ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾದ ಜಕಾತಿ ಕಟ್ಟೆ

Last Updated 17 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕಡವಾಡ, ನಂದನಗದ್ದಾ, ಸದಾಶಿವಗಡ, ಅಮದಳ್ಳಿ ಹಾಗೂ ಕೋಡಿಭಾಗದಲ್ಲಿ ತೆರಿಗೆ ಸಂಗ್ರಹಕ್ಕಾಗಿ ಬ್ರಿಟಿಷರು ಸ್ಥಾಪಿಸಿದ ‘ಜಕಾತಿಕಟ್ಟೆ’ ಈಗ ಮಾಯವಾಗಿದ್ದು, ಬರಿ ನೆನಪಾಗಿ ಮಾತ್ರ ಉಳಿದಿವೆ. ಜಕಾತಿಕಟ್ಟೆಗಳು ಟೋಲ್‌ನಾಕಾ ಹೆಸರಲ್ಲಿ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣವಾಗಿ ಮಾರ್ಪಟ್ಟಿವೆ.

ಟೋಲ್‌ನಾಕಾದ ಹಿಂದಿರುವ ಇತಿಹಾಸ ಬಹುಶಃ ಈಗಿನ ಪೀಳಿಗೆಗೆ ಗೊತ್ತಿಲ್ಲ. ಬ್ರಿಟಿಷರ ಆಡಳಿತದ ನಂತರ ಎಲ್ಲ ಜಕಾತಿ ಕಟ್ಟೆಗಳು ಟೋಲ್‌ನಾಕಾ ಎನ್ನುವ ಹೆಸರಿನಲ್ಲಿ ಚಾಲ್ತಿಯಲ್ಲಿವೆ. ಕೆಲವು ಕಟ್ಟೆಗಳು ನೆಲಸಮವಾಗಿದ್ದರೆ ಮತ್ತೆ ಕೆಲವು ಶಿಥಿಲಾವಸ್ಥೆಯಲ್ಲಿವೆ.

ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಿಂದ ಮಾರುಕಟ್ಟೆಗೆ ಬರುತ್ತಿದ್ದ ಕಾಯಿಪಲ್ಲೆ, ತರಕಾರಿ, ಹೂ, ಹಣ್ಣು, ಮೀನು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಜಕಾತಿ (ತೆರಿಗೆ) ಸಂಗ್ರಹಿಸುತ್ತಿದ್ದರು. ನಾಲ್ಕೂ ದಿಕ್ಕುಗಳಿಂದ ಪಟ್ಟಣ ಪ್ರದೇಶಕ್ಕೆ ಬರುವ ವಸ್ತುಗಳ ಮೇಲೆ ಜಕಾತಿ ಸಂಗ್ರಹ ಮಾಡುತ್ತಿದ್ದರು.

ನಾಲ್ಕಾಣೆ, ಎಂಟಾಣೆ ಜಕಾತಿ ಕೊಟ್ಟು ವ್ಯಾಪಾರಿಗಳು ಮಾರಾಟದ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತಿದ್ದರು. ಜಕಾತಿ ಸಂಗ್ರಹಿಸಲು ಹೆಂಚು ಬಳಸಿ ಸಣ್ಣ ಕಟ್ಟೆಯೊಂದನ್ನು ಬ್ರಿಟಿಷರು ನಿರ್ಮಿಸಿದ್ದರು. ಬ್ರಿಟಿಷರ ಆಳ್ವಿಕೆ ನಂತರವೂ ಜಕಾತಿ ಸಂಗ್ರಹಿಸುವ ಪದ್ಧತಿಯ ಜಾರಿಯಲ್ಲಿತ್ತು.

ಗ್ರಾಮೀಣ ಪ್ರದೇಶದಲ್ಲಿ ವಾಹನ ಸೌಕರ್ಯ ಇಲ್ಲದೇ ಇರುವುದರಿಂದ ಜನರು ಕಾಲುದಾರಿ ಬಳಸಿ ಪಟ್ಟಣಕ್ಕೆ ಆಗಮಿಸುತ್ತಿದ್ದರು. ಆ ಕಾಲದಲ್ಲಿ ಮಹತ್ವ ಪಡೆದುಕೊಂಡಿದ್ದ ಜಕಾತಿಕಟ್ಟೆಗಳು ತಂತ್ರಜ್ಞಾನದಲ್ಲಾದ ಆವಿಷ್ಕಾರದ ನಂತರ ಕಟ್ಟೆಗಳು ಮಹತ್ವ ಕಳೆದುಕೊಳ್ಳತೊಡಗಿದವು.

ತಂತ್ರಜ್ಞಾನದಲ್ಲಾದ ಹೊಸಹೊಸ ಆವಿಷ್ಕಾರಗಳಿಂದಾಗಿ ರಸ್ತೆಯ ಮೇಲೆ ವಾಹನ ಸಂಚಾರ ಪ್ರಾರಂಭವಾಯಿತು. ಸಮಯ ಉಳಿತಾಯ ಹಾಗೂ ಬೇಗನೆ ಮಾರುಕಟ್ಟೆ ತಲುಪುವ ಉದ್ದೇಶದಿಂದ ಜನರು ವಾಹನವನ್ನು ಹೆಚ್ಚು ಅವಲಂಬಿಸತೊಡಗಿದರು. ದಿನ ಗತಿಸಿದಂತೆ ವಾಹನಗಳ ಸೌಲಭ್ಯ ಹೆಚ್ಚಾಗತೊಡಗಿತು. ನಂತರ ಸ್ಥಳೀಯಾಡಳಿತವೂ ವ್ಯಾಪಾರಿಗಳು ಕುಳಿತ ಸ್ಥಳದಲ್ಲಿಯೇ ಬಂದು ಜಕಾತಿ ವಸೂಲು ಮಾಡಲು ಪ್ರಾರಂಭಿಸಿತು.

ಹೀಗೆ ನಿಧಾನವಾಗಿ ಜಕಾತಿ ಕಟ್ಟೆಗಳು ಮಹತ್ವ ಕಳೆದುಕೊಂಡು ಬಳಕೆಯಿಂದ ಸಂಪೂರ್ಣ ದೂರ ಸರಿದವು. ತಾಲ್ಲೂಕಿನ ವಿವಿಧೆಡೆ ಇರುವ ಜಕಾತಿ ಕಟ್ಟೆಗಳ ಪೈಕಿ ನಗರದ ಹೈ ಚರ್ಚ್ ಬಳಿ ಇರುವ ಜಕಾತಿಕಟ್ಟೆ ಮಾತ್ರ ಉಳಿದುಕೊಂಡಿದೆ. ಈಗ ಇದೂ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT