ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೆಟ್ : ಮೊಬೈಲ್: ಈಗ ಗ್ರಾಹಕನೇ ದೊರೆ

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಮೊಬೈಲ್ ಬಳಕೆದಾರರು ಒಂದು ಸೇವಾ ಸಂಸ್ಥೆಯಿಂದ ಇನ್ನೊಂದು ಸೇವಾ ಸಂಸ್ಥೆಗೆ ತಮ್ಮ ನಿಷ್ಠೆ ಬದಲಿಸಿದರೂ ಮೊಬೈಲ್ ಸಂಖ್ಯೆ ಬದಲಿಸದ ಅಂದರೆ ಮೊಬೈಲ್  ಸಂಖ್ಯೆ ಸ್ಥಿರವಾಗಿ ಇರುವ ಸೌಲಭ್ಯವು ಈಗ ದೇಶದಾದ್ಯಂತ ಜಾರಿಗೆ ಬಂದಾಗಿದೆ.

ತಮ್ಮ ಹಾಲಿ ಮೊಬೈಲ್ ಸೇವಾ ಸಂಸ್ಥೆಯ ಸೇವೆ ಬಗ್ಗೆ ಅಸಂತುಷ್ಟರಾಗಿರುವ ಗ್ರಾಹಕರು ಇನ್ನೊಂದು ಸೇವಾ ಸಂಸ್ಥೆ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಈ ‘ಎಂಎನ್‌ಪಿ’  ಒದಗಿಸಿಕೊಡುತ್ತದೆ.  ಗ್ರಾಹಕರು ಕೆಲ ಸಂಸ್ಥೆಗಳಿಂದ ಕಳಚಿಕೊಳ್ಳುವ ಮತ್ತು ಹೊಸ ಸಂಸ್ಥೆಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಯು ಕೆಲ ಅಡಚಣೆಗಳ ಮಧ್ಯೆಯೂ ಜಾರಿಗೆ ಬರುತ್ತಿದೆ.

ಮೊಬೈಲ್ ತಂತ್ರಜ್ಞಾನ ಯಾವುದೇ ಇರಲಿ (ಜಿಎಸ್‌ಎಂ ಅಥವಾ ಸಿಡಿಎಂಎ) ಮತ್ತು ಮೊಬೈಲ್ ವೃತ್ತದೊಳಗಿನ ಒಂದೇ ಸೇವಾ ಸಂಸ್ಥೆಯ ಬೇರೆ ಬೇರೆ ತಂತ್ರಜ್ಞಾನಕ್ಕೂ ಗ್ರಾಹಕರು ಬದಲಾಗಬಹುದು.

ಇಂತಹ ಸೇವೆ ಪಡೆಯಲು (ಮೊಬೈಲ್ ಸೇವಾ ಸಂಸ್ಥೆ ಅಥವಾ ಒಂದೇ ಸಂಸ್ಥೆಯ ಬೇರೆ ತಂತ್ರಜ್ಞಾನಕ್ಕೆ ವರ್ಗಾವಣೆ ಬಯಸುವ) ಗ್ರಾಹಕರು ಮೊದಲು 1900 ಸಂಖ್ಯೆಗೆ PORT<SPACE>MOBILE NUMBER)  ಎಸ್‌ಎಂಎಸ್ ಕಳಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರು ತಮ್ಮ ಮೊಬೈಲ್ ಸೇವಾ ಸಂಸ್ಥೆಯಿಂದ  Unique Porting Code - UP ಪಡೆಯುತ್ತಾರೆ. ತಾವು ಆಯ್ಕೆ ಮಾಡಿಕೊಳ್ಳುವ ಹೊಸ ಮೊಬೈಲ್ ಸೇವಾ ಸಂಸ್ಥೆಗೆ ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ  ‘ಯುಪಿಸಿ’ಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.  ‘ಯುಪಿಸಿ’ ಒದಗಿಸದಿರಲು ಯಾವುದೇ ಸಂಸ್ಥೆ ಯಾವುದೇ ಕುಂಟು ನೆಪಗಳನ್ನೂ ನೀಡುವಂತಿಲ್ಲ.

ಆನಂತರ ಹೊಸ ಸೇವಾ ಸಂಸ್ಥೆಯು ತನ್ನ ಸಂಪರ್ಕ ಜಾಲಕ್ಕೆ ಹೊಸ ಗ್ರಾಹಕನ ಸೇರ್ಪಡೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಏಳು ದಿನಗಳಲ್ಲಿ ಈ ಬದಲಾವಣೆ ಕಾರ್ಯರೂಪಕ್ಕೆ ಬರುತ್ತದೆ.  ಈ ಬದಲಾವಣೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಗರಿಷ್ಠ  ್ಙ 19 ನಿಗದಿ ಪಡಿಸಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್  ಬದಲಾವಣೆ ಶುಲ್ಕ 19 ವಿಧಿಸುವುದಿಲ್ಲ, ಉಚಿತ ಸಿಮ್ ಕಾರ್ಡ್ ನೀಡುವುದಾಗಿ ಪ್ರಕಟಿಸಿದ್ದರೆ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಯಾವುದೇ ಆಮಿಷ ಒಡ್ಡಿಲ್ಲ. ಸಂಸ್ಥೆ ಬದಲಿಸಲು ಮುಂದಾಗಿರುವವರಲ್ಲಿ ‘ಪೂರ್ವ ಪಾವತಿ’ ಗ್ರಾಹಕರು ಶೇ 90ರಷ್ಟು ಇದ್ದಾರೆ.

ಈ ಸೌಲಭ್ಯವು ಮತ್ತೊಂದು ಬೆಲೆ ಸಮರಕ್ಕೆ ಕಾರಣವಾಗಲಿಕ್ಕಿಲ್ಲ. ಆದರೆ, ಸಂಪರ್ಕ ಜಾಲದ ಗುಣಮಟ್ಟ ಮತ್ತು ಗ್ರಾಹಕರ ಸೇವಾ ಮಟ್ಟದಲ್ಲಿ ಖಂಡಿತವಾಗಿಯೂ ಗುಣಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಮೊಬೈಲ್ ಸಂಖ್ಯೆಯನ್ನು ಸ್ಥಿರವಾಗಿ  ಉಳಿಸಿಕೊಂಡು ಸೇವಾ ಸಂಸ್ಥೆಗಳನ್ನು ಬದಲಿಸುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮೊಬೈಲ್ ಸಂಸ್ಥೆಗಳಲ್ಲಿ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಎಲ್ಲರಿಗಿಂತ ಮೊದಲು ಐಡಿಯಾ ಸೆಲ್ಯುಲರ್ ಜಾಹೀರಾತು ಆರಂಭಿಸಿ ಗ್ರಾಹಕರನ್ನು ಸೆಳೆಯಲು ಆರಂಭಿಸಿತ್ತು.

‘ನಿಮ್ಮ ಹಾಲಿ ಸಂಖ್ಯೆ ಉಳಿಸಿಕೊಳ್ಳಿ, ನಮ್ಮ ದಟ್ಟಣೆರಹಿತ ಸಂಪರ್ಕ ಜಾಲ ಸೇರಿಕೊಳ್ಳಿ- ಟಾಟಾ ಇಂಡಿಕಾಂ. ‘ವಿಶ್ವಾಸಾರ್ಹ ಬ್ರಾಂಡ್, ಆಕರ್ಷಕ ಕರೆ ದರಗಳು, ಪಾರದರ್ಶಕ ಬಿಲ್ಲಿಂಗ್, ಅತಿದೊಡ್ಡ ‘3ಜಿ’ ಜಾಲ’ - ಇದು ಬಿಎಸ್‌ಎನ್‌ಎಲ್ ಆಮಿಷ. ‘ ನಿಮ್ಮ ಹಾಲಿ ಆಪರೇಟರ್‌ನಿಂದ ಬಿಡುಗಡೆ ಪಡೆಯಿರಿ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಪಡೆಯಿರಿ’-  ಟಾಟಾ ಡೊಕೊಮೊ. ಹೀಗೆ ಒಂದೊಂದು ಸಂಸ್ಥೆ ಭಿನ್ನ ಭಿನ್ನ ಘೋಷ ವಾಕ್ಯಗಳ ಮೂಲಕ ಗ್ರಾಹಕರ ಮನಗೆಲ್ಲಲು ಹೊರಟಿವೆ.

ನವೆಂಬರ್‌ನಲ್ಲಿ ಹರಿಯಾಣದಲ್ಲಿ ಈ ಸೇವೆ ಜಾರಿಗೆ ಬಂದ ನಂತರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಗಳು ಗಮನಾರ್ಹವಾಗಿ ಗ್ರಾಹಕರನ್ನು ಕಳೆದುಕೊಂಡಿವೆ. ಆರಂಭಿಕ ಅಂಕಿ ಸಂಖ್ಯೆಗಳ ಪ್ರಕಾರ ಜಿಎಸ್‌ಎಂ ಸೇವಾ ಸಂಸ್ಥೆಗಳತ್ತ ಗ್ರಾಹಕರ ಒಲವು ಹೆಚ್ಚಿರುವುದು ಕಂಡು ಬರುತ್ತಿದೆ.- ಐಡಿಯಾ ಸಿಸ್ಟೆಮಾ ಶ್ಯಾಮ್ (ಎಂಟಿಎಸ್) ಲೂಪ್ ಟೆಲಿಕಾಂ ಮತ್ತು ಡಾಟಾ ಕಾಂ (ವಿಡಿಯೊಕಾನ್) ಸಂಸ್ಥೆಗಳು ನಷ್ಟಕ್ಕೆ ಗುರಿಯಾಗಿವೆ. ಬದಲಾವಣೆ ಸುಗಮವಾಗಿ ನಡೆಯುತ್ತಿಲ್ಲ.

ತಮ್ಮ ಗ್ರಾಹಕರನ್ನು ಕೈಬಿಡಲು ಕೆಲ ಸಂಸ್ಥೆಗಳು ಸಹಕರಿಸುತ್ತಿಲ್ಲ. ‘ಎಸ್‌ಎಂಎಸ್’ ಮನವಿಗಳನ್ನು ಸ್ವೀಕರಿಸುತ್ತಿಲ್ಲ. ತಕ್ಷಣಕ್ಕೆ ಸ್ಪಂದಿಸದೇ ವಿಳಂಬ ಧೋರಣೆ ಅನುಸರಿಸುತ್ತಿವೆ. ತಾಂತ್ರಿಕ ದೋಷದ ನೆಪ ಹೇಳುತ್ತಿವೆ  ಎನ್ನುವ ಟೀಕೆಗಳ ಮಧ್ಯೆ ಈ ಸೇವೆ ಜಾರಿಗೆ ಬಂದಾಗಿದೆ.

ಯಾವುದೇ ಮೊಬೈಲ್ ಸೇವಾ ಸಂಸ್ಥೆಯು ಗ್ರಾಹಕರು ನಿಷ್ಠೆ ಬದಲಿಸುವುದನ್ನು ನಿರ್ಬಂಧಿಸಲು ಸಾಧ್ಯವೇ ಇಲ್ಲ. 70 ಕೋಟಿಗಳಷ್ಟು ಮೊಬೈಲ್ ಸಂಖ್ಯೆ (ಗ್ರಾಹಕರು) ಮತ್ತು 14 ಸೇವಾ ಸಂಸ್ಥೆಗಳು ಇರುವ ದೇಶದಲ್ಲಿ ಏಕರೂಪವಾಗಿ ಎಲ್ಲೆಡೆ ಇಂತಹ ಸೌಲಭ್ಯ ಜಾರಿಗೆ ತರುವ ನಿಟ್ಟಿನಲ್ಲಿ ಆರಂಭದ ದಿನಗಳಲ್ಲಿ ಕೆಲ ಮಟ್ಟಿಗೆ ತೊಂದರೆಗಳು ಕಂಡು ಬಂದರೂ ಕ್ರಮೇಣ  ಸರಿ ಹೋಗಲಿದೆ.

ಸರ್ಕಾರ ಮತ್ತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಗದಿಪಡಿಸಿರುವ ನಿಯಮಾವಳಿಗಳ ಪ್ರಕಾರ ಈ ಸೌಲಭ್ಯ ಒದಗಿಸಬೇಕು ಎಂದು ಮೊಬೈಲ್ ಸಂಸ್ಥೆಗಳಿಗೆ ತಾಕೀತು ಮಾಡಲಾಗಿದೆ. ಗ್ರಾಹಕರಿಗೆ ಉತ್ತಮ ಸಂಪರ್ಕ ಜಾಲ, ಕೈಗೆಟುಕುವ ಬೆಲೆಗೆ ವಿಶಿಷ್ಟ ಬಗೆಯ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಪ್ರತಿಯೊಂದು ಸಂಸ್ಥೆ ನೀಡುತ್ತಿದೆ.

ಆರಂಭದಲ್ಲಿ ‘ಎಂಎನ್‌ಪಿ’ ಬಗ್ಗೆ (ಸೇವಾ ಸಂಸ್ಥೆ ಬದಲಿಸುವ) ಉತ್ಸಾಹ ಕಂಡು ಬಂದರೂ ಕ್ರಮೇಣ ಇದು ತಹಬಂದಿಗೆ ಬರಲಿದೆ. ಮುಂಬರುವ ತಿಂಗಳಲ್ಲಿ ಈ ಪ್ರವೃತ್ತಿ ಶೇ 2ರಿಂದ 3ರಷ್ಟು ಪ್ರಮಾಣದಲ್ಲಿ ಸ್ಥಿರಗೊಳ್ಳಲಿದೆ ಎಂದು ಈ ವ್ಯವಸ್ಥೆ ಅಳವಡಿಸುವ ಲೈಸೆನ್ಸ್ ಪಡೆದಿರುವ ಸಿನಿವರ್ಸ್ ಸಂಸ್ಥೆಯ ಸಿಇಒ ಸಂಜಯ್ ಕಸ್ತೂರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇದರ ಯಶಸ್ಸು ಮೂರು ಮುಖ್ಯ ಸಂಗತಿಗಳನ್ನು ಆಧರಿಸಿರುತ್ತದೆ. 1. ಈ ವಿಶಿಷ್ಟ ಸೇವೆಯ ಬಗ್ಗೆ ಗ್ರಾಹಕರಲ್ಲಿ ಮತ್ತು ಇದರ ಉಪಯುಕ್ತತೆ ಬಗ್ಗೆ ಸಂಸ್ಥೆಗೆ ಇರುವ ಅರಿವು. 2. ದೋಷಕ್ಕೆ ಎಡೆ ಇಲ್ಲದೇ ಈ ಸೌಲಭ್ಯ ಜಾರಿಗೆ ತರುವುದು ಮತ್ತು 3. ಈ ಪ್ರಕ್ರಿಯೆ ಬಗ್ಗೆ ‘ಟ್ರಾಯ್’ನ ಸೂಕ್ತ ನಿಯಂತ್ರಣ ವ್ಯವಸ್ಥೆ.

ನವೆಂಬರ್‌ನಲ್ಲಿ ಹರಿಯಾಣದಲ್ಲಿ ಈ ಸೌಲಭ್ಯ ಜಾರಿಗೆ ಬರುತ್ತಿದ್ದಂತೆ ಕಂಡು ಬಂದ ಗ್ರಾಹಕರ ವಲಸೆ ಗಮನಿಸಿದರೆ ‘ಜಿಎಸ್‌ಎಂ’ ಸೇವೆಯತ್ತ ಗ್ರಾಹಕರು ಹೆಚ್ಚು ಒಲವು ವ್ಯಕ್ತಪಡಿಸಿರುವುದು ಕಂಡು ಬರುತ್ತದೆ. 

 ಬಿಎಸ್‌ಎನ್‌ಎಲ್, ರಿಲಯನ್ಸ್ (ಜಿಎಸ್‌ಎಂ ಮತ್ತು ಸಿಡಿಎಂಎ) ಟಾಟಾ ಟೆಲಿ (ಸಿಡಿಎಂಎ) ಸೇವೆಗೆ ಬೆನ್ನು ಹಾಕಿರುವ ಗ್ರಾಹಕರು ಟಾಟಾ ಟೆಲಿ (ಜಿಎಸ್‌ಎಂ) ಮತ್ತು ವೊಡಾಫೋನ್, ಏರ್‌ಟೆಲ್, ಏರ್‌ಸೆಲ್ ನತ್ತ ತಮ್ಮ ನಿಷ್ಠೆ ಬದಲಿಸಿದ್ದಾರೆ. ದೇಶದಾದ್ಯಂತ ಗ್ರಾಹಕರು ಪ್ರವೃತ್ತಿ ಏನೆಂಬುದು ಇನ್ನೂ ದೃಢಪಟ್ಟಿಲ್ಲ.

ಸಂಸ್ಥೆ ಬದಲಾಯಿಸಿದ ಗ್ರಾಹಕರು ಹೊಸ ಸಂಸ್ಥೆಯ ಸಹವಾಸದಿಂದ ಬೇಸತ್ತು ಹಳೆ ಗಂಡನ ಪಾದವೇ ಗತಿ ಎಂದು ಮರಳಿ ಅದೇ ಸಂಸ್ಥೆ ಸೇರುವ ಸಾಧ್ಯತೆಗಳೂ ಇದ್ದೇ ಇರುವುದನ್ನೂ ನಾವಿಲ್ಲಿ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT