ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಜಾಲ ಮಹಾಮನೆ

Last Updated 29 ಜೂನ್ 2012, 19:30 IST
ಅಕ್ಷರ ಗಾತ್ರ

`ಇವಳು ಬ್ಲ್ಯಾಕಿ- ಕೃಷ್ಣ ಸುಂದರಿ~ ಎಂದೊಡನೆ ಆಕೆ, ಬಿನ್ನಾಣದಿಂದ ಕತ್ತು ಕೊಂಕಿಸಿ, ತನ್ನ ಮಾದಕ ಕಂಗಳಿಂದ ಒಮ್ಮೆ ನಿಟ್ಟಿಸಿದಳು. ಇವಳ ನೋಟವನ್ನು ಕಳ್ನೋಟದಿಂದ ನೋಡಿ ನಾಚುತ್ತಿದ್ದವಳನ್ನು ತೋರಿಸಿ ಹೇಳಿದರು...
 
ಅವಳು `ಲಾಜು~ ಲಜ್ಜೆಯೇ ಹೆಚ್ಚು. ಈ ಲಜ್ಜಾ ಸುಂದರಿಗೆ ಪ್ರೀತಿಯಿಂದ ಕರೆಯುವುದೇ ಲಾಜು ಎಂದು... ಹೊಂಬಣ್ಣದ ಈ ಹುಡುಗಿ `ಗೋಲ್ಡಿ~ ಹೀಗೆ ಹೇಳುತ್ತಿದ್ದರೆ ಒಬ್ಬೊಬ್ಬರೇ ಸುಂದರಿಯರು ನಾಚಿಕೊಳ್ಳುತ್ತ ಹೆಜ್ಜೆ ಹಾಕುತ್ತಿದ್ದರು.

ಈ ಸುಂದರಿಯರ ಸಾಲು ಇದ್ದದ್ದು ಚರ್ಚ್ ಸ್ಟ್ರೀಟ್‌ನಲ್ಲಿರುವ ಬೀರೇಂದ್ರ ದಾಸ್ ಅವರ ಮನೆಯ ತಾರಸಿ ಮೇಲೆ.

ಕೆ.ಸಿ. ದಾಸ್ ಸ್ವೀಟ್ಸ್ ಕಂಪೆನಿಯ ಮಾಲೀಕ ಬೀರೇಂದ್ರ ದಾಸ್. 76ರ ಹರೆಯದ ಈ ವ್ಯಕ್ತಿಗೆ ಬೆಕ್ಕುಗಳೇ ಸಂಸಾರ. ಕುಟುಂಬ.

ಮನೆಯ ತಾರಸಿಯ ಮೇಲೆ ಎರಡು ಮಹಡಿಗಳಲ್ಲಿ ಈ ಮಾರ್ಜಾಲ ಮನೆ ಮಾಡಲಾಗಿದೆ. ಒಂದೆರಡಲ್ಲ, 60ಕ್ಕೂ ಹೆಚ್ಚು ಬೆಕ್ಕುಗಳು ಇಲ್ಲಿ ವಾಸವಾಗಿವೆ.

ಬೆಳಗಿನ ಏಳೂವರೆಗೆ ಬೆಕ್ಕುಗಳ ಸಿದ್ಧ ಆಹಾರ ವಿಸ್ಕಾಸ್ ಸೇವಿಸಿ ಓಡಾಡಿಕೊಂಡಿರುತ್ತವೆ. ಮತ್ತೆ ಇವಕ್ಕೆ ಊಟ ಸಿಗುವುದು ಸಂಜೆಯ 4.30ಕ್ಕೆ ಅನ್ನ, ಹಾಲು, ಮೀನು, ಕೋಳಿ ಮಾಂಸ ಎಲ್ಲವನ್ನೂ ನೀಡಲಾಗುತ್ತದೆ.

ಈ ಮಾರ್ಜಾಲ ಮಹಾಮನೆಯ ದೇಖುರೇಕಿಗೆಂದೇ ಮೂವರನ್ನು ನೇಮಿಸಲಾಗಿದೆ. ಕಚ್ಚಾಟಕ್ಕೆ ಹೆಸರಾದ ಬೆಕ್ಕುಗಳು ಊಟದ ವಿಷಯದಲ್ಲಿಯೂ ಹಾಗೆಯೇ. ಯಾವ ಬೆಕ್ಕೂ ತನ್ನ ತಟ್ಟೆಯಲ್ಲಿ ಇನ್ನೊಂದು ಬೆಕ್ಕು ಬಾಯಿ ಹಾಕುವುದನ್ನು ಸಹಿಸುವುದಿಲ್ಲ. ಅದಕ್ಕೆಂದೇ ಪ್ರತಿ ಬೆಕ್ಕಿಗೂ ಒಂದೊಂದು ಬಣ್ಣದ ತಟ್ಟೆಗಳಿವೆ. ತಟ್ಟೆಗೆ ಊಟ ಹಾಕುತ್ತಿದ್ದಂತೆ ಈ ಎಲ್ಲ ಬೆಕ್ಕುಗಳೂ ಕಬಳಿಸಲು ಸಿದ್ಧವಾಗುತ್ತವೆ.

ಈ ಎರಡು ಊಟಗಳನ್ನು ಹೊರತು ಪಡಿಸಿದರೆ ಪ್ರತಿದಿನ ಬೆಳಗ್ಗೆ 8 ಲೀಟರ್ ಹಾಲು, ರಾತ್ರಿಯೂ 8 ಲೀಟರ್ ಹಾಲನ್ನು ಹಾಕಲಾಗುತ್ತದೆ. ಅದೂ ಪ್ರತ್ಯೇಕ ಬಟ್ಟಲುಗಳಲ್ಲಿ.
26 ವರ್ಷಗಳ ಹಿಂದೆ ಬೀರೇಂದ್ರನಾಥ್ ಅವರು ಮೂರು ಬೆಕ್ಕುಗಳನ್ನು ಸಾಕಿದ್ದರು. ಅವುಗಳ ಸಂತತಿಯೊಂದಿಗೆ ಇನ್ನಿತರ ಬೀದಿ ಬೆಕ್ಕುಗಳೂ ಸೇರಿ ಈಗ ಎರಡೆರಡು ಮಹಡಿಗಳಲ್ಲಿ ಇವನ್ನು ಸಾಕುವಂತಾಗಿದೆ.

ಎರಡನೆಯ ಮತ್ತು ಮೂರನೆಯ ಮಹಡಿಗಳಲ್ಲಿ ಮರದ ಗೂಡುಗಳನ್ನೂ ನಿರ್ಮಿಸಲಾಗಿದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಬೆಕ್ಕುಗಳು ಇಲ್ಲಿ ಮರಿಗಳನ್ನು ಬೆಚ್ಚಗಿಡುತ್ತವೆ. ಮಳೆ ಬಂದಾಗಲೂ ತಮ್ಮ ಕೋಣೆಯೊಳಗೆ ಸೇರಿಕೊಳ್ಳುತ್ತವೆ. ಇಲ್ಲದಿದ್ದರೆ ಮಹಡಿ ಮೇಲೆ, ತಾರಸಿಯ ಮೇಲೆ ಬಿಸಿಲು ಕಾಯಿಸುತ್ತ, ಚಿನ್ನಾಟವಾಡುತ್ತ ಇರುತ್ತವೆ. ಈ ಹಿಂದೆ ಕೆಲ ಬೆಕ್ಕುಗಳು ತಾರಸಿಯಿಂದ ಬಿದ್ದು ಸಾವನ್ನಪ್ಪಿದ್ದೂ ಇದೆ.
 
ಈಗ ಸುರಕ್ಷೆಗಾಗಿ ನೆಟ್‌ಅನ್ನು ಕಟ್ಟಲಾಗಿದೆ ಎನ್ನುತ್ತಾರೆ ಬೆಕ್ಕುಗಳನ್ನು ನೋಡಿಕೊಳ್ಳುತ್ತಿರುವ ಸಿ.ಪಿ. ಮಲ್ಲಿಕಾರ್ಜುನ್.

ಬೆಕ್ಕುಗಳಿಗೆ  ಕಾಯಿಲೆಯಾದರೆ ಮಂಕಾಗಿ ಕುಳಿತುಕೊಳ್ಳುತ್ತವೆ. ಕೂಡಲೇ ಪಶುವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತದೆ. ಉಳಿದಂತೆ ಸಣ್ಣಪುಟ್ಟ ಸಮಸ್ಯೆಗಳಾದರೆ ಇಲ್ಲಿಯೇ ಚಿಕಿತ್ಸೆ ನೀಡುತ್ತೇವೆ ಎಂದು ಹೇಳುತ್ತಾರೆ ಮಲ್ಲಿಕಾರ್ಜುನ. 

`ಬುಡ್ಡಿ~ ಎಂಬ ಬೆಕ್ಕೊಂದಿದೆ. 9 ವರ್ಷದ ಬೆಕ್ಕು. 9 ಸಲ ಮರಿ ಹಾಕಿದೆ. ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಪಟ್ಟಿದೆ.ಇದೀಗ ಬೆಕ್ಕುಗಳನ್ನು ಈ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.
ಮಾರ್ಜಾಲಗಳ ಮಹಾಮನೆ ಕೇವಲ ಬೆಕ್ಕುಗಳಿಗೆ ಮಾತ್ರ ಉಣಿಸುತ್ತಿಲ್ಲ.

ಊಟದ ವಿಷಯ ಬಂದರೆ ಇಲ್ಲಿ ಎಲ್ಲರಿಗೂ ಸಮಾನ ಅವಕಾಶ. ಹದ್ದುಗಳಿಗೂ ಪಾಲು ಇದೆ. ಕಾಗೆಗಳಿಗೂ ಪಾಲುಂಟು. ಮಾಂಸದ ತುಣುಕುಗಳನ್ನು ಹರಿವಾಣದಲ್ಲಿ ತುಂಬಿಸಿಟ್ಟರೆ ಹಸಿದ ಹಕ್ಕಿಗಳು ಬಂದು ಕೊಕ್ಕಿನಿಂದ ಕುಕ್ಕಿ ಹಾರಿ ಹೋಗುತ್ತವೆ. ಪಾರಿವಾಳಗಳಿಗೂ ಕಾಳುಗಳನ್ನು ಉಣಿಸುವುದುಂಟು.


76 ವರ್ಷದ ಬೀರೇಂದ್ರನಾಥ್ ದಾಸ್ ಅಜ್ಜ ಬ್ರಹ್ಮಚಾರಿ. ಅವರಿಗೆ ಈ ಪ್ರಾಣಿ ಪಕ್ಷಿಗಳೇ ಕುಟುಂಬವಾಗಿದೆ ಈಗ. ಪ್ರಚಾರ ಬಯಸದ ಬೀರೇಂದ್ರ ದಾಸ್ ಪ್ರಾಣಿಪ್ರೀತಿಯ ವೈಖರಿ ಇದು.

ಚಿತ್ರಗಳು: ವಿಶ್ವನಾಥ್ ಸುವರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT