ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನೊಳಗೆ ಗುರಿ ಸಾಧನೆ: ಇಲಾಖೆಗಳಿಗೆ ಸೂಚನೆ

Last Updated 11 ಫೆಬ್ರುವರಿ 2012, 9:35 IST
ಅಕ್ಷರ ಗಾತ್ರ

ಹಾಸನ: `ವಾರ್ಷಿಕ ಶೇ 70ಕ್ಕಿಂತ ಕಡಿಮೆ ಅಭಿವೃದ್ಧಿ ದಾಖಲಿಸಿರುವ ಇಲಾಖೆಗಳು ಕೆಲಸಕಾರ್ಯಗಳನ್ನು ಚುರುಕುಗೊಳಿಸಿ ಮಾರ್ಚ್ ಮೊದಲ ವಾರದೊಳಗೆ ಗರಿಷ್ಠ ಗುರಿ ಸಾಧಿಸ     ಬೇಕು~ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ ನಾಯಕ್ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಶೇ 70ಕ್ಕೂ ಕಡಿಮೆ ಅಭಿವೃದ್ಧಿ ದಾಖಲಿಸಿದ ಇಲಾಖೆಗಳ ಅಧಿಕಾರಿಗಳಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕೆಲವು ಇಲಾಖೆಗಳು ದಾಖಲಿಸಿರುವ ಅಭಿವೃದ್ಧಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು,  `ಮಾರ್ಚ್ ಮೊದಲ ವಾರದಲ್ಲಿ ಪುನಃ ಹಾಸನಕ್ಕೆ ಬಂದು ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಮಾರ್ಚ್ 2ನೇ ವಾರದಿಂದ ಎಲ್ಲರೂ ಬಜೆಟ್‌ನಲ್ಲಿ ತೊಡಗಿರುತ್ತಾರೆ.
 
ಅಷ್ಟರೊಳಗೆ ಗರಿಷ್ಠ ಅಭಿವೃದ್ಧಿ ಸಾಧಿಸಿರಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಗೋಬರ್ ಗ್ಯಾಸ್ ಘಟಕಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿದ ಮಾಹಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, `175 ಲಕ್ಷ ಬಿಡುಗಡೆಯಾಗಿದೆ, 58 ಲಕ್ಷ ವೆಚ್ಚವಾಗಿದೆ ಎಂಬ ಒಂದು ಸಾಲಿನ ಮಾಹಿತಿ ನೀಡಿದ್ದೀರಿ. ಇದರಿಂದ ಏನು ತಿಳಿಯುತ್ತದೆ ? ಎಲ್ಲೆಲ್ಲಿ ಘಟಕ ಸ್ಥಾಪನೆಯಾಗಿದೆ ? ಯಾರಾದರೂ ಹೋಗಿ ಅವುಗಳ ಪರಿಶೀಲನೆ ನಡೆಸಿದ್ದೀರಾ ? ಎಂದು ಕೇಳಿದರು.

ಯಾರಿಂದಲೂ ಉತ್ತರ ಬರಲಿಲ್ಲ. ಈ ವಿಚಾದ ಬಗ್ಗೆ ತಾ.ಪಂ. ಇ.ಓ ಗಳನ್ನು ಕರೆಸಿದರೆ ಅವರಿಂದಲೂ ಉತ್ತರ ಸಿಗಲಿಲ್ಲ. ಕೊನೆಗೆ ಸಂಬಂಧಪಟ್ಟ ಅಧಿಕಾರಿಯನ್ನು ಕರೆಸುವಂತೆ ಸೂಚನೆ ನೀಡಿದರು. ಅವರು ನೀಡಿದ ಮಾಹಿತಿಯಿಂದಲೂ ಸಂತೃಪ್ತರಾಗದ ನಾಯಕ್, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಭೇಟಿ                   ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಗೋಬರ್ ಗ್ಯಾಸ್ ಘಟಕ ಸ್ಥಾಪನೆಯಿಂದ ಈ ಭಾಗದ ಜನರಿಗೆ ಹೆಚ್ಚು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಅದರ ಬಗ್ಗೆ ಮಾಹಿತಿ ನೀಡಿ, ಸದ್ಬಳಕೆ ಮಾಡುವಂತೆ ಜನರಿಗೆ ಸಲಹೆ ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು.  ಘಟಕ ಸ್ಥಾಪಿಸಿದ ಸಂಸ್ಥೆಯವರಿಗೆ ಜಿಲ್ಲೆಯ ಯಾವುದಾದರೂ ಒಂದು ಯೋಗ್ಯ ಸ್ಥಳದಲ್ಲಿ ಬಿಡಿ ಭಾಗಗಳ ಮಾರಾಟಕ್ಕೂ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಫಲಾನುಭವಿಗಳು ಪರದಾಡುವ ಸ್ಥಿತಿ ಉಂಟಾಗುತ್ತದೆ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಇಡೀ ವರ್ಷದಲ್ಲಿ 11 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ವಸ್ತು ಪ್ರದರ್ಶನಕ್ಕೆ ಮೀಸಲಿಟ್ಟಿದ್ದ ನಾಲ್ಕು ಲಕ್ಷ ರೂಪಾಯಿಯಲ್ಲಿ 3.5ಲಕ್ಷವನ್ನು ಮೈಸೂರಿನ ದಸರಾ ಸಂದರ್ಭದ ಪ್ರದರ್ಶನದಲ್ಲಿ ವೆಚ್ಚ ಮಾಡಲಾಗಿದೆ. ಜಿಲ್ಲೆಯಲ್ಲಿ ಕೇವಲ ರೂ. 50 ಸಾವಿರ ಬಳಸಿದ್ದೀರಿ.

ಒಟ್ಟಾರೆ ಮಾಡಿರುವ ವೆಚ್ಚ 11 ಲಕ್ಷ, ಇಲಾಖೆಯಲ್ಲಿರುವ ಸಿಬ್ಬಂದಿ ಇದಕ್ಕಿಂತ ಹೆಚ್ಚು ವೇತನ ಪಡೆದಿದ್ದಾರೆ. ಇದು ವಿಪರ್ಯಾಸ ಎಂದರು. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಹೆಚ್ಚು ಹಣವ್ಯಯ ಮಾಡುವ ಬದಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆಗಳ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕಿ ಪ್ರಚಾರ ಮಾಡುವ ಕಾರ್ಯ ಮಾಡಬೇಕು.
 
ಒಟ್ಟಾರೆ ಬಜೆಟ್‌ನ ಶೇ 50ಕ್ಕಿಂತ ಹೆಚ್ಚನ್ನು ಜಿಲ್ಲೆಯಲ್ಲೇ ಖರ್ಚು ಮಾಡಬೇಕು ಎಂದರು. ನೋಡಲ್ ಅಧಿಕಾರಿಯಾಗಿದ್ದ ಜಗದೀಶ್, ಮುಂದಿನ ವರ್ಷದಿಂದ ಶೇ 60ನ್ನು ಜಿಲ್ಲೆಯಲ್ಲಿ ಹಾಗೂ ಶೇ 40 ಹಣವನ್ನು ಮಾತ್ರ ಮೈಸೂರಿನಲ್ಲಿ ವೆಚ್ಚ ಮಾಡುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿಯವರು ಮಾಡಬೇಕಿರುವ ರಸ್ತೆ ಕಾಮಗಾರಿ ಸರಿಯಾಗಿ ಆಗಿಲ್ಲ. ಶೇ 50ಕ್ಕಿಂತ ಕಡಿಮೆ ಪ್ರಗತಿಯಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.

`ರಾಜ್ಯ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಂಡಿದೆ. ಇಲಾಖೆ 17 ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂಜಿನಿಯರ್ ರಾಮಚಂದ್ರ ತಿಳಿಸಿದರು.

ನಗರಸಭೆಯ ಎರಡು ಕಾಮಗಾರಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಬದಲಾವಣೆಗೆ ಕಳುಹಿಸಿದ್ದರಿಂದ ಸುಮಾರು ರೂ. 1 ಕೋಟಿ ಕಾಮಗಾರಿ ಆಗದೆ ಉಳಿದಿದೆ. ಮಟನ್ ಮಾರ್ಕೆಟ್ ಸ್ಥಳಾಂತರ ಹಾಗೂ ಮಹಾವೀರ ಸರ್ಕಲ್ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲು ಪಸ್ತಾವನೆ ಕಳುಹಿಸಲಾಗಿತ್ತು. ಆದರೆ ಅದರಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಎದುರಾದ್ದರಿಂದ ಕ್ರಿಯಾ ಯೋಜನೆ ಬದಲಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ.

ಹೊಳೆನರಸೀಪುರದಲ್ಲೂ ವಧಾ ಲಯ ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಇದೇ ಸ್ಥಿತಿ ಉಂಟಾಗಿದ್ದು,ರೂ. 60ಲಕ್ಷ ಕಾಮಗಾರಿ ಉಳಿದಿದೆ~ ಎಂದು ಚಂದ್ರಶೇಖರ್ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಉಪಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT