ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂತು ‘ಗುಮಟೆ ಪಾಂಗ್‌’

Last Updated 14 ಸೆಪ್ಟೆಂಬರ್ 2015, 7:03 IST
ಅಕ್ಷರ ಗಾತ್ರ

ಕಾರವಾರ: ಗಣೇಶ ಚತುರ್ಥಿ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುಮಟೆ ಪಾಂಗ್‌ ವಾದ್ಯಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಚತುರ್ಥಿಗೆ ಕೆಲವೇ ದಿನಗಳಿದ್ದು, ಈಗಾಗಲೇ ವಾದ್ಯಗಳು ಹೆಚ್ಚಿನ ಸಂಖ್ಯೆ­ಯಲ್ಲಿ ನಗರದ ಮಾರುಕಟ್ಟೆಯನ್ನು ಪ್ರವೇಶಿಸಿವೆ.

ಗುಮಟೆ ಪಾಂಗ್‌ ಹಾಲಕ್ಕಿ ಒಕ್ಕಲಿಗರ ನೆಚ್ಚಿನ ಸಾಂಸ್ಕೃತಿಕ ವಾದ್ಯ. ಅವರು ಜನಪದ ಹಾಡುಗಳನ್ನು ಹೇಳುವಾಗ ಈ ವಾದ್ಯವನ್ನು ಬಳಸು­ತ್ತಾರೆ. ಚತುರ್ಥಿಯ ಸಮಯದಲ್ಲೂ ಗಣೇಶನ ಆರಾಧನೆಗೆ ಈ ವಾದ್ಯವನ್ನು ಎಲ್ಲೆಡೆ ಬಳಸುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತವೆ. ಅದರಲ್ಲೂ ಪ್ರಮುಖ­ವಾಗಿ ಗುಮಟೆ ಪಾಂಗ್‌ ವಾದ್ಯ ಇದ್ದೇ ಇರುತ್ತದೆ. ಐದಾರು ಮಂದಿ ಕಲಾವಿದರ ತಂಡ ಈ ವಾದ್ಯವನ್ನು ಬಾರಿಸುತ್ತಾ ಗಣಪನನ್ನು ಸ್ಮರಿಸುವ ಹಾಡುಗಳನ್ನು ಹೇಳುತ್ತಾರೆ. ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಈ ವಾದ್ಯ ಹೆಚ್ಚಾಗಿ ಕಂಡುಬರುತ್ತದೆ.

ವಾದ್ಯ ತಯಾರಿಕೆ: ವಾದ್ಯದ ತಯಾರಿಕೆಗೆ ಕುಂಬಾರರು ಮಣ್ಣಿನಿಂದ ವಿಶೇಷ ಮಡಿಕೆಗಳನ್ನು ತಯಾರಿಸು­ತ್ತಾರೆ. ಈ ಮಡಿಕೆಗೆ ಎರಡೂ ಕಡೆಗಳಲ್ಲಿ ಬಾಯಿ ಇರುತ್ತವೆ. ಒಂದು ಸ್ವಲ್ಪ ದೊಡ್ಡದಿದ್ದರೆ, ಇನ್ನೊಂದು ಸಣ್ಣ ಇರುತ್ತದೆ. ಹದ ಮಾಡಿದ ಉಡದ ಚರ್ಮವನ್ನು ಎರಡೂ ಕಡೆಗಳಲ್ಲೂ ಅಳವಡಿಸಿದರೆ ವಾದ್ಯ ಸಿದ್ಧ. ಇದನ್ನು ಬಾರಿಸಿದರೆ ಎರಡೂ ಕಡೆಗಳಿಂದ ವಿಶೇಷ ನಾದ ಹೊರಹೊಮ್ಮುತ್ತದೆ. ಈ ವಾದ್ಯಗಳು ಚತುರ್ಥಿ ಇನ್ನೇನು 15 ದಿನಗಳಿವೆ ಎನ್ನುವಾಗಲೇ ಮಾರುಕಟ್ಟೆಗೆ ದಾಂಗುಡಿ ಇಡುತ್ತವೆ.

ದುಬಾರಿಯಾದ ವಾದ್ಯ: ಮಣ್ಣಿನ ಗುಮಟೆ ಪಾಂಗ್‌ ವಾದ್ಯ ಒಂದಕ್ಕೆ  ₹ 400 ರಿಂದ ₹ 850 ವರೆವಿಗೂ ದರವಿದೆ. ಆಕಸ್ಮಿಕವಾಗಿ ಕೈ ಜಾರಿದರೂ ಈ ವಾದ್ಯ ನುಜ್ಜುನೂರಾಗುತ್ತದೆ. ಹಾಗಾಗಿ ಇದನ್ನು ಎಚ್ಚರ ದಿಂದ ಕೊಂಡೊಯ್ಯ­ಬೇಕು. ಇದಕ್ಕೆ ಬಳಸುವ ಉಡದ ಚರ್ಮ ಸಿಗುತ್ತಿಲ್ಲವಾದ್ದರಿಂದ ವಾದ್ಯ ತಯಾರಿಕೆ ಕಡಿಮೆಯಾಗಿದೆ. ಚರ್ಮದ ಅಭಾವದಿಂದ ಮರದ ವಾದ್ಯಗಳು ಸಹ ಮಾರುಕಟ್ಟೆಗೆ ಬಂದಿವೆ.
ಅದರ ಬೆಲೆ ₹ 2 ಸಾವಿರದಿಂದ ₹ 2,500 ವರೆಗೆ ಇದೆ. ಇನ್ನೂ ಫೈಬರ್‌ ಹಾಳೆಯಿಂದ ಕಟ್ಟಿದ ವಾದ್ಯಗಳು ಮಾರುಕಟ್ಟೆಯಲ್ಲಿದ್ದು, ಇದರ ಬೆಲೆ ₹ 400 ಇದೆ.

‘ವಾದ್ಯಕ್ಕೆ ಅಗತ್ಯವಾದ ಚರ್ಮವನ್ನು ಜೊಯಿಡಾ ತಾಲ್ಲೂಕಿನಿಂದ ತರಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚರ್ಮ ಸಿಗದ ಕಾರಣ ಫೈಬರ್‌ ಹಾಳೆಯನ್ನು ಬಳಸಲಾಗುತ್ತಿದೆ. ಅಲ್ಲದೇ ಮಡಿಕೆಗಳು ಕೈ ಜಾರಿ ಬಿದ್ದು ಹಾಳಾಗುವ ಸಾಧ್ಯತೆ ಇರವುದರಿಂದ ಈ ವಾದ್ಯವನ್ನು ಹೆಚ್ಚಾಗಿ ತಯಾರಿಸಲಾಗುತ್ತಿಲ್ಲ. ವಾದ್ಯಗಳು ಸ್ವಲ್ಪ ದುಬಾರಿ ಎನಿಸಿದರೂ ಗ್ರಾಹಕರು ಖರೀದಿಸಲು ಮುಂದಾಗುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಸಂದೇಶ್‌ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT