ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ವೇಳೆಗೆ ಕೆರೆಗೆ ನೀರು: ಶಾಸಕದ್ವಯರ ಸೂಚನೆ

Last Updated 3 ಜನವರಿ 2012, 5:35 IST
ಅಕ್ಷರ ಗಾತ್ರ

ವಿಜಾಪುರ: ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಪ್ರಥಮ ಹಂತದ ಕಾಮಗಾರಿಯ ಸ್ಥಳಕ್ಕೆ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಹಿರೇಪಡಸಲಗಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿ ಮಾಹಿತಿ ಪಡೆದರು.

`ಈ ವರ್ಷ ಭೀಕರ ಬರಗಾಲವಿದ್ದು, ಕಾಮಗಾರಿಯನ್ನು ಶರವೇಗದಲ್ಲಿ ಪೂರ್ಣಗೊಳಿಸಬೇಕು. ಮಾರ್ಚ್ ತಿಂಗಳ ಒಳಗಾಗಿ ಪ್ರಥಮ ಹಂತದ ಕೆರೆಗಳನ್ನು ತುಂಬಿಸಬೇಕು~ ಎಂದು ಶಾಸಕ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ನದಿಯಿಂದ ಜಾಕ್‌ವೆಲ್‌ವರೆಗೆ ನಡೆಯುತ್ತಿರುವ ಇಂಟೆಕ್‌ವೆಲ್, ಲೀಡ್ ಕಾಲುವೆ ಕಾಮಗಾರಿಯನ್ನು ಹಗಲು-ರಾತ್ರಿ ಕೆಲಸ ಮಾಡಿ ಪೂರ್ಣಗೊಳಿಸಬೇಕು. ಮಾರ್ಚ್‌ನಲ್ಲಿ ಕೆರೆಗಳನ್ನು ತುಂಬಿಸಿದರೆ ಮಾತ್ರ ಬೇಸಿಗೆಯಲ್ಲಿ ದ್ರಾಕ್ಷಿ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಉಪಯೋಗವಾಗುತ್ತದೆ. ಇಲ್ಲವಾದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರು ಬೀದಿ ಪಾಲಾಗುತ್ತಾರೆ ಎಂದರು.

ಶಾಸಕ ಶ್ರಿಕಾಂತ ಕುಲಕರ್ಣಿ ಮಾತನಾಡಿ, ಅವಳಿ ಜಿಲ್ಲೆಯ ಮಹತ್ವದ ಯೋಜನೆಗೆ ಹಿರೆಪಡಸಲಗಿ ರೈತರು ತಮ್ಮ ಫಲವತ್ತಾದ ಭೂಮಿಯನ್ನು ನೀಡಿ ತ್ಯಾಗ ಮಾಡಿದ್ದಾರೆ. ಅವರ ಸಹಕಾರದಿಂದ ಈ ಯೋಜನೆ ಕಾರ್ಯಗತವಾಗುತ್ತಿದೆ. ಮಳೆಗಾಲ ಆರಂಭವಾದರೆ ಕಾಮಗಾರಿಗೆ ಅಡಚಣೆಯಾಗುತ್ತದೆ. ಮಾರ್ಚ್ ತಿಂಗಳ ಹೊತ್ತಿಗೆ ಶತಾಯ-ಗತಾಯ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.

ನೀರಾವರಿ ತಜ್ಞ ಡಾ.ವಿ.ಪಿ.ಹುಗ್ಗಿ, ಜಮಖಂಡಿ ತಾಲ್ಲೂಕಿನ ಗೋಠೆಯ  ಜಿ.ಪಂ.ನ 2, ವಿಜಾಪುರ ತಾಲ್ಲೂಕು ನಾಗರಾಳದ ಎರಡು ಹಾಗೂ ಹೆಬ್ಬಾಳಟ್ಟಿಯ ಐದು ಬಾಂದಾರ, ಕೋಟ್ಯಾಳ ಕೆರೆಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗುವುದು ಎಂದರು. 

 ಗುತ್ತಿಗೆದಾರ ಜಿ.ವಿ.ಪಿ.ಆರ್. ಕಂಪನಿಯ ಪ್ರಧಾನ ವ್ಯವಸ್ಥಾಪಕ ಸುಬ್ರಹ್ಮಣ್ಯರೆಡ್ಡಿ,  ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.  

 ಸುತ್ತಲೂ ನೀರಾವರಿ ಜಮೀನು ಇರುವುದರಿಂದ ಕಾಲುವೆಯಲ್ಲಿ ಬಸಿನೀರು ಸಂಗ್ರಹವಾಗಿ ಕಾಮಗಾರಿಗೆ ಅಡಚಣೆಯಾಗುತ್ತಿದೆ. ಉಳಿದಂತೆ ಜಾಕ್‌ವೆಲ್ ಕೆಲಸ ಪೂರ್ಣಗೊಂಡಿದ್ದು, ಪಂಪ್ ಅಳವಡಿಸಲಾಗಿದೆ. 33 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ಎರಡು ವಾರಗಳಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಸಾವಳಗಿಯಿಂದ 12 ಕಿ.ಮೀ. 6.5 ಮೆಗಾ ವ್ಯಾಟ್ ಲೈನ್ ಎಳೆಯಲಾಗುತ್ತಿದೆ.
 
ಕೆರೆಗಳಿಗೆ ನೀರು ತುಂಬಿಸುವ 79 ಕಿ.ಮೀ ಉದ್ದದ ಪೈಪ್‌ಲೈನ್‌ನ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಅಲ್ಲಲ್ಲಿ ಬಿಟ್ಟುಹೋಗಿರುವ ಸಣ್ಣ ಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.  ಕೆ.ಬಿ.ಜೆ.ಎನ್.ಎಲ್. ಕಾರ್ಯನಿರ್ವಾಹ ಎಂಜಿನಿಯರ್ ಎಂ.ಟಿ. ಕೊಂಬಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT