ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾರ್ಚ್ 30ರವರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ'

Last Updated 3 ಡಿಸೆಂಬರ್ 2012, 8:20 IST
ಅಕ್ಷರ ಗಾತ್ರ

ಕೆಂಭಾವಿ: ನಾರಾಯಣಪುರ ಎಡದಂಡೆ ಕಾಲುವೆಗೆ ಮಾರ್ಚ್ 30 ರವರೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಪಿಎಂಸಿ ಸದಸ್ಯ ಭೀಮನಗೌಡ ಪಾಟೀಲ ಯಡಿಯಾಪುರ ಎಚ್ಚರಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲುವೆಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸುವುದಾಗಿ ನೀರು ಬಳಕೆದಾರರ ಸಂಘ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದ್ದರು. ಈಗ ನೀರಾವರಿ ಸಲಹಾ ಸಮಿತಿಯು ಫೆ.20 ವರೆಗೆ ನೀರು ಹರಿಸುವುದಾಗಿ ತಿಳಿಸಿದ್ದು, ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ? ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ಮಾರ್ಚ್ ಅಂತ್ಯದವರೆಗೆ ನೀರು ಬರುತ್ತವೆ ಎಂಬ ಭರವಸೆಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಸಿಗಳ ತಯಾರಿ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ದಿಢೀರ್ ನಿರ್ಧಾರ ಬದಲಿಸಿ ಫೆ 20 ರವರೆಗೆ ನೀರು ಹರಿಸಲು ನಿರ್ಧಾರ ಪ್ರಕಟಿಸಿರುವುದು ರೈತರಿಗೆ ಮೋಸ ಮಾಡಿದಂತಾಗಿದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿ ಮೋಸ ಮಾಡಲೆಂದೇ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ವರ್ತಿಸುತ್ತಿದ್ದಾರೆ. ಫೆ. 20 ರವರೆಗೆ ನೀರು ಹರಿಸುವುದಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತೆಗೆದುಕೊಂಡ ನಿರ್ಧಾರ ಯಾರ ಒಳಿತಿಗಾಗಿ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು. 

ಮುಂಗಾರು ಹಂಗಾಮಿನ ಬತ್ತವನ್ನು ಇನ್ನೂ ರೈತರು ಕಟಾವ್ ಮಾಡಿಲ್ಲ. ಡಿ. 15 ರ ನಂತರ ಕಟಾವು ಪ್ರಾರಂಭವಾಗುತ್ತದೆ. ನಂತರ ಗದ್ದೆಗಳ ತಯಾರಿ ಮಾಡಲು ಕನಿಷ್ಠ ಒಂದು ವಾರವಾದರೂ ಬೇಕು. ಹೀಗಿರುವಾಗ 65 ದಿನಗಳಲ್ಲಿ ರೈತರು ಯಾವ ಬೆಲೆ ಬೆಳೆಯಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರೇ ಹೇಳಬೇಕು. ಈ ಸಮಯದಲ್ಲಿ ಯಾವ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹೀಗಿರುವಾಗ ಫೆ. 20 ರ ವರೆಗೆ ನೀರು ಹರಿಸುತ್ತಿರುವುದು ಯಾವ ಲೆಕ್ಕಾಚಾರ. ಕಳೆದ ಬಾರಿಯೂ ಇದೇ ರೀತಿ ದಿನಾಂಕ ಪ್ರಕಟಿಸಿ ನಂತರ ಅದನ್ನು ಮುಂದೂಡಲಾಯಿತು.

ಇದರಿಂದ ಲಕ್ಷಾಂತರ ಎಕರೆಯ ಪ್ರದೇಶದಲ್ಲಿ ಬೆಳೆಯಬೇಕಾಗಿದ್ದ ಕೋಟ್ಯಂತರ ಮೌಲ್ಯದ ಬತ್ತ ರೈತರ ಕೈತಪ್ಪಿ ಹೋಯಿತು.
ಕಾಲುವೆಯಲ್ಲಿ ನೀರು ಬರುತ್ತದೆ ಎಂದು ತಿಳಿದ ಅನೇಕ ರೈತರು, ಕೃಷಿ ಕೇಂದ್ರಗಳಲ್ಲಿ ಶೆಂಗಾ ಬೀಜ ಖರೀದಿಸಿದ್ದರು.
ನೀರು ಬರುವುದಿಲ್ಲ ಎಂದು ಮರಳಿ ಬೀಜಗಳನ್ನು ಅಂಗಡಿಗಳಿಗೆ ಮಾರುತ್ತಿರುವುದು ಸಾಮಾನ್ಯವಾಗಿದೆ ಎಂದು ತಿಳಿಸಿರು.

ಸಭೇ ಸಮಾರಂಭಗಳಲ್ಲಿ ಮಾರ್ಚ್‌ವರೆಗೆ ನೀರು ಹರಿಸುತ್ತೇವೆ ಎಂದು ಹೇಳಿದ ಸಚಿವರು, ಈಗ ಸುಮ್ಮನೆ ಕುಳಿತಿರುವುದೇಕೇ? ತಮ್ಮ ಮಾತಿನ ವಿಶ್ವಾಸದಿಂದ ಈ ಭಾಗದ ಅನೇಕ ರೈತರು ಸಸಿಗಳನ್ನು ತಯಾರಿಸಿದ್ದಾರೆ. ಈಗ ರೈತರಿಗಾಗಿರುವ ಹಾನಿಯನ್ನು ಭರಿಸುವವರಾರು ಎಂದು ಪ್ರಶ್ನಿಸಿದರು.

ಅಲ್ಲದೇ ನೀರು ಬಳಕೆದಾರರ ಸಂಘದಿಂದ ಮಾರ್ಚ್ ಅಂತ್ಯದವರೆಗೆ ನೀರು ಹರಿಸುವುದಾಗಿ ಕರಪತ್ರಗಳನ್ನು ಹಂಚಲಾಗಿದೆ.
ಹೀಗೆ ಮಾಡಿರುವುದು ಸರಿಯೇ? ಕಳೆದ ಬಾರಿ ಉಳುಮೆ ಮಾಡದೇ ಇರುವುದರಿಂದ ಬೆಳೆ ಇಲ್ಲದೇ ಹಾಗೂ ಬರಗಾಲದಿಂದಾಗಿ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಈ ಸಮಯದಲ್ಲಿ ರೈತರೊಂದಿಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದ ಅವರು, ಶೀಘ್ರ ರೈತರನ್ನು ಸೇರಿಸಿ ಮಾರ್ಚ್ ಅಂತ್ಯದವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT