ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗ ಬದಲಿಗೆ ರೂ 5 ಲಕ್ಷ ಲಂಚ: ಬಿಬಿಎಂಪಿ ಎಂಜಿನಿಯರ್ ಬಂಧನ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಬಡಾವಣೆಯ ಮಧ್ಯದಲ್ಲಿ ಹಾದುಹೋಗಿರುವ ಪಾಲಿಕೆ ರಸ್ತೆಯ ಮಾರ್ಗವನ್ನು ಬದಲಿಸಲು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹದೇವಪುರ ವಲಯದ ಸಹಾಯಕ ಎಂಜಿನಿಯರ್ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.

ಬಿಬಿಎಂಪಿ ಮಹದೇವಪುರ ವಲಯದ ವ್ಯಾಪ್ತಿಗೆ ಬರುವ ವೈಟ್‌ಫೀಲ್ಡ್‌ನ ಕಾಡುಗೋಡಿಯಲ್ಲಿ ವೀರಸ್ವಾಮಿ ರೆಡ್ಡಿ ಎಂಬುವರು ಖಾಸಗಿ ಬಡಾವಣೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದರು. ಈ ಬಡಾವಣೆಯ ಮಧ್ಯದಲ್ಲಿ ಬಿಬಿಎಂಪಿ ರಸ್ತೆಯೊಂದು ಹಾದುಹೋಗಿದ್ದು, ಕಾಮಗಾರಿಗೆ ಅಡಚಣೆಯಾಗಿತ್ತು. ರಸ್ತೆಯ ಮಾರ್ಗವನ್ನು ಬಡಾವಣೆಯ ಕೊನೆ ಭಾಗಕ್ಕೆ ಸ್ಥಳಾಂತರಿಸುವಂತೆ ಅವರು ಪಾಲಿಕೆಗೆ ಮನವಿ ಸಲ್ಲಿಸಿದ್ದರು.

ರಸ್ತೆ ಮಾರ್ಗ ಬದಲಾವಣೆ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿದಾಗ, ಹತ್ತು ಲಕ್ಷ ಲಂಚ ನೀಡುವಂತೆ ಮಂಜುನಾಥ್ ಬೇಡಿಕೆ ಇಟ್ಟಿದ್ದರು. ಅಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಅರ್ಜಿದಾರರು ತಿಳಿಸಿದಾಗ, ರೂ 5 ಲಕ್ಷ ನೀಡಿದಲ್ಲಿ ಮಾರ್ಗ ಬದಲಾವಣೆ ಮಾಡಿಕೊಡುವುದಾಗಿ ಎಂಜಿನಿಯರ್ ಒಪ್ಪಿಕೊಂಡಿದ್ದರು. ಈ ಕುರಿತು ವೀರಸ್ವಾಮಿ, ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಮತ್ತೆ ಸಂಪರ್ಕಿಸಿದಾಗ ಹಣದೊಂದಿಗೆ ಸೋಮವಾರ ಸಂಜೆ ವೈಟ್‌ಫೀಲ್ಡ್‌ನ ಕಾಫಿ ಡೇಗೆ ಬರುವಂತೆ ಆರೋಪಿ ಎಂಜನಿಯರ್ ತಿಳಿಸಿದ್ದರು. ಸಂಜೆ ಅಲ್ಲಿಗೆ ಹೋದ ವೀರಸ್ವಾಮಿ ಅವರಿಂದ ಮಂಜುನಾಥ್ ಹಣ ಪಡೆದರು.
ತಕ್ಷಣವೇ ದಾಳಿ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿಗಳಾದ ಎಸ್.ಗಿರೀಶ್, ಅಬ್ದುಲ್ ಅಹದ್, ಇನ್‌ಸ್ಪೆಕ್ಟರ್‌ಗಳಾದ ಪಿ.ನರಸಿಂಹಮೂರ್ತಿ ಮತ್ತು ಎಚ್.ಪಿ.ಪುಟ್ಟಸ್ವಾಮಿ ಆರೋಪಿಯನ್ನು ಬಂಧಿಸಿದರು.
 
`ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಬಳಿಕ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು~ ಎಂದು ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT