ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ವ್ಯಾಯಾಮ ಶಾಲೆಗೆ 60ರ ಹಾದಿ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಾರುತಿ ವ್ಯಾಯಾಮ ಶಾಲೆಯ 60ನೇ ವಾರ್ಷಿಕೋತ್ಸವ ಹಾಗೂ  ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಫೆ.26 ಸಂಜೆ 4 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಪುಷ್ಪಾಂಡಜ ಮಹರ್ಷಿ ಆಶ್ರಮದ ಜ್ಞಾನಾನಂದ ಸ್ವಾಮೀಜಿ, ಶಾಸಕ ಜೆ.ನರಸಿಂಹ ಸ್ವಾಮಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಅದ್ಯಕ್ಷ  ಎಂ.ಜಗದೀಶ ರೆಡ್ಡಿ, ಕಿಮ್ಸ ಅಧ್ಯಕ್ಷ ಬಿ.ಮುನೇಗೌಡ, ಮಾಜಿ ಜಿ.ಪಂ.ಸದಸ್ಯ ವಿ.ಎನ್.ಮಂಜುನಾಥ್ ಎನ್‌ಐಎಫ್‌ಟಿ ರಿಜಿಸ್ಟ್ರಾರ್ ವಿ.ಅಶೋಕ, ಮಾರುತಿ ವ್ಯಾಯಾಮ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ್ ಮುಂತಾದವರು ಭಾಗವಹಿಸಲಿದ್ದಾರೆ.

ವ್ಯಾಯಾಮ ಶಾಲೆ 60ನೇ ವರ್ಷ ಪೂರೈಸಿರುವ ನೆನಪಿಗೆ ಭಾನುವಾರ ಬೆಳಿಗ್ಗೆ 10-30ಕ್ಕೆ ಪುರಭವನದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ  `ಶ್ರೀಮಾರುತಿ-60~ ನಡೆಯಲಿದೆ.

ಒಟ್ಟು ನಾಲ್ಕು ಗುಂಪುಗಳಲ್ಲಿ ಸ್ಪರ್ಧೆ ನಡೆಯಲಿವೆ. 200ಕ್ಕೂ ಹೆಚ್ಚು ಅಂಗಸಾಧಕರು ತಮ್ಮ ದೇಹ ಸೌಷ್ಠವ ಪ್ರದರ್ಶಿಸಲಿದ್ದಾರೆ. ಸಂಜೆ 4ಕ್ಕೆ ವಾರ್ಷಿತ್ಸವ ಸಮಾರಂಭ ನಡೆಯಲಿದೆ.

ಇದೇ ಸಂದರ್ಭದಲ್ಲಿ `ಬೇರು-ಕಾಂಡ- ಚಿಗುರು~ ಎಂಬ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.
ನಮ್ಮದೆನ್ನುವ ಹೆಮ್ಮೆ: ಮಾರುತಿ ವ್ಯಾಯಾಮ ಶಾಲೆ ಕೇವಲ ಕಸರತ್ತು ಕೇಂದ್ರವೇ ಆಗಿ ಉಳಿದಿಲ್ಲ. ನಾಡು, ನುಡಿ, ಜಲ, ನೆಲ, ಭಾಷೆಗಳ ವಿಷಯದ್ಲ್ಲಲೂ ತನ್ನ ಕಾಳಜಿ ವಹಿಸುತ್ತಿದೆ. ಹಿಂದೆ ದಿವಂಗತ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ತಲೆದೋರಿತ್ತು. ಬರಗಾಲಕ್ಕೆ ಸ್ಪಂದಿಸಿದ ಮಾರುತಿ ವ್ಯಾಯಾಮ ಶಾಲೆ ಸಾವಿರಾರು ರೂಪಾಯಿ ಸಂಗ್ರಹಿಸಿ ಮುಖ್ಯಮಂತ್ರಿಗಳ ಬರಗಾಲ ಪರಿಹಾರ ನಿಧಿಗೆ ಕಳುಹಿಸಿಕೊಟ್ಟಿತ್ತು. ಅಂತೆಯೇ ಕಾರ್ಗಿಲ್ ನಿಧಿ, ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ನಿಧಿಗೂ ದೇಣಿಗೆ ಸಂಗ್ರಹಿಸಿ ನೀಡಿದ ಖ್ಯಾತಿ ಇದಕ್ಕಿದೆ.

ಗೋಕಾಕ್  ಚಳುವಳಿಯಲ್ಲಿ ಮಾರುತಿ ವ್ಯಾಯಾಮ ಶಾಲೆ ವಿದ್ಯಾರ್ಥಿ ಕೆ.ವೆಂಕಟೇಶ್ ವಯಸ್ಕರ ಶಿಕ್ಷಣ ಕೇಂದ್ರವನ್ನು ತೆರೆದರು. ಈ ಕೇಂದ್ರದಲ್ಲಿ ಕಲಿತವರು ಈಗ ಒಳ್ಳೆಯ ಹುದ್ದೆಗಳಲ್ಲಿ ಇದ್ದಾರೆ. ಅವರೇ ನಮ್ಮನ್ನು ಗುರುತು ಹಿಡಿದು ಮಾತಾಡಿಸಿ ನಾನು ಶಾಲೆಯ ವಿದ್ಯಾರ್ಥಿ ಸರ್ ಎಂದಾಗ ನಮಗಾಗುವ ಖುಷಿಯೇ ಬೇರೆ ಎಂದು ನೆನೆಯುತ್ತಾರೆ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ್.

ಸುಮಾರು 500-600 ಪುಸ್ತಕಗಳ ಭಂಡಾರವನ್ನು ಇಲ್ಲಿ ಸ್ಥಾಪಿಸಲಾಗಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಮಾನವೀಯತೆಗೂ ಸಹ ಕೊರತೆಯಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಸಂಸ್ಥೆಯ ಹಿರಿಯರಾದ ಡಾ.ಕೆ.ಎಸ್.ಶ್ಯಾಮ ಪ್ರಸಾದ್, ಕೊಂಗಾಡಿಯಪ್ಪ ಕಾಲೇಜು ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ಅವರು 40-50 ಬಾರಿ ರಕ್ತದಾನ ಮಾಡಿರುವುದು ಸ್ಮರಣಾರ್ಹ ಎಂದು ಅವರು ಗುರುದೇವ್ ವಿವರಿಸಿದರು.

`ಮಾರುತಿಗೆ ಡಾ.ರಾಜಕುಮಾರ್ ನಂಟು~ 

ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವ ಪಾಲಿಸುತ್ತಿದ್ದ ವರನಟ ಡಾ.ರಾಜಕುಮಾರ್ ತಮ್ಮನ್ನು ಅನೇಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಅವರು ಮಾಡಿದ ಸೇವೆಗಳು ಬಹಳಷ್ಟು ಜನಕ್ಕೆ ಗೊತ್ತಾಗಲೇ ಇಲ್ಲ. ಹಾಗಾಗಿ ಡಾ.ರಾಜ್ ಬದುಕಿನಲ್ಲೂ ಬಂಗಾರದ ಮನುಷ್ಯನೇ ಆಗಿದ್ದರು.

ಮಾರುತಿ ವ್ಯಾಯಾಮಶಾಲೆಗೂ `ಬಂಗಾರದ ಮನುಷ್ಯನಿ~ಗೂ ನಂಟಿದೆ. 50-60ರ ದಶಕದಲ್ಲಿ ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಅವರಿದ್ದ ಹವ್ಯಾಸಿ ನಾಟಕ ಕಂಪನಿ ದೊಡ್ಡಬಳ್ಳಾಪುರದಲ್ಲಿ ಕ್ಯಾಂಪ್ ಮಾಡಿತ್ತು. `ಮಣ್ಣಿನ ಮಗ~ ನಾಟಕವದು. ವ್ಯಾಯಾಮ ಶಾಲೆಗಾಗಿ ಒಂದು ಬೆನಿಫಿಟ್ ಶೋ ಮಾಡಬೇಕೆಂಬ ಇವರ ಮನವಿಗೆ ಕಂಪನಿ ಸಂತಸದಿಂದ ಒಪ್ಪಿತು. ಆಗ ಸಂಗ್ರಹವಾದ ಹಣದಿಂದ ಹನುಮಂತರಾಯಪ್ಪ ಅವರ ಮನೆ ಸಮೀಪ ಒಂದು ಖಾಲಿ ನಿವೇಶನವನ್ನು ಖರೀದಿಸಲಾಯಿತು. ಈಗಿರುವ ವ್ಯಾಯಾಮಶಾಲೆಯ ಜಾಗವನ್ನು ಖರೀದಿ ಮಾಡುವಾಗ ಮೊದಲು ಕೊಂಡಿದ್ದ ನಿವೇಶನವನ್ನು ಮಾರಾಟ ಮಾಡಲಾಯಿತು. ಒಟ್ಟಾರೆ ರಾಜ್ ತಂಡ ನೀಡಿದ ಸಹಾಯವೇ ವ್ಯಾಯಾಮ ಶಾಲೆಗೆ ಮೂಲ ನಿಧಿಯಾಯ್ತು.

ಇದಕ್ಕೂ ಹಿಂದಿನ ಇತಿಹಾಸವನ್ನು ಕೆದಕಿದರೆ ದೊಡ್ಡಬಳ್ಳಾಪುರಕ್ಕೆ ವ್ಯಾಯಾಮ ಶಾಲೆಯನ್ನು ತಂದವರು ಪುರಸಭೆ ವಾಟರ್ ಆಪರೇಟರ್ ಆಗಿದ್ದ ನಾರಾಯಣಮೂರ್ತಿ. ಅವರು ತಮ್ಮ ಮನೆಯನ್ನೇ ವ್ಯಾಯಾಮ ಶಾಲೆಯಾಗಿಸಿದ್ದ ಕಸರತ್ತು ಪ್ರೇಮಿ. ಅವರ ಗರಡಿಯಲ್ಲಿ ಡಾ.ಸದಾಶಿವಯ್ಯ, ಗಂಗಪ್ಪ, ಡಿ.ಎಂ.ಚಂದ್ರಶೇಖರ್, ಗುರುರಾಜಪ್ಪ, ನರಸಿಂಹ ಮೂರ್ತಿ, ಪದ್ಮನಾಭ್ ಮುಂತಾದವರು ವ್ಯಾಯಾಮದ ಪಾಠಗಳನ್ನು ಕಲಿತಿದ್ದರು.

`ಅನಂತರ ಈ ಗೆಳೆಯರ ಗುಂಪು ಈಗಿರುವ ಮಾರುತಿ  ವ್ಯಾಯಾಮ ಶಾಲೆಗೆ ಶಿಫ್ಟ್ ಆದರು. ಅಲ್ಲಿದ್ದ ಬಾಡಿಗೆ ಮನೆಯನ್ನು ತಮ್ಮ ವ್ಯಾಯಾಮದ ಮನೆ ಮಾಡಿಕೊಂಡರು. ಇವರಿಗೆ ಕಲಾವಿದ ವೆಂಕಟ ಮುನಿಯಪ್ಪ ಸಾಥ್ ನೀಡಿದ್ದರು. ತದನಂತರ ಮಾಲೀಕರು ವ್ಯಾಯಾಮ ಶಾಲೆಗೆ ಮನೆಯನ್ನು ಮಾರಿದರು. ಈ ಸ್ಥಳದಲ್ಲಿದ್ದ 40 ಅಡಿ ಜಾಗವನ್ನು ಪುರಸಭೆ ಅಧ್ಯಕ್ಷರಾಗಿದ್ದ ಮೈತ್ರಿ ಶ್ರೀಕಂಠಯ್ಯ ಶಾಲೆಗೆ ಮಂಜೂರು ಮಾಡಿಸಿಕೊಟ್ಟರು. ಕ್ರಮೇಣ ಕಟ್ಟಡಗಳ ಹೊರ-ಒಳ ರೂಪ ಬದಲಾಯಿತು~ ಎನ್ನುತ್ತಾರೆ ಮಾರುತಿ ವ್ಯಾಯಾಮ ಶಾಲೆಯ ಹಿರಿಯ ವಿದ್ಯಾರ್ಥಿಗಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT