ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ ಅರಿಯುವ ಬಗೆ

Last Updated 11 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮಾನಸಿಕ ಯೋಗಕ್ಷೇಮವೆಂದರೆ ವ್ಯಕ್ತಿಯು ತನ್ನೊಂದಿಗೆ ಮತ್ತು ತನ್ನ ಸುತ್ತಲಿನವರೊಂದಿಗೆ ಸಂವಹನ ಮಾಡುವ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುವುದು. ಸರಳವಾಗಿ ಹೇಳಬೇಕೆಂದರೆ, ಯಾವುದೇ ಮಾನಸಿಕ ಅನಾರೋಗ್ಯ ಇಲ್ಲ ಎಂದ ಮಾತ್ರಕ್ಕೆ ಮಾನಸಿಕ ಆರೋಗ್ಯವನ್ನು ಖಾತ್ರಿ ಪಡಿಸಲು ಸಾಧ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು ‘ಕೇವಲ ಕಾಯಿಲೆ ಅಥವಾ ದೌರ್ಬಲ್ಯದ ಅನುಪಸ್ಥಿತಿಯೆಂದು ಪರಿಗಣಿಸದೇ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಂಪೂರ್ಣವಾಗಿ ಆರೋಗ್ಯವಂತವಾಗಿರುವ ಸ್ಥಿತಿ’ ಎಂದು ಪರಿಗಣಿಸಿದೆ.

ಅಲ್ಲದೇ, ವ್ಯಕ್ತಿ ತನ್ನ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆ, ಜೀವನದ ಸಹಜ ಒತ್ತಡಗಳನ್ನು ಹೇಗೆ ನಿಭಾಯಿಸುತ್ತಾರೆ, ಅವರ ಸಾಮರ್ಥ್ಯ ಮತ್ತು ಸಮುದಾಯಕ್ಕೆ ವ್ಯಕ್ತಿಯು ನೀಡುವ ಕೊಡುಗೆಗಳನ್ನು ಪರಿಗಣಿಸಿ ಅವರ ಆರೋಗ್ಯವನ್ನು ನಿಶ್ಚಯಿಸಬೇಕಾಗುತ್ತದೆ ಎಂದು ಸಹ ಭಾವಿಸುತ್ತದೆ. ಈ ಹೇಳಿಕೆಯ ಆಧಾರದ ಮೇಲೆ ನಾವು ಮಾನಸಿಕ ಆರೋಗ್ಯದ ಕುರಿತ ಸಕಾರಾತ್ಮಕ  ಆಲೋಚನೆಯ ಬಗ್ಗೆ ಗಮನ ಹರಿಸಬಹುದು.

ನಾವೆಲ್ಲರೂ ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತೇವೆ ಮತ್ತು ಇದರಿಂದ ತಾತ್ಕಾಲಿಕ ವಾದ ಒತ್ತಡ, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುತ್ತೇವೆ. ಆದರೆ ಯಾವಾಗ ನಮ್ಮ ಸಹಜ ನಡವಳಿಕೆಯಲ್ಲಿಯೂ ತೊಂದರೆ ಕಾಣಿಸುತ್ತದೆಯೋ, ಆಗ ಅದನ್ನು ಮಾನಸಿಕ ಸಮಸ್ಯೆಯ ಲಕ್ಷಣ ಎಂದು ಪರಿಗಣಿಸಬಹುದು. ಜೀವನಶೈಲಿಯು ತಂದೊಡ್ಡುವ ಕಾಯಿಲೆಗಳ ಬಗ್ಗೆ ಹೆಚ್ಚುತ್ತಿರುವ ತಿಳುವಳಿಕೆಯಿಂದಾಗಿ ಭಾರತದಲ್ಲಿ ಈಗೀಗ ದೈಹಿಕ ಆರೋಗ್ಯದ ಕುರಿತು ಜಾಗೃತಿ ಮೂಡುತ್ತಿದ್ದರೂ, ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಮಾನಸಿಕ ಸಮಸ್ಯೆಯನ್ನು ಕೇವಲ ಕಲ್ಪಿತವೆಂದು ಭಾವಿಸಲಾಗುತ್ತದೆಯೇ ಹೊರತು ಅದರ ನೈಜತೆಯನ್ನು ಜನ ಸ್ವೀಕರಿಸುವುದಿಲ್ಲ. ಮಾನಸಿಕ ಆರೋಗ್ಯದ ಕುರಿತು ನಮ್ಮ ಅಜ್ಞಾನ ಮತ್ತು ಅದಕ್ಕೆ ಅಂಟಿಕೊಂಡಿರುವ ಕಳಂಕದಿಂದಾಗಿ ಎಷ್ಟೋ ಬಾರಿ ಅಗತ್ಯವಾದ ಸಹಾಯ ಪಡೆಯುವುದೇ ಅಸಾಧ್ಯವಾಗುತ್ತದೆ.

ಉಳಿದ ಆರೋಗ್ಯ ಸಮಸ್ಯೆಗಳಂತೆ ಮಾನಸಿಕ ಕಾಯಿಲೆಗಳ ವಿಷಯದಲ್ಲಿ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಲು ಕೇವಲ ತಜ್ಞರಿದ್ದರಷ್ಟೇ ಸಾಲದು. ಇದರ ಜೊತೆಗೆ ಬೆಂಬಲಿಸುವ ಮತ್ತು ಕಾಳಜಿ ತೋರುವ ಸಾಮಾಜಿಕ ವ್ಯವಸ್ಥೆಯೂ ಅವಶ್ಯಕವಿರುತ್ತದೆ. ಅಂದರೆ, ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರು ಸರಿಯಾದ ಚಿಕಿತ್ಸೆ ಪಡೆದು ಸಾಮಾನ್ಯ ಜೀವನ ನಡೆಸಲು ಕುಟುಂಬದವರು ಹಾಗೂ ಸ್ನೇಹಿತರು ಆದಷ್ಟು ಸಹಾಯ ಮಾಡಬೇಕು. ಇದಕ್ಕಾಗಿ, ನಾವೆಲ್ಲರೂ, ಮಾನಸಿಕ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅತ್ಯಗತ್ಯ. ಮಾನಸಿಕ ಆರೋಗ್ಯ ಸಮಸ್ಯೆಯನ್ನು ಖಿನ್ನತೆ ಮತ್ತು ಆತಂಕಗಳಂತಹ ಸಾಮಾನ್ಯ ಮಾನಸಿಕ ಸಮಸ್ಯೆ ಮತ್ತು ಸ್ಕಿಜೋಫ್ರೆನಿಯಾ ಹಾಗೂ ಮ್ಯಾನಿಕ್ ಡಿಪ್ರೆಸಿವ್ ಡಿಸಾರ್ಡರ್ನಂತಹ ಗಂಭೀರ ಮಾನಸಿಕ ಸಮಸ್ಯೆಗಳೆಂದು ವಿಭಾಗಿಸಲಾಗಿದೆ.
ಗಂಭೀರ ಮಾನಸಿಕ ಸಮಸ್ಯೆಗಳಲ್ಲಿ ತಜ್ಞರ ತುರ್ತು ಗಮನದ ಅಗತ್ಯವಿರುತ್ತದಾದರೂ ಹೆಚ್ಚಿನ ವೇಳೆ ಸಾಮಾನ್ಯ ಮಾನಸಿಕ ಸಮಸ್ಯೆಗಳು ನಮ್ಮ ಅಜ್ಞಾನದಿಂದಾಗಿ ಪತ್ತೆಯಾಗುವುದೇ ಇಲ್ಲ ಮತ್ತು ಚಿಕಿತ್ಸೆ ದೊರೆಯದೇ ಉಳಿದುಬಿಡುತ್ತವೆ. ಜನ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಒಂದೋ ನಿರ್ಲಕ್ಷಿಸುತ್ತಾರೆ ಅಥವಾ ಅದನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದರೆ.

ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯು ತೀವ್ರವಾಗಿ ಹೆಚ್ಚುತ್ತಿದೆ. ನಾಲ್ವರು ಭಾರತೀಯರಲ್ಲಿ ಒಬ್ಬರು ಜೀವನದ ಯಾವುದಾದರೂ ಒಂದು ಹಂತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಹಲವಾರು ಕಾರಣಗಳಿಂದಾಗಿ ಇವುಗಳ ಚಿಕಿತ್ಸೆಯ ದರವೂ ತೀರಾ ಕೆಳಮಟ್ಟದಲ್ಲಿದೆ. ಗಂಭೀರ ಮಾನಸಿಕ ಸಮಸ್ಯೆಗಳಲ್ಲಿ ಕೇವಲ 50% ರಷ್ಟು ಮತ್ತು ಸಾಮಾನ್ಯ ಮಾನಸಿಕ ಸಮಸ್ಯೆಗಳಲ್ಲಿ ಕೇವಲ 10% ರಷ್ಟು ಕೇಸುಗಳು ಮಾತ್ರ ತಜ್ಞರ ಬಳಿ ಚಿಕಿತ್ಸೆಗಾಗಿ ದಾಖಲಾಗುತ್ತವೆ.
ಈ ವಿಷಯದ ಕುರಿತು ಸರಿಯಾಗಿ ತಿಳಿದುಕೊಳ್ಳುವ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ  ಹೆಚ್ಚಿನ ಜಾಗೃತಿಯನ್ನು ಉಂಟುಮಾಡಲು ಸಾಧ್ಯವಾಗುತ್ತದೆ.

ಮುಂಬರುವ ದಿನಗಳಲ್ಲಿ, ಈ ಅಂಕಣವು ಮಾನಸಿಕ ಆರೋಗ್ಯದ ಕುರಿತು ನಿಮಗೆ ತಿಳುವಳಿಕೆ ನೀಡಲಿದೆ. ಉಳಿದ ವೈದ್ಯಕೀಯ ಜ್ಞಾನಶಾಖೆಗಳು ಮಾಡುವಂತೆ, ಮಾನಸಿಕ ತೊಂದರೆಗಳನ್ನು ಕೂಡಾ ನಿರ್ದಿಷ್ಟ ಗುಣಲಕ್ಷಣಗಳ ಮೂಲಕ ಪತ್ತೆ ಹಚ್ಚಬಹುದು ಮತ್ತು ಸೈಕೋಥೆರಪಿ ಮತ್ತು ಸೈಕಿಯಾಟ್ರಿಯ ಮೂಲಕ ಚಿಕಿತ್ಸೆ ನೀಡಬಹುದು ಎಂಬುದನ್ನು ನಾವು ಕಲಿಯೋಣ.
(ಲೇಖಕಿ ಮನೋವೈದ್ಯೆ)
ಮಾಹಿತಿಗೆ: http://kannada.whiteswanfoundation.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT