ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ಗೆ ಜಿಲ್ಲಾಧಿಕಾರಿ ನೂತನ ಕಚೇರಿ ಪೂರ್ಣ

Last Updated 29 ಜನವರಿ 2013, 8:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಹು ನಿರೀಕ್ಷೆಯ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡದ ನಿರ್ಮಾಣ ಶೇ 80ರಷ್ಟು ಮುಗಿದಿದ್ದು, ಫೆಬ್ರುವರಿ ಕೊನೆ, ಮಾರ್ಚ್ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ರಾಜ್ಯದಲ್ಲೇ ವಿನೂತನ ರೀತಿ ಕಟ್ಟಡ ಇದಾಗಲಿದ್ದು, ನವದೆಹಲಿಯ ರಾಷ್ಟ್ರಪತಿ ಭವನದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. 22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಟ್ಟಡವು 2012ರ ಮಾರ್ಚ್ ವೇಳೆಗೆ ಉದ್ಘಾಟನೆಯಾಗಬೇಕಿತ್ತು. ಆದರೆ ಸಣ್ಣಪುಟ್ಟ ಕಾರಣಗಳಿಂದ ವಿಳಂಬವಾಗಿದೆ.

ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರಸ್ತೆಬದಿಯ ಪಟ್ರೇನಹಳ್ಳಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಈ ಕಟ್ಟಡದ ಸುತ್ತಮುತ್ತ ವಿಶಾಲ ಪ್ರಾಂಗಣ ನಿರ್ಮಿಸಲಾಗಿದೆ. ಚಿಕ್ಕಬಳ್ಳಾಪುರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ಈ ಕಟ್ಟಡವಿದ್ದು, ಈಗಿರುವ ಡಿ.ಸಿ. ಕಟ್ಟಡ ನಗರಪ್ರದೇಶದಿಂದ ಏಳು ಕಿ.ಮೀ. ದೂರದಲ್ಲಿದೆ. ಚಿಕ್ಕಬಳ್ಳಾಪುರದ ಸಮೀಪವೇ ಹೊಸ ಕಚೇರಿ ಕಾರ್ಯಚಟುವಟಿಕೆ ನಡೆಯುವುದರಿಂದ ಹೆಚ್ಚು ಅನುಕೂಲ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿದೆ.

ಎಲ್ಲ ಸರ್ಕಾರಿ ಕಚೇರಿಗಳು ನೂತನ ಕಟ್ಟಡದ ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ. ನಗರದ ವಿವಿಧ ಬಡಾವಣೆಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಚದುರಿ ಹೋಗಿರುವ ಸರ್ಕಾರದ ವಿವಿಧ ಇಲಾಖೆ ಕಚೇರಿಗಳು ಒಂದೇ ಕಟ್ಟಡದ ವ್ಯಾಪ್ತಿಗೆ ಬರಲಿದ್ದು, ಎಲ್ಲ ಅಧಿಕಾರಿಗಳು ಒಂದೇ ಕಡೆ ಲಭ್ಯವಾಗುತ್ತಾರೆ. ಸಣ್ಣಪುಟ್ಟ ಕೆಲಸಗಳಿಗಾಗಿ ಬೇರೆ ಬೇರೆ ಕಚೇರಿಗಳಿಗೆ ಅಲೆದಾಡುವ ಪ್ರಮೇಯ ಬರುವುದಿಲ್ಲ ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ಹೊಂದಿದ್ದಾರೆ.

`ಕಟ್ಟಡದ ನಿರ್ಮಾಣ 2010ರ ಸೆಪ್ಟೆಂಬರ್ 27ರಂದು ಆರಂಭಗೊಂಡಿತು. 19 ಕೋಟಿ ರೂಪಾಯಿ ವೆಚ್ಚದಲ್ಲಿ 18 ತಿಂಗಳ ಅವಧಿಯಲ್ಲಿ ಕಟ್ಟಡದ ನಿರ್ಮಾಣ ಪೂರ್ಣಗೊಳ್ಳಬೇಕಿತ್ತು. 2012ರ ಮಾರ್ಚ್ 26ರ ಗಡುವು ಕೂಡ ನಿಗದಿಪಡಿಸಲಾಯಿತು. ಆದರೆ ಸಕಾಲಕ್ಕೆ ಮರಳು, ಇತರ ಸಾಮಗ್ರಿಗಳು ಸಿಗದ ಕಾರಣ ನಿರ್ಮಾಣ ಕಾರ್ಯ ಪದೇ ಪದೇ ಮುಂದೂಡಲಾಯಿತು. ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೂ ಸರಿಯಾದ ಸಮಯಕ್ಕೆ ಮರಳು ಲಭ್ಯವಾಗಲಿಲ್ಲ. ಈಗ ತ್ವರಿತಗತಿಯಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, ಶೇ 80ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶೇ 20ರಷ್ಟು ಮಾತ್ರ ಕೆಲಸ ಬಾಕಿಯಿದೆ' ಎಂದು ಕಟ್ಟಡದ ಯೋಜನಾಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಸಿಮೆಂಟ್ ಮತ್ತು ಇತರ ವಸ್ತುಗಳ ಬೆಲೆ ದುಬಾರಿಯಾಗಿರುವುದರಿಂದ ನಿರ್ಮಾಣ ವೆಚ್ಚವು 18 ರಿಂದ 22 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮೂರು ಮಹಡಿಗಳ ಈ ಕಟ್ಟಡವು ರಾಜ್ಯದಲ್ಲೇ ವಿನೂತನ ಮಾದರಿಯದಾಗಿದೆ. ದಾವಣಗೆರೆಯಲ್ಲಿ ವಿಭಿನ್ನ ಮಾದರಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಲಾಗಿದ್ದು, ಈ ಕಟ್ಟಡವು ಅದಕ್ಕಿಂತ ಭಿನ್ನವಾದ ಮಾದರಿ. ಸುಮಾರು 50ಕ್ಕೂ ಹೆಚ್ಚು ಸರ್ಕಾರಿ ಕಚೇರಿಗೆ ಇಲ್ಲಿ ಸ್ಥಳಾವಕಾಶ ಲಭ್ಯವಾಗಲಿದೆ. ಸಭಾಂಗಣ ಸೇರಿದಂತೆ ಎಲ್ಲ ಸೌಕರ್ಯ ಕಟ್ಟಡದಲ್ಲಿರುತ್ತದೆ' ಎಂದರು.

`ಕರ್ನಾಟಕ ವಸತಿ ನಿಗಮದ ಸಹಯೋಗದಲ್ಲಿ ನಿರ್ಮಿಸುತ್ತಿರುವ ಈ ಕಟ್ಟಡದ ನಿರ್ಮಾಣ ಗುತ್ತಿಗೆಯನ್ನು ದೇವಿಪ್ರಸಾದ್ ಕಟ್ಟಡ ನಿರ್ಮಾಣ ಸಂಸ್ಥೆ ವಹಿಸಿಕೊಂಡಿದೆ. ಬೆಂಗಳೂರಿನ ಶೋಭಾ ಮತ್ತು ಮಹೇಶ್ ಅಸೋಸಿಯೇಟ್ಸ್ ಕಟ್ಟಡದ ವಿನ್ಯಾಸಕಾರರಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಐಡಿಸಿ) ಯೋಜನಾ ಮಾರ್ಗದರ್ಶನ ನೀಡಿದೆ. ಒಟ್ಟು 10.20 ಎಕರೆ ವಿಸ್ತೀರ್ಣದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. 500 ಮಂದಿ ಸಭಿಕರು ಕೂರುವ ಸಾಮರ್ಥ್ಯವುಳ್ಳ ಬೃಹತ್ ಸಭಾಂಗಣ, ಕೊಠಡಿಗಳು ಕಟ್ಟಡದಲ್ಲಿದೆ' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT