ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾ ಸರೋವರ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಮುಖ ಕವಿ ಕತೆಗಾರರಾದ ಜಯಂತ ಕಾಯ್ಕಿಣಿಯವರು ತಮ್ಮ ಸೂಕ್ಷಗ್ರಹಿಕೆಗಾಗಿ, ಭಾಷೆಯ ನಾಡಿಮಿಡಿತ ಅರಿತ ಕಲೆಗಾರಿಕೆಗಾಗಿ ಹೆಸರಾದವರು. ನಾಟಕ, ರೂಪಾಂತರ, ಅಂಕಣ ಬರಹ, ಮಾಸಪತ್ರಿಕೆಯ ಸಂಪಾದಕತ್ವ ಹೀಗೆ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ  ತೊಡಗಿಸಿಕೊಂಡ ಜಯಂತರು ಚಲನಚಿತ್ರ ಗೀತರಚನಕಾರರಾಗಿ, ಕುವೆಂಪು ಕಾರಂತ ಬೇಂದ್ರೆಯವರ ಕುರಿತ ಜನಪ್ರಿಯ ಟೀವಿ ಕಾರ್ಯಕ್ರಮಗಳ ರೂವಾರಿಯಾಗಿಯೂ ಜನಪ್ರಿಯರಾಗಿದ್ದಾರೆ. ಇಲ್ಲಿರುವ ಲೇಖನದಲ್ಲಿ ಜಯಂತ ಸೃಜನಶೀಲತೆಯ ಮಾಂತ್ರಿಕ ಕ್ಷಣಗಳನ್ನು ಧೇನಿಸಿದ್ದಾರೆ.

--------------------------------------------------------------------------

ಜತೆಯಲ್ಲಿದ್ದವರೊಂದಿಗೆ ಮಾತನಾಡುತ್ತ ನಡೆಯುತ್ತಿರುವಾಗ ಒಬ್ಬನೇ ಮಾತನಾಡುತ್ತಿರುವ ಭ್ರಮೆಯಾಗಿ ನಿಂತು ಹೊರಳಿದರೆ, ಜತೆಯಲ್ಲಿದ್ದವರು ಅದ್ಯಾವಾಗಲೋ ಹಿಂದೆಯೇ ಇಲ್ಲೆಲ್ಲೋ ನಿರತರಾಗಿ ನಿಂತುಬಿಟ್ಟಿರುವುದು ಗಮನಕ್ಕೆ ಬಂದು, ವಿಚಿತ್ರ ಮೂರ್ಖ ಸಾಕ್ಷಾತ್ಕಾರದ ಕ್ಷಣವೊಂದು ಜರುಗಿಹೋಗುತ್ತದೆ. ಘನ ಗಂಭೀರವಾಗಿಯೇ ಆಡಿದ್ದ ಮಾತುಗಳು ಅತ್ಯಂತ ಭಂಗುರವಾದ ನಿರ್ವಾತದಲ್ಲಿ ಹಾಸ್ಯಾಸ್ಪದವಾಗಿ ಕಳೆದುಹೋದ ಆ ಹತ್ತಾರು ಹೆಜ್ಜೆಯ `ನಡೆ ನುಡಿ~ಯಲ್ಲಿ ನಾಟಕೀಯವಾದ, ಅಷ್ಟೇ ಸಹಜವಾದ ಸರಳಸತ್ಯವಿದೆ. ಬಹುಶಃ ಬರವಣಿಗೆಯಲ್ಲಿರುವ ಲೇಖಕನೊಬ್ಬ ನೆಚ್ಚಿಕೊಳ್ಳುವ ಆವರಣವೂ ಇಷ್ಟೇ ಭಂಗುರವಾದದ್ದು. ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ ಎನ್ನುವಷ್ಟು ಅಸ್ಪಷ್ಟವಾದದ್ದು. ನಗ್ನತೆ, ಮುಜುಗರ, ಬಿಡುಗಡೆ, ಕ್ಷೋಭೆ, ಕ್ರೋಧಗಳೊಂದಿಗೇ ಒಂದು ಮಾಯಾ ಸರೋವರದಲ್ಲಿ ಮುಳುಗೇಳುತ್ತಿರುವ ಆ ಜೀವ ಅನಾಮಿಕವಾಗಿರುತ್ತದೆ. ತನ್ನ ಕಾಂತಿಯ ಬಗ್ಗೆ ತನಗೇ ಗೊತ್ತಿರದ ಮಿಂಚುಹುಳುವಿನಂತೆ ಅಮಾಯಕವಾಗಿರುತ್ತದೆ. ತಾನು ಕಂಡುಂಡ ಲೋಕವೇ ಈ ಹೊಸ ಬೆಳಕಿನಲ್ಲಿ ಸ್ವಪ್ನದಂತೆ ಹೊಸ ಸಂಯೋಜನೆಯಲ್ಲಿ ತೀವ್ರವಾದ, ಅಷ್ಟೇ ಅಪರಿಚಿತವಾದ ಅನುಭವವನ್ನು ದಯಪಾಲಿಸುವಾಗ ಅವಾಕ್ಕಾದ ಲಿಪಿಕಾರನಾಗುತ್ತಾನೆ ಆತ. ಹೆಸರು, ವಿಳಾಸ ಕಳಕೊಂಡ ಬೇನಾಮಿ ಅರ್ಜಿದಾರನಾಗುತ್ತಾನೆ. ಆತ ಅವನಿಂದ ಹುಟ್ಟಿದ್ದು ಹೌದು, ಆದರೆ ಅವನದೇ ಅಲ್ಲ. ಅವನೇ ಮೈಮೇಲೆ ಹಾಕಿಕೊಂಡಿದ್ದು ಹೌದು. ಅವನದೇ ಅಲ್ಲ. ಇದು ಅವನ ಕಾಪಿರೈಟಿಗೆ, ವಿಸಿಟಿಂಗ್‌ಕಾರ್ಡ್‌ಗೆ, ಬಯೋಡೇಟಾಕ್ಕೆ ಸಂಬಂಧಿಸಿದ ಸಂಗತಿಯೇ ಅಲ್ಲ.

ಏಕೆಂದರೆ ಅವನ ಮೂಲಕ ವಿಶಾಲವಾದ ಮನುಜಲೋಕದ ಮನಸ್ಸೊಂದು ವಿಕಾಸಗೊಳ್ಳುತ್ತದೆ. ಮಂಗನಿಂದ ಮಾನವನಾದ ತಕ್ಷಣ ವಿಕಾಸಕ್ರಮ ಮುಗಿದು ಹೋಗಲಿಲ್ಲ. ನಾಲ್ಕು ಕಾಲಿನ ಬದಲಿಗೆ ಎರಡು ಕಾಲ ಮೇಲೆ ನಿಂತಾಕ್ಷಣ ಆಗಿ ಹೋಗಲಿಲ್ಲ. ಅಗಣಿತ ಖಂಡಾಂತರಗಳು, ಮಳೆಗಾಲಗಳು, ಪ್ರಕೃತಿ ವಿಕೋಪಗಳು, ಪಲ್ಲಟಗಳ ಮೂಲಕ, ಹಸಿವು ದಾಹ ದಣಿವಿನ ಜತೆಗೇ ಅಗಾಧದ ಕುರಿತ ಎಚ್ಚರವನ್ನೂ, ಅಸೀಮದ ಕುರಿತ ಕೌತುಕವನ್ನೂ ನಿತ್ಯದಲ್ಲೆ ಬೆಸೆದುಕೊಂಡು ತಲೆಮಾರಿನಿಂದ ತಲೆಮಾರಿಗೆ ವಲಸೆ ಬಂದ ಮನಸ್ಸು ಇದು. ಕಾಲಿಗಾದ ಗಾಯವನ್ನೂ, ಅಂತಃಕರಣಕ್ಕಾದ ಗಾಯವನ್ನೂ ನಿಚ್ಚಳವಾಗಿ ಅನುಭವಿಸುತ್ತಲೇ ಮಾಯಿಸುವ ಕಲೆಗಾಗಿ ಅಲೆದು ಬಂದ ಅಲೆಮಾರಿ ಸಂವೇದನೆ ಇದು. ಈ ಪೃಥ್ವಿಯ ಈ ಮನಸ್ಸು ಪ್ರತಿ ಜೀವದ ಮೂಲಕ ಇನ್ನೂ ವಿಕಾಸಗೊಳ್ಳುತ್ತಲೇ ಇದೆ.

ಚಿಂತನಶೀಲವಾದ ತನ್ಮಯತೆಯೇ ಈ ವಿಕಾಸಮಾರ್ಗದ ಜೀವಾಳ. ಸಂಗೀತ, ಕಲೆ, ಅಧ್ಯಾತ್ಮ, ಜ್ಞಾನ, ವಿಜ್ಞಾನ, ಸಾಹಿತ್ಯ, ವೈದ್ಯಕೀಯ ಇವೆಲ್ಲವುಗಳೂ ಅಭಿನ್ನವಾಗಿಯೇ ಈ ದಾರಿಯಲ್ಲಿವೆ. ತನ್ನ ಮುರುಕು ಮೇಜಿನ ಮೇಲೆ, ಖಾಲಿ ಹಾಳೆಯ ಎದುರು, ಮೊದಲ ಪದಕ್ಕಾಗಿ ಕಾದು ಕೂತ ಅಸಹಾಯಕ ಲೇಖಕ, ಖಂಡಿತವಾಗಿ ಏಕಾಂಗಿಯಲ್ಲ. ಮೆಟ್ಟಿಲುಗಳೇ ಇಲ್ಲದ ಸೌಧವನ್ನು ಏರಲು ಸನ್ನದ್ಧನಾದ ಸೇನಾನಿ ಆತ. ತನ್ನ ಪಡೆಯನ್ನು ಬಿಟ್ಟು ಮರಳುಗಾಡಿನಲ್ಲಿ ಮಾಯಾ ಸರೋವರದ ಕಡೆ ಚಲಿಸುತ್ತಿರುವ ಆತನೇ, ದೂರದಿಂದ ನೋಡಿದರೆ ಖಾಲಿ ಹಾಳೆಯ ಮೇಲೆ ಚಲಿಸುತ್ತಿರುವ ಇಂಕುಪೆನ್ನಿನಂತೆ ಕಾಣಿಸುತ್ತಾನೆ.

ಈ ಮಾಯಾ ಸರೋವರದಲ್ಲಿ ಆಕಾಶವೇ ಕಾಲು ಮುರಿದುಕೊಂಡು ಬಿದ್ದಿದೆ. ಬಾಣಂತಿಕೋಣೆಯ ಕತ್ತಲು, ನಿದ್ದೆ ಹೋದ ಸಂತನ ಕೈಸಡಿಲಾಗಿ ಜಾರಿದ ಪುಟ್ಟ ಪುಸ್ತಿಕೆ, ಎಷ್ಟು ಜಗ್ಗಿದರೂ ಬಾರದ ಮೃತದೇಹದ ಬೆರಳಿನ ಉಂಗುರ, ಹೊತ್ತಲ್ಲದ ಹೊತ್ತಲ್ಲಿ ಒಣಹಾಕಿದ ಬಟ್ಟೆಗಳು... ಇವೆಲ್ಲವೂ ಈ ಸರೋವರದಲ್ಲಿ ಪ್ರತಿಫಲಿಸುತ್ತಿವೆ...
ನೀಲ ನೀರ ಸೋಕಿದರೆ ಸಾಕು ಎಲ್ಲ ಬದಲಾಗುತ್ತದೆ. ತಮ್ಮ ಐಟಂ ಮುಗಿಸಿದ ಪಾತ್ರಧಾರಿಗಳು ಸಲಾಂ ಮಾಡಿ ವಿಂಗಿಗೆ ಸರಿದು ಹೊಸ ಪಾತ್ರಧಾರಿಗಳು ಬಂದು ಅಭಿನಯಿಸುತ್ತಲೇ `ನಾನು ಮದುವೆಯಾಗುವುದಿಲ್ಲ, ಒತ್ತಾಯ ಮಾಡಬೇಡಿ~ ಎಂದು ಗೋಗರೆಯುವ ಎರಡು ಜಡೆಯ ಪೋರಿಯನು, ನಿಜಕ್ಕೂ ಗಲ್ಲಿಗೇರಿಸಿ ಬಿಡುತ್ತಾರೆ.

`ಅವಳು ಇಂಗ್ಲಿಷ್ ಮೀಡಿಯಂ ಅಂತ ಮೊದಲೇ ನೀವು ಯಾಕೆ ಹೇಳಲಿಲ್ಲ?~ -- ಎಂದು ಕೂಗಿದ ನ್ಯಾಯಾಧೀಶರು ನೀರಿಗೆ ಧುಮುಕುತ್ತಾರೆ. `ನಾಳೆ ಆಪರೇಷನ್. ಬೇಗ ಮಲಗು~ ಎಂದು ನರ್ಸು ದೀಪ ಆರಿಸುತ್ತಾಳೆ. ಸರೋವರದಿಂದೆದ್ದು ನಡೆದು ಬರುವ ಕಲೆಗಾರ ಕರಗುತ್ತಿರುವ ಐಸಿನ ವಿಗ್ರಹದಂತೆ ತೋರುತ್ತಾನೆ. ವಸ್ತ್ರಹೀನ...

ಶಸ್ತ್ರಹೀನ... ಸರೋವರದಲ್ಲೊಂದು ನೆಲಮಾಳಿಗೆ ಇದೆಯಂತೆ. ಅದರಲ್ಲೊಂದು ಅಲೌಕಿಕ ಸುಗಂಧವಿದೆಯಂತೆ... ನೆನೆಯಲು ಹೋದರೆ ಮರೆತುಹೋಗುವ, ಮರೆತಾಗಷ್ಟೆ ಆಳದಲ್ಲೆಲ್ಲೋ ಅರಿವಿಗೆ ಬರುವ ಸುಗಂಧ. ಅದರ ಜಾಡಿನಲ್ಲಿ ನಡೆದರೆ ಸೀದಾ ಊರಿನ ಸಂತೆಪೇಟೆಯ ಚೌಕದ ಕಾರಂಜಿಯಿಂದ ನಡುಹಗಲಲ್ಲಿ ಎದ್ದು ಬರಬಹುದಂತೆ. ಎದ್ದು ಮನೆಕಡೆ ನಡೆಯುವಾಗ ರಸ್ತೆಯಲ್ಲಿ ಯಾರೂ `ಅದೋ ನೋಡಿ ಲೇಖಕ~ -- ಎಂದು ಹೇಳುವುದಿಲ್ಲವಂತೆ. `ಹಾಗಾದರೆ ಪ್ರಯೋಜನವೇನು?~ ಎಂದು ಕೇಳಿದರೆ ತಕ್ಷಣ ಎಲ್ಲವೂ ಮಾಯವಾಗುವುದಂತೆ.

ಜೀವನದಲ್ಲಿ ಮೊಟ್ಟಮೊದಲು ಕೇಳಿದ ದನಿ ಅಮ್ಮನದಲ್ಲವೆ. ಅದಕ್ಕೇ ಈಗಲೂ ಆ ದನಿಯಲ್ಲಿ ಅಂಥದೇನೋ ಮಾಯೆ ಇದೆಯೇ. ಇದ್ದಲ್ಲೇ ಊಹಿಸಿಕೊಳ್ಳಬಲ್ಲ ದನಿಯಲ್ಲವೇ ಅದು. ಅದೂ ಸಹ ಬಂದು ತಲುಪುವುದಿಲ್ಲವಲ್ಲ ನೀರೊಳಗೆ ಈಸುವಾಗ. ಸಾಲದ ಕಂತನ್ನು ಮರಳಿಸಲು ಬಂದ ಅಕ್ಕನಿಗೆ `ಸಾಲ ತೀರ‌್ಸು ನೀನು, ಸಾಕು. ಮಕ್ಕಳಿಗೆ ಅಂತ ಸ್ವೀಟ್ ಬಾಕ್ಸು, ಗೀಕ್ಸು ತರಾಕ ಹೋಗಬೇಡ. ತಂದ್ರ ನಾ ಏನ್ ಸಾಲಾ ಮನ್ನಾ ಮಾಡ್ತೀ ಅಂಥ ತಿಳದೀ ಏನ?~ -- ಎಂದವನ ದನಿಗೂ, `ಅಂಗ್ಡ್ಯಾಗಿಂದ ತಂದಿಲ್ರಿ. ಮನ್ಯಾಗ ಮಾಡಿದ್ನಿರಿ. ಅದಕ ತಂದೆ, ಮಕ್ಕಳು ತಿನ್ನಲಿ ಬಿಡ್ರೀ..~ ಎಂದವಳ ದನಿಗೂ ಏನು ಫರಕು? ಯಾವುದೇ ರಾಷ್ಟ್ರೀಯ ಮಟ್ಟದ ದುರ್ಘಟನೆ, ಭಾನಗಡಿ ಆದರೆ ಸಾಕು ಮನೆಯೊಳಗಿನ ಟೀವಿಯಿಂದ ಇಡೀ ದಿನ ಬರುವ ದನಿಗಳ ಮೊತ್ತವನು, ಮಜಕೂರು ಮಾತ್ರ ನೆನಪಲ್ಲುಳಿಸಿ ಮಾಯವಾದ ದನಿಗಳು ಎಲ್ಲಿ ಹೋದವು, `ಏನಿಲ್ಲ, ಹೀಗೆ ನೋಡೋಣಾಂತ ಬಂದೆ~ ಎಂದು ಅನಿರೀಕ್ಷಿತವಾಗಿ ಬಂದ ಗೆಳೆಯನನ್ನು `ಬಾ~ ಅನ್ನುವ ಮುನ್ನ ಎರಡು ಸೆಕೆಂಡಿನ ಕಡುಮೌನದ ಕಂದಕ ಏಕೆ ಆವರಿಸಿತು; ಮುಳುಗಿದಷ್ಟೂ ಮುತ್ತಿಗೆ ಹಾಕುವ ಪ್ರಶ್ನೆಗಳು, ಮುತ್ತಿಗೆ ಹಾಕಿದ ವೇಗದಲ್ಲೇ, ಕಪ್ಪುಬಿಳುಪು ಚಿತ್ರದ ನಾಯಕಿಯ ಸಖಿಯರಂತೆ ಜಲತರಂಗಗಳ ನಡುವೆ ನಿಮ್ಮನ್ನು ಬಿಟ್ಟು ದೂರವಾಗುವವು. ಮಾತುಮಾತಿಗೆ ಉರಿದು ಬೀಳುವ ಅಣ್ಣನ ಎದುರೇ, ತಂಗಿಗೆ ತಿಳಿ ಗುಲಾಬಿ ಪಾರದರ್ಶಕ ನಾಜೂಕು ರೆಕ್ಕೆಗಳು ಮೂಡಿ ಅವಳು ಮೆಲ್ಲಗೆ ಅಂತರಿಕ್ಷದಲ್ಲಿ ಏರುತ್ತ ಫ್ಯಾನಿನ ರೆಕ್ಕೆ ತಗುಲಿದ್ದೇ ಶಾಪವಿಮೋಚನೆಗೊಂಡು ಯಾವುದೋ ನಿರ್ಜನ ರೈಲೊಂದರ ಧಡೂತಿ ಡೀಸೆಲ್ ಎಂಜಿನ್ ಡ್ರೈವರ್ ಆಗುವಳು. ಸಿಗ್ನಲ್ ಬೀಳುವುದರೊಳಗೆ ತೆಳ್ಳಗೆ ಲಿಪ್‌ಸ್ಟಿಕ್ ಹಚ್ಚುವಳು.

ಹುಟ್ಟಿದ ಕ್ಷಣದಿಂದಲೇ ಅವಮಾನಿತನಾದವನು ಮನುಜ. ಅದಕ್ಕೆ `ಮಾನ~ವ ಎಂದರೋ ಏನೋ. ಸಾಬೀತು ಮಾಡುತ್ತಲೇ ಸತ್ತ ನತದೃಷ್ಟ ಅಸಂಖ್ಯ ಪೂರ್ವಿಕರ ಮೂಕ ಸನ್ನೆಗಳ ಉಸಿರುಗುಳ್ಳೆಗಳ ನಡುವೆ ಈಸುತ್ತ ಈಗ ತಾನೆ ಹುಟ್ಟಿಬಂದ ಬೆಳದಿಂಗಳ ಎಸಳಿನಂಥ ಜೀವವೊಂದನ್ನು ನಡುಗುವ ಬೆರಳುಗಳಲ್ಲಿ ಹಿಡಿದಿದ್ದಾನೆ ಸ್ವಪ್ನಸಂಧ. ಕೈಯಿಂದ ಜಾರುವಂತಿದೆ ಕೂಸು... ಭಯ ಹುಟ್ಟಿಸುವಷ್ಟು ನಾಜೂಕಾಗಿದೆ... ನಂಬಲಾರದಂಥ ಆನಂದದಲ್ಲಿದೆ... ಅದು ನಕ್ಕರೆ ಸಾಕು ಎಲ್ಲರ ಆತ್ಮ ಗೌರವ ಮರಳುತ್ತದೆ... ಆತ್ಮಸಾಕ್ಷಿ ಅರಳುತ್ತದೆ. ಇಡೀ ಲೋಕ ಮನೆಯಾಗುತ್ತದೆ... ಅಂತರಂಗ, ಬಹಿರಂಗ, ಏಕಾಂತ ಇತ್ಯಾದಿ ಪದಗಳೆಲ್ಲ ಕುಂಟುತ್ತಾ ನಡೆದು ಪದಕೋಶಗಳಲ್ಲಿ ಮರೆಯಾಗುತ್ತವೆ. ಕಾರಣ ಕೇಳದ, ರುಜುವಾತು ಕೇಳದ, ಜುಲುಮಿ ಮಾಡದ ಅಕ್ಕರೆಯೊಂದು ಉಕ್ಕಿ ಬರುತ್ತದೆ. ನಾವು ತಿನ್ನುವುದ ಮುಗಿಸುವುದನ್ನೇ ಕಾಯುತ್ತಾ ನಿಂತು, ತಕ್ಷಣ ನಾಜೂಕಾಗಿ ಅಗುಳೂ ಉಳಿಯದಂತೆ ಬಾಚಿ ಟೇಬಲು ಸಾಫು ಮಾಡಿ ಮುಂದಿನ ಟೇಬಲಿಗೆ ಸಾಗಿದ ಪುಟಾಣಿ ಪೋರ ಎಲ್ಲರ ತಾಯಿಯಾಗುವುದನ್ನು ಕಂಡು ಕೊರಳು ಬಿಗಿದು ನಮಿಸುವಂತೆ ಮಾಡುತ್ತದೆ...

ಮಾನವೀಯಗೊಳಿಸುವುದಷ್ಟೇ ಅಲ್ಲ, ನಮ್ಮನ್ನು ಮಾನವಂತರಾಗಿಸುವುದೇ ಓದು ಮತ್ತು ಬರವಣಿಗೆಯ ಮೂಲ ಜೀವಾಳ. ಬರವಣಿಗೆಯ ಮಾಯಾ ಸರೋವರ ನಮ್ಮನ್ನು ಬೆಳಕಿನೆಡೆ ಚಲಿಸುವಂತೆ ಜಂಗಮಗೊಳಿಸುತ್ತಿದೆ. ಎಂಥ ಸ್ಥಾವರ ಆಮಿಷಗಳನ್ನು ಕಡೆಗಣಿಸಿ ಮುನ್ನಡೆಯುವಂಥ ಆತ್ಮಸಾಕ್ಷಿಯನ್ನು ಜ್ವಲಂತವಾಗಿರಿಸುತ್ತದೆ. ಹಳೆ ವೆಸ್ಟರ್ನ್ ಚಿತ್ರಗಳಲ್ಲಿ ಸೂರ್ಯಾಸ್ತ ಸೂರ್ಯೋದಯಗಳ ಗುಡ್ಡಗಳೆಡೆ ಏಕಾಂಗಿ ಅಶ್ವಾರೋಹಿ ಕೈಲೊಂದು ಹರುಕು ನಕಾಶೆ ಹಿಡಿದು ನಿಗೂಢ ನಿಕ್ಷೇಪಗಳನ್ನು ಅರಸಿ ಮರಳುಗಾಡಿನಲ್ಲಿ ಚಲಿಸುವಂತೆ, ಬರಹಗಾರ ತನ್ನ ನಿತ್ಯದ ಹರುಕು ವಿವರಗಳಿಂದ ತಾನೇ ರೂಪಿಸಿಕೊಂಡ ನಕಾಶೆಯೊಂದನ್ನು ಕೈಲಿ ಹಿಡಿದು ಏಕಾಂಗಿಯಾಗಿ ಸದ್ದಿಲ್ಲದೆ ತನ್ನೊಳಗೇ ಇರುವ ನಿಗೂಢ ನಿಧಿಯೆಡೆಗೆ ಚಲಿಸುತ್ತಾನೆ. ಖಾಸಗಿಯಾದಷ್ಟೂ ಸಾರ್ವಜನಿಕವಾಗುವುದು, ಕ್ಷಣಿಕವಾದಷ್ಟೂ ಸಾರ್ವಕಾಲಿಕವಾಗುವುದು, ಅವನ ಜೀವನಾನುರಕ್ತಿಯ ತೀವ್ರತೆಯನ್ನೂ, ಅವನ ವಿಸ್ತೃತ ಕೌಟುಂಬಿಕತೆಯ ಪಾರದರ್ಶಕತೆಯನ್ನೂ ಮತ್ತು ಅವನ ಹವ್ಯಾಸದ ಕಸುಬಿನ ಕಾಯಕನಿಷ್ಠೆಯನ್ನೂ ಅವಲಂಬಿಸಿದ ಸಂಗತಿಯಾಗಿದೆ.

ನಿಧಿಯ ಸಾಧ್ಯತೆಗಳು ಯಾನ ಕಡಿದಾದಷ್ಟೂ ಹೆಚ್ಚು, ಸುಲಭ ಮಾಡಿಕೊಂಡಷ್ಟೂ ಕಡಿಮೆ!

ದಂಡೆಯ ಮೇಲೆ ವೇಷ ಭೂಷ, ಹೆಸರು, ಗಿಸರು ಕಳಚಿಟ್ಟು ಅನಾಮಿಕರಾಗಿ ಮೆಲ್ಲಗೆ ಸದ್ದಿಲ್ಲದೆ ಇಳಿದಾಗಷ್ಟೇ ತೆರೆಯುತ್ತದಂತೆ ಈ ಮಾಯಾ ಸರೋವರ. ಬದಲಿಗೆ ಕನ್ನಡಿಯಂತೆ ಅದರಲ್ಲಿ ಸ್ವಂತದ ಮುಖವನ್ನೇ ನೋಡುತ್ತ ಕೂತುಕೊಂಡರೆ ಅದು ಬರೇ ಗಾಜಿನ ಹಾಳೆಯಾಗಿಯೇ ಉಳಿಯುತ್ತದಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT