ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸ್ವಾಸ್ಥ್ಯಕ್ಕೆ ಗಮನ ಕೊಡಿ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಗರವಾಸಿಗಳಲ್ಲಿ ದಿನೇದಿನೇ ಮಾನಸಿಕ ಖಿನ್ನತೆ ಹೆಚ್ಚುತ್ತಿದೆ ಎನ್ನುವ ಕಳವಳಕಾರಿ ಸಂಗತಿ ವರದಿಯಾಗಿದೆ.

ವಿಶ್ವ ಮಾನಸಿಕ ದಿನದಂದು ಪ್ರಕಟವಾಗಿರುವ ಅಂಕಿ ಅಂಶಗಳ ಪ್ರಕಾರ ಬದಲಾಗುತ್ತಿರುವ ಜೀವನಶೈಲಿ ಹಾಗೂ ಉದ್ಯೋಗದ ಒತ್ತಡದಿಂದ ಹೆಚ್ಚುಹೆಚ್ಚು ಜನ ಮಾನಸಿಕ ರೋಗಕ್ಕೆ ತುತ್ತಾಗುತ್ತಿರುವುದು ಸ್ಪಷ್ಟವಾಗಿದೆ.

ಮಾನಸಿಕ ರೋಗಕ್ಕೆ ಮದ್ದಿಲ್ಲ ಎನ್ನುವುದು ಹಳೆಯ ಗಾದೆ ಮಾತಾಯಿತು. ಈಗ ಮಾನಸಿಕ ರೋಗ ವೈದ್ಯರೇ ಇಲ್ಲ ಎಂದು ಹೇಳಬಹುದು. ಬಹಳಷ್ಟು ಜನ ಮಾನಸಿಕವಾಗಿ ಕುಸಿದಿದ್ದರೂ ಅದನ್ನು ಹೇಳಿಕೊಳ್ಳಲಾಗದಷ್ಟು ಅಸಹಾಯಕತೆ ಅವರನ್ನು ಕಾಡುತ್ತಿರುತ್ತದೆ.

ಬದಲಾದ ಜೀವನಶೈಲಿ, ಕೌಟುಂಬಿಕ ವಿಘಟನೆ, ಹೊಂದಾಣಿಕೆ ಕೊರತೆಯಂತಹ ಕಾರಣಗಳಿಂದ ಈಚಿನ ವರ್ಷಗಳಲ್ಲಿ ಮಾನಸಿಕ ಕ್ಷೋಭೆ ಉಲ್ಬಣಿಸುತ್ತಲೇ ಇದೆ. ಅಷ್ಟೇ ಅಲ್ಲ, ಹಲವಾರು ದೈಹಿಕ ಸಮಸ್ಯೆಗಳ ಮೂಲ ಮಾನಸಿಕ ರೋಗವೇ ಆಗಿರುತ್ತದೆ. 

ಆತ್ಮಹತ್ಯೆಗೆ ಪ್ರಚೋದಿಸುವ `ಖಿನ್ನತೆ~ಯಂತಹ ಮಾನಸಿಕ ರೋಗಕ್ಕೂ ಚಿಕಿತ್ಸೆ ಪಡೆಯಲು ಜನ ಹಿಂಜರಿಯುವ ಪೃವೃತ್ತಿ ಇದೆ. ಗೀಳು, ಉನ್ಮಾದ, ಚಿತ್ತವೈಕಲ್ಯದಂತಹ ಸಮಸ್ಯೆಗಳಿದ್ದರಂತೂ ವೈದ್ಯರ ಬಳಿ ಕರೆದೊಯ್ಯುವುದಿರಲಿ, ಹೊರಗಿನವರಿಗೆ ಅದು ತಿಳಿಯುವುದೂ ಬೇಡ ಎಂಬಂತಹ ಧೋರಣೆ ನಮ್ಮದು.

ಇದಕ್ಕೆಲ್ಲಾ ಕಾರಣ `ಮನಸ್ಸು~ ಎಂಬ ಅದ್ಭುತ ಶಕ್ತಿಯ ಬಗೆಗೆ ಇರುವ ಅಜ್ಞಾನ. ಸಾಮಾಜಿಕ ಕಾರಣಗಳಿಂದಾಗಿ ಮಾನಸಿಕ ಚಿಕಿತ್ಸೆ ಪಡೆದು ಗುಣಮುಖರಾದವರು ಸಹ ಸಹಜವಾಗಿ ಬದುಕಲು ಹೆಣಗಾಡ ಬೇಕಾಗುತ್ತದೆ.

ಯುವಜನಾಂಗದಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳಕ್ಕೂ ಕೂಡ ಈ ರೀತಿಯ ಖಿನ್ನತೆ ಕಾರಣವಾಗಿರುತ್ತದೆ. ಸಾಂತ್ವನ ಹೇಳುವ, ಅವರ ಮನಸ್ಸಿನ ತಳಮಳವನ್ನು ಅರಿಯುವ ಚಿಕಿತ್ಸಾವಿಧಾನವೂ ಶಿಕ್ಷಣದಲ್ಲಿ ಸೇರಿಕೊಂಡರೆ ಎಷ್ಟೋ ಬಡ ಜೀವಗಳು ಉಳಿಯುತ್ತವೆ.

ನಮ್ಮ ಸರ್ಕಾರಗಳ ವರ್ತನೆಯೂ ಇಂತಹ ಪೂರ್ವಗ್ರಹಗಳಿಗೆ ತಕ್ಕಂತೆಯೇ ಇದೆ. ಕೋಟ್ಯಂತರ ಜನಸಂಖ್ಯೆ ಇರುವ ದೇಶದಲ್ಲಿ ಕೇವಲ 4 ಸಾವಿರ ಮನೋವೈದ್ಯರಿದ್ದಾರೆ. ಒಂದು ಲಕ್ಷ ಮನೋವೈದ್ಯರ ಕೊರತೆಯನ್ನು ದೇಶ ಎದುರಿಸುತ್ತಿದೆ.

1987ರ ಮಾನಸಿಕ ಕಾಯಿಲೆ ಕಾಯ್ದೆ ಪ್ರಕಾರ, ಮಾನಸಿಕ ಆರೋಗ್ಯ ಪ್ರಜೆಗಳ ಹಕ್ಕು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಚಿಕಿತ್ಸೆ ತೀರಾ ಅವಜ್ಞೆಗೆ ಒಳಗಾಗಿದೆ. ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ಈ ಬಗ್ಗೆ ಅರಿವಿರುವುದು ಅಗತ್ಯ. ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆಯೂ ಅಷ್ಟೇ ನಗಣ್ಯವಾಗಿದೆ.

ಕರ್ನಾಟಕದಲ್ಲಿ ನಿಮ್ಹಾನ್ಸ್, ಧಾರವಾಡ ಮಾನಸಿಕ ಸಂಸ್ಥೆ ಮಾತ್ರ ಮನೋರೋಗಕ್ಕೆ ಚಿಕಿತ್ಸೆ ನೀಡುವ ಸರ್ಕಾರಿ ಸಂಸ್ಥೆಗಳು. ಉತ್ತಮ ಜೀವನಕ್ಕೆ ದೈಹಿಕ- ಮಾನಸಿಕ ಆರೋಗ್ಯಗಳೆರಡೂ ಪೂರಕ. ಎರಡಕ್ಕೂ ಸಮಾನ ಚಿಕಿತ್ಸೆ ಅಗತ್ಯ. ಹೀಗಾಗಿ ಜನರಲ್ಲಿ ಮನೋರೋಗಗಳ ಬಗ್ಗೆ ಇರುವ ಪೂರ್ವಗ್ರಹಗಳು ಮೊದಲು ತೊಲಗಬೇಕು.

ವೈದ್ಯಕೀಯ ಪದವಿಯ ಪಠ್ಯವು `ಮನೋವೈದ್ಯಕೀಯ~ ವಿಷಯವನ್ನು ಕಡ್ಡಾಯವಾಗಿ ಒಳಗೊಳ್ಳಬೇಕು. ಸರ್ಕಾರ ಮನೋರೋಗಗಳ ಬಗ್ಗೆ ಜನಜಾಗೃತಿ ಮೂಡಿಸಿ, ಅಗತ್ಯ ಔಷಧ ಪೂರೈಕೆ ಮೂಲಕ ಚಿಕಿತ್ಸಾ ಕೇಂದ್ರಗಳಿಗೆ ಬಲ ತುಂಬಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT