ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾಲೋಕ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನರ್ತಿಸುವ ಮೊಟ್ಟೆ
`ಕಾಮಾಲೆ ಕಣ್ಣಿಗೆ ಜಗತ್ತೆಲ್ಲಾ ಹಳದಿ~ ಈ ನುಡಿಯನ್ನು ನೀವೆಲ್ಲಾ ಖಂಡಿತಾ ಕೇಳಿರುತ್ತಿರಿ. ಆದರೆ, ಜಾದೂಗಾರನ ಕಣ್ಣಿಗೆ ಜಗತ್ತೆಲ್ಲಾ ಜಾದೂಮಯ. ಪ್ರಕೃತಿಯಲ್ಲಿ  ಪ್ರತಿದಿನವೂ ಒಂದಲ್ಲ ಒಂದು ರೀತಿ ಜಾದೂ ನಡೆಯುತ್ತಲೇ ಇರುತ್ತದೆ.
 

ಅದೇ ರೀತಿ ಮಕ್ಕಳು ದಿನ ನಿತ್ಯ ಓದುವ ವಿಜ್ಞಾನ, ಗಣಿತ, ಸಮಾಜ, ಗೃಹಿಣಿಯರು ಬಳಸುವ ವಸ್ತುಗಳಲ್ಲಿ ಪ್ರತಿ ದಿನದ ಆಗುಹೋಗುಗಳಲ್ಲಿ ...ಹೀಗೆ ಪ್ರತೀ ವಿಷಯದಲ್ಲೂ ಕುತೂಹಲಕರ, ವಿಸ್ಮಯಕರ ಜಾದೂ ಅಡಗಿದೆ.

ಇಂತಹ ಜಾದೂಗಳನ್ನು ಮನೆಗಳಲ್ಲಿ ಪ್ರಯೋಗ ಮಾಡಿ ಅದರೊಂದಿಗೆ ಮೋಜು, ಒಂದಿಷ್ಟು ಸಾಮಾನ್ಯ ಜ್ಞಾನ ಪಡೆಯುವ  ಹಂಬಲ ನಿಮ್ಮದಾಗಿದ್ದರೆ ಈ ಹೊಸ ಅಂಕಣ (ಮಾಯಾ ಲೋಕ) ಅಂತಹ ಪ್ರಯೋಗಗಳ ಮಾಲೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ.

ಕೋಳಿ ಮೊಟ್ಟೆಯೂ ನೃತ್ಯ ಮಾಡುವುದಾದರೆ ಹೇಗಿರುತ್ತದೆ ಅಲ್ವಾ. ಇದೇನು ಮೊಟ್ಟೆ ನೃತ್ಯ ಮಾಡುವುದಾ. ಇವರಿಗೇನು ತಲೆ ಕೆಟ್ಟಿದೆಯಾ ಅಂತ ಯೋಚಿಸ್ತಿರಾ. ಇದು ಖಂಡಿತಾ ಸಾಧ್ಯ. ನೀವೂ ಬೇಕಿದ್ದರೆ ಮನೆಯಲ್ಲಿಯೇ ಇದನ್ನು ಪ್ರಯೋಗಿಸಿ ನೋಡಿ.

ಒಂದು ಕೋಳಿಯ ಮೊಟ್ಟೆಗೆ ಸಣ್ಣ ರಂಧ್ರ ಮಾಡಿ ಒಳಗಿರುವ ಎಲ್ಲಾ ದ್ರವವನ್ನೂ  ತೆಗೆದುಬಿಡಬೇಕು. ನಂತರ ಅದರಲ್ಲಿ ಸ್ವಲ್ಪವೇ ಸ್ವಲ್ಪ ಪಾದರಸ ತುಂಬಿ  ರಂಧ್ರವನ್ನು ಮೇಣದಿಂದ ಅಥವಾ ಗೋಧಿಹಿಟ್ಟಿನಿಂದ ಮುಚ್ಚಬೇಕು.

ಈಗ ಈ ಮೊಟ್ಟೆಯನ್ನು ಚೆನ್ನಾಗಿ ಕಾದಿರುವ ಮರಳಿನ ಮೇಲೆ ಇಟ್ಟೊಡನೆಯೇ ಆ ಮರಳಿನ ಕಾವಿಗೆ ಮೊಟ್ಟೆಯು ಕುಣಿಯಲಾರಂಭಿಸುತ್ತದೆ!

ಇದಕ್ಕೆ ಕಾರಣ ಇಷ್ಟೇ. ಪಾದರಸಕ್ಕೆ ಸ್ವಲ್ಪವೇ ಸ್ವಲ್ಪ ಬಿಸಿ ತಾಗಿದರೆ ಸಾಕು ಅದು ಮೇಲಕ್ಕೆ ಹಾರುತ್ತದೆ. ಈ ಪ್ರಯೋಗ ಮಾಡುವಾಗ ಮಾಡಬೇಕಾದ ಜಾಗ್ರತೆ ಏನೆಂದರೆ, ಪಾದರಸವು ವಿಷಯುಕ್ತವಾಗಿರುವುದರಿಂದ ಅದನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸಬೇಕು.

ಪ್ರಯೋಗವನ್ನು ಒಂದು ಸಲ ಮಾಡಿ ನೋಡಿ, ಖಂಡಿತವಾಗಿಯೂ ಪಾದರಸದ ಯಾವುದೇ ಗುಣಗಳು ಮರೆತು ಹೋದರೂ ಕೂಡ ಅದಕ್ಕೆ ಬಿಸಿ ತಾಗಿದ ಕೂಡಲೇ ಮೇಲಕ್ಕೆ ಹಾರುವ ಗುಣ ಮಾತ್ರ ಮರೆತು ಹೋಗಲಾರದು.     

ಜಾದೂಪತ್ರ!
 ಆಕಾಶ ನೀಲಿ ಬಣ್ಣವೇ ಯಾಕೆ ಅಂತ ಯೋಚನೆ ಮಾಡಿದ್ದೀರಾ. ಯಾಕೆ ಆಕಾಶಕ್ಕೆ ಕೆಂಪು, ಹಳದಿ, ಕಪ್ಪು, ಹಸಿರು ಬಣ್ಣ ಇಲ್ಲ ಅಂತ ಯೋಚಿಸಿದ್ದೀರಾ. ನಿಮಗೊಂದು ಸತ್ಯ ಗೊತ್ತಾ. ಆಕಾಶದ ಬಣ್ಣ ನೀಲಿಯಾಗಿಲ್ಲ. ನಮಗೆ ಮಾತ್ರವೇ ಹಾಗೆ ಕಾಣಿಸುತ್ತದೆ.

ಸೂರ‌್ಯನ ಬೆಳಕು ನಮ್ಮ ಭೂಮಿಯ ವಾತಾವರಣ  ಪ್ರವೇಶಿಸಿದಂತೆ ದೂಳು ಮತ್ತು ಅನಿಲದ ಕಣಗಳು ಬೆಳಕನ್ನು ಚೆದುರಿಸಿ ಬಿಡುತ್ತವೆ.  ಬೆಳಕಿನಲ್ಲಿ ಏಳು ವರ್ಣಗಳಿರುವುದು ನಿಮಗೆಲ್ಲಾ ಗೊತ್ತಿದೆ. ಅವುಗಳ ಪೈಕಿ ನೀಲಿ ಬಣ್ಣದ ತರಂಗಾಂತರ ಉಳಿದ ಬಣ್ಣಗಳಿಗಿಂತ ಕಡಿಮೆ. ಆದುದರಿಂದಲೇ ಅದು ಉಳಿದ ಬಣ್ಣಗಳಿಗಿಂತ ಹೆಚ್ಚು ಚೆದುರುತ್ತದೆ. ಇದರ ಪರಿಣಾಮವಾಗಿ ಆಕಾಶ ನೀಲಿಯಾಗಿ ಕಾಣಿಸುತ್ತದೆ.

ಹ್ಞಾ, ನೀಲಿ ಬಣ್ಣ ಎಂದ ಕೂಡಲೇ ನನಗೆ ಒಂದು ಜಾದೂ ನೆನಪಾಯಿತು. ಒಂದು ಖಾಲಿ ಕಾಗದ ತೆಗೆದುಕೊಳ್ಳಿ. ಎಲ್ಲರಿಗೂ ಅದು ಖಾಲಿಯಾಗಿದೆ ಎಂದು ತೋರಿಸಿ. ನಂತರ ಈಗ ಅದನ್ನು ತೆಗೆದು ಒಂದು ಪಾತ್ರೆಯಲ್ಲಿ ಇರುವ ನೀರಿಗೆ ಹಾಕಿ. ಇಲ್ಲಿಗೆ ಈ ಜಾದೂ ಮುಗಿಯಿತು. ಏನಾಯ್ತು. ಕಾಗದವನ್ನು ನೀರಿಗೆ ಹಾಕೋದ್ರಲ್ಲಿ  ಏನು ಜಾದೂ ಇದೆ ಅಂತೀರಾ? ಈಗ ನೀರಿಗೆ ಹಾಕಿದ ಕಾಗದವನ್ನು ತೆಗೆದು ನೋಡಿ...ಅಲ್ಲಿ ನೀಲಿ ಬಣ್ಣದ ಅಕ್ಷರಗಳು ಮೂಡಿರುತ್ತವೆ! ನೀಲಿ ಬಣ್ಣ ಎಲ್ಲಿಂದ ಬಂತು ಅಂತ ಯೋಚಿಸ್ತಿದ್ದೀರಾ?

ಒಂದು ಸಣ್ಣ ಲೋಟದಲ್ಲಿ ಸ್ವಲ್ಪ ಹಾಲು ತೆಗೆದುಕೊಳ್ಳಿ. ಒಂದು ಸಣ್ಣ ಕಡ್ಡಿಯನ್ನು ಹಾಲಿನಲ್ಲಿ ಅದ್ದಿ ಖಾಲಿ ಕಾಗದದ ಮೇಲೆ ನಿಮಗೆ ಏನೇನು ಬರೆಯಬೇಕು ಅಂತ ಅನ್ನಿಸುತ್ತದೋ ಅದನ್ನು ಬರೆಯಿರಿ. ನಂತರ ಆ ಕಾಗದವನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ನಂತರ ಅದು ಖಾಲಿ ಬಿಳಿ ಕಾಗದದಂತೆ ಕಾಣುತ್ತದೆ. ಈಗ ನೀವು ಈ ಜಾದೂ ಮಾಡುವುದಕ್ಕೆ ರೆಡಿ.

ನಿಮ್ಮ ವೀಕ್ಷಕರಿಗೆಲ್ಲ ಆ ಕಾಗದ ತೋರಿಸಿ ಅದನ್ನು ನೀರಿನಲ್ಲಿ ಹಾಕಿ. ತಕ್ಷಣವೇ ನೀಲಿ ಬಣ್ಣದ ಅಕ್ಷರಗಳು ಕಾಣಿಸುತ್ತವೆ.  ಪ್ರೇಯಸಿಗೆ ಪ್ರೇಮ ಪತ್ರ ಬರೆದು ಆಕೆಯನ್ನು ಒಲಿಸಿಕೊಳ್ಳಬೇಕು ಎಂದು ಯೋಚಿಸುತ್ತಿರುವವರು ಈ ಪ್ರಯೋಗವನ್ನು ಬಳಸಿ ನೋಡಿ. ನಿಮ್ಮ ಜಾದೂ ಬಲೆಗೆ ಪ್ರೇಮಿ ಬೀಳುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT