ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿ: ಸಿಸಿ ಪಾಟೀಲ

Last Updated 18 ಅಕ್ಟೋಬರ್ 2011, 7:05 IST
ಅಕ್ಷರ ಗಾತ್ರ

ಗದಗ: ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ರಾಜ್ಯಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಗಳು ಮತ್ತು ದೈಹಿಕ ಶಿಕ್ಷಣವು ಯುವಕ- ಯುವತಿಯರ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ ನಂತರ ನಡೆಯುತ್ತಿರುವ ರಾಜ್ಯ ಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟವು ಯಶಸ್ವಿಯಾಗುವುದರ ಜೊತೆಗೆ ವರ್ಷದಲ್ಲಿ ಮೂರ‌್ನಾಲ್ಕು ರಾಜ್ಯಮಟ್ಟದ ಕ್ರೀಡೆಗಳು ಇಲ್ಲಿ ನಡೆಯಬೇಕು ಎಂದು ಸಚಿವರು ಆಶಾಭಾವನೆ ವ್ಯಕ್ತಪಡಿಸಿದರು.

ದೇಶದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟಿರುವ ಯುವಜನತೆಗಾಗಿ ಔಪಚಾರಿಕ ಶಿಕ್ಷಣ ಪದ್ದತಿಯಲ್ಲಿ ಕ್ರೀಡೆಗಳನ್ನು ವಿಲೀನಗೊಳಿಸುವ ಮೂಲಕ ಪ್ರಗತಿ ಸಾಧಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗಿದೆ. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊರಚರಂಡಿ, 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್, 20 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸೌಲಭ್ಯ, ಕ್ರೀಡಾ ವಸತಿ ನಿಲಯದ ಕಟ್ಟಡಕ್ಕೆ 58 ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾ ಮೂಲ ಸೌಕರ್ಯ ಮತ್ತು ಕ್ರೀಡಾ ಸಲಕರಣೆಗಳನ್ನು ಒದಗಿಸುವುದು. ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವುದು, ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳ ಸಾಧನೆಗೆ ಪೂರಕ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಸೂಕ್ತ ವಸತಿ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ, ಕೊನೆಯ ದಿನ ಜಿಲ್ಲೆಯ ಸಾಂಸ್ಕೃತಿಕ ತಾಣಗಳ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿಯೂ ಜಿಲ್ಲೆಯು ಮಹತ್ವದ ಸಾಧನೆ ಮೆರೆದಿದೆ. ಹೀಗಾಗಿ ಜಿಲ್ಲೆಯಲ್ಲಿ ಹಾಕಿ, ಕ್ರಿಕೆಟ್, ಫುಟ್ಬಾಲ್ ಕ್ರೀಡೆಗಳಿಗಾಗಿ ಇನ್ನೊಂದು ಕ್ರೀಡಾಂಗಣದ ಅಗತ್ಯವಿದೆ.

ಬೆಟಗೇರಿಯಲ್ಲಿರುವ ಗಾಂಧಿ ಕ್ರೀಡಾಂಗಣವು ಸಾಕಷ್ಟು ಹಾಕಿ ಪಟುಗಳ ಸಾಧನೆಗೆ ಹೆಗ್ಗುರುತಾಗಿದೆ. ಇದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕ್ರೀಡಾಂಗಣ ನಿರ್ಮಾಣಕ್ಕೆ ಅವಶ್ಯವಿರುವ 10 ಎಕರೆ ಜಮೀನು ಒದಗಿಸಿಕೊಡಲು ಸಿದ್ಧರಿದ್ದು, ಅವಶ್ಯವಿರುವ ಸೌಲಭ್ಯಗಳನ್ನು ಕ್ರೀಡಾ ಇಲಾಖೆ ಕೈಗೊಳ್ಳಬೇಕು ಎಂದರು. 

ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ಡಾ. ವಿ. ಚಂದ್ರಶೇಖರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಬೀರಪ್ಪ ಬಂಡಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರಗೌಡ, ಎಂ.ಎಸ್. ಕರಿಗೌಡರ ಮತ್ತಿತರರು ಹಾಜರಿದ್ದರು. ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಸ್ವಾಗತಿಸಿದರು. ವಿ. ಉಮೇಶ ವಂದಿಸಿದರು.

ಸೈಡ್‌ಲೈಟ್ಸ್ ಬಿಸಿಲಿಗೆ ಬಸವಳಿದರು

ರಾಜ್ಯದ ಸುಮಾರು 25 ಜಿಲ್ಲೆಗಳಿಂದ ಆಗಮಿಸಿರುವ ಮಹಿಳಾ ಕ್ರೀಡಾಪಟುಗಳು ಗದುಗಿನ ಬಿಸಿಲಿಗೆ ಬಸವಳಿದು ಹೋದರು. ಮೈಸೂರು ಭಾಗದಿಂದ ಬಂದವರಂತೂ ಸೂರ‌್ಯನ ಝಳಕ್ಕೆ ಹೆದರಿಹೋದರು.

ಕಾರ್ಯಕ್ರಮ 11ಕ್ಕೆ ಪ್ರಾರಂಭವಾಯಿತು. ಪಥಸಂಚಲನ ಮುಗಿಯುವರೆಗೆ ಸುಮಾರು ಅರ್ಧತಾಸು ಆಯಿತು. ನಂತರ ಅತಿಥಿ-ಗಣ್ಯರ ಭಾಷಣ ಪ್ರಾರಂಭವಾಯಿತು. ಅಷ್ಟೊತ್ತಿಗಾಗಲೇ ನೆತ್ತಿಯ ಹತ್ತಿರಕ್ಕೆ ಸೂರ‌್ಯ ಬಂದುಬಿಟ್ಟಿದ್ದ.

ಬಿಸಿಲಿನ ಧಗೆ ತಾಳಲಾರದೆ ಕ್ರೀಡಾಪಟುಗಳು ಕುಳಿತ್ತಿದ್ದ ಜಾಗದಿಂದ ಒಬ್ಬರಾಗಿ ಜಾಗ ಖಾಲಿ ಮಾಡುತ್ತಾ ಶಾಮಿಯಾನದ ನೆರಳಿಗೆ ಬರತೊಡಗಿದರು. ಮೊದಲಿಗೆ ಒಂದಿಬ್ಬರು ಬಂದರು. ನಂತರ ಗುಂಪು-ಗುಂಪಾಗಿ ಬರಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಕೆಲವು ಜಿಲ್ಲೆಯ ತಂಡದ ವ್ಯವಸ್ಥಾಪಕರು ಕ್ರೀಡಾಪಟುಗಳನ್ನು ಅಲ್ಲೇ ಕೂರುವಂತೆ ಸೂಚನೆ ನೀಡಿದರು.

ಇದರ ಮಧ್ಯ ಅತಿಥಿಗಳ ಭಾಷಣ ನಿರಾಂತಕವಾಗಿ ಸಾಗಿತ್ತು. ಕೊಡಗಿನ ಕ್ರೀಡಾಪಟುಗಳು ತಾವು ತೊಟ್ಟಿದ್ದ ಜರ್ಕಿನ್ ತಗೆದುಕೊಂಡು ತಲೆಯ ಮೇಲೆ ಹಾಕಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಣಗಿದರು.

ಗರಿಕೆ ತೆಗೆಯುವ ಕೆಲಸ

ವಿವಿಧ ಪ್ರಕಾರದ ಓಟವನ್ನು ನೋಡುವ ಸಲುವಾಗಿ ಜನರು ಕ್ರೀಡಾಂಗಣದ ತುಂಬಾ ಮುಗಿ ಬಿದ್ದರು. ಸ್ಪರ್ಧಾಳುಗಳು ಓಡಿದ ದಿಕ್ಕಿನತ್ತಲೆ ಎಲ್ಲರೂ ಮುಖ ಮಾಡಿ ಹೋಗಿ ನಿಲ್ಲುತ್ತಿದ್ದರು. ಇದರಿಂದಾಗಿ ಸಿಂಥೆಟಿಕ್ ಟ್ರ್ಯಾಕ್ ಮೇಲೆ ದೂಳು ಮಾಡಿಬಿಟ್ಟಿದ್ದರು. ಅಲ್ಲದೇ ಓಡಾಡುತ್ತಿದ್ದ ಜನರ ಕಾಲಿಗೆ ಅಂಟಿಕೊಂಡು ಬಂದಿದ್ದ ಗರಿಕೆ ಅಲ್ಲಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಬೀಳಲು ಪ್ರಾರಂಭಿಸಿತು. ಇದನ್ನು ನೋಡಿ ಎಚ್ಚೆತ್ತ ಆಯೋಜಕರು ಜನರನ್ನು ಬೇರೆ ಕಡೆಗೆ ಕಳುಹಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಿಬ್ಬಂದಿ ಬಹಳ ಮುತುವರ್ಜಿ ವಹಿಸಿ ಸ್ವತಹ ತಾವೇ ಗರಿಕೆಯನ್ನು ತೆಗೆದು ಹಾಕುವ ಕೆಲಸ ಮಾಡಿದರು.

ಖಡಕ್ ರೊಟ್ಟಿಗೆ ಮನಸೋತರು

ಉತ್ತರ ಕರ್ನಾಟಕರ ಖಡಕ್ ಜೋಳದ ರೊಟ್ಟಿ, ಬೇಳೆ ಪಲ್ಯ, ಕೆಂಪು ಖಾರಾ, ಶೇಂಗಾ ಚಟ್ನಿ, ಮೊಸರು, ಉಪ್ಪಿನಕಾಯಿ ಊಟ ಅತಿಥಿ ಕ್ರೀಡಾಪಟುಗಳ ಮನಸೂರೆಗೊಂಡಿತು. ಬಿಸಿ ಅನ್ನ, ಕಟ್ಟಿನ ಸಾರು ಎಲ್ಲರಿಗೂ ಪ್ರಿಯವಾಯಿತು.  ಜೊತೆಗೆ ಗೋಧಿ ಹುಗ್ಗಿ ಬಾಯಿ ಸಿಹಿ ಮಾಡಿತು.

ಎಪಿಎಂಸಿಯ ವರ್ತಕ ಬಾಲಚಂದ್ರ ಭರಮಗೌಡರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದರು. ಯಾವೊಬ್ಬ ಅತಿಥಿಯು ಹಸಿದುಕೊಂಡು ಹೋಗದಂತೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಪಕ್ಕದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT