ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರೆಮ್ಮ ಕೊಲೆ ಪ್ರಕರಣ: ಸಿಒಡಿ ತನಿಖೆಗೆ ಆಗ್ರಹ

Last Updated 22 ಜುಲೈ 2013, 6:04 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಏ. 29ರಂದು ಉಪ್ಪಾರ ಮಾರೆಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಕುಟುಂಬದ ಸದಸ್ಯರು ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಘಟಕ ಅಧ್ಯಕ್ಷೆ ಕೆ. ನಾಗರತ್ನಮ್ಮ ಒತ್ತಾಯಿಸಿದರು.

ಯಲ್ಲಮ್ಮ ಕ್ಯಾಂಪ್ ನಿವಾಸಿ ಉಪ್ಪಾರ ಮಾರೆಮ್ಮ(45) ಕೊಲೆಗೆ ಸಂಬಂಧಿಸಿದಂತೆ ರಿಕ್ಷಾ ಬಸಪ್ಪ ಎನ್ನುವ ಆರೋಪಿಯನ್ನು ಮಾತ್ರ ಬಂಧಿಸಿದ್ದು, ಇನ್ನುಳಿದ ಅನುಮಾನಸ್ಪದ ನಾಲ್ವರನ್ನು ಬಂಧಿಸದೇ ಇರುವುದರ ಬಗ್ಗೆ ಭಾನುವಾರ ಯಲ್ಲಮ್ಮನ ಕ್ಯಾಂಪ್‌ನಲ್ಲಿ ಜರುಗಿದ ಜಂಟಿ ಸುದ್ಧಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಯಾದ ಮಾರೆಮ್ಮನ ಶವ ಪರೀಕ್ಷೆ ವರದಿಯಲ್ಲಿ ದೇಹದ ಅನೇಕ ಭಾಗಗಳು ಗಂಭೀರ ಸ್ವರೂಪದ ಗಾಯಗಳಿಂದ ಕೂಡಿರುವುದು ದಾಖಲಾಗಿದೆ. ಮಾರೆಮ್ಮಳ ಮೇಲೆ ಸಾಮೂಹಿಕವಾಗಿ ಅತ್ಯಚಾರವೆಸಗಿ ಕೊಲೆ ಮಾಡಿರುವ ಶಂಕೆ ಇದ್ದು, ಸಿಒಡಿಯಿಂದ ಮಾತ್ರ ಸಮಗ್ರ ತನಿಖೆ ಸಾಧ್ಯ ಎಂದು ತಿಳಿಸಿದರು.

ಸ್ಥಳೀಯ ಪೊಲೀಸರು ರಾಜಕೀಯ ಒತ್ತಡಗಳಿಂದ ಶಂಕಿತ ಆರೋಪಿಗಳನ್ನು ಕೈಬಿಡುವ ಮೂಲಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ರೂಪಿಸಿದ್ದಾರೆ ಎಂದು ಅವರು ದೂರಿದರು.

ಈ ಕುರಿತು ಮುಖ್ಯ ಮಂತ್ರಿ, ಗೃಹ ಸಚಿವ, ಮಹಿಳಾ ಆಯೋಗ, ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು,  ಕೂಡಲೇ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡು ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

15 ದಿನ ಒಳಗಾಗಿ ಸಿಓಡಿ ತನಿಖೆಗೆ ಒಳಪಡಿಸದಿದ್ದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ  ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಲೆಯಾದ ಉಪ್ಪಾರ ಮಾರೆಮ್ಮನ ತಾಯಿ ನಾಗಮ್ಮ, ತಮ್ಮ ಹೊನ್ನೂರುಸ್ವಾಮಿ, ಮಗ ಹೊನ್ನೂರುಸ್ವಾಮಿ, ಸೊಸೆ ರೇಖಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಘಟಕ ಸದಸ್ಯೆಯರಾದ ಯಲ್ಲಮ್ಮ, ಎಚ್. ಮಂಜುಳ, ಹಂಪಮ್ಮ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT