ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾನಸ' ಪುತ್ರಿ!

ಪಂಚರಂಗಿ
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಇದು ಪ್ರಶಸ್ತಿಗಾಗಿಯೇ ಮಾಡಿದ ಸಿನಿಮಾ. ಆದರೆ ಪ್ರಶಸ್ತಿ ದಕ್ಕಲಿಲ್ಲ. ಅದಕ್ಕಾಗಿ ಬೇಸರವೇನೂ ಇಲ್ಲ. ಇಂಥದ್ದೊಂದು ಸಿನಿಮಾ ಮಾಡಿದ ಬಳಿಕ ಚಿತ್ರರಂಗದ ಬದುಕು ಸಾರ್ಥಕ ಎನಿಸಿದೆ' ಎಂದರು ನಟಿ ಅನಿತಾ ರಾಣಿ.

ಸುಮಾರು 20 ವರ್ಷದಿಂದ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅನಿತಾರಾಣಿ ಅವರು ನಿರ್ಮಿಸಿದ ಮೊದಲ ಚಿತ್ರ `ಮಾನಸ' ಈ ವಾರ ತೆರೆಕಾಣುತ್ತಿದೆ.

ಪ್ರಶಸ್ತಿಗಾಗಿಯೇ ಈ ಸಿನಿಮಾ ಮಾಡಿದ್ದು ಎನ್ನುವುದನ್ನು ಅವರು ನಿಸ್ಸಂಕೋಚವಾಗಿ ಹೇಳಿಕೊಂಡರು. ಪ್ರಶಸ್ತಿಯ ಗರಿ ಮುಡಿಗೇರಿದರೆ ಆ ಹೆಮ್ಮೆಯ ಜೊತೆ ಜನರ ಗಮನವನ್ನೂ ಸೆಳೆಯಬಹುದು ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ ಎದುರಾದದ್ದು ನಿರಾಸೆ. ಪ್ರಶಸ್ತಿ ಪಡೆದುಕೊಳ್ಳುವ ದಾರಿ ತಮಗೆ ಗೊತ್ತಿಲ್ಲ ಎಂದ ಅವರು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಜನ ಸ್ವೀಕರಿಸಿದರೆ ಅದೇ ದೊಡ್ಡ ಪ್ರಶಸ್ತಿ ಎಂಬ ಸಮಾಧಾನಸೂತ್ರಕ್ಕೆ ಬಂದಿದ್ದಾರೆ.

ಚಿತ್ರದ ಬಿಡುಗಡೆಯ ಪ್ರಕ್ರಿಯೆ ಕುರಿತು ಅರಿವಿಲ್ಲದ ಅವರಿಗೆ ನೆರವು ನೀಡಿದವರು ನಿರ್ಮಾಪಕ ಸಾ.ರಾ.ಗೋವಿಂದು. ಚಿತ್ರಮಂದಿರಗಳ ಮಾಲೀಕರೊಂದಿಗೆ ಮಾತನಾಡಿ ಗೋವಿಂದು `ಮಾನಸ' ಚಿತ್ರಕ್ಕೆ ನಾಲ್ಕು ಚಿತ್ರಮಂದಿರಗಳನ್ನು ದೊರಕಿಸಿಕೊಟ್ಟಿದ್ದಾರಂತೆ.

ವಿವಾದದ ಬಳಿಕ ದೀರ್ಘಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ನಿರ್ದೇಶಕ ಕೋಡ್ಲು ರಾಮಕೃಷ್ಣ ಮತ್ತೆ ಅಖಾಡಕ್ಕಿಳಿದಿದ್ದಾರೆ. ಸ್ತ್ರೀ ಪ್ರಾಧಾನ್ಯವುಳ್ಳ ಚಿತ್ರ ಮಾಡಿಕೊಡಬೇಕೆಂದು ಅವರನ್ನು ಅನಿತಾರಾಣಿ ಸಂಪರ್ಕಿಸಿದಾಗ ಅವರಿಗೆ ಒಂದು ಕ್ಷಣ ಅಚ್ಚರಿಯಾಯಿತಂತೆ.

ಇತ್ತೀಚಿನ ದಿನಗಳಲ್ಲಿಯೇ ಚಿತ್ರರಂಗದಲ್ಲಿ ಪ್ರಯೋಗಿಸಿರುವ ವಿಭಿನ್ನ ಕಥೆ ಇದು ಎನ್ನುವುದು ಅವರ ಅಭಿಪ್ರಾಯ. ಏಳನೇ ತರಗತಿ ಓದಿರುವ ಮಹಿಳೆ, ಸಂಸಾರಕ್ಕೆ ಆರ್ಥಿಕಬಲವಾಗಿದ್ದ ಪತಿ ತೀರಿಹೋದಾಗ ಮತ್ತೆ ಶಿಕ್ಷಣ ಪಡೆದು ಕುಟುಂಬವನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವ, ಚಿತ್ರದ ತಿರುಳನ್ನು ಅವರು ಬಿಚ್ಚಿಟ್ಟರು.

ಸಂಪೂರ್ಣ ಚಿತ್ರವನ್ನು ಅವರು ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಿಸಿದ್ದಾರೆ. ಸಿನಿಮಾದ ಶೇ 70ರಷ್ಟು ಭಾಗ ಮಳೆಯಲ್ಲಿಯೇ ಸಾಗುತ್ತದೆ. ಇದನ್ನು ಸಹಜ ಮಳೆಯಲ್ಲಿಯೇ ಚಿತ್ರೀಕರಿಸಿರುವುದು ವಿಶೇಷ.

ಚಿತ್ರಕ್ಕೆ ಅಶೋಕ್‌ರಾಮ್ ಛಾಯಾಗ್ರಹಣ ಮಾಡಿದ್ದರೆ, ವಿ. ಮನೋಹರ್ ಸಂಗೀತ ನೀಡಿದ್ದಾರೆ. ಶಿವಧ್ವಜ್, ಶ್ರೀನಿವಾಸಮೂರ್ತಿ, ಶಿವರಾಂ, ರಮೇಶ್ ಭಟ್ ಮುಂತಾದ ಹಿರಿಯ ಕಲಾವಿದರು ತಾರಾಬಳಗದಲ್ಲಿದ್ದಾರೆ.

ಚಿತ್ರ ವಿತರಣೆಯಲ್ಲಿ ದಶಕಗಳ ಹಿಂದಿನಿಂದ ತೊಡಗಿಕೊಂಡಿರುವ ಪದ್ಮಶ್ರೀ ಪಿಕ್ಚರ್ಸ್ ಬಹು ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ವಿತರಣೆ ಪ್ರಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT