ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೆಟ್‌ಗೆ ಮಂಕು

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಮಾರುಕಟ್ಟೆಗೆ ಮಂಕು ಕವಿದಿದೆ. ವ್ಯಾಪಾರ ಡಲ್ಲು~ ಅಂದ್ರು ಗಲ್ಲಾಪೆಟ್ಟಿಗೆ ಕಮ್ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಮಾಲೀಕರು. ಶುಭ ಸಮಾರಂಭಗಳಿಗೆ ನಿಷಿದ್ಧ ಮಾಸ ಎಂದೇ ಕುಖ್ಯಾತಿಗೊಳಗಾಗಿದ್ದ ಆಷಾಢದಂತಹ ಆಷಾಢವನ್ನೇ ಕ್ಯಾರೇ ಅನ್ನದೆ ಎಲ್ಲ ಮಳಿಗೆ, ಮಾಲ್‌ಗಳಲ್ಲಿನ `ಬೆಲೆ ಕಡಿತ~ಗಳ ಲಾಭ ಬಾಚಿಕೊಳ್ಳುವ ನಾವು ನವರಾತ್ರಿ, ದೀಪಾವಳಿ ಸಡಗರದಲ್ಲಿರುವಾಗ ಮಂಕು ಕವಿಯುವುದುಂಟೇ?

ಹೌದು, ಇದು ಶೂನ್ಯಮಾಸದ ಫಲ. ಶರನ್ನವರಾತ್ರಿಗೂ ಮುನ್ನ ಬರುವ ಮಹಾಲಯ/ ಪಿತೃಪಕ್ಷ/ ಶೂನ್ಯ ಮಾಸ/ ಕೃಷ್ಣ ಪಕ್ಷಅಥವಾ ಬ್ಲ್ಯಾಕ್ ಡೇಸ್ ಎಂದು ಕರೆಸಿಕೊಳ್ಳುವ ಈ `ಪಕ್ಷ~ ಸೆಪ್ಟೆಂಬರ್ 13ರಂದು ಆರಂಭಗೊಂಡಿದ್ದು ಬರುವ ಮಂಗಳವಾರ (ಸೆ. 27) ಮಹಾಲಯ ಅಮಾವಾಸ್ಯೆಯೊಂದಿಗೆ ಸಮಾಪ್ತಿಯಾಗುತ್ತದೆ.

ಪಿತೃಗಳಿಗೆ ಅರ್ಥಾತ್ ಪರಲೋಕ ಸೇರಿದ ಜೀವಗಳಿಗೆ ತರ್ಪಣ ಕೊಡಲು, ಶ್ರಾದ್ಧ ಮಾಡಲು 14 ದಿನಗಳ `ಪಕ್ಷ~ ಮೀಸಲು. ಹೀಗಾಗಿ ಸಂಪ್ರದಾಯವಾದಿಗಳು ಈ ಎರಡು ವಾರದಲ್ಲಿ `ಪಕ್ಷ~ ಆಚರಣೆ (ಸತ್ತವರಿಗೆ ಎಡೆ ಹಾಕುವ ಕಾರ್ಯಕ್ರಮ) ಮಾಡುವುದು ಸಾಮಾನ್ಯ. ಕೆಲವೆಡೆ ಇದನ್ನು ನೋಂಪು ಎಂದೂ ಕರೆಯುವುದುಂಟು. ಹೀಗೆ, `ಪಿತೃ~ಗಳ ಸತ್ಕಾರಕ್ಕಾಗಿ ಮೀಸಲಾದ ಈ ದಿನಗಳು ಅಶುಭ ಎಂದೇ ಪರಿಗಣಿಸುವುದು ಇನ್ನೊಂದು ವಿಶೇಷ.

ಕೆಲವರ್ಷಗಳ ಹಿಂದಿನವರೆಗೂ ಆಷಾಢವೆಂದರೆ ವ್ಯಾಪಾರಸ್ಥರಿಗೆ `ಶೂನ್ಯ~ಮಾಸವೇ ಆಗಿತ್ತು. ಆದರೆ ಸಂಪ್ರದಾಯಕ್ಕೇ ತಿರುಮಂತ್ರ ಹಾಕಿದ್ದು ಭರ್ಜರಿ ಬೆಲೆ ಕಡಿತದ ಮಾರಾಟ ತಂತ್ರ! ಈಗ ಇಂತಹ ಭಾರೀ ಬೆಲೆ ರಿಯಾಯ್ತಿ ಸಿಗಬೇಕಾದರೆ ಆಷಾಢವೇ ಬರಬೇಕು ಎಂಬಂತಹ ಪರಿಸ್ಥಿತಿ. ಈ ಮಾರ್ಕೆಟ್ ಮೇನಿಯಾದಲ್ಲಿ ಕೊಳ್ಳುಬಾಕರದೇ ಸಂತೆ... ಆಷಾಢದ ನೆನಪೂ ಉಳಿಯದಂತೆ...

ಆದರೆ ವ್ಯಾಪಾರ ಮಳಿಗೆಗಳ ಪಾಲಿಗೆ ಪಿತೃ ಪಕ್ಷವೆಂದರೆ ಬರಿ ಶೂನ್ಯ! ಸದಾ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ, ಕ್ಯಾಶ್ ಕೌಂಟರ್‌ನಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಲೂ ಐದಾರು ನಿಮಿಷ ಸರತಿಯಲ್ಲಿ ಕಾಯಿಸುತ್ತಿದ್ದ ಮಳಿಗೆಗಳೂ ವಾರದಿಂದೀಚೆ ಬೆರಳೆಣಿಕೆಯ ಗ್ರಾಹಕರನ್ನಷ್ಟೇ ಕಾಣುತ್ತಿದೆ.

ಚಿನ್ನದ ಬೆಲೆ ಗಗನಕ್ಕೇರಿದೆ, ಯಾರು ಕೊಳ್ತಾರೆ ಬಿಡಿ ಎಂದು ಬಡಪಾಯಿಗಳು ಮೂಗು ಮುರಿಯುತ್ತಿದ್ದರೆ ಲಕ್ಷ ಮೇಲೊಂದಷ್ಟು ಪಾವತಿಸಿ ಒಡವೆಗೆ ಆರ್ಡರ್ ಕೊಡುತ್ತಿದ್ದ `ಕುಬೇರ~ರೂ ಆಭರಣ ಅಂಗಡಿಯತ್ತ ತಲೆ ಹಾಕಿಲ್ಲ. ಹೊಸ ಆಮಿಷಗಳ ಬಗ್ಗೆ ಅವರು ಯೋಚಿಸಬೇಕಾದರೂ ಅಮಾವಾಸ್ಯೆ ಕಳೆಯಬೇಕು!

ಆಭರಣವಷ್ಟೇ ಅಲ್ಲ, ಹೊಸ ಬಟ್ಟೆ, ಜಮೀನು, ಮನೆ, ವಾಹನ ಖರೀದಿಗೂ ಇದು ಸಕಾಲವಲ್ಲ. ಹೀಗಾಗಿ ವಾಹನ ಮಳಿಗೆಗಳಲ್ಲಿ ಬೇಡಿಕೆ ಕಮ್ಮಿ. ನಿವೇಶನ, ಭೂಮಿ ಖರೀದಿಯಂತೂ ಇಲ್ಲವೇ ಇಲ್ಲ. ಹೊಸ ಮನೆ, ಕಟ್ಟಡ ನಿರ್ಮಾಣ, ಗೃಹಪ್ರವೇಶಗಳೂ ಮುಂದೆ ಹೋಗಿವೆ. ಇಷ್ಟೆಲ್ಲ ಇರುವಾಗ ವಿವಾಹ ಸಂಬಂಧಿ ಮಾತುಕತೆ, ಮುಹೂರ್ತಗಳು ಇರಲು ಸಾಧ್ಯವೇ? ಹೀಗಾಗಿ ಎಲ್ಲಾ ಡಲ್ಲು! ಆದರೆ ಇನ್ನು ನಾಲ್ಕೇ ದಿನ. ಮತ್ತೆ ಎಲ್ಲವೂ ಟ್ರ್ಯಾಕ್‌ಗೆ ಬರಲಿವೆ.

ಪೌರಾಣಿಕ ಹಿನ್ನೆಲೆ
ಈ ಪಿತೃಪಕ್ಷಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಮಹಾಭಾರತದಲ್ಲಿ ಕರ್ಣನದು ಅತ್ಯಂತ ಆದರ್ಶ ವ್ಯಕ್ತಿತ್ವ. ಸ್ನೇಹಕ್ಕೆ, ವಿಶ್ವಾಸಕ್ಕೆ, ಮಾತಿನ ಬದ್ಧತೆಗೆ ರೋಲ್‌ಮಾಡೆಲ್ ಆಗಬಲ್ಲವ. ಕರ್ಣನ ಹುಟ್ಟಿನಿಂದ ಸಾವಿನವರೆಗೂ ನಾವು ಕಾಣುವುದು ದುರಂತ ಅಧ್ಯಾಯಗಳನ್ನೇ.

ಕುಂತಿ ಪ್ರಯೋಗಿಸಿದ ಸೂರ್ಯಮಂತ್ರದ `ಟ್ರಯಲ್ ಅಂಡ್ ಎರರ್~ನ ಫಲಶ್ರುತಿಯಾಗಿ ಬೇಡದ ಶಿಶುವಾಗಿ ಹುಟ್ಟಿದ ಕರ್ಣ ಗಂಗಾನದಿಯಲ್ಲಿ ಬೆಸ್ತನಿಗೆ ಸಿಕ್ಕಿ ಅವನ ಮಗುವಾಗಿ ಬೆಳೆಯಬೇಕಾಯಿತು. ಇಲ್ಲದಿದ್ದರೆ ಪಾಂಡವರ ಸಂಖ್ಯೆ ಆರಕ್ಕೇರುತ್ತಿತ್ತು. ಅದಿರಲಿ, ಎಲ್ಲಕ್ಕಿಂತ ಮಿಗಿಲಾಗಿ ಆತ ಕೊಡುಗೈ ದಾನಿ.

ಗುರುದಕ್ಷಿಣೆಯಾಗಿ ಕೊಡಲು ಏನೂ ಉಳಿದಿಲ್ಲ ಎಂಬ ಸ್ಥಿತಿಯಲ್ಲಿ ತನ್ನ ಪ್ರಾಣರಕ್ಷಕ ಕವಚವನ್ನೇ ದಕ್ಷಿಣೆಯಾಗಿ ಕೊಟ್ಟು ತನ್ನ ಸಾವಿಗೆ ತಾನೇ ಮುನ್ನುಡಿ ಬರೆದುಕೊಂಡವ. ಹೀಗೆ, ಕರ್ಣ `ದಾನಶೂರ~ನೆನಿಸಿಕೊಂಡದ್ದು ಭೂಮಿ, ಧನಕನಕಾದಿ ದಾನಗಳಿಂದಲೇ ಹೊರತು ಅವನೆಂದೂ ಹಸಿದ ಹೊಟ್ಟೆಗಳಿಗಾಗಿ ಅನ್ನ ದಾಸೋಹ ಮಾಡಿದ ಪ್ರಸಂಗವೇ ಇರಲಿಲ್ಲ.

ಕುರುಕ್ಷೇತ್ರ ಯುದ್ಧದಲ್ಲಿ ಹತನಾಗಿ ಕರ್ಣ ಯಮಪುರಿ ಸೇರಿದಾಗ ಅವನಿಗೆ ಹಸಿವೆಯಾಗುತ್ತದೆಯಂತೆ. ಹಸಿವು ನೀಗಿಕೊಳ್ಳಲು ಅನ್ನ ಬೇಡಿದರೆ ಅವನಿಗೆ ಸಿಕ್ಕಿದ್ದು ಧನ-ಕನಕ! ಇದ್ಯಾಕೆ ಹೀಗೆ ಎಂದು ಚಿಂತಿತನಾದ ಕರ್ಣನಿಗೆ, ಭೂಲೋಕದಲ್ಲಿ ನಾವು ಮಾಡಿದ ಪುಣ್ಯಕಾರ್ಯದ ಫಲವನ್ನೇ ಪರಲೋಕದಲ್ಲಿ ಉಣ್ಣಬೇಕು ಎಂಬ ಸತ್ಯದ ಅರಿವಾಗುತ್ತದೆ.

ಹೀಗಾಗಿ ಕರ್ಣ ಹದಿನಾಲ್ಕು ದಿನಗಳ ಕಾಲ ಭೂಲೋಕಕ್ಕೆ ಹೋಗಿ ಬಡಬಗ್ಗರಿಗೆ ಅನ್ನದಾನ ಮಾಡಿ ಬರಲು ಅವಕಾಶ ಕೊಡುವಂತೆ ಯಮನನ್ನು ಕೇಳಿಕೊಳ್ಳುತ್ತಾನೆ. ಹಾಗೆ ಭೂಲೋಕಕ್ಕೆ ಬಂದು ಅನ್ನ ದಾಸೋಹಾದಿ ಪುಣ್ಯಕಾರ್ಯಗಳನ್ನು ಕೈಗೊಂಡು ಮರಳುತ್ತಾನಂತೆ. ಹೀಗೆ ಈ ಪಿತೃಪಕ್ಷದಲ್ಲಿ ಸತ್ತವರ ಆತ್ಮಗಳು ಭೂಲೋಕಕ್ಕೆ ಮರಳುತ್ತವೆ ಎಂಬ ನಂಬಿಕೆಯಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧ ಮಾಡುವುದು ಪದ್ಧತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT