ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಅಭಿವೃದ್ಧಿಗೆ ಶೀಘ್ರ ಅನುಮತಿ: ಬೆಲ್ಲದ

Last Updated 10 ಅಕ್ಟೋಬರ್ 2011, 5:35 IST
ಅಕ್ಷರ ಗಾತ್ರ

ಧಾರವಾಡ: `ಇಲ್ಲಿನ ಸೂಪರ್ ಮಾರುಕಟ್ಟೆ ಅಭಿವೃದ್ಧಿ ಕುರಿತು ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗಿದೆ. ಸಧ್ಯದಲ್ಲಿಯೇ ಸಚಿವ ಸಂಪುಟದ ಒಪ್ಪಿಗೆ ದೊರೆಯಲಿದ್ದು, ನಗರದ ಜನತೆಗೆ ಇದು ದೀಪಾವಳಿ ಕೊಡುಗೆಯಾಗಲಿದೆ~ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5.35 ಎಕರೆ ವಿಸ್ತೀರ್ಣ ಹೊಂದಿರುವ ಸೂಪರ್ ಮಾರುಕಟ್ಟೆಯಲ್ಲಿ 3.20 ಎಕರೆ ಜಾಗೆಯಲ್ಲಿ 83 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ನೀಲನಕ್ಷೆ ತಯಾರಿಸಲಾಗಿದ್ದು, ನೆಲಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಒದಗಿಸಲಾಗುವುದು. ಮಾರುಕಟ್ಟೆಯ ಬೀದಿ ಬದಿ ವ್ಯಾಪಾರಿಗಳಿಗೆ ಕಟ್ಟಡದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಒದಗಿಸಲಾಗುವುದು. ಒಟ್ಟು 750 ವೆಂಡರ್ಸ್‌ಗೆ ಕಟ್ಟೆ ಕಟ್ಟಿ ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡಲಾಗುವುದು ಎಂದು ಹೇಳಿದರು.

ಸೂಪರ್ ಮಾರುಕಟ್ಟೆ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಆದರೆ ಜಾತ್ಯತೀತ ಜನತಾದಳದ ಸದಸ್ಯರು ರಾಜಕೀಯ ಲಾಭಕ್ಕಾಗಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು, ಆದರೆ ವಿರೋಧ ಪಕ್ಷಗಳು ಇದನ್ನೇ ಮುಂದುವರಿಸಿಕೊಂಡು ಬಂದಿವೆ ಎಂದರು.

`ಸೂಪರ್ ಮಾರುಕಟ್ಟೆಯ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಒಂದು ವಾರದೊಳಗೆ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ. 3 ಲಕ್ಷ ರೂ. ವೆಚ್ಚದಲ್ಲಿ ಬಾಂಬೆ ರೆಸ್ಟೋರಂಟ್ ಸಮೀಪ ಸುಲಭ ಶೌಚಾಲಯ ನಿರ್ಮಾಣ 15 ದಿನದೊಳಗೆ ಆರಂಭವಾಗಲಿದೆ~ ಎಂದು ಮೇಯರ್ ಪೂರ್ಣಾ ಪಾಟೀಲ ಹೇಳಿದರು.

`ಸೂಪರ್ ಮಾರುಕಟ್ಟೆ ಅಭಿವೃದ್ಧಿಗೆ ಬಹಳ ವರ್ಷಗಳಿಂದ ಮೇಯರ್‌ಗಳು ಶಿಲಾನ್ಯಾಸ ಹಾಕುತ್ತಿದ್ದಾರೆ. ಆದರೆ ಆ ಸಂದರ್ಭದಲ್ಲಿ ಆಡಳಿತದಲ್ಲಿದ್ದವರು ಸುಧಾರಣೆ ಮಾಡಲಿಲ್ಲ. ಈಗ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದ್ದರೂ ವಿರೋಧ ಪಕ್ಷದವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ~ ಎಂದು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾ ಡೋರ್ಲೆ ಹೇಳಿದರು.

ಸೂಪರ್ ಮಾರುಕಟ್ಟೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಮಾರುಕಟ್ಟೆ ಅಭಿವೃದ್ಧಿಗೆ ಒಪ್ಪಿಗೆ ಪಡೆಯಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಅಗತ್ಯ ಬಿದ್ದರೆ ಸರ್ವಪಕ್ಷದ ನಿಯೋಗವನ್ನು ಸಹ ಕೊಂಡೊಯ್ಯಲಾಗುವುದು ಎಂದು ಡೋರ್ಲೆ ತಿಳಿಸಿದರು.

ಧಾರವಾಡದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸೂಪರ್ ಮಾರುಕಟ್ಟೆ ಹಾಗೂ ಹುಬ್ಬಳ್ಳಿಯ ಎಂ.ಜಿ.ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಶಾಸಕರಿಗೆ ಈ ನಿರ್ಣಯದ ಮಾಹಿತಿ ಸಹ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಸಮರ್ಪಕವಾಗಿ ಅವರು ಉತ್ತರಿಸಲು ತಡಕಾಡಿದರು.

ಪಾಲಿಕೆ ಸದಸ್ಯರಾದ ಚಂದ್ರು ನೀಲಗಾರ, ವಿಜಯಾನಂದ ಶೆಟ್ಟಿ, ವಿರನಗೌಡ ಪಾಟೀಲ, ಪ್ರಕಾಶ ಗೋಡಬೋಲೆ, ಅಶೋಕ ನಿಡವಣಿ, ಶಾಂತಪ್ಪ ದೇವಕ್ಕಿ, ಶಿವಣ್ಣ ಬಡವಣ್ಣವರ, ಸಂಜಯ ಕಪಟಕರ, ಭಾರತಿ ಪಾಟೀಲ, ಶಿವು ಹಿರೇಮಠ, ಈರೇಶ ಅಂಚಟಗೇರಿ, ಸುರೇಶ ಬೇದರೆ, ಮೋಹನ ರಾಮದುರ್ಗ, ಸುಖನರಾಜ್ ಬಾಫನಾ, ಹೇಮರಾಜ ಭಂಡಾರಿ, ಬಸವರಾಜ ವಿಭೂತಿ, ಬಸವರಾಜ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT