯ ಕಿರಣಗಳನ್ನು ಪೀನಮಸೂರದಲ್ಲಿ ಹಿಡಿದು ಜ್ಯೋತಿ ಬೆಳಗಿಸಿದ್ದರು.

ಅಲ್ಲಿಂದ ಪಯಣ ಬೆಳೆಸಿದ ಕ್ರೀಡಾ ಜ್ಯೋತಿಯು ಇಂಗ್ಲೆಂಡ್‌ನಲ್ಲಿ ರಿಲೇಯಲ್ಲಿ ಸಾಗಿ ಈಗ ಲಂಡನ್ ಸಮೀಪಿಸಿದೆ. ಇನ್ನೇನು ಒಲಿಂಪಿಕ್ ಆರಂಭದ ದಿನ ಹತ್ತಿರ ಬಂತು. ಸಂಭ್ರಮವೂ ಹೆಚ್ಚಿದೆ. ಇಂಥದೊಂದು ಉತ್ಸಾಹದ ಕ್ರೀಡಾಕೂಟಕ್ಕೆ ವಿಶಿಷ್ಟ ಸಂಕೇತವಾಗಿರುವ ಜ್ಯೋತಿಯನ್ನು ಹೊತ್ತಿಸಿದ ಮೆನೆಗಾಕಿಗೆ ಅದೊಂದು ಎಂದೂ ಮರೆಯಲಾಗದ ಅದ್ಭುತ ಕ್ಷಣ. ವಿಶ್ವ ಮಾಧ್ಯಮಗಳಲ್ಲಿ ಪ್ರಸಾರವಾದ ತಮ್ಮ ಚಿತ್ರವನ್ನು ಈಗಲೂ ಸಂತಸದಿಂದ ನೋಡುತ್ತಾರೆ.

ಅಂತರ್‌ಜಾಲದಲ್ಲಿ ಹರಡಿಕೊಂಡಿರುವ ಕ್ರೀಡಾ ಜ್ಯೋತಿ ಬೆಳಗುವ ಸಮಾರಂಭದ ಕ್ಷಣಗಳ ಚಿತ್ರಗಳು ಅವರಿಗೆ ಮುದ ನೀಡಿವೆ. ಪವಿತ್ರ ಜ್ಯೋತಿಯನ್ನು ಬೆಳಗಿಸುವ ಪಾತ್ರ ನಿಭಾಯಿಸಿದ ಈ ನಟಿ ಮೆನೆಗಾಕಿ ಅವರು ಸುದ್ದಿ ಸಂಸ್ಥೆಯೊಂದಿಗೆ ಆಡಿದ ಮಾತುಗಳು...

- ಎಲ್ಲರೂ ಮಾನವೀಯ ಗುಣಕ್ಕೆ ಬದ್ಧರಾಗಿ ನಡೆಯಬೇಕು. ಗ್ರೀಕ್ ದೇವತೆಗಳನ್ನು ಪ್ರಾರ್ಥಿಸಿ ಬೆಳಗಿಸಿದ ಪವಿತ್ರ ಜ್ಯೋತಿಯು ಸಾರುವ ಸಂದೇಶವೇ ಅದು. ಅಥ್ಲೀಟ್‌ಗಳಿಗೆ ಉತ್ತಮ ಪೈಪೋಟಿ ನಡೆಸುವ ಶಕ್ತಿ ಸಿಗಬೇಕು ಹಾಗೂ ಕ್ರೀಡೆಯ ಜೊತೆಗೆ ಶಾಂತಿ ಸಂದೇಶವು ವಿಶ್ವವ್ಯಾಪಿ ಆಗಬೇಕು.

ಒಲಿಂಪಿಕ್ ಚಳವಳಿಯ ಮೂಲ ಉದ್ದೇಶಗಳನ್ನು ಮರೆಯಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆ ಭವ್ಯವಾಗಿ ಬೆಳೆದು ನಿಲ್ಲಬೇಕು. ಪ್ರತಿಯೊಬ್ಬರು ಸ್ವಂತಿಕೆಯನ್ನು ಕಾಯ್ದುಕೊಳ್ಳುವ ಜೊತೆಗೆ ಒಂದೇ ವಿಶ್ವ ತತ್ವವನ್ನು ಪಾಲಿಸಿದರೆ ಎಲ್ಲ ಕಡೆಗೂ ಶಾಂತಿ ಹರಡುತ್ತದೆ.

ಕ್ರೀಡಾ ಜ್ಯೋತಿ ಬೆಳಗಿಸುವ ಸಮಾರಂಭವು ಸಾಂಪ್ರದಾಯಿಕವಾಗಿ ನಡೆಯುವಂಥದ್ದು. ಅಲ್ಲಿ ನನಗೆ ನೀಡಿದ ಸಾಲುಗಳನ್ನು ಮಾತ್ರ ಉಚ್ಛರಿಸಿದೆ. ಆದರೆ ಈಗ ನನಗೆ ಅನಿಸಿದ್ದನ್ನು ನಿಮ್ಮೆದುರು ಹೇಳುತ್ತಿದ್ದೇನೆ. ನಾನೂ ಕ್ರೀಡಾ ಪ್ರಿಯಳಾಗಿದ್ದೇನೆ. ಅದರಲ್ಲಿಯೂ ಒಲಿಂಪಿಕ್ ಕ್ರೀಡೆಯ ಮೌಲ್ಯಗಳಲ್ಲಿ ನನಗೆ ಬಲವಾದ ನಂಬಿಕೆ. ಕ್ರೀಡೆ ಎಂದರೆ ದೇಹ ಮತ್ತು ಮನಸ್ಸನ್ನು ತರಬೇತುಗೊಳಿಸುವುದು. ಅದೇ ಜೀವನೋತ್ಸಾಹಕ್ಕೆ ಕಾರಣ.

ಗ್ರೀಕ್ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ವೃತ್ತಿಪರ ನಟಿಯಾಗಿ ಬೆಳೆದಿದ್ದು ಜೀವನದ ಹಾದಿ. ಮೊದಲ ಬಾರಿಗೆ ಒಲಿಂಪಿಯಾದಲ್ಲಿ ಜ್ಯೊತಿ ಬೆಳಗಿಸುವ ಸಮಾರಂಭದಲ್ಲಿ ಪಾಲ್ಗೊಂಡಿದ್ದು 1996ರಲ್ಲಿ ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಇದರ ಅಂಗವಾಗಿ ಉಳಿದಿದ್ದು ಹೆಮ್ಮೆ.

ನನಗೆ ಕ್ರೀಡೆಯ ಜೊತೆಗಿನ ತತ್ವಜ್ಞಾನ ವಿಶಿಷ್ಟವಾಗಿ ಕಾಣಿಸುತ್ತದೆ. ಮೊದಲಿಗರಾಗಬೇಕು, ಗುರಿ ಮುಟ್ಟಬೇಕು. ಇದು ಕೇವಲ ಕ್ರೀಡೆಗೆ ಮಾತ್ರ ಸೀಮಿತವಲ್ಲ. ನಿತ್ಯ ಚಟುವಟಿಕೆಗಳಾದ ಶಿಕ್ಷಣ, ಕೆಲಸ ಎಲ್ಲದಕ್ಕೂ ಅನ್ವಯವಾಗುತ್ತದೆ. ಸಮಾನರ ನಡುವೆ ಮೊದಲ ಸ್ಥಾನದಲ್ಲಿ ನಿಲ್ಲುವುದೇ ನಂಬಿರುವ ತತ್ವ.

2008ರ ಬೀಜಿಂಗ್ ಒಲಿಂಪಿಕ್‌ಗಾಗಿ ಒಲಿಂಪಿಯಾದಲ್ಲಿ ನಡೆದಿದ್ದ ಸಮಾರಂಭದಲ್ಲಿ ನಿರ್ವಹಿಸಿದ್ದು ಎಸ್ಟಿಯಾಡಾ ಪಾತ್ರ. ಕ್ರೀಡಾ ಜ್ಯೋತಿಯನ್ನು ಪುರಾತನ ಕ್ರೀಡಾಂಗಣದಿಂದ ಮಡಿಕೆಯಲ್ಲಿ ಹಿಡಿದು ತರುವ ಜವಾಬ್ದಾರಿ ಅದು. ಮುಖ್ಯ ಅರ್ಚಕಿಯ ಪಾತ್ರಕ್ಕೆ ಬಡ್ತಿ ಸಿಕ್ಕಿದ್ದು 2010ರ ಸಿಂಗಪುರ ಯುವ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ. ಲಂಡನ್ ಒಲಿಂಪಿಕ್‌ಗಾಗಿ ಜ್ಯೋತಿ ಬೆಳಗಿಸಿದಾಗಲೂ ಅದೇ ಹೊಣೆ. ಇದು ಹೆಮ್ಮೆ ಹಾಗೂ ನನಗೆ ಸಿಕ್ಕಿರುವ ದೊಡ್ಡ ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT