ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ಕುಸಿತ: ವಾಹನ ಉದ್ಯಮ ತಳಮಳ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತದ ವಾಹನ ಉದ್ಯಮಕ್ಕೆ ಪ್ರಸಕ್ತ ಹಣಕಾಸು ವರ್ಷ ಸಂಕಷ್ಟದ ಕಾಲದಂತಿದೆ. ಕಾರು ಕಂಪೆನಿಗಳಿಗೆ ಮಾರಾಟ ಪ್ರಕ್ರಿಯೆಯಂತೂ ಸವಾಲಿನ ಸಂಗತಿ ಎನಿಸಿದೆ. ಇದೇ ಕಾರಣವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟದ ನಿರೀಕ್ಷೆಯನ್ನು `ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಸಂಘಟನೆ~(ಎಸ್‌ಐಎಎಂ) ಶೇ 1-3ರ ಮಟ್ಟಕ್ಕೆ ತಗ್ಗಿಸಿದೆ.

ಜುಲೈನಲ್ಲಿ ಕಾರುಗಳ ಮಾರಾಟ ಪ್ರಗತಿ ನಿರೀಕ್ಷೆಯನ್ನು ಶೇ 9ರಿಂದ 11ರ ಪ್ರಮಾಣದಲ್ಲಿ ಇರಿಸಿದ್ದ `ಎಸ್‌ಐಎಎಂ~, ಹೀಗೆ ಕಾರು ಮಾರುಕಟ್ಟೆ ಮುನ್ನೋಟ  ತಗ್ಗಿಸುತ್ತಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿಯಾಗಿದೆ.

`2016ರೊಳಗೆ 14500 ಕೋಟಿ ಡಾಲರ್(ರೂ. 7.68 ಲಕ್ಷ ಕೋಟಿ) ವಾರ್ಷಿಕ ವಹಿವಾಟು ಗುರಿ ಇಟ್ಟುಕೊಂಡಿರುವ ಭಾರತದ ವಾಹನೋದ್ಯಮ, ತನ್ನ ಮಹತ್ವಾಂಕ್ಷೆಯ -ಆಟೊಮೋಟೀವ್ ಮಿಷನ್ ಪ್ಲಾನ್- ಸಾಧನೆ ಬಹಳ ಕಷ್ಟದ್ದಾಗಿದೆ~ ಎಂದು `ಎಸ್‌ಐಎಎಂ~ ಭವಿಷ್ಯ ನುಡಿದಿದೆ.

`ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿನ ಕಡಿಮೆ ಮಾರಾಟ ಸಾಧನೆಯನ್ನೂ, ದೇಶದ ಮೇಲ್ಮಟ್ಟದ ಆರ್ಥಿಕ ವ್ಯವಸ್ಥೆಯಲ್ಲಿನ ಒಟ್ಟಾರೆ ಸ್ಥಿತಿಯನ್ನೂ ಅವಲೋಕಿಸಿದರೆ ಕಾರುಗಳ ಮಾರಾಟ ಏನಿದ್ದರೂ ಈ ವರ್ಷ ಶೇ 1ರಿಂದ 3ರಷ್ಟು ಕೆಳ ಮಟ್ಟದಲ್ಲಿಯೇ ಇರಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ~ ಎಂದು `ಎಸ್‌ಐಎಎಂ~ ಅಧ್ಯಕ್ಷ ಎಸ್.ಶಾಂಡಿಲ್ಯ ವಿಶ್ಲೇಷಿಸಿದ್ದಾರೆ.

ಇಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 2008-09ರಲ್ಲಿಯೂ ಇಂತಹುದೇ ಸಂದರ್ಭ. ಆಗ ಕಾರುಗಳ ಮಾರಾಟ ಪ್ರಗತಿ ಶೇ 0.18ರಷ್ಟು ಕಳಪೆ ಮಟ್ಟದ್ದಾಗಿದ್ದಿತು. ಈ ವರ್ಷವೂ ಬಹುತೇಕ ಅಂತಹುದೇ ಪರಿಸ್ಥಿತಿ ಕಾಣುವಂತಾಗಿದೆ~ ಎಂದು ನಾಲ್ಕು ವರ್ಷಗಳ ಹಿಂದಿನ `ಜಾಗತಿಕ ಆರ್ಥಿಕ ಹಿಂಜರಿತ~ ದಿನಗಳನ್ನು ನೆನಪಿಸಿದರು.

ದುಬಾರಿಯಾಗಿರುವ ಪೆಟ್ರೋಲ್, ಹೆಚ್ಚಿನ ಬಡ್ಡಿದರ, ಸದ್ಯದ ಆರ್ಥಿಕ ಪರಿಸ್ಥಿತಿ, ಜನರಲ್ಲಿನ ಹತಾಶ ಮನೋಭಾವ ಇವೆಲ್ಲವೂ ಸೇರಿಕೊಂಡು ವಾಹನಗಳ ಮಾರುಕಟ್ಟೆ ಮೇಲೆಯೂ ಪರಿಣಾಮ ಬೀರಿವೆ. ಸದ್ಯದ ಹಬ್ಬಗಳ ಸಾಲಿನಲ್ಲಿಯೂ ಆಶಾದಾಯಕ ದಿನಗಳೇನೂ ಕಾಣುತ್ತಿಲ್ಲ. ಹಾಗಾಗಿ ಈ ವರ್ಷ ಒಟ್ಟಾರೆಯಾಗಿ ವಾಹನಗಳ ಮಾರಾಟದಲ್ಲಿ ಶೇ 5ರಿಂದ 7ರಷ್ಟು ಹೆಚ್ಚಳವನ್ನಷ್ಟೇ ಕಾಣಬಹುದಾಗಿದೆ ಎಂದರು.

ಕಾರು ಸೇರಿದಂತೆ ಪ್ರಯಾಣಿಕರ ಸಂಚಾರದ ವಾಹನಗಳ ಒಟ್ಟಾರೆ ಮಾರಾಟದ ಪ್ರಗತಿಯೂ ಶೇ 11-13ರ ಮಟ್ಟಕ್ಕೆ ಬದಲಾಗಿ ಶೇ 8-10ರ ಪ್ರಮಾಣಕ್ಕೇ ಮಿತವಾಗಲಿದೆ. ದ್ವಿಚಕ್ರ ವಾಹನಗಳ ಮಾರಾಟವೂ ಈ ಹಿಂದೆ ನಿರೀಕ್ಷೆ ಮಾಡಿದ್ದ ಶೇ 11-13ರ ಪ್ರಮಾಣಕ್ಕೆ ಬದಲಾಗಿ ಶೇ 5-7ರ ಮಟ್ಟದವರೆಗಷ್ಟೇ ಸಾಧನೆ ಕಾಣಲಿದೆ. ವಾಣಿಜ್ಯ ಬಳಕೆ ವಾಹನಗಳ ಮಾರಾಟವೂ ಈ ಮೊದಲು ಅಂದಾಜು ಮಾಡಿದ್ದಂತೆ ಶೇ 6-8ರಷ್ಟು ಪ್ರಗತಿ ಕಾಣಲಾರದು. ಅದೇನಿದ್ದರೂ ಶೇ 3-5ರ ಮಟ್ಟದ ಸಾಧನೆ ತೋರಬಹುದಾಗಿದೆ.

ಸರಕು ಸಾಗಣೆ ವಾಹನಗಳಿಗೂ ಬೇಡಿಕೆ ತಗ್ಗಲಿದೆ. ಅವುಗಳ ಮಾರಾಟವೂ ಶೇ 6-8ರ ಮಟ್ಟಕ್ಕಿಂತ ಕಡಿಮೆ ಆಗಲಿದೆ. ಆಟೋ ರಿಕ್ಷಾಗಳ ಮಾರಾಟ ಕೇವಲ ಶೇ 2ಕ್ಕಿಂತಲೂ ಕಡಿಮೆ ಇರಲಿದೆ ಎಂದು ವಿವರಿಸಿದರು.
ಇದೇ ಕಾರಣವಾಗಿ ಮಹತ್ವಾಂಕ್ಷೆಯ `ಆಟೊಮೋಟೀವ್ ಮಿಷನ್ ಪ್ಲಾನ್~ ಗುರಿ ಸಾಧನೆ 2016ರೊಳಗೆ ಈಡೇರುವುದು ಕಷ್ಟವಾಗಲಿದೆ. ಹಾಗಾಗಿ ಈ ಗುರಿ ಸಾಧನೆಯ ಅವಧಿಯನ್ನು 2026ಕ್ಕೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು   ವಿವರಿಸಿದರು.

ತಗ್ಗಿದ ಬೈಕ್ ಮಾರಾಟ ವೇಗ
ನವದೆಹಲಿ(ಪಿಟಿಐ):
ಭಾರತದಲ್ಲಿ ಒಟ್ಟಾರೆ ವಾಹನಗಳ ಮಾರಾಟ ಸೆಪ್ಟೆಂಬರ್‌ನಲ್ಲಿ ಶೇ 9.43ರಷ್ಟು ತಗ್ಗಿದೆ. ಇದು ಕಳೆದ ಮೂರೂಮುಕ್ಕಾಲು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಕುಸಿತವಾಗಿದೆ.  ಸೆಪ್ಟೆಂಬರ್‌ನಲ್ಲಿ ಕಾರುಗಳ ಮಾರಾಟ ಶೇ 5.36ರಷ್ಟು ತಗ್ಗಿದ್ದರೆ, ಮೋಟಾರ್ ಬೈಕ್ ಮಾರಾಟದಲ್ಲಿ ಶೇ 18.85ರಷ್ಟು ಕುಸಿತವಾಗಿದೆ.
 
ನವರಾತ್ರಿಯಿಂದ ಸಂಕ್ರಾತಿವರೆಗಿನ ಸರಣಿ ಹಬ್ಬಗಳ ಅವಧಿ ಬಗ್ಗೆ ಬಹಳ ಆಶಾವಾದದಿಂದಿದ್ದ ವಾಹನ ಉದ್ಯಮಿಗಳಲ್ಲಿ ಇದು ಭಾರಿ ಕಳವಳವನ್ನುಂಟು ಮಾಡಿದೆ.2011ರ ಸೆಪ್ಟೆಂಬರ್‌ನಲ್ಲಿ ಒಟ್ಟಾರೆ 15.66 ಲಕ್ಷ ವಾಹನಗಳು ಮಾರಾಟವಾಗಿದ್ದವು. ಈ ಬಾರಿ ಸೆಪ್ಟೆಂಬರ್‌ನಲ್ಲಿ ವಾಹನ ಮಾರಾಟ 14.18 ಲಕ್ಷಕ್ಕೆ ತಗ್ಗಿದೆ.

ಕಾರುಗಳ ಮಾರಾಟವೂ 1.66 ಲಕ್ಷದಿಂದ 1.57 ಲಕ್ಷಕ್ಕೆ ಕುಸಿದಿದೆ. ಈ ಬಾರಿ 10.69 ದ್ವಿಚಕ್ರ ವಾಹನಗಳಷ್ಟೇ(ಶೇ 12.92 ಇಳಿಕೆ) ಮಾರಾಟ ಕಂಡಿವೆ. ಇದರಲ್ಲಿ ಮೋಟಾರ್ ಬೈಕ್ ಮಾರಾಟ ಸಂಖ್ಯೆಯೂ 9.29 ಲಕ್ಷದಿಂದ 7.53 ಲಕ್ಷಕ್ಕಿಳಿದಿದೆ.ಕಾರು ಮಾರುಕಟ್ಟೆಯಲ್ಲಿ ಹುಂಡೈ ಶೇ 13.88, ಟಾಟಾ ಮೋಟಾರ್ಸ್ ಶೇ 18.46ರಷ್ಟು ಕುಸಿತ ಕಂಡಿದ್ದರೆ, ಮಾರುತಿ ಸುಜುಕಿ ಮಾತ್ರವೇ ಶೇ 3.43ರಷ್ಟು ಅಲ್ಪ ಪ್ರಮಾಣದ ಸಾಧನೆ ತೋರಿದೆ.

ಮೋಟಾರ್ ಬೈಕ್‌ಗಳಲ್ಲಿ `ಹೀರೋ~ ಭಾರಿ ಹಿನ್ನಡೆ ಕಂಡಿದೆ. ಹೀರೋ ಬೈಕ್‌ಗಳ ಮಾರಾಟದಲ್ಲಿ ಶೇ 30.59ರಷ್ಟು ಇಳಿಕೆಯಾಗಿದೆ. ಬಜಾಜ್ ಬೈಕ್‌ಗಳೂ ಶೇ 19.37ರಷ್ಟು, ಟಿವಿಎಸ್ ಬೈಕ್‌ಗಳು ಶೇ 30.51ರಷ್ಟು ಕಡಿಮೆ ಮಾರಾಟ ಕಂಡಿವೆ. ಹೋಂಡಾ ಕಂಪೆನಿ ಬೈಕ್‌ಗಳ ಮಾರಾಟದ್ಲ್ಲಲಿ ಮಾತ್ರ ಶೇ 77.44ರಷ್ಟು ಭಾರಿ ಹೆಚ್ಚಳವಾಗಿದೆ.

ಸ್ಕೂಟರ್ ಮಾರಾಟದಲ್ಲಷ್ಟೇ `ಹೀರೊ~ ಕಂಪೆನಿ ದಿಸೆ ತಿರುಗಿದೆ. ಅದು 49340 ಸ್ಕೂಟರ್‌ಗಳನ್ನು ಮಾರಿ ಶೇ 46.25ರ ಪ್ರಗತಿ ದಾಖಲಿಸಿದೆ. ಹೋಂಡಾ ಸ್ಕೂಟರ್‌ಗಳೂ ಶೇ 15.51ರಷ್ಟು ಸಾಧನೆ ತೋರಿವೆ. ಟಿವಿಎಸ್ ಸ್ಕೂಟರ್ ಮಾರಾಟ ಶೇ 26.71ರಷ್ಟು ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT