ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾದ ಸದಸ್ಯರು: ಎಲ್ಲ ಅಯೋಮಯ

Last Updated 5 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ಕೋಲಾರ: ಈಗ ಎಲ್ಲ ಪಕ್ಷಗಳಲ್ಲೂ ತಳಮಳ ಮನೆ ಮಾಡಿದೆ. ಏಕೆಂದರೆ ಮನೆಯ ಸದಸ್ಯರಲ್ಲಿ ಕೆಲವರು ಮಾಯವಾಗ್ದ್ದಿದಾರೆ. ಕೆಲವರಿಗೆ ಮುನಿಸು. ಕೆಲವರಿಗೆ ತಾವೇ ಅಧ್ಯಕ್ಷರಾಗಬೇಕೆಂಬ ಹಠ. ಅವರ ಹಠ ಪಕ್ಷಗಳ ಮುಖಂಡರ ದಿಕ್ಕೆಡಿಸಿದೆ. ಶುಕ್ರವಾರದ ಚುನಾವಣೆ ಶುರುವಾಗುವವರೆಗೂ ಏನೊಂದನ್ನೂ ಸ್ಪಷ್ಟವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಬಲ್ಲ ಪ್ರಮುಖರು ಬಾಯಿ ಬಿಡುತ್ತಿಲ್ಲ. ಗುರುವಾರ ರಾತ್ರಿಯಿಡೀ ನಡೆಯಲಿರುವ ಸಮಾಲೋಚನೆಗಳು, ಕಾರ್ಯಾಚರಣೆಗಳೂ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಮೂರೂ ಪಕ್ಷಗಳು ಮತ್ತು ವರ್ತೂರು ಬಣದ ಸದಸ್ಯರ ಪೈಕಿ ಕೆಲವರು ಮಾಯವಾಗಿರುವುದರಿಂದ ಲೆಕ್ಕಾಚಾರ ತಪ್ಪಿದೆ. ಅಧಿಕಾರ ಪಡೆಯುವ ಆತ್ಮವಿಶ್ವಾಸ ಮತ್ತು ಭರವಸೆಯೂ ಕುಗ್ಗಿದೆ. ಕಾಂಗ್ರೆಸ್‌ನ ಸದಸ್ಯರಾದ ಹುತ್ತೂರು ಕ್ಷೇತ್ರದ ಡಿ.ವಿ.ಹರೀಶ್ ಮತ್ತು ಬೂದಿಕೋಟೆ ಕ್ಷೇತ್ರದ ಬಿ.ವಿ.ಕೃಷ್ಣಪ್ಪ, ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಬಣದ ಪಕ್ಷೇತರ ಸದಸ್ಯೆ, ವಕ್ಕಲೇರಿ ಕ್ಷೇತ್ರದ ಚೌಡೇಶ್ವರಿ, ಮುನಿಸಿಕೊಂಡು ಜೆಡಿಎಸ್ ಜೊತೆ ಸೇರಿದ್ದಾರೆ ಎಂದು ಹೇಳಲಾಗುತ್ತಿರುವ ಬಿಜೆಪಿಯ ಕಾಮಸಮುದ್ರ ಕ್ಷೇತ್ರದ ಸಿಮೌಲ್ ಮಾಯವಾಗಿದ್ದಾರೆ.

ವ್ಯಾಪ್ತಿ ಪ್ರದೇಶದಿಂದ ದೂರವಿದ್ದಾರೆ. ಈ ನಡುವೆ, ತಮ್ಮ ಪಕ್ಷ-ಬಣದವರನ್ನು ತಾವೇ ಬಚ್ಚಿಟ್ಟು ಕುತೂಹಲ, ಅತಂತ್ರ ಸನ್ನಿವೇಶವನ್ನು ಮೂಡಿಸುವ ಯತ್ನಗಳನ್ನೂ ಅಲ್ಲಗಳೆಯುವಂತಿಲ್ಲ.
ಈ ಸನ್ನಿವೇಶ ಚುನಾವಣೆ ರಾಜಕಾರಣದಲ್ಲಿರುವ ಎಲ್ಲರಲ್ಲೂ ತಳಮಳ ಮೂಡಿಸಿದೆ.
 
ಇದೇ ವೇಳೆ ಯಾವ ಸದಸ್ಯರು ಯಾರೊಡನೆ ಮೈತ್ರಿ ಸಾಧಿಸಿದ್ದಾರೆ ಎಂಬ ಹೊಳಹೂ ದೊರಕಿಲ್ಲ. ಕಾಣೆಯಾಗಿರುವ ಡಿ.ವಿ.ಹರೀಶ್ ಮತ್ತು ಬಿ.ವಿ.ಕೃಷ್ಣಪ್ಪ ಅವರನ್ನು ಸಂಪರ್ಕಿಸುವ ಪ್ರಯತ್ನ ಇನ್ನೂ ಜಾರಿಯಲ್ಲಿದೆ.

ಚುನಾವಣೆಯ ದಿನ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾತ್ರ ಯಾರು ನಾಮಪತ್ರ ಸಲ್ಲಿಸುತ್ತಾರೆ, ಯಾರು ಯಾರ ಪರವಾಗಿ ಮತ ಹಾಕುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲಿವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಪ್ರಯತ್ನ ಮುಂದುವರಿಸಿದ್ದೇವೆ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಯಾರೂ ಸ್ಪರ್ಧಿಗಳಿಲ್ಲ. ಉಪಾಧ್ಯಕ್ಷ ಸ್ಥಾನ ಮಾತ್ರ ನಮ್ಮದೇ ಎಂಬುದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯನವರ ಆತ್ಮವಿಶ್ವಾಸದ ನುಡಿ.

ಸಚಿವ ವರ್ತೂರು ಪ್ರಕಾಶ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರ ಗುರಿ ಒಂದೇ: ಜೆಡಿಎಸ್‌ಗೆ ಅಧಿಕಾರ ದೊರಕದಂತೆ ಮಾಡುವುದು. ಅದಕ್ಕಾಗಿ ಬಿಜೆಪಿ, ವರ್ತೂರು ಬಣದ ಪಕ್ಷೇತರ ಸದಸ್ಯರು, ಕಾಂಗ್ರೆಸ್ ಸದಸ್ಯರಲ್ಲಿ ಯಾರಾದರೂ ಅಧ್ಯಕ್ಷರಾಗಲಿ ಎಂಬ ನಿಲುವನ್ನು ತಾಳಲಾಗಿದೆ.

ಆದರೆ ನಮ್ಮಡನೆ ತಾತ್ಕಾಲಿಕ ಮೈತ್ರಿ ಸಾಧಿಸುವಲ್ಲಿ ಇದುವರೆಗೂ ಕಾಂಗ್ರೆಸ್ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಹೀಗಾಗಿ ಚುನಾವಣೆಯಲ್ಲಿ ಏನಾಗುತ್ತದೆ ಎಂಬುದು ಶುಕ್ರವಾರ ಬೆಳಗಿನ ಹೊತ್ತಿಗೆ ಮಾತ್ರ ಸ್ಪಷ್ಟವಾಗಬಹುದು ಎಂಬುದು ಅವರ ಊಹೆ.

99 ಗೆಲುವು?!: ಇಂಥ ಸನ್ನಿವೇಶದಲ್ಲಿ ಶೇ 99ರಷ್ಟು ಗೆಲುವು ನಿರಾಯಾಸವಾಗಿ ನಮ್ಮದೇ ಎನ್ನುತ್ತವೆ ಜೆಡಿಎಸ್ ಮೂಲಗಳು. ಜಿ.ಪಂ.ನಲ್ಲಿ ನಮ್ಮವರೇ 12 ಸದಸ್ಯರಿದ್ದಾರೆ. ಬಹುಮತಕ್ಕೆ ಬೇಕಾಗಿರುವುದು ಮೂವರು ಸದಸ್ಯರ ಬೆಂಬಲ ಮಾತ್ರ. ಆ ಮೂವರನ್ನು ಶುಕ್ರವಾರ ಬೆಳಿಗ್ಗೆ ಹೊತ್ತಿಗೆ ನಮ್ಮವರನ್ನಾಗಿಸುತ್ತೇವೆ ಎನ್ನುತ್ತಾರೆ ಮುಖಂಡರೊಬ್ಬರು.

ಕಾಂಗ್ರೆಸ್‌ನ ವ್ಯಾಪ್ತಿಯಿಂದ ದೂರವಾಗಿರುವ ಹರೀಶ್ ಮತ್ತು ಕೃಷ್ಣಪ್ಪ, ವರ್ತೂರು ಬಣದ ಚೌಡೇಶ್ವರಿ ಮತ್ತು ಬಿಜೆಪಿ ಸಿಮೌಲ್ ಅವರಿಗೆ ಜೆಡಿಎಸ್ ಬಲೆ ಬೀಸಿದೆ. ಈ ಕಾರ್ಯಾಚರಣೆ ಅಂತಿಮ ಘಟ್ಟದಲ್ಲಿದೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸೇರಿದಂತೆ ಪಕ್ಷದ ಪ್ರಮುಖರು ಬೆಂಗಳೂರಿನಲ್ಲಿ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಒಡೆದ ಪರಿಣಾಮ ನಮಗೆ ಶಕ್ತಿ ಹೆಚ್ಚಾಗಿದೆ. ಕೊನೆಗೆ ಗೆಲುವು ನಮ್ಮದೇ ಎಂಬುದು ಅವರ ನುಡಿ.

ಪರಸ್ಪರರನ್ನು ರಾಜಕೀಯವಾಗಿ ಹಣಿಯುವ ಯತ್ನದಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮತ್ತು ಸಚಿವ ಆರ್.ವರ್ತೂರು ಪ್ರಕಾಶರ ತ್ರಿವಳಿ ವೃತ್ತದಲ್ಲಿ ಬಿಜೆಪಿ ಮತ್ತು ಜಿ.ಪಂ. ಸದಸ್ಯರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯು ಪ್ರಮುಖ ಅಂಕಣವಾಗಿ ಮಾರ್ಪಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT