ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಸಮಸ್ಯೆ: ವಿಐಎಸ್‌ಎಲ್ ಉತ್ಪಾದನೆ ಸ್ಥಗಿತ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭದ್ರಾವತಿ (ಶಿವಮೊಗ್ಗ ಜಿಲ್ಲೆ): ಮಾರುಕಟ್ಟೆ ಸಮಸ್ಯೆಯಿಂದ ಇಲ್ಲಿನ ಜೀವನಾಡಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿದೆ.

ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಉಕ್ಕು ಬೇಡಿಕೆ ತಗ್ಗಿದೆ. ದರವೂ ಇಳಿಕೆಯಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಉಕ್ಕು ಪ್ರಾಧಿಕಾರ ಸಹ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ.  ಅವಲಂಬಿತ ಕಾರ್ಖಾನೆಗಳು ಸಹ ಉತ್ಪಾದನಾ ಚಟುವಟಿಕೆ ಸ್ಥಗಿತಗೊಳಿಸಿವೆ.

ಭದ್ರಾವತಿಯ `ವಿಐಎಸ್‌ಎಲ್' ಸಹ ಇದಕ್ಕೆ ಹೊರತಾಗಿಲ್ಲ. ಏಪ್ರಿಲ್ 5ರಿಂದ ಸಂಪೂರ್ಣ ಉತ್ಪಾದನೆ ಸ್ಥಗಿತಗೊಳಿಸಿರುವ ಕಾರ್ಖಾನೆ ಹಾಲಿ ದಾಸ್ತಾನಿರುವ 30ರಿಂದ 35ಸಾವಿರ್ ಟನ್‌ನಷ್ಟು ಉಕ್ಕು ಮಾರಾಟದತ್ತ ಗಮನ ಹರಿಸಿದೆ. ಇದರ ಅಂದಾಜು ಮೌಲ್ಯ ಸುಮಾರುರೂ350ರಿಂದ ರೂ. 400 ಕೋಟಿ. ಮಾರುಕಟ್ಟೆ ಸಮಸ್ಯೆ ತೀವ್ರವಾಗಿರುವುದರಿಂದ ಮುಂದಿನ ಎರಡು ತಿಂಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ.

ಕಾಯಂ ಕಾರ್ಮಿಕರಿಗೆ ಸಮಸ್ಯೆ ಇಲ್ಲ
`ಉತ್ಪಾದನೆ ಸ್ಥಗಿತದಿಂದ ಕಾಯಂ ಕಾರ್ಮಿಕರ ಕೆಲಸಕ್ಕೆ ಯಾವುದೇ ತೊಂದರೆ ಇಲ್ಲ. ಬದಲಾಗಿ ಇದೇ ಮೊದಲ ಬಾರಿಗೆ ಆಡಳಿತ ಮಂಡಳಿ ಗುತ್ತಿಗೆ ಕಾರ್ಮಿಕರಿಗೂ ಸಹ ತಿಂಗಳಿನಲ್ಲಿ 15ರಿಂದ 20ದಿನ ಕೆಲಸ ಕೊಡಲು ಮನಸ್ಸು ಮಾಡಿದೆ' ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ `ಪ್ರಜಾವಾಣಿ'ಗೆ ತಿಳಿಸಿದರು.

ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘದ ನಡುವೆ ಜರುಗಿದ ಮಾತುಕತೆ ವೇಳೆ ಗುತ್ತಿಗೆ ಕಾರ್ಮಿಕರ ಕೆಲಸದ ಅಂಶವನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾರ್ಖಾನೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ಪಾದನೆ ಸ್ಥಗಿತ ವೇಳೆ ಗುತ್ತಿಗೆ ಕಾರ್ಮಿಕರಿಗೂ ಕೆಲಸ ನೀಡುವ ನಿರ್ಧಾರ ಮಾಡಿರುವುದು ಶ್ಲಾಘನೀಯ ಎಂದರು.

ಫೋರ್ಜ್ ಪ್ಲಾಂಟ್ ಸ್ಥಗಿತ
ರೈಲ್ವೆ ಇಲಾಖೆಗಾಗಿ ವಿಶೇಷ ಉಕ್ಕು ತಯಾರಿಸುತ್ತಿದ್ದ ಫೋರ್ಜ್ ಘಟಕ ಉತ್ಪಾದನೆ ಸ್ಥಗಿತ ಮಾಡಿ ನಾಲ್ಕು ತಿಂಗಳು ಕಳೆದಿದೆ. ಇಲ್ಲಿನ ಯಂತ್ರಗಳು ಹಾಳಾಗಿದ್ದು, ರಿಪೇರಿಗೆ ತಜ್ಞರು ದೂರದ ಆಸ್ಟ್ರೇಲಿಯಾದಿಂದ ಬರಬೇಕಿದ್ದು, ವಿಳಂಬದ ಕಾರಣ ಉತ್ಪಾದನೆ ಸ್ಥಗಿತವಾಗಿದೆ. ಈ ನಡುವೆ ಸ್ವಂತ ಗಣಿ ಪಡೆಯಲು ಕಾರ್ಖಾನೆ ಪ್ರಯತ್ನ ನಡೆಸಿದ್ದು, ಇದು ಲಭಿಸದ ಹೊರತು ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳ ಹೂಡಲು ಉತ್ಸುಕತೆ ತೋರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT