ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತೇಶ್ವರ ಕಾರ್ತಿಕೋತ್ಸವ ಇಂದಿನಿಂದ

Last Updated 13 ಡಿಸೆಂಬರ್ 2012, 8:52 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ಗುತ್ತೂರು ಗ್ರಾಮದ ಮಾರುತೇಶ್ವರ ದೇವರ ಕಾರ್ತಿಕೋತ್ಸವ, ಮಹಾರಥೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳು ಇದೇ 13, 14 ಮತ್ತು15ರಂದು ಅದ್ದೂರಿಯಾಗಿ ಜರುಗಲಿವೆ.

ಈ ಪ್ರಯುಕ್ತ ನಡೆಯುವ ರುದ್ರಾಭಿಷೇಕ, ಸಾಮೂಹಿಕ ವಿವಾಹ, ದೇವರ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.ತಾಲ್ಲೂಕು ಕೇಂದ್ರದಿಂದ ಕೇವಲ ಏಳೆಂಟು ಕಿ.ಮೀ. ಅಂತರದಲ್ಲಿ ಬೇವೂರು ರಸ್ತೆಯಲ್ಲಿ ಬರುವ ಈ ಗ್ರಾಮವು ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಮಾರುತೇಶ್ವರ ದೇವಸ್ಥಾನದಿಂದಲೇ ಹೆಚ್ಚು ಪರಿಚಿತ.

ಗುತ್ತೂರು ಹನಮಪ್ಪ ಎಂದೇ ಇಂದಿಗೂ ಕರೆಯಿಸಿಕೊಳ್ಳುವ ಈ ದೇವರ ದರ್ಶನಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಿಶೇಷ.ಅದರಲ್ಲೂ ಇಲ್ಲಿಗೆ ಬರುವ ಭಕ್ತರು ವಿವಿಧ ಹರಕೆಗಳನ್ನು ಹೊತ್ತು ತೀರಿಸಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಕಂಡು ಬರುತ್ತದೆ.  

ಅಮವಾಸ್ಯೆ ದಿನದಂದು ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವುದರಿಂದ `ಅಮವಾಸ್ಯೆ ದೇವರು' ಎಂದೇ ಖ್ಯಾತಿ ಪಡೆದಿರುವ ಈ ಹನಮಪ್ಪನ ದರ್ಶನಕ್ಕೆ ದೆವ್ವದ ಕಾಟ ಎಂದು ನಂಬುವವರು, ಮಾನಸಿಕವಾಗಿ ಅಸ್ವಸ್ಥಗೊಂಡವರು ಹೆಚ್ಚಾಗಿ ಬಂದು ಹೋಗುತ್ತಾರೆ.

ಅಲ್ಲದೇ ವಿವಿಧ ರೀತಿಯ ಹರಕೆಗಳನ್ನು ಹೊತ್ತವರು ಜಾತ್ರೋತ್ಸವ ಹಾಗೂ ಇನ್ನಿತರ ವಿಶೇಷ ದಿನದಲ್ಲಿ ಬಂದು ತೀರಿಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ಕೈಗೊಳ್ಳುವ ಮುನ್ನ ಈ ದೇವರಲ್ಲಿ ಬಂದು ಹೂ ಅಥವಾ ಬಿಲ್ವ ಪತ್ರೆಗಳನ್ನು ಪಡೆದು ಹೋಗುವುದು ರೂಢಿ. ಅದರಲ್ಲೂ ಎಡ ಅಥವಾ ಬಲ ಭಾಗದಿಂದ  ಬಿದ್ದ ಹೂ ಅಥವಾ ಬಿಲ್ವಪತ್ರೆಗಳಿಂದ ಶುಭ ಹಾಗೂ ಅಶುಭದ ಬಗ್ಗೆ ಲೆಕ್ಕ ಹಾಕಿಕೊಳ್ಳುವುದು ಭಕ್ತರ ಮೈಗೂಡಿಸಿಕೊಂಡಿರುವ ಒಂದು ಪದ್ಧತಿ.

ಆಚರಣೆಗಳು: ಇದೇ 13ರಂದು ಕಾರ್ತಿಕೋತ್ಸವದ ಪ್ರಯುಕ್ತ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾರುತೇಶ್ವರ, ಕಲ್ಲಿನಾಥ ನಿರುಪಾದೇಶ್ವರ ಗದ್ದುಗೆಗೆ ರುದ್ರಾಭಿಷೇಕ ನಂತರ ಗಣರಾಧನೆ ನಡೆಯಲಿದೆ.

ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮರಕಟ್ಟಿನ ಶಿವಾನಂದ ಸ್ವಾಮೀಜಿ, ವಣಗೇರಿಯ ಹಿರೇಮಠದ ವಿಶ್ವನಾಥ ಸ್ವಾಮೀಜಿ, ಬಿನ್ನಾಳದ ಪುರವಂತರು ಚೆನ್ನಪ್ಪ ಸಿದ್ದಪ್ಪ ಮಾಳ್ಗಿ, ನಿವೃತ್ತ ಶಿಕ್ಷ ಭರಮಪ್ಪ ಧಫೇದಾರ ಹಾಗೂ ಇತರರು ಭಾಗವಹಿಸಲಿದ್ದಾರೆ. 

14ರಂದು ಬೆಳಿಗ್ಗೆ ಮಾರುತೇಶ್ವರ ಉತ್ಸವ, ಮಧ್ಯಾಹ್ನ ಸಾಮೂಹಿಕ ವಿವಾಹ ಸಂಜೆ ನೂತನ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.15ರಂದು ಕಡುಬಿನ ಕಾಳಗ ಹಾಗೂ ರಾತ್ರಿ ನಡೆಯುವ ಮದ್ದು ಸುಡುವ ಕಾರ್ಯಕ್ರಮದಲ್ಲಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT