ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೂರ್ತಿ ನೇತಾಜಿ

ನೇತಾಜಿ ಸುಭಾಷ್ ಚಂದ್ರ ಬೋಸ್
Last Updated 23 ಜನವರಿ 2020, 5:39 IST
ಅಕ್ಷರ ಗಾತ್ರ

1912. ಆಗಿನ್ನೂ ಸುಭಾಷ್‌ಗೆ ಹದಿನೈದರ ಹರೆಯ. ಆಗ ಅವರು ಹೀಗೊಂದು ಪತ್ರ ಬರೆದರು: ‘ಅಮ್ಮ, ತಾಯಿ ಭಾರತಿಗೆ ಈಗ ಒಬ್ಬ ನಿಸ್ವಾರ್ಥಿ ಮಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಮ್ಮ ಮಾತೃಭೂಮಿಗೆ ಅಷ್ಟೂ ಅದೃಷ್ಟವಿಲ್ಲವೇ? ಭಾರತಮಾತೆಯ ಯಾವೊಬ್ಬ ಮಗನೂ ತನ್ನ ಹಿತಾಸಕ್ತಿ, ಸ್ವಾರ್ಥ ಚಿಂತನೆಯನ್ನು ಬಿಟ್ಟು ತನ್ನ ಇಡೀ ಬದುಕನ್ನು ತಾಯಿಗಾಗಿ ಮುಡಿಪಿಡಲಾರನೇ? ಅಮ್ಮ, ನಿನ್ನ ಈ ಮಗ ಅದಕ್ಕೆ ಸಿದ್ಧನಿರುವನೇ? ಇತರರ ಸೇವೆಯಲ್ಲಿ ಬದುಕುವುದೇ ಶ್ರೇಷ್ಠ ಜೀವನವಲ್ಲವೇ?’

ತನಗೆ ಅರಿವೇ ಇಲ್ಲದಂತೆ ಬಾಲಕ ಸುಭಾಷ್ ಚಂದ್ರ ಬೋಸ್, ಮುಂದೆ ತಾನು ಏನಾಗಬೇಕು ಎಂದುಕೊಂಡಿದ್ದನೋ ಅದನ್ನು ಆ ಪತ್ರದಲ್ಲಿ ಉಲ್ಲೇಖಿಸಿದ್ದ. ತನ್ನ ಇಡೀ ಬದುಕನ್ನು ದೇಶಕ್ಕಾಗಿ ಮುಡಿಪಿಡುವ ಭಾರತಮಾತೆಯ ನಿಜವಾದ ಮಗನೇ ಅವನಾಗಿದ್ದ.

1897ರ ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಹುಟ್ಟಿದ್ದು ದೊಡ್ಡ ಕುಟುಂಬದಲ್ಲಿ. 14 ಮಕ್ಕಳಲ್ಲಿ ಅವರು ಒಂಬತ್ತನೆಯವರು. ತಂದೆ ಜಾನಕೀನಾಥ್ ಬೋಸ್ ಕಟಕ್‌ನ ಯಶಸ್ವಿ ವಕೀಲ ಹಾಗೂ ಬಂಗಾಳ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯ. ಚಿಕ್ಕಪ್ಪ, ದೊಡ್ಡಪ್ಪಂದಿರು, ಸಂಬಂಧಿಕರು ಹಾಗೂ ಅನೇಕ ಕೆಲಸಗಾರರಿಂದ ಗಿಜಿಗುಡುತ್ತಿದ್ದ ಮನೆಯಲ್ಲಿ ಸುಭಾಷ್ ಬೆಳೆದದ್ದು. ಅವರು ಅಂತರ್ಮುಖಿ ಸ್ವಭಾವದವರಾಗಿದ್ದರು. ‘ಯಾರೂ ಮಹತ್ವವನ್ನೇ ಕೊಡದ ಜೀವ ನಾನು ಎನಿಸುತ್ತಿತ್ತು. ಅಪ್ಪ-ಅಮ್ಮ ನನ್ನನ್ನು ಅತಿ ಭೀತಿಯಲ್ಲಿರುವಂತೆಯೇ ಬೆಳೆಸಿದರು. ಅಷ್ಟೊಂದು ಅಣ್ಣಂದಿರು, ಅಕ್ಕಂದಿರು ಇದ್ದ ವಾತಾವರಣದಲ್ಲಿ ನನ್ನ ಕಡೆ ಯಾರೂ ಲಕ್ಷ್ಯ ಕೊಡುತ್ತಿರಲಿಲ್ಲ ಎನಿಸುತ್ತಿತ್ತು. ನಾನು ಭಿನ್ನ ರೀತಿಯಲ್ಲಿ ಇರಬೇಕು ಎಂದುಕೊಂಡೇ ಬದುಕಲು ಪ್ರಾರಂಭಿಸಿದೆ’ ಎಂದು ಸುಭಾಷ್ ತನ್ನ ಅಪೂರ್ಣ ಆತ್ಮಚರಿತ್ರೆ ‘ಆ್ಯನ್ ಇಂಡಿಯನ್ ಪಿಲ್‌ಗ್ರಿಮ್‌’ನಲ್ಲಿ ಬರೆದಿದ್ದಾರೆ.

ಕೆಲಸ ಹಾಗೂ ಅಷ್ಟೊಂದು ಜನರ ಉಸಾಬರಿಯಲ್ಲಿ ಕಳೆದುಹೋಗಿದ್ದ ಅಪ್ಪ-ಅಮ್ಮನ ಗಮನವನ್ನು ಹೇಗಾದರೂ ತನ್ನತ್ತ ಸೆಳೆಯಬೇಕು ಎಂದುಕೊಂಡೇ ಸುಭಾಷ್ ಬೆಳೆದರು. ಕೌಟುಂಬಿಕ ವಾತಾವರಣವು ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಲು ಕಾರಣವಾಯಿತಾದರೂ, ಸಂಕೋಚದ ಭಾವನೆಯಿಂದ ಹೊರತರಲು ಸಹಕಾರಿಯಾಗಲಿಲ್ಲ. ‘ಎಷ್ಟೋ ಯುವಕರಲ್ಲಿ ಆತ್ಮವಿಶ್ವಾಸ ಹಾಗೂ ಹೆಮ್ಮೆಯ ಭಾವ ಮೂಡಿಸುತ್ತಿದ್ದ, ಮುದ್ದು ಮಾಡಿ ಬೆಳೆಸುತ್ತಿದ್ದಂಥ ಐಷಾರಾಮ, ಅದ್ದೂರಿತನವೇನೂ ನಮ್ಮ ಮನೆಯಲ್ಲಿ ಇರಲಿಲ್ಲ. ನನಗೆ ವೈಯಕ್ತಿಕವಾಗಿ ಬಡತನದ ಅನುಭವವೂ ಇರಲಿಲ್ಲ ಅಥವಾ ಸ್ವಾರ್ಥ, ದುರಾಸೆಯ ಭಾವ ಮೂಡಿಸುವ ವಾತಾವರಣವೂ ಅಲ್ಲಿ ಇರಲಿಲ್ಲ’ ಎಂದು ಸುಭಾಷ್ ಬರೆದುಕೊಂಡಿದ್ದಾರೆ. ಬೋಸ್ ಅವರ ವಂಶವು ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ದೇಶದ ರಾಜಕೀಯದಲ್ಲಿ ಪ್ರತಿಷ್ಠಿತ ಸ್ಥಾನಮಾನ ಪಡೆದಿದೆ.

ಇಂಗ್ಲಿಷ್ ಕಲಿಕೆಗೆಂದು ಐದು ವರ್ಷದ ಬಾಲಕ ಸುಭಾಷ್‌ನನ್ನು ಮನೆಯವರು ಮಿಷನರಿ ಶಾಲೆಗೆ ಸೇರಿಸಿದರು. ‘ಸ–ರೆ–ಗ–ಮ’ಕ್ಕೆ ಬದಲಾಗಿ ‘ಡೊ–ರೆ–ಮಿ–ಫಾ’ ಕಲಿತ ಕೆಲವೇ ಭಾರತೀಯರು ಆಗ ಇದ್ದರು. ‘ಕಲಿತ ಕಥೆಗಳೆಲ್ಲಾ ಇಂಗ್ಲಿಷ್ ಇತಿಹಾಸದವು, ಭಾರತೀಯ ಮೂಲದ ಏನನ್ನೂ ಕಲಿಯಲಿಲ್ಲ. ಭಾರತದ ಯಾವ ಭಾಷೆಯನ್ನೂ ಕಲಿಸಲಿಲ್ಲ. ಆದ್ದರಿಂದ ಭಾರತದ ಶಾಲೆ ಸೇರುವವರೆಗೆ ನಮ್ಮ ಮಾತೃಭಾಷೆಯನ್ನು ಸಂಪೂರ್ಣ ನಿರ್ಲಕ್ಷಿಸಿಬಿಟ್ಟೆವು’ ಎಂದು ಸುಭಾಷ್ ಇಂಗ್ಲಿಷ್‌ ಕಲಿಕೆಯಿಂದ ಕಳೆದುಕೊಂಡಿದ್ದೇನು ಎಂದು ಬರೆದುಕೊಂಡಿದ್ದಾರೆ.

ಚಿಕ್ಕಂದಿನಲ್ಲಿ ಸುಭಾಷ್‌ ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದರು. ಇತರರ ಜೊತೆಗೆ ಹೋಲಿಸಿಕೊಂಡು, ಕೊರಗುತ್ತಿದ್ದುದೂ ಉಂಟು. ‘ಬೇರೆಯವರನ್ನು ನೋಡುತ್ತಾ, ನನ್ನನ್ನು ನಾನೇ ನಿಕೃಷ್ಟವಾಗಿ ಪರಿಗಣಿಸುವ ಚಟ ಬಹುಶಃ ನನಗೆ ಅಂಟಿಕೊಂಡಿತ್ತು. ಭಾರತದ ವಾತಾವರಣ, ಇಲ್ಲಿನ ಅಗತ್ಯಗಳು, ಇಲ್ಲಿನ ಇತಿಹಾಸ ಹಾಗೂ ಸಮಾಜ ವಿಜ್ಞಾನವನ್ನು ತಿಳಿಸದ ಶಿಕ್ಷಣ ವ್ಯವಸ್ಥೆಯು ವಿವೇಚನೆ ಮೂಡಿಸದ ಅವೈಜ್ಞಾನಿಕ ಕ್ರಮ. ಹರೆಯದಲ್ಲಿ ನಮ್ಮ ಸಂಸ್ಕೃತಿ ಬೆರೆತ ಶಿಕ್ಷಣವನ್ನು ಕಲಿಸಬೇಕೇ ವಿನಾ ಇಂಗ್ಲಿಷ್ ಶಿಕ್ಷಣ ಸಲ್ಲದು’ ಎಂದೇ ಅವರು ಭಾವಿಸಿದ್ದರು.

ಸುಭಾಷ್ ನಾಲ್ಕನೇ ತರಗತಿಯಲ್ಲಿ ಇದ್ದಾಗ ಅವರ ಮೇಲೆ ಶಾಶ್ವತ ಪರಿಣಾಮ ಬೀರಿದವರು ಆಗ ಮುಖ್ಯ ಶಿಕ್ಷಕರಾಗಿದ್ದ ಬಾಬು ಬೆನಿ ಮಾಧವ್ ದಾಸ್. ‘ಪ್ರಕೃತಿಗೆ ನಿನ್ನನ್ನು ನೀನು ಸಂಪೂರ್ಣವಾಗಿ ಅರ್ಪಿಸಿಕೋ’ ಎಂಬ ಪಾಠವನ್ನು ಸುಭಾಷ್‌ಗೆ ಅವರು ಮಾಡಿದರು. ಏಕಾಂತದಲ್ಲಿ ಸುಭಾಷ್ ಈ ಪಾಠವನ್ನೇ ಧ್ಯಾನಸ್ಥ ಸ್ಥಿತಿಯಲ್ಲಿ ಮನನ ಮಾಡಿಕೊಳ್ಳುತ್ತಿದ್ದರೋ ಏನೋ?

ತರುಣ ಸುಭಾಷ್ ತನ್ನೊಳಗಿನ ಸಂಕೋಚವನ್ನು ಮುರಿದು, ಮನದಾಳದಲ್ಲಿ ನಡೆಯುತ್ತಿದ್ದ ಹೊಯ್ದಾಟದಿಂದ ಹೊರಬಂದು, ಅಸ್ಪಷ್ಟ ಗುರಿಯತ್ತ ಕಣ್ಣುನೆಟ್ಟರು. ಸ್ವಾಮಿ ವಿವೇಕಾನಂದರ ಚಿಂತನೆ ಬದುಕನ್ನು ಪ್ರವೇಶಿಸಿದಾಗ ಸುಭಾಷ್ ಚಂದ್ರ ಅವರಿಗಿನ್ನೂ ಹದಿನೈದರ ಹರೆಯ. ವಿವೇಕಾನಂದರು ಹುಡುಗನ ಮನಸ್ಸಿನಲ್ಲಿ ಛಾಪು ಮೂಡಿಸಿದರು. ತಮ್ಮ ಸಂಬಂಧಿಕರ ಮನೆಯಲ್ಲಿ ವಿವೇಕಾನಂದರ ಬರಹಗಳನ್ನು ಸುಭಾಷ್ ಮೊದಲಿಗೆ ಓದಿದ್ದು. ಅದು ಮನದ ವ್ಯಾಕುಲವನ್ನು ನೀಗಿತು. ಕೆಲವು ಪುಟಗಳನ್ನು ಓದುವಷ್ಟರಲ್ಲೇ ತನಗೆ ಏನು ಬೇಕಾಗಿತ್ತೋ ಅದು ಸಿಕ್ಕಿತೆಂಬ ಅನುಭವ ಅವರಿಗಾಗಿತ್ತು. ‘ನಾನು ಪುಸ್ತಕಗಳನ್ನು ಕಡತಂದು, ಮನೆಯಲ್ಲಿ ಅವುಗಳನ್ನು ಓದಿ ಸುಖಿಸುತ್ತಿದ್ದೆ. ಆಗ ರೋಮಾಂಚನ ಆಗುತ್ತಿತ್ತು’ ಎಂದು ಸುಭಾಷ್ ಬರೆದುಕೊಂಡಿದ್ದಾರೆ.

ಆಮೇಲೆ ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಓದತೊಡಗಿದರು. ಈ ಇಬ್ಬರು ಶ್ರೇಷ್ಠರ ಅಧ್ಯಾತ್ಮ ಚಿಂತನೆಗಳ ಓದಿನಲ್ಲೇ ಮುಳುಗುವಂಥ ಸ್ನೇಹಿತರ ಬಳಗವನ್ನು ಸುಭಾಷ್ ನಿರ್ಮಿಸಿಕೊಂಡರು. ಇದು ಸುಭಾಷ್ ಅವರಲ್ಲಿನ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿದ್ದೇ ಅಲ್ಲದೆ, ಮನೆ ಹಾಗೂ ಔಪಚಾರಿಕ ಓದನ್ನು ನಿರ್ಲಕ್ಷಿಸಿ ಒಬ್ಬ ಗುರುವನ್ನು ಹುಡುಕಲಿಕ್ಕೆ ಅವರನ್ನು ಪ್ರೇರೇಪಿಸಿತು.

ಇತರೆ ಹುಡುಗರ ಸಹವಾಸ ಮಾಡಿದ್ದ ಸುಭಾಷ್ ಪದೇಪದೇ ಮನೆಯಿಂದ ಹೊರಗೆ ಹೋಗುತ್ತಿದ್ದುದು ಅವರ ಅಪ್ಪ-ಅಮ್ಮನಿಗೆ ಇಷ್ಟವಿರಲಿಲ್ಲ. ‘ನನ್ನನ್ನು ಪ್ರಶ್ನಿಸಿದರು. ಸಮಾಧಾನದಿಂದ ತಿಳಿಹೇಳಿ, ಎಚ್ಚರಿಸಿದರು. ಕೊನೆಗೆ ಖಂಡಿಸಿದರು. ನಾನು ತೀವ್ರವಾಗಿ ಬದಲಾಗುತ್ತಿದ್ದೆ. ನನ್ನ ಎದುರು ಹೊಸ ಮಾದರಿ ಇತ್ತು. ಅದು ನನ್ನ ಆತ್ಮವನ್ನು ಉದ್ದೀಪಿಸಿತ್ತು. ಲೌಕಿಕ ಬಯಕೆಗಳಿಂದ ಕಳಚಿಕೊಳ್ಳುವ ಮನಸ್ಸಾಗಿತ್ತು.

ಅಪ್ಪ-ಅಮ್ಮ ನನ್ನನ್ನು ಒತ್ತಾಯಿಸಿದಷ್ಟೂ ನಾನು ಬಂಡೇಳುತ್ತಿದ್ದೆ. ತಮ್ಮೆಲ್ಲಾ ಯತ್ನಗಳು ವಿಫಲವಾದ ನಂತರ ಅಮ್ಮ ಅಳತೊಡಗಿದಳು. ನಾನು ಕಠೋರ ಹೃದಯಿಯಾಗಿದ್ದೆ. ಅದು ವಿಲಕ್ಷಣ ಎನಿಸುವ ಮಟ್ಟಕ್ಕೆ ಹೋಗಿತ್ತು. ನನ್ನದೇ ದಾರಿಯಲ್ಲಿ ಸಾಗಲು ದೃಢನಿಶ್ಚಯ ಮಾಡಿದ್ದೆ. ಈ ರೀತಿ ಅಪ್ಪ-ಅಮ್ಮನನ್ನು ಧಿಕ್ಕರಿಸುವುದು ನನ್ನ ಸ್ವಭಾವಕ್ಕೆ ವಿರುದ್ಧವಾಗಿತ್ತು. ಅವರಿಗೆ ನೋವು ಕೊಡುವುದು ಇಷ್ಟವಿರಲಿಲ್ಲ. ಆದರೂ ತಪ್ಪಿಸಿಕೊಳ್ಳಲಾರದಂಥ ಅಲೆಯೊಂದು ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು. ಆಗ ನನಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸವಷ್ಟೇ ಮುಖ್ಯವಾಗಿತ್ತು’ ಎಂದು ಸುಭಾಷ್ ಬರೆದಿದ್ದಾರೆ.

ಹೂಗ್ಲಿ ನದಿ ದಂಡೆಯಲ್ಲಿ ಸನ್ಯಾಸಿಗಳ ನಡುವೆ ಕಾವಿ ನಿಲುವಂಗಿ ತೊಟ್ಟು ಸುಭಾಷ್ ಕೆಲವು ದಿನಗಳನ್ನು ಕಳೆದರು. ತಮ್ಮ ಸ್ನೇಹಿತರ ಜೊತೆ ಸೇರಿ, ಮನೆಮನೆಗಳಿಗೆ ಹೋಗಿ ಭಿಕ್ಷೆ ಬೇಡಿ ಅವರು ಬಡವರ ಹೊಟ್ಟೆ ತುಂಬಿಸಿದ್ದನ್ನು ತನ್ನ ಮನೆಯವರಿಂದ ಗುಟ್ಟಾಗಿಯೇ ಇಟ್ಟರು.

ಯೋಗ ಹಾಗೂ ಧ್ಯಾನದತ್ತ ಸುಭಾಷ್ ಆಕರ್ಷಿತರಾದರು. ಯಾರಿಗೂ ಗೊತ್ತಾಗದೇ ಇರಲಿ ಎಂದು ಕತ್ತಲ ಕೋಣೆಯಲ್ಲಿ ಅವರು ಯೋಗಾಭ್ಯಾಸ ಮಾಡುತ್ತಿದ್ದರು. ‘ಒಂದು ರಾತ್ರಿ ನಾನು ಗುಟ್ಟಾಗಿ ಧ್ಯಾನ ಮಾಡುತ್ತಿದ್ದಾಗ, ಹಾಸಿಗೆ ಸರಿಪಡಿಸಲೆಂದು ಬಂದ ಕೆಲಸದವರು ಎಡವಿ ನನ್ನ ಮೇಲೆ ಬಿದ್ದರು. ಯಾವುದೋ ಮಾಂಸದ ಗುಡ್ಡೆಗೆ ಗುದ್ದಿದಂತೆ ಸೋಜಿಗದಿಂದ ನಿಂತಿದ್ದ ಅವಳ ಸ್ಥಿತಿ ಹೇಗಾಗಿತ್ತು ಎನ್ನುವುದನ್ನು ಊಹಿಸಿಕೊಳ್ಳಿ’ ಎಂದು ಕೂಡ ಸುಭಾಷ್ ಬರೆದಿದ್ದಾರೆ.

ಬಿಳಿ ಭಿತ್ತಿಯ ಮೇಲೆ ಕಪ್ಪು ಬಣ್ಣದ ವೃತ್ತ ಬರೆಯುತ್ತಾ, ಅದನ್ನು ದಿಟ್ಟಿಸಿ ನೋಡುತ್ತಲೇ ಗಮನ ಕೇಂದ್ರೀಕರಿಸುವುದನ್ನು ನೇತಾಜಿ ಅಭ್ಯಾಸ ಮಾಡಿಕೊಂಡರು. ಎವೆಯಿಕ್ಕದೆ ನೀಲಾಕಾಶ ನೋಡುವುದು, ಅತಿ ಹೆಚ್ಚು ಉಷ್ಣ ಹಾಗೂ ಶೀತ ಸಹಿಸಿಕೊಳ್ಳುವಂತೆ ದೇಹ ದಂಡಿಸುವುದು... ಹೀಗೆ ಬಗೆಬಗೆಯಾಗಿ ಸುಭಾಷ್‌ ತಯಾರಾದರು. ಮಾಂಸಾಹಾರ ತಿನ್ನುವ ಕುಟುಂಬದವರಾದ ಅವರು, ಪೂರ್ಣಪ್ರಮಾಣದಲ್ಲಿ ಸಸ್ಯಾಹಾರಿಯಾಗಿ ಬದಲಾದರು.

‘ಶಾರದಾ ಎಂಬ ಹಿರಿಯ ಕೆಲಸದಾಕೆಗೆ ಸುಭಾಷ್‌ ಮೇಲೆ ವಿಶೇಷ ಅಕ್ಕರೆ. ಅವರಿಗೆಂದೇ ಪ್ರತ್ಯೇಕ ಲೋಟದಲ್ಲಿ ರುಚಿಕಟ್ಟಾದ ಪಾಯಸವನ್ನು ಎತ್ತಿಡುತ್ತಿದ್ದರು. ಒಮ್ಮೊಮ್ಮೆ ಅವರ ಚಿಕ್ಕಪ್ಪಂದಿರಲ್ಲಿ ಯಾರಾದರೊಬ್ಬರು ಚೇಷ್ಟೆಗೆ ಅದನ್ನು ಕದ್ದು ಕುಡಿದುಬಿಡುತ್ತಿದ್ದರು. ಆಗ ಶಾರದಾಗೆ ಇನ್ನಿಲ್ಲದ ಕೋಪ ಬರುತ್ತಿತ್ತು’ ಎಂದು ಸುಭಾಷ್‌ ಅವರಣ್ಣ ಶರತ್‌ ಚಂದ್ರ ಬೋಸರ ಸೊಸೆ ನಂದಿತಾ ಬೋಸ್‌ ನೆನಪಿಸಿಕೊಳ್ಳುತ್ತಾರೆ.

ಮನೆಯವರಿಗೆ ಹೇಳದೆ ಕೇಳದೆ ಸುಭಾಷ್‌ 1914ರಲ್ಲಿ ಗುರುವನ್ನು ಹುಡುಕಿಕೊಂಡು ಹರಿದ್ವಾರದಿಂದ ಬನಾರಸ್‌ವರೆಗೆ ಎರಡು ತಿಂಗಳು ಪ್ರವಾಸ ಹೊರಟುಬಿಟ್ಟರು. ಪೊಲೀಸರಿಗೆ ಈ ವಿಷಯ ತಿಳಿಸಕೂಡದೆಂದು ಸುಭಾಷ್‌ ಅವರ ಅಪ್ಪ–ಅಮ್ಮ ಜ್ಯೋತಿಷಿಯ ಬಳಿಗೆ ಹೋದರು. ಅವರು ಇರಬಹುದಾದ ಸಂಭವನೀಯ ಸ್ಥಳವನ್ನು ಜ್ಯೋತಿಷಿ ಹೇಳಿದ. ಸುಭಾಷ್‌ ಕೊನೆಗೂ ಮನೆಗೆ ಮರಳಿದರು. ಅವರಿಗೆ ಗುರು ಸಿಗಲಿಲ್ಲ. ಎಲ್ಲವನ್ನೂ ತೊರೆದ ಅನೇಕ ಪವಿತ್ರ ಪುರುಷರನ್ನು ಸುಭಾಷ್‌ ಭೇಟಿ ಮಾಡಿದರೂ, ಅವರೆಲ್ಲಾ ಪೂರ್ವಗ್ರಹ ಪೀಡಿತರಾಗಿದ್ದರು. ಸ್ಪಷ್ಟ ಅಧ್ಯಾತ್ಮ ಪ್ರಜ್ಞೆ ಅವರಿಗೆ ಇರಲಿಲ್ಲ. ಮನೆಗೆ ಬಂದವರೇ ಸುಭಾಷ್‌ ಟೈಫಾಯ್ಡ್‌ನಿಂದ ಬಳಲಿದರು.

ಮೊದಲ ವಿಶ್ವಯುದ್ಧ ಪ್ರಾರಂಭವಾಯಿತು. ಹಾಸಿಗೆ ಮೇಲೆ ರೋಗದಿಂದ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಸುಭಾಷ್‌ ತನ್ನ ಚಿಂತನೆಗಳನ್ನು ಮರುಪರಿಶೀಲನೆಗೆ ಒಳಪಡಿಸಿದರು. ದೇಶವನ್ನು ಸ್ವಾತಂತ್ರ್ಯದ ದೃಷ್ಟಿಯಿಂದ ಎರಡು ವಿಭಾಗಗಳಾಗಿ ವಿಂಗಡಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತು; ಒಂದು ವಿದೇಶಿಗರಿಗೆ, ಇನ್ನೊಂದು ನಮಗೆ. ‘ಆಗ ನನಗೆ ನಾನೇ ಕೊಟ್ಟುಕೊಂಡ ಉತ್ತರ ಸ್ಪಷ್ಟವಿತ್ತು. ರಾಜಕೀಯ ಸ್ವಾತಂತ್ರ್ಯವನ್ನು ವಿಭಜಿಸಲು ಸಾಧ್ಯವಿಲ್ಲವಾದ್ದರಿಂದ ವಿದೇಶೀಯರಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದೊಂದೇ ದಾರಿ. ಸೇನಾ ಶಕ್ತಿ ಇಲ್ಲದೇಹೋದರೆ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ಯುದ್ಧವು ಮನದಟ್ಟು ಮಾಡಿಸಿತು. ಈ ಚಿಂತನೆ ನನ್ನನ್ನು ಬದಲಾಯಿಸಿತು’ ಎಂಬ ಸುಭಾಷ್‌ ಉಲ್ಲೇಖ, ಆಗ ಅವರ ಮನಸ್ಸಿನಲ್ಲಿ ಏನು ನಡೆಯಿತೆನ್ನುವುದಕ್ಕೆ ಕನ್ನಡಿ ಹಿಡಿಯುತ್ತದೆ.

ಬ್ರಿಟಿಷರು ಭಾರತೀಯರ ವಿಷಯದಲ್ಲಿ ತೋರುತ್ತಿದ್ದ ತರತಮದ ಅರಿವು ಸುಭಾಷ್‌ ಅವರಿಗೆ ಚೆನ್ನಾಗಿಯೇ ಆಯಿತು. ಪಕ್ಕದಲ್ಲಿ ಭಾರತೀಯರು ಕೂರದೇ ಇರಲೆಂದು ಟ್ರ್ಯಾಮ್‌ ಕಾರಿನ ಸೀಟಿನ ಮೇಲೆ ಬ್ರಿಟಿಷರು ಕಾಲಿಟ್ಟು ಕೂರುತ್ತಿದ್ದ ಪರಿ, ತಮ್ಮನ್ನು ಹಿಂದಿಕ್ಕಿ ನಡೆಯುವ ಭಾರತೀಯರನ್ನು ಅವರು ದೂಡುತ್ತಿದ್ದ ರೀತಿ ಸುಭಾಷ್‌ ಕಣ್ಣಿಗೆ ಬಿದ್ದಿತ್ತು. ಇವೆಲ್ಲವೂ ಅವರೊಳಗೆ ಒಬ್ಬ ಕ್ರಾಂತಿಕಾರಿ ಹುಟ್ಟಲು ಕಾರಣವಾದವು.

ಕಾಲೇಜಿನ ನಂತರ ರಾಷ್ಟ್ರಪ್ರಜ್ಞೆ ಇದ್ದ ಸಮಾನಮನಸ್ಕರ ಜೊತೆಗೇ ಸುಭಾಷ್‌ ಕಾಲ ಕಳೆಯತೊಡಗಿದರು. ಮನೆ ಅವರಿಗೆ ಆಕರ್ಷಕ ಆಗಿರಲಿಲ್ಲ. ಲೌಕಿಕ ಜಗತ್ತನ್ನು ಮೀರಿದ ಕನಸುಗಳು ಅವರಲ್ಲಿದ್ದವು.

1916ರ ಜನವರಿಯಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಭಾಷ್‌ ಬದುಕಿನ ಕೆಟ್ಟ ಘಟನೆಯೊಂದು ನಡೆಯಿತು. ಭಾರತದ ಕೆಲವು ವಿದ್ಯಾರ್ಥಿಗಳನ್ನು ಇಂಗ್ಲಿಷ್‌ ಪ್ರೊಫೆಸರ್‌ ದೈಹಿಕವಾಗಿ ದಂಡಿಸಿದರು. ವಿದ್ಯಾರ್ಥಿ ಪ್ರತಿನಿಧಿಯಾಗಿದ್ದ ಸುಭಾಷ್‌, ಪ್ರಾಂಶುಪಾಲರ ಬಳಿಗೆ ಹೋಗಿ ತಾವು ದಂಡಿಸಿದ ವಿದ್ಯಾರ್ಥಿಗಳಲ್ಲಿ ಪ್ರೊಫೆಸರ್‌ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಅದು ಈಡೇರಲಿಲ್ಲ. ವಾರದ ನಂತರ ಮತ್ತೆ ಆ ಪ್ರೊಫೆಸರ್‌ ಭಾರತದ ವಿದ್ಯಾರ್ಥಿಗಳನ್ನು ಬೈಯ್ದರು. ಕಾಲೇಜಿನವರು ಸಹಾಯ ಮಾಡಿಯಾರು ಎಂಬ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಆ ಪ್ರೊಫೆಸರ್‌ ಅನ್ನು ಹೊಡೆದರು. ಇದು ಕಾಲೇಜು ಆಡಳಿತ ಮಂಡಳಿಯವರಲ್ಲಿ ಕೋಪ ತರಿಸಿತು. ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದಲ್ಲದೆ, ಬೋಸ್‌ ಅವರನ್ನು ಹೊರಹಾಕಲಾಯಿತು.

ಎಲ್ಲಾ ವಿಚಾರಣಾ ಸಮಿತಿಗಳ ಎದುರು ಸುಭಾಷ್‌ ಹೆಸರು ಇದ್ದೇ ಇರುತ್ತಿತ್ತು. ಅಲ್ಲಿಗೆ ವಿದ್ಯಾರ್ಥಿಯಾಗಿ ಅವರ ಭವಿಷ್ಯಕ್ಕೆ ಕಲ್ಲುಬಿತ್ತು. ವಿದ್ಯಾರ್ಥಿಗಳ ವಕ್ತಾರ ಆದದ್ದಕ್ಕೆ ಅವರು ಇಷ್ಟೆಲ್ಲಾ ಅನುಭವಿಸಬೇಕಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ ಹೋರಾಡಿದ್ದಕ್ಕೆ ತಮ್ಮ ಮನೆಯ ಹುಡುಗನ ಎರಡು ವರ್ಷದ ವಿದ್ಯಾರ್ಥಿ ಬದುಕು ಹಾಳಾಯಿತು ಎನ್ನುವುದು ಬೋಸ್‌ ಕುಟುಂಬದವರಿಗೆ ಗೊತ್ತಾಯಿತು. ಅವರು ಹುಡುಗನನ್ನು ಬೆಂಬಲಿಸಿದರು.

1916ರ ಮಾರ್ಚ್‌ ಹೊತ್ತಿಗೆ ಕೋಲ್ಕತ್ತದ ರಾಜಕೀಯ ಸ್ಥಿತಿ ಹದಗೆಟ್ಟಿತು. ಪ್ರೆಸಿಡೆನ್ಸಿ ಕಾಲೇಜಿನ ಕೆಲವು ಬಹಿಷ್ಕೃತ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಸುಭಾಷ್‌ ಕುಟುಂಬದವರು ಚಿಂತೆಗೀಡಾಗಿ ತಮ್ಮ ಹುಡುಗನನ್ನು ಕಟಕ್‌ಗೆ ಕಳುಹಿಸಿದರು. ತನ್ನ ಮೇಲೆ ವಿಧಿಸಲಾದ ಶಿಕ್ಷೆ ರದ್ದುಪಡಿಸುವಂತೆ ವಿಶ್ವವಿದ್ಯಾಲಯದ ಬಾಗಿಲುಗಳನ್ನು ಸುಭಾಷ್‌ ತಟ್ಟಿದರೂ ಪ್ರಯೋಜನವಾಗಲಿಲ್ಲ.

ಸುಭಾಷ್‌ ಸಹಾನುಭೂತಿಯ ಮೂರ್ತಿ ಆಗಿದ್ದರು. ಸೇನಾ ನಾಯಕರಾಗಿ ಅವರದ್ದು ಕಠಿಣ ವ್ಯಕ್ತಿತ್ವ ಎಂದು ಬಿಂಬಿತವಾಗಿದ್ದರೂ, ಅವರು ಮೃದುಹೃದಯಿ ಆಗಿದ್ದರು. ಕಾಲೇಜಿನಿಂದ ಮನೆಗೆ ನಡೆದುಕೊಂಡೇ ಹೋಗಿ, ಟ್ರ್ಯಾಮ್‌ಕಾರ್‌ಗೆಂದು ಕೊಟ್ಟಿದ್ದ ಹಣವನ್ನು ಉಳಿಸಿ, ಹಾದಿಬದಿಯಲ್ಲಿ ಕುಳಿತಿದ್ದ ಭಿಕ್ಷುಕನಿಗೆ ಕೊಡುತ್ತಿದ್ದರು.

ಕಾಲರಾ ಹಾಗೂ ಸಿಡುಬು ಪೀಡಿತ ರೋಗಿಗಳ ಚಿಕಿತ್ಸೆಗೆ ನೆರವು ನೀಡಲು ಮನೆಯವರಿಗೆ ಗೊತ್ತೇ ಆಗದಂತೆ ಸುಭಾಷ್‌ ಧಾವಿಸಿದ್ದುಂಟು. ನಿರ್ಗತಿಕರು ಮೃತಪಟ್ಟಾಗ ಅವರ ಶವಸಂಸ್ಕಾರ ಮಾಡುವಷ್ಟು ಔದಾರ್ಯ ಅವರದ್ದಾಗಿತ್ತು. ‘ಇದು ನನಗೆ ಹೊಸ ಜಗತ್ತನ್ನು ಕಾಣಿಸಿತು. ಭಾರತದ ನಿಜವಾದ ಚಿತ್ರಣ ಕಟ್ಟಿಕೊಟ್ಟಿತು. ಬಡತನದಿಂದ ಬಳಲಿದ ಹಳ್ಳಿಗಳು, ಕೀಟಗಳಂತೆ ಸಾಯುವ ಜನ, ಅನಕ್ಷರಸ್ಥರ ಪೀಕಲಾಟ ಎಲ್ಲವನ್ನೂ ಕಂಡೆ. ಕಾಲರಾ ರೋಗಿಗಳು ಎಷ್ಟೇ ಗಲೀಜಾದ ಬಟ್ಟೆ ಹಾಕಿಕೊಂಡಿದ್ದರೂ ಅವರ ಆರೈಕೆ ಕಷ್ಟವೆನ್ನಿಸುತ್ತಿರಲಿಲ್ಲ. ಆದರೆ ಸಿಡುಬು ರೋಗ ಉಲ್ಬಣಿಸಿದವರನ್ನು ನೋಡಿಕೊಳ್ಳಲು ನನ್ನೆಲ್ಲಾ ಸಾಮರ್ಥ್ಯ ಬೇಕಾಗುತ್ತಿತ್ತು’ ಎಂದು ಸುಭಾಷ್‌ ಆ ಅನುಭವ ದಾಖಲಿಸಿದ್ದಾರೆ.

1943ರಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮ ಉಂಟಾಗಿ, ಲಕ್ಷಗಟ್ಟಲೆ ಜನ ಮೃತಪಟ್ಟರು. ಇಂಡಿಯನ್‌ ನ್ಯಾಷನಲ್‌ ಆರ್ಮಿಯ ಚಟುವಟಿಕೆಗಳಿಗೆ ತಾತ್ಕಾಲಿಕ ವಿರಾಮ ಹಾಕಿ, ಒಂದು ಲಕ್ಷ ಟನ್‌ ಅಕ್ಕಿಯನ್ನು ಸಂಗ್ರಹಿಸಿ ಸಿಂಗಪುರದಿಂದ ಭಾರತಕ್ಕೆ ಕಳುಹಿಸಿಕೊಟ್ಟರು. ಬ್ರಿಟಿಷ್ ಸರ್ಕಾರ ಅಕ್ಕಿಯನ್ನು ಸ್ವೀಕರಿಸಿತಾದರೂ, ಅದನ್ನು ವಿತರಿಸಲು ಚರ್ಚಿಲ್‌ ಬಿಡಲಿಲ್ಲ. ಅಕ್ಕಿ ಹಂಚಿದರೆ ಜನರಲ್ಲಿ ರಾಷ್ಟ್ರಪ್ರೇಮ ಹೆಚ್ಚಾಗುತ್ತದೆ ಎನ್ನುವುದು ಅವನ ವಾದವಾಗಿತ್ತು. ಆ ಅಕ್ಕಿ ಗೋದಾಮಿನಲ್ಲೇ ಹಾಳಾಯಿತು.

ನೇತಾಜಿ ಅವರ ಸಾಧನ ಕಥನಗಳು ಹೀಗೆಯೇ ಮುಂದುವರಿಯುತ್ತವೆ. ಸಂಸತ್‌ ಸದನದ ಸೆಂಟ್ರಲ್‌ ಹಾಲ್‌ನಲ್ಲಿ ನೇತಾಜಿ ಅವರ ಫೋಟೊ ಕೂಡ ಇರಲಿಲ್ಲ. 1967ರಲ್ಲಿ ಸಮರ್‌ ಗುಹಾ ಈ ವಿಷಯದ ಕಡೆ ಗಮನಸೆಳೆದರು. 1978ರಲ್ಲಿ ಆ ಗೋಡೆಯಲ್ಲಿ ನೇತಾಜಿ ಫೋಟೊಗೆ ಸ್ಥಳ ಸಿಕ್ಕಿತು.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ನವೆಂಬರ್ 1, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT