ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೆಟ್ ಸುಧಾರಣೆ: 3 ತಿಂಗಳ ಗಡುವು

Last Updated 11 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಧಾರವಾಡ: ನಗರದ ಸೂಪರ್ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುವ ಟೆಂಡರ್ ಪ್ರಕ್ರಿಯೆ ತಕ್ಷಣದಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ಮೂರು ತಿಂಗಳ ಕಾಲಾವಕಾಶ ನೀಡಬೇಕು. ಸದ್ಯಕ್ಕೆ ಇರುವ ಮಾರುಕಟ್ಟೆಯಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ದರ್ಪಣ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ಪ್ರತಿಪಕ್ಷದವರು ಸಹ ಪಾಲ್ಗೊಂಡಿದ್ದು, ಆರೋಪ- ಪ್ರತ್ಯಾರೋಪ, ಸಲಹೆ ಹಾಗೂ ಸಮಾಧಾನದ ಮಾತುಗಳ ವಿನಿಮಯದ ನಂತರ ಕಾಲಾವಕಾಶ ನೀಡುವ ಕುರಿತು ನಿರ್ಧಾರಕ್ಕೆ ಬರಲಾಯಿತು. ನಿಯಮಾನುಸಾರ ಟೆಂಡರ್ ಕರೆದು ಮುಂದಿನ ಕ್ರಮ ಜರುಗಿಸಲು ಮೂರು ತಿಂಗಳು ಗಡುವು ಹಾಕಿಕೊಳ್ಳಲಾಯಿತು.
 
ಈಗ ಹಾಲಿ ಇರುವ ಮಾರುಕಟ್ಟೆಯಲ್ಲಿ ತುರ್ತಾಗಿ ಸ್ವಚ್ಛತೆ ನಿರ್ವಹಣೆ ಮಾಡಬೇಕು, ಒಳಚರಂಡಿ ಸರಿಪಡಿಸಬೇಕು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು, ಹಂದಿ- ದನಗಳು ಅಲ್ಲಿಗೆ ನುಗ್ಗದಂತೆ ನೋಡಿಕೊಳ್ಳಬೇಕು ಎನ್ನುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಬೇಡಿಕೆಗೆ ಆಡಳಿತ ಪಕ್ಷದವರು ಸಮ್ಮತಿ ಸೂಚಿಸಿ ಭರವಸೆ ನೀಡಿದರು. ಸೂಪರ್ ಮಾರುಕಟ್ಟೆ ಅಭಿವೃದ್ಧಿ ಹೊಣೆಯನ್ನು ಶಾಸಕ ಚಂದ್ರಕಾಂತ ಬೆಲ್ಲದ ಅವರಿಗೆ ವಹಿಸಬೇಕೆಂಬ ಸಲಹೆಗೆ ಎಲ್ಲರೂ  ಒಪ್ಪಿಗೆ ನೀಡಿದರು. 

ನೂತನ ಪ್ರಸ್ತಾವನೆಗೆ ಸರಕಾರದಿಂದ ಶೀಘ್ರವಾಗಿ ಅನುಮೋದನೆ ಪಡೆಯಲು ಅಗತ್ಯ ಕ್ರಮ ಜರುಗಿಸುವುದಾಗಿ ಸಂಸದ ಪ್ರಹ್ಲಾದ ಜೋಶಿ, ಶಾಸಕ ಬೆಲ್ಲದ ತಿಳಿಸಿದರು.

ಬೇರೆಯವರಿಗೆ ಗುತ್ತಿಗೆ: ಸೂಪರ್ ಮಾರ್ಕೆಟ್‌ನಲ್ಲಿ ಸ್ವಚ್ಛತೆ ಇಲ್ಲದೇ ಇರುವುದಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಬೇರೆಯವರಿಗೆ ಗುತ್ತಿಗೆ ನೀಡಬೇಕು ಎಂದು ಅನೇಕರು ಒತ್ತಾಯಿಸಿದರು. ಅಂತಿಮವಾಗಿ ಬೇರೆ ಗುತ್ತಿಗೆ ನೀಡುವ ಕುರಿತು ತೀರ್ಮಾನಿಸಲಾಯಿತು.

ಹೊಸ ಪ್ರಸ್ತಾವನೆಗೆ ಅನುಮೋದನೆ ದೊರೆತ ಮೇಲೆ, ಈಗಿರುವ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಎಲ್ಲಿ ಅವಕಾಶ ನೀಡಬೇಕು ಎನ್ನುವ ಬಗ್ಗೆ ಇನ್ನೊಂದು ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎನ್ನುವ ಜಿಲ್ಲಾಧಿಕಾರಿಯವರ ಸಲಹೆಯನ್ನು ಸಭೆಯಲ್ಲಿದ್ದ ಎಲ್ಲರೂ ಒಪ್ಪಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಪ್ರತಿಪಕ್ಷದ ನಾಯಕ ದೀಪಕ ಚಿಂಚೋರೆ ಅವರು, ಮೂರು ತಿಂಗಳಲ್ಲಿ ಹೊಸ ಮಾರುಕಟ್ಟೆ ಕೆಲಸ ಆರಂಭಿಸಬೇಕು, ಈಗಿರುವ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಬೇಕು. ಆಗದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪ ಮೇಯರ್ ನಾರಾಯಣ ಜರತಾರಘರ, ಪಾಲಿಕೆ ಸದಸ್ಯರು, ವ್ಯಾಪಾರಿಗಳು, ರಾಜಕೀಯ ಪಕ್ಷದ ವಿವಿಧ ಮುಖಂಡರು ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

ಹೊರಟ್ಟಿ ಅಸಮಾಧಾನ:  ಸೂಪರ್ ಮಾರುಕಟ್ಟೆ ಪರಿಸ್ಥಿತಿ ಸುಧಾರಣೆಗಾಗಿ ಹೋರಾಟ ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಭೆ ಕರೆದು ಅಧಿಕಾರಿಗಳಿಂದ ಕೆಲಸ ಮಾಡಿಸಲು ಮುಂದಾಗದಿರುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಈ ಬಗ್ಗೆ ಸಂಸದರೇ ಉತ್ತರಿಸಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಅನಿವಾರ್ಯ ಕೆಲಸಗಳ ಮೇಲೆ ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಸಭೆ ನಡೆಸಿಲ್ಲ, ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ತಿಳಿಸಿದರು.

ನಾನೂ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಂಥ ಸಂದರ್ಭ ಎದುರಾದಾಗ ಕೂಡಲೇ ಸಭೆ ಕರೆದು, ಅಗತ್ಯ ಕ್ರಮ ಜರುಗಿಸುವಂತೆ ನಿರ್ದೇಶನ ನೀಡುತ್ತಿದ್ದೆ ಎಂದು ಹೇಳಿದ ಹೊರಟ್ಟಿ, ಜಗದೀಶ ಶೆಟ್ಟರಗೆ ಜವಾಬ್ದಾರಿ ಇಲ್ಲವೆ ಎಂದು ಪುನಃ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT